ADVERTISEMENT

ಸಂಕ್ಷಿಪ್ತ ಸುದ್ದಿಗಳು

ಪಿಟಿಐ
Published 29 ಜನವರಿ 2018, 19:30 IST
Last Updated 29 ಜನವರಿ 2018, 19:30 IST
ಕರ್ನಲ್ ಶ್ರೀಕಾಂತ್ ಪುರೋಹಿತ್
ಕರ್ನಲ್ ಶ್ರೀಕಾಂತ್ ಪುರೋಹಿತ್   

ಮಹಾರಾಷ್ಟ್ರ, ಎನ್‌ಐಎ ಪ್ರತಿಕ್ರಿಯೆ ಕೇಳಿದ ‘ಸುಪ್ರೀಂ’

ನವದೆಹಲಿ : ಮಾಲೆಗಾಂವ್ ಸ್ಫೋಟ ಪ್ರಕರಣದ ಆರೋಪಿ ಕರ್ನಲ್ ಶ್ರೀಕಾಂತ್ ಪುರೋಹಿತ್ ಸಲ್ಲಿಸಿರುವ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್, ನಾಲ್ಕು ವಾರಗಳಲ್ಲಿ ಪ್ರತಿಕ್ರಿಯೆ ನೀಡುವಂತೆ ಎನ್‌ಐಎ ಹಾಗೂ ಮಹಾರಾಷ್ಟ್ರ ಸರ್ಕಾರಕ್ಕೆ ಸೂಚನೆ ನೀಡಿದೆ.

ಕಾನೂನುಬಾಹಿರ ಚಟುವಟಿಕೆ ತಡೆ ಕಾಯ್ದೆ (ಯುಎಪಿಎ) ಅಡಿ ವಿಚಾರಣೆ ನಡೆಸುವಂತೆ ಸೂಚಿಸಿದ ಪ್ರಾಧಿಕಾರದ ನಿರ್ದೇಶನ ಪ್ರಶ್ನಿಸಿ ಪುರೋಹಿತ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ಆರ್.ಕೆ. ಆಗರವಾಲ್‌ ಹಾಗೂ ಎ.ಎಂ. ಸಪ್ರೆ ಅವರಿದ್ದ ಪೀಠ ನಡೆಸಿತು.
**
ತನಿಖೆಗೆ ಸಮಿತಿ

ADVERTISEMENT

ಮುಂಬೈ : ಇಲ್ಲಿನ ನಾಯರ್ ಆಸ್ಪತ್ರೆಯಲ್ಲಿ ಎಂಆರ್‌ಐ (ಮ್ಯಾಗ್ನೆಟಿಕ್ ರೆಸನನ್ಸ್ ಇಮೇಜಿಂಗ್) ಯಂತ್ರವು ವ್ಯಕ್ತಿಯನ್ನು ಸೆಳೆದು ಆತ ಮೃತಪಟ್ಟ ಪ್ರಕರಣದ ತನಿಖೆಗೆ ಆಸ್ಪತ್ರೆಯ ನಿರ್ವಹಣೆ ಹೊತ್ತಿದ್ದ ಬೃಹನ್‌ ಮುಂಬೈ ಮಹಾ ನಗರಪಾಲಿಕೆ (ಬಿಎಂಸಿ) ಸಮಿತಿಯೊಂದನ್ನು ರಚಿಸಿದೆ.

‘ಪಾಲಿಕೆಯ ಉಪ ಆಯುಕ್ತರ ನೇತೃತ್ವದಲ್ಲಿ ಸಮಿತಿ ರಚಿಸಲಾಗಿದ್ದು, ಮುಂದಿನ ಸೋಮವಾರದ ವೇಳೆಗೆ ಸಮಿತಿಯು ತನಿಖಾ ವರದಿಯನ್ನು ಸಲ್ಲಿಸಲಿದೆ’ ಎಂದು ಸರ್ಕಾರದ ಹಿರಿಯ ಅಧಿಕಾರಿ ತಿಳಿಸಿದ್ದಾರೆ.
***
ಆರೋಪಪಟ್ಟಿ

ಶ್ರೀನಗರ: ಅಮರನಾಥ ಯಾತ್ರಿಕರ ಮೇಲೆ 2017 ಜುಲೈ ತಿಂಗಳಲ್ಲಿ ನಡೆದ ಭಯೋತ್ಪಾದಕ ದಾಳಿ ಪ್ರಕರಣಕ್ಕೆ ಸಂಬಂಧಿಸಿ ಜಮ್ಮು ಮತ್ತು ಕಾಶ್ಮೀರ ಪೊಲೀಸರು ಪಾಕಿಸ್ತಾನದ ಲಷ್ಕರ್‌ ಎ ತಯ್ಯಬ ಉಗ್ರ ಸಂಘಟನೆ ಹಾಗೂ ಸಂಚಿನಲ್ಲಿ ಭಾಗಿಯಾಗಿರುವ 11 ಮಂದಿಯ ವಿರುದ್ಧ ಆರೋಪಪಟ್ಟಿ ಸಲ್ಲಿಸಿದ್ದಾರೆ.

‘ಪ್ರಕರಣದ ತನಿಖೆಯು ಆರು ತಿಂಗಳಲ್ಲಿ ಪೂರ್ಣಗೊಂಡಿದ್ದು, 1,600 ಪುಟಗಳ ಆರೋಪ ಪಟ್ಟಿಯನ್ನು ಅನಂತ್‌ನಾಗ್‌ ಸೆಷನ್ಸ್‌ ನ್ಯಾಯಾಲಯಕ್ಕೆ ಸಲ್ಲಿಸಲಾಗುವುದು. 11ಮಂದಿ ಆರೋಪಿಗಳಲ್ಲಿ ಒಬ್ಬಾತ ಬಾಲಾಪರಾಧಿಯಾಗಿದ್ದಾನೆ’ ಎಂದು ಪೊಲೀಸರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.