ADVERTISEMENT

ಚರ್ಚೆ | ಭಾಗವತರ ಡಿಎನ್‍ಎ ಇತಿಹಾಸ ಮತ್ತು ಐತಿಹ್ಯ

ಮುಸ್ಲಿಮರು ಪಾಕಿಸ್ತಾನಕ್ಕೆ ಹೋಗಲಿ ಎನ್ನುವವರು ಹಿಂದೂಗಳೇ ಅಲ್ಲ: ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ ಭಾಗವತ್‌ ಹೇಳಿಕೆ

ಬಂಜಗೆರೆ ಜಯಪ್ರಕಾಶ
Published 9 ಜುಲೈ 2021, 19:31 IST
Last Updated 9 ಜುಲೈ 2021, 19:31 IST
ಮೋಹನ ಭಾಗವತ್‌
ಮೋಹನ ಭಾಗವತ್‌    

ಸಂಘ ಪರಿವಾರದ ಅಂಗಸಂಸ್ಥೆಯೇ ಆಗಿರುವ ‘ಮುಸ್ಲಿಂ ರಾಷ್ಟ್ರೀಯ ಮಂಚ್’ನ ಕಾರ್ಯಕ್ರಮದಲ್ಲಿ ಮುಸ್ಲಿಮರಿಗೆ ಸಿಹಿ ಅನಿಸುವಂತಹ ಮಾತನ್ನಾಡುವಾಗಲೂ ಮೋಹನ ಭಾಗವತರು ಮುಸ್ಲಿಮರ ‘ಹಿಂದೂಕರಣ’ದ ಅಜೆಂಡಾವನ್ನೇ ಗುಪ್ತವಾಗಿ ನುಡಿಯುತ್ತಿದ್ದಾರೆನಿಸುತ್ತದೆ.

ಮೋಹನ ಭಾಗವತ್‌ ಅವರ ಮಾತಿಗೆ ವಿಶೇಷ ಮಹತ್ವ ಬಂದಿರುವುದು ವಿನಾಕಾರಣವೇನಲ್ಲ. ಎರಡು ದಶಕಗಳಿಂದ ಸಂಘ ಪರಿವಾರದ ಪಾತ್ರ ವಿಶೇಷವಾಗಿ ವ್ಯಾಪಿಸಿದೆ, ಬಲಗೊಂಡಿದೆ. ಹಾಗಾಗಿ ಅವರು ಏನನ್ನಾದರೂ ಹೇಳಿದರೆ ಆ ಬಗ್ಗೆ ಗಮನ ನೀಡುವುದು ಬಹಳ ಅಗತ್ಯ. ಈಚೆಗೆ ಅವರು ಡಿಎನ್‍ಎ ಬಗ್ಗೆ ಮಾತನಾಡಿರುವುದು ಸದ್ದು ಮಾಡುತ್ತಿದೆ. ಭಾಗವತರ ಮಾತು ಕೋಮುಸೌಹಾರ್ದತೆಯನ್ನು ಹೆಚ್ಚಿಸುವಂತಿದೆ ಎಂದು ಮೇಲ್ನೋಟಕ್ಕೆ ಕಾಣುತ್ತದೆ. ಧರ್ಮ ಯಾವುದೇ ಇರಲಿ, ಭಾರತೀಯರೆಲ್ಲರ ಡಿಎನ್‍ಎ ಒಂದೇ ಎಂದು ಅವರು ಹೇಳಿರುವುದು ಸರಳವಾಗಿ ಚೆನ್ನಾಗಿದೆ. ಆದರೆ ಅದಷ್ಟೇ ಅದರ ಇಂಗಿತ ಅಲ್ಲ.ಈಚೆಗೆ ಡಿಎನ್‍ಎ ಬಗ್ಗೆ ಬಹಳ ವೈಜ್ಞಾನಿಕ ಸಂಶೋಧನೆಗಳು ಪ್ರಕಟಗೊಂಡಿವೆ. ಅದರಲ್ಲಿ ರಾಖಿಘರ್‌ನಲ್ಲಿ ಸಿಕ್ಕಿರುವ ಅಸ್ಥಿಪಂಜರದ ಡಿಎನ್‍ಎ ವರದಿಯೂ ಒಂದು. ಅದರ ಮುಖ್ಯಾಂಶದ ಪ್ರಕಾರ ‘ಪ್ರಾಚೀನ ಹರಪ್ಪನ್ ವಂಶವಾಹಿನಿಯು ಸ್ಪೆಪ್ಪಿ ಪಶುಪಾಲಕ ವಂಶಾವಳಿಯನ್ನು ಹೊಂದಿಲ್ಲ’. ಈ ಸ್ಪೆಪ್ಪಿ ಪಶುಪಾಲಕರನ್ನೇ ನಾವು ಸಾಂಸ್ಕೃತಿಕ ಪರಿಭಾಷೆಯಲ್ಲಿ ಆರ್ಯಭಾಷಿಕ ಸಮುದಾಯ ಅಥವಾ ವೈದಿಕ ಸಂಸ್ಕೃತಿಯ ಜನರು ಎನ್ನುತ್ತೇವೆ.

ಆ ಸಂಶೋಧನಾ ವರದಿ ಹೇಳುವ ಪ್ರಕಾರ ‘ರಾಖಿಘರ್‌ನ ಪಳೆಯುಳಿಕೆಯಲ್ಲಿ ಈಗಿನ ದಕ್ಷಿಣ ಏಷ್ಯಾ ಜನರಲ್ಲಿ ಕಂಡುಬರುವ ಅಲ್ಪಪ್ರಮಾಣದ ಅನಟೋಲಿಯನ್ ರೈತರ ವಂಶಾವಳಿಯಾಗಲಿ ಅಥವಾ ಕ್ರಿ.ಪೂ. 2000ದಿಂದ 1500ರ ನಡುವೆ ವಲಸೆ ಬಂದು ಬೆರೆತು ಇಂದಿನ ದಕ್ಷಿಣ ಏಷ್ಯಾ ಜನರಲ್ಲಿ ಗಣನೀಯ ಮಟ್ಟದಲ್ಲಿರುವ ಸ್ಪೆಪ್ಪಿ ಜನರ (ಆರ್ಯರ) ವಂಶಾವಳಿಯಾಗಲಿ ಇಲ್ಲ’.

ADVERTISEMENT

ಇದೇ ವಿಧಾನದಲ್ಲಿ ಮತ್ತೊಂದು ಸಂಶೋಧನೆ ನಡೆದಿದ್ದು ಅದರ ಪ್ರಕಾರ ಸಿಂಧೂನದಿ ನಾಗರಿಕತೆಯೊಂದಿಗೆ ಸಾಂಸ್ಕೃತಿಕ ಒಡನಾಟವಿದ್ದ ಸಿಂಧೂ ಪರಿಧಿಯ ಜನವರ್ಗಗಳ (Indus periphery cline) ಅಸ್ಥಿಪಂಜರಗಳ ವಿಶ್ಲೇಷಣೆಯಲ್ಲಿ ‘ಅಂಡಮಾನಿ ಬೇಟೆಗಾರ ಸಂಗ್ರಹಕಾರರ ಅಂಶಗಳು ಪತ್ತೆಯಾಗಿದ್ದು ವರ್ಣತಂತುವಿನಲ್ಲಿ ಹ್ಯಾಪೆಕ್ಲಿ ಗ್ರೂಪ್ (ಅನುವಂಶಿಕ ಗುಂಪು) ಕಂಡುಬರುತ್ತದೆ. ಇದು ದಕ್ಷಿಣ ಭಾರತೀಯರೆಲ್ಲರ ವರ್ಣತಂತುವಿನಲ್ಲಿ ಪ್ರಮುಖವಾಗಿ ಕಂಡುಬರುವ ಅಂಶ. ಇವರಲ್ಲಿ ಅನಟೋಲಿಯ ರೈತರ ಸಂಬಂಧಿ ವಂಶವಾಹಿನಿಯು ಕಾಣಸಿಗುವುದಿಲ್ಲ’. (The information of human population in south and central Asia – ಅಂತರ್ಜಾಲ ಮಾಹಿತಿ ಕೃಪೆ)

ಈ ಸಂಶೋಧನೆಗಳನ್ನು ಭಾರತದ ಕೆಲವು ವಿಜ್ಞಾನಿಗಳು ತಿರುಚಿ ವಿಶ್ಲೇಷಣೆ ಮಾಡಿ ಲೇಖನಗಳನ್ನು ಬರೆದರಾದರೂ ಅವುಗಳು ಮಾನ್ಯಗೊಂಡಿಲ್ಲ. ಸಿಂಧೂ ನಾಗರಿಕತೆ ನಿರ್ಮಾಣ ಮಾಡಿದ್ದು ವೈದಿಕ ಸಂಸ್ಕೃತಿಯ ಜನ, ಆರ್ಯರು ಇಲ್ಲಿಯ ಮೂಲನಿವಾಸಿಗಳು, ಭಾರತದಿಂದಲೇ ವೈದಿಕ ಸಂಸ್ಕೃತಿಯು ಜಗತ್ತಿನ ಬೇರೆ ಕಡೆಗೆ ವಲಸೆ ಹೋಯಿತು ಎಂಬ ವಾದಗಳಿಗೆ ಈ ಸಂಶೋಧನೆಗಳು ಈಗ ನಿರ್ಣಾಯಕವಾದ ಪೆಟ್ಟುಕೊಟ್ಟಿವೆ.

ಭಾರತೀಯ ಮೂಲಸಂಸ್ಕೃತಿಯ ನಿರ್ಮಾಪಕರು ಆರ್ಯರು ಎಂದು ವಾದ ಮಾಡುತ್ತಾ ಬಂದಿರುವ ಸಂಘಪರಿವಾರ ಮತ್ತು ಅದರ ಬೆಂಬಲಿಗ ವಿದ್ವಾಂಸರಿಗೆ ರಾಖಿಘರ್ ಸಂಶೋಧನೆಯ ವಾಸ್ತವಾಂಶಗಳನ್ನು ಅರಗಿಸಿಕೊಳ್ಳಲಾಗುತ್ತಿಲ್ಲ. ಒಂದೇ ಜನಾಂಗ, ಒಂದೇ ದೇಶ, ಒಂದೇ ಸಂಸ್ಕೃತಿ ಎಂಬ ವಾದದಡಿಯಲ್ಲಿ ಹಿಂದೂ ರಾಷ್ಟ್ರವಾದವನ್ನು ಬೆಳೆಸಬೇಕೆಂದು ಪ್ರಯತ್ನಿಸುವ ಸಂಘ ಪರಿವಾರದ ವಾದಸರಣಿಗೆ ವೈಜ್ಞಾನಿಕವಾಗಿ ಹಿನ್ನಡೆಯಾಗಿದೆ. ಅದನ್ನು ನಿರಾಕರಿಸಲು ಸಂಘಪರಿವಾರ ಪ್ರಯತ್ನಿಸುತ್ತಿದೆ. ಈ ಪ್ರಯತ್ನಗಳ ಒಂದು ಅಂಶವೇ ಭಾರತೀಯ ಇತಿಹಾಸದ ಮರುಸಂಶೋಧನಾ ಮಂಡಳಿ ರಚನೆ. ಆ ಸಮಿತಿಯ ಸದಸ್ಯರಲ್ಲಿ ಶೇ 99ರಷ್ಟು ಜನ ಬ್ರಾಹ್ಮಣರಿರುವುದಕ್ಕೆ ಆಶ್ಚರ್ಯ ಪಡಬೇಕಾದುದೇನೂ ಇಲ್ಲ. ಇತಿಹಾಸದ ಮರುಸಂಶೋಧನೆ ಮಾಡಲು ಹೊರಟಿರುವುದೇ ಈಗಿರುವ ಇತಿಹಾಸದ ವಿವರಗಳನ್ನು ತಮ್ಮ ಮೂಗಿನ ನೇರಕ್ಕೆ ‘ಸಂಶೋಧಿಸಿ’ ಬರೆಯುವುದಕ್ಕೆ. ಇತಿಹಾಸವನ್ನು ಚಾರಿತ್ರಿಕ ವಾಸ್ತವಾಂಶಗಳ ಮೇಲೆ ಅರ್ಥೈಸುವ ಬದಲಿಗೆ, ವೇದ, ಪುರಾಣ, ಶಾಸ್ತ್ರಗ್ರಂಥಗಳ ಆಧಾರದಲ್ಲಿ ರಚಿಸಿ ಹೇಳುವುದು. ಈ ಪದ್ಧತಿ ಇತಿಹಾಸವನ್ನು ಐತಿಹ್ಯಗೊಳಿಸುವ ಕೆಲಸವನ್ನು ಮಾತ್ರ ಮಾಡಬಲ್ಲದು. ನಂಬಿಕೆಗಳು, ಕಲ್ಪನೆಗಳು ಕತೆಗಳಾಗಬಲ್ಲವೇ ಹೊರತು ಚರಿತ್ರೆಯಾಗಲಾರವು. ಈಗಿರುವ ಭಾರತೀಯ ಚರಿತ್ರೆಯ ಪ್ರತಿಪಾದನೆಗಳು ಚಾರಿತ್ರಿಕಾಂಶಗಳ ಮೇಲೆ ನಿರ್ಮಾಣಗೊಂಡಿದೆ. ಅದನ್ನು ಬದಲಿಸಿ ಬರೆಯುವ ಅವಶ್ಯಕತೆಯಿಲ್ಲ. ಸಂಶೋಧನೆಗಳಲ್ಲಿ ಸಿಕ್ಕುವ ಹೊಸ ಆಧಾರಾಂಶಗಳ ಮೇಲೆ ಅದನ್ನು ಪರಿಪೂರ್ಣಗೊಳಿಸುತ್ತಾ ಹೋಗಬೇಕೇ ಹೊರತು ಅದನ್ನು ಬದಲಿಸಿ ಬರೆಯುವುದಲ್ಲ.

ಈವರೆಗಿನ ಇತಿಹಾಸ ಬರೆದವರು ಎಡಪಂಥೀಯ ವಾದಗಳ, ಪಾಶ್ಚಾತ್ಯ ಪ್ರೇರಣೆಗಳಿಂದ ಬರೆದಿದ್ದಾರೆ. ಆದ್ದರಿಂದ ಇದು ರಾಷ್ಟ್ರೀಯವಾದಿಯಾಗಿಲ್ಲ ಎಂಬುದು ಅವರ ವಾದ. ಸಿಂಧೂ ನಾಗರಿಕತೆ ನಿರ್ಮಾಣ ಮಾಡಿದ್ದು ಸ್ಟೆಪ್ಪಿ ಹುಲ್ಲುಗಾವಲುಗಳಿಂದ ಬಂದ ಆರ್ಯ ಭಾಷಿಕ ಪಶುಪಾಲಕರಲ್ಲ. ಅವರು ಇಲ್ಲಿಗೆ ಬರುವ ಮೂರು ಸಾವಿರ ವರ್ಷಗಳ ಹಿಂದೆಯೇ ಬೇರೆ ಡಿಎನ್‍ಎ ಮೂಲದ ಜನ ಈ ಉತ್ತುಂಗ ಸಂಸ್ಕೃತಿಯನ್ನು ನಿರ್ಮಿಸಿದ್ದರು. ಕ್ರಿ. ಪೂ. 1500ರ ಹೊತ್ತಿಗೆ ಇಲ್ಲಿಗೆ ತಲುಪಿದ ಸ್ಟೆಪ್ಪಿ ಮೂಲದ ಪಶುಪಾಲಕರು ಇಲ್ಲಿ ಪಟ್ಟಣ ನಾಗರಿಕತೆ ನಿರ್ಮಿಸಿದ್ದ ಜನರೊಂದಿಗೆ ಸಂಘರ್ಷಸಿದರು. ಆ ನಾಗರಿಕತೆಯು ಹಲವು ಕಾರಣಗಳಿಂದ ಪತನಗೊಂಡ ಐನೂರು ವರ್ಷಗಳ ನಂತರ ಇವರು ಹಳೆಯ ಪಳೆಯುಳಿಕೆಗಳ ಆಧಾರದಲ್ಲಿ ಮೊದಲಿದ್ದ ಜನರನ್ನೂ ಕೂಡಿಕೊಂಡು ಹೊಸ ನಾಗರಿಕತೆ ಕಟ್ಟಿದರು. ಅದು ವೈದಿಕ ಸಂಸ್ಕೃತಿ ಎಂದಾಗಿದೆ ಎಂಬುದು ಈಗಿರುವ ಇತಿಹಾಸದ ಪ್ರತಿಪಾದನೆ. ಇದಕ್ಕೆ ಪುರಾತತ್ವ ಸಾಕ್ಷ್ಯಗಳ ಆಧಾರವಿದೆ.

ಆದರೆ ಈ ಬಗ್ಗೆ ಸಂಘ ಪರಿವಾರದ ಹಿಂದೂ ರಾಷ್ಟ್ರವಾದಿಗಳಿಗೆ ಸಹಮತವಿಲ್ಲ. ಅವರ ಪ್ರಕಾರ ವೈದಿಕ ಸಂಸ್ಕೃತಿಯ ಜನರೇ ಸಿಂಧೂ ಸಂಸ್ಕೃತಿ ಕಟ್ಟಿದರು. ಅವರೇ ಇಲ್ಲಿನ ಮೂಲ ನಿವಾಸಿಗರು. ಅವರ ಡಿಎನ್‍ಎ ಹಾಗೂ ಇಲ್ಲಿರುವ ಇತರ ಜನಗಳ ಡಿಎನ್‍ಎ ಒಂದೇ ಆಗಿದೆ. ಸಿಂಧೂ ಸಂಸ್ಕೃತಿ ಎನ್ನುವುದು ಸರಸ್ವತಿ ಸಂಸ್ಕೃತಿಯಾಗಿದೆ. ಇದನ್ನು ಪಾಶ್ಚಾತ್ಯ ಪ್ರಭಾವದ ಇತಿಹಾಸಕಾರರು ತಿರುಚಿ ಬರೆದಿದ್ದಾರೆ. ಇದನ್ನು ಸರಿಪಡಿಸಿ ಬರೆಯಬೇಕು. ಭಾರತೀಯ ಸಂಸ್ಕೃತಿಯ ಇತಿಹಾಸ ರಚನೆಯ ಈ ಸಂದಿಗ್ಧಾರ್ಥಗಳನ್ನು ‘ಸರಿ’ಪಡಿಸುವ ದಿಕ್ಕಿನಲ್ಲೇ ಮೋಹನ ಭಾಗವತರ ಮಾತು ಬಂದಿದೆ. ಮುಸ್ಲಿಮರು ಬೇರೆ ಡಿಎನ್‍ಎ ಹೊಂದಿಲ್ಲ ಎಂದು ಹೇಳಿರುವುದು ಯಥಾರ್ಥವಾಗಿದೆ. ಆದರೆ ಮೋಹನ ಭಾಗವತರ ಈ ಸತ್ಯದ ಹೇಳಿಕೆ ಮುಸ್ಲಿಮರನ್ನು ಒಳಗೊಳಿಸಿಕೊಳ್ಳುವುದಕ್ಕೆ ಮಾತ್ರ ಸೀಮಿತವಾಗಿಲ್ಲ. ಅವರ ಹೇಳಿಕೆಯ ನಿಜವಾದ ಗುರಿ ಆರ್ಯರು ಬೇರೆ ಡಿಎನ್‍ಎಯವರಲ್ಲ, ಇತರ ಭಾರತೀಯ ಮೂಲನಿವಾಸಿಗಳ ಡಿಎನ್‍ಎಗೂ ಆರ್ಯಮೂಲದ ವೈದಿಕ ಸಂಸ್ಕೃತಿಯ ಜನರ ಡಿಎನ್‍ಎಗೂ ವ್ಯತ್ಯಾಸವಿಲ್ಲ ಎಂಬ ‘ಪೌರಾಣಿಕ’ ಸತ್ಯವನ್ನು ಸಾರುವುದು.

–ಬಂಜಗೆರೆ ಜಯಪ್ರಕಾಶ

ಭಾಗವತರ ಮಾತುಗಳು ಸಂಘ ಪರಿವಾರದ ಧಾಟಿಗೆ ಅನುಗುಣವಾಗಿಯೇ ಇವೆ. ಅವರು ಸಂವಿಧಾನವನ್ನು ಗೌರವಿಸುವುದಾಗಿ ಹೇಳುತ್ತಾರೆ. ಆದರೆ ಮನುಸ್ಮೃತಿಯ ಆಳ್ವಿಕೆಯನ್ನು ಮರುಸ್ಥಾಪನೆ ಮಾಡಲು ಬಯಸುತ್ತಾರೆ. ಮುಸ್ಲಿಮರನ್ನು ಅವರ ಧರ್ಮದ ಕಾರಣಕ್ಕೆ ‘ಅನ್ಯೀಕರಿಸುವ’ ವಾದಗಳನ್ನು ಪೋಷಿಸಿದ್ದು ಇದೇ ಸಂಘ ಪರಿವಾರ. ಆದರೆ ಮುಸ್ಲಿಮರು ಈ ದೇಶದಲ್ಲಿರಬಾರದು ಎಂದು ಹೇಳುವವರು ನಿಜವಾದ ಹಿಂದೂಗಳಲ್ಲ ಎಂದಿದ್ದಾರೆ ಈಗ. ಹಾಗಾದರೆ ಈ ಬಗೆಯ ಪ್ರತಿಪಾದನೆ ಮಾಡುತ್ತಿರುವುದು, ಮುಸ್ಲಿಮರ ಮೇಲೆ ಗುಂಪು ಹಲ್ಲೆ ನಡೆಸುತ್ತಿರುವವರು ಯಾವ ಹಿಂದೂಗಳು? ನಿಜಕ್ಕೂ ಅವರು ಜನಸಾಮಾನ್ಯ ಹಿಂದೂಗಳಲ್ಲ. ಹಿಂದೂ ರಾಷ್ಟ್ರವಾದದಿಂದ ಪ್ರೇರಿತರಾದ ಇದೇ ಸಂಘಪರಿವಾರಕ್ಕೆ ಸಂಬಂಧಿಸಿದ, ವಿವಿಧ ನಾಮಫಲಕಗಳಲ್ಲಿ ಅಲಂಕೃತಗೊಂಡ ಹಿಂದೂ ಗುಂಪುಗಳು ಅವರು. ಈ ಹಿಂದೂ ಗುಂಪುಗಳಿಗೆ ಸಂಘ ಪರಿವಾರದ ವಾದವೇ ಸಿದ್ಧಾಂತ. ಹಾಗಾಗಿಯೇ ಕಳೆದ ಎರಡು ದಶಕಗಳಿಂದ ಮುಸ್ಲಿಮರ ಪ್ರತ್ಯೇಕೀಕರಣದ ವಾದಾಂಶಗಳು ಬೆಳೆದು ಬೃಹದಾಕಾರವಾಗಿವೆ. ಅವುಗಳ ವಕ್ರರೂಪ ಉತ್ತರ ಪ್ರದೇಶದಲ್ಲಿ ಕಂಡುಬರುತ್ತಿದೆ.

ಉತ್ತರ ಪ್ರದೇಶದ ವಿಧಾನಸಭಾ ಚುನಾವಣೆಗಳು ಸಮೀಪಿಸಿವೆ. ಯೋಗಿ ಆದಿತ್ಯನಾಥರ ಆಡಳಿತದ ಬಗ್ಗೆ ಜನರಿಗೆ ಭ್ರಮನಿರಸನವಾಗಿದೆ. ಈಗ ಚುನಾವಣೆಯಲ್ಲಿ ಗೆಲ್ಲಲು ಮುಸ್ಲಿಮರ ಮತಗಳೂ ಅಗತ್ಯವಾಗಬಹುದು. ಸಂಘ ಪರಿವಾರದ ಅಂಗಸಂಸ್ಥೆಯೇ ಆಗಿರುವ ‘ಮುಸ್ಲಿಂ ರಾಷ್ಟ್ರೀಯ ಮಂಚ್’ನ ಕಾರ್ಯಕ್ರಮದಲ್ಲಿ ಮುಸ್ಲಿಮರಿಗೆ ಸಿಹಿ ಅನಿಸುವಂತಹ ಮಾತನ್ನಾಡುವಾಗಲೂ ಮೋಹನ ಭಾಗವತರು ಮುಸ್ಲಿಮರ ‘ಹಿಂದೂಕರಣ’ದ ಅಜೆಂಡಾವನ್ನೇ ಗುಪ್ತವಾಗಿ ನುಡಿಯುತ್ತಿದ್ದಾರೆನಿಸುತ್ತದೆ. ರಾಷ್ಟ್ರೀಯ ಮಂಚದ ಮುಸ್ಲಿಮರೆಂದರೆ ಈ ದೇಶದಲ್ಲಿ ಹಿಂದೂ ಸಂಸ್ಕೃತಿಯೇ ಅಧಿಕೃತ ಸಂಸ್ಕೃತಿ ಎಂದು ಒಪ್ಪಿಕೊಂಡವರು. ತಮ್ಮನ್ನು ದ್ವಿತೀಯ ಸಂಸ್ಕೃತಿಯವರು ಎಂದು ಒಪ್ಪಿಕೊಳ್ಳುವ ಮುಸ್ಲಿಮರ ಬಗ್ಗೆ ಸಂಘ ಪರಿವಾರಕ್ಕೆ ಸಹಮತವಿದೆ. ಸದ್ಯಕ್ಕೆ ಅವರ ಕಣ್ಣಮುಂದೆ ಉತ್ತರ ಪ್ರದೇಶದ ಮುಸ್ಲಿಮರ ದೊಡ್ಡ ಮತ ಬ್ಯಾಂಕಿದೆ. ಹಾಗಾಗಿ ಮುಸ್ಲಿಮರನ್ನು ಜೋಡಣೆಗೊಳಿಸಿಕೊಳ್ಳುವ ರಾಗ ಈಗ ಹಾಡಲಾಗುತ್ತಿದೆ. ಈವರೆಗೆ ಉತ್ತರ ಪ್ರದೇಶದಲ್ಲಿ ನಡೆದ ಪ್ರತ್ಯೇಕೀರಣ ಹಾಗೂ ದಮನಕಾರಿ ಕರ್ಮಕಾಂಡವನ್ನು ಮರೆತು ಮುಸ್ಲಿಮರು ಯೋಗಿ ಆದಿತ್ಯನಾಥರಿಗೆ ಮತ್ತೆ ಮತ ಹಾಕಲು ಈ ಜೋಗುಳ ನೆರವಾಗುತ್ತದೆಂದು ಭಾಗವತರು ನಂಬುತ್ತಿದ್ದಾರೆನಿಸುತ್ತದೆ.

ಲೇಖಕ: ಸಂಸ್ಕೃತಿ ಸಂಶೋಧಕ, ಬರಹಗಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.