ADVERTISEMENT

ಚರ್ಚೆ | ಬ್ರಾಹ್ಮಣ್ಯ: ಪ್ರಶ್ನೆ ಮತ್ತು ಪರಿಹಾರ

‘ಸಮಾಜಶಾಸ್ತ್ರೀಯ ಪರಿಭಾಷೆಯನ್ನು ವ್ಯಕ್ತಿ ಅಥವಾ ವ್ಯಕ್ತಿಗಳ ಗುಂಪಿಗೆ ಅನ್ವಯಿಸಿಕೊಂಡು ಅರ್ಥಮಾಡಿಕೊಳ್ಳುವುದೇ ಸಂಕುಚಿತ ನೋಟ’

ಪ್ರಜಾವಾಣಿ ವಿಶೇಷ
Published 24 ಜೂನ್ 2021, 19:45 IST
Last Updated 24 ಜೂನ್ 2021, 19:45 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಜಾತಿ ತಾರತಮ್ಯ ಧೋರಣೆಗಳನ್ನು ‘ಬ್ರಾಹ್ಮಣ್ಯ’ ಎಂಬ ಹೆಸರಿನಿಂದ ಕರೆದಾಗ ಅದು ಬ್ರಾಹ್ಮಣರ ನಿಂದನೆಯಾಗುತ್ತದೆಯೇ ಎಂಬ ಪ್ರಶ್ನೆ ವಿಚಿತ್ರವಾಗಿದೆ. ಇಂದು ಕುರುಬ, ಕೊರಮ, ವಡ್ಡ, ಕ್ಷೌರಿಕ ಮುಂತಾದ ಎಲ್ಲ ಜಾತಿ, ವೃತ್ತಿ ವಾಚಕ ಶಬ್ದಗಳೂ ನಿಂದನಾತ್ಮಕ ಶಬ್ದಗಳಾಗಿ ಪರಿಣಮಿಸಿವೆ. ಸಹಜವಾಗಿಯೇ ಬ್ರಾಹ್ಮಣ್ಯವೂ ಇದಕ್ಕೆ ಹೊರತಲ್ಲ. ಆದ್ದರಿಂದ ಒಬ್ಬ ವ್ಯಕ್ತಿ ಯನ್ನು ನಿಂದಿಸುವಾಗ ಅವನ ಮೂಲವನ್ನು ಹಿಡಿದು ನಿಂದಿಸುವುದು ಸೂಕ್ತವೇ, ಸಾಮಾಜಿಕ ಸಭ್ಯತೆಯೇ ಎಂಬ ಪ್ರಶ್ನೆಯನ್ನು ನಾವು ಕೇಳಿಕೊಳ್ಳಬೇಕಾಗಿದೆ.

‘ಭಯೋತ್ಪಾದನೆಗೆ ಧರ್ಮವಿಲ್ಲ ಎಂದು ನಾವು ಹೇಳುವಾಗ, ಅದು ಒಂದು ನಿರ್ದಿಷ್ಟ ಕೋಮಿ ನವರಿಗೆ ಸೀಮಿತವಾದುದಲ್ಲ ಎಂಬ ಇಂಗಿತವಿರುತ್ತದೆ. ಜಾತೀಯತೆಯ ಪ್ರಶ್ನೆ ಬಂದಾಗಲೂ ಇದೇ ನೀತಿ ಅನುಸರಿಸಬೇಕಲ್ಲವೇ?’ ಎಂಬುದು ಬ್ರಾಹ್ಮಣರ ಪ್ರಶ್ನೆಯಾಗಿದೆ. ಆದರೆ ಬ್ರಾಹ್ಮಣರೆಲ್ಲರೂ ಪೂಜಿಸುವ ಆದಿಶಂಕರರು ‘ಒಬ್ಬ ನಿಜವಾದ ಬ್ರಾಹ್ಮಣ ತನ್ನನ್ನು ಯಾವುದೇ ಜಾತಿ, ವರ್ಣದೊಂದಿಗೆ ಗುರುತಿಸಿಕೊಳ್ಳುವುದಿಲ್ಲ’ ಎನ್ನುತ್ತಾರೆ. ಅಂದರೆ ಶಂಕರರ ಪ್ರಕಾರ, ಬ್ರಾಹ್ಮಣ್ಯದ ಸೊಲ್ಲೆತ್ತಿದಾಗ ಕೆರಳುವ ಬ್ರಾಹ್ಮಣರಾರೂ ನಿಜವಾದ ಬ್ರಾಹ್ಮಣರಲ್ಲ ಎಂದಾಗುತ್ತದೆ. ಜಾತಿ ತಾರತಮ್ಯಕ್ಕೆ ತಮ್ಮ ಕೊಡುಗೆ ಎಷ್ಟರಮಟ್ಟಿಗಿದೆ ಎಂಬುದನ್ನು ತಿಳಿಯಲು ಬ್ರಾಹ್ಮಣರು ದೊಡ್ಡ ಸಂಶೋಧನೆ ಮಾಡಬೇಕಿಲ್ಲ. ತಮ್ಮ ತಮ್ಮ ಕುಟುಂಬ, ಪರಿಸರದೊಳಗೇ ಅದನ್ನು ಕಂಡುಕೊಳ್ಳಬಹುದು.

ಆದ್ದರಿಂದ ಈ ವಿವಾದಕ್ಕೆ ಎರಡು ಪರಿಹಾರಗಳಿವೆ:

ಒಂದು, ಬ್ರಾಹ್ಮಣ ವರ್ಗ ತಾನು ಯಾವುದೇ ಜಾತಿ ವರ್ಣಕ್ಕೆ ಸೇರಿಲ್ಲ ಎಂಬ ಆದಿಶಂಕರರ ವಿವೇಕದ ನೆರವಿನಿಂದ ಜಾತ್ಯತೀತ ವರ್ಗವಾಗಿ ವಿಕಾಸವಾಗಬೇಕಾಗುತ್ತದೆ. ಇಲ್ಲವೇ ಸಾಮಾಜಿಕ ತಾರತಮ್ಯದ ಬಗ್ಗೆ ವಿಚಾರ ಮಾಡುವ ವರ್ಗದವರು ಇದಕ್ಕೆ ಒಂದು ನಿರ್ದಿಷ್ಟ ಜಾತಿಯವರನ್ನು ಹೊಣೆ ಮಾಡಬಾರದೆಂಬ ಕನಿಷ್ಠ ಸಾಮಾಜಿಕ ಸಭ್ಯತೆಯನ್ನು ತಮ್ಮ ಚರ್ಚೆಯಲ್ಲಿ ಕಾಪಾಡಿಕೊಳ್ಳಬೇಕಾಗುತ್ತದೆ. ಈ ವಿವಾದವು ಈ ಎರಡು ವರ್ಗಗಳ ನಡುವೆ ಪರಸ್ಪರ ಗೌರವ, ಸೌಹಾರ್ದಭಾವಗಳ ಕೊರತೆ ಇದೆ ಎಂಬುದನ್ನು ಸೂಚಿಸುತ್ತದೆ. ಬ್ರಾಹ್ಮಣ್ಯದವರು ಕನಿಷ್ಠ ವಿವೇಕವನ್ನು ಮತ್ತು ಬ್ರಾಹ್ಮಣ್ಯದ ಟೀಕಾಕಾರರು ಕನಿಷ್ಠ ಸೌಜನ್ಯ, ಸೂಕ್ಷ್ಮತೆಯನ್ನು ಉಳಿಸಿಕೊಂಡಿದ್ದರೂ ಇಂಥವೆಲ್ಲ ಚರ್ಚೆಯ ವಸ್ತುವಾಗುತ್ತಿರಲಿಲ್ಲ.

ADVERTISEMENT

- ಟಿ.ಎನ್.‌ವಾಸುದೇವಮೂರ್ತಿ, ಬೆಂಗಳೂರು

***********

ಮರೆಯಾದ ನೈಜಕಲ್ಪನೆ

ನಟ ಚೇತನ್ ಅವರ ಹೇಳಿಕೆಯಿಂದ ವ್ಯಗ್ರರಾದವರು ನ್ಯಾಯಾಲಯದ ಮೆಟ್ಟಿಲು ತುಳಿದಿರುವುದರಿಂದ ಮತ್ತೆ ಈಗ ಬ್ರಾಹ್ಮಣ, ಬ್ರಾಹ್ಮಣ್ಯ ಇತ್ಯಾದಿ ಪರಿಕಲ್ಪನೆಗಳು ವಾದ ವಿವಾದಗಳಿಗೆ ಸಿಲುಕಿ ನಲುಗುವಂತಾಗಿವೆ! ಈ ಭರಾಟೆಯಲ್ಲಿ ಬ್ರಾಹ್ಮಣ ಅಥವಾ ಬ್ರಾಹ್ಮಣ್ಯದ ನೈಜ ಕಲ್ಪನೆ ಮರೆಯಾಗಿ, ಇವುಗಳ ಹೆಸರಿನಡಿಯಲ್ಲಿಬದುಕುತ್ತಿದೆಯೆಂಬ ಸಮಾಜದ ಒಂದು ವರ್ಗದ ಮೇಲೆ ಎಲ್ಲರೂ ಮುಗಿಬೀಳುತ್ತಾರೆ.

‘ಜಾತಿ’ ಎಂಬುದು ಬೆನ್ನುಹತ್ತಿದ ಬೇತಾಳ ದಂತಾಗಿದೆ. ರಾಜಕೀಯ ಕ್ಷೇತ್ರದಲ್ಲಿ ಸಿದ್ಧಾಂತ, ನಿಷ್ಠೆ ಎಂಬ ಪದಗಳು ಉದುರುತ್ತವೆ. ಆದರೆ ಸಿದ್ಧಾಂತಗಳನ್ನು ನಿಷ್ಠೆಯಿಂದ ಪರಿಪಾಲಿಸುವ ರಾಜಕೀಯ ವ್ಯಕ್ತಿಗಳು ಎಲ್ಲಿದ್ದಾರೆ? ಹಾಗೆಯೇ ‘ನೈಜ ಬ್ರಾಹ್ಮಣ್ಯ’ದ ಪರಿಸ್ಥಿತಿ! ಮತ್ತೆ, ಜಾತಿ ಎನ್ನುವುದು ಬಂದುದು ನಂತರ. ಅಂದಿನ ವರ್ಣವ್ಯವಸ್ಥೆಯಲ್ಲಿ ಹೆಚ್ಚುಗಿಚ್ಚುಗಳ ಹುಚ್ಚಾಟಇರಲಿಲ್ಲ. ‘ಬ್ರಹ್ಮಜ್ಞಾನ’ ಪಡೆದವನು ‘ಬ್ರಾಹ್ಮಣ’ ಎನಿಸಿಕೊಳ್ಳಬಹುದಾಗಿತ್ತು. ಅದಕ್ಕೂ ಹುಟ್ಟಿಗೂ ಸಂಬಂಧ ಇರಲಿಲ್ಲ. ಅಪಕಲ್ಪನೆಗಳೆಲ್ಲ ನಂತರದ ಬೆಳವಣಿಗೆಗಳು- ಮೂಲೋದ್ದೇಶ ವಿರುದ್ಧದವು.

ಸ್ಪರ್ಧಾತ್ಮಕ ಸಮಾಜದಲ್ಲಿ ಮುಂದುವರಿಯುವವರು ಮತ್ತು ಹಿಂದಕ್ಕುಳಿಯುವವರು ಸಾಮಾನ್ಯ. ಆದರೆ ಬದುಕಿನ ಎಲ್ಲ ಕ್ಷೇತ್ರಗಳೂ ಎಲ್ಲರಿಗೂ ತೆರೆದಿರಬೇಕು, ಅವಕಾಶ ಎಲ್ಲರಿಗೂ ಲಭ್ಯವಾಗಬೇಕು. ಯಾವುದೋ ಕಾರಣಕ್ಕೆ ಹಿಂದೆ ಬೀಳುವಂತಾಗುವವರಿಗೆ ಹೆಚ್ಚಿನ ಪ್ರೋತ್ಸಾಹ ಸಿಗಬೇಕು.

- ಸಾಮಗ ದತ್ತಾತ್ರಿ, ಬೆಂಗಳೂರು

**********

ಸಂಕುಚಿತತೆ ತರವೇ?

ಜಗತ್ತಿನ ಆರ್ಥಿಕ ಅಸಮಾನತೆಗೆ ಕಾರಣವಾಗಿರುವ ವಿದ್ಯಮಾನವನ್ನು ನಾವು ಬಂಡವಾಳಶಾಹಿ ವ್ಯವಸ್ಥೆ ಎಂದು ಗುರುತಿಸುತ್ತೇವೆ. ನಾಳೆಯಿಂದ ಈ ಪರಿಭಾಷೆ ಬಳಸಿದ ತಕ್ಷಣ ‘ಬಂಡವಾಳಿಗರ ಸಂಘ’ವೊಂದು ಪೊಲೀಸರಿಗೆ ದೂರು ನೀಡುವುದು ಎಷ್ಟು ಅಪಹಾಸ್ಯ!

ಯುರೋಪಿನಲ್ಲಿ ಮೈಬಣ್ಣದ ಆಧಾರದಲ್ಲಿ ತಾರತಮ್ಯ ಮಾಡುವ ವಿದ್ಯಮಾನವನ್ನು ರೇಸಿಸಂ ಎಂದು ವಿಶ್ಲೇಷಿಸಲಾಗುತ್ತದೆ. ಈ ಪರಿಭಾಷೆ ಬಳಸಿದ ಮಾತ್ರಕ್ಕೆ ಅಲ್ಲಿನ ಬಿಳಿಯರು, ಬಳಸಿದ ವ್ಯಕ್ತಿಯ ಮೇಲೆ ದೂರು ದಾಖಲಿಸುವುದು ಎಷ್ಟು ಹಾಸ್ಯಾಸ್ಪದ!

ಭಾರತೀಯ ಸಂದರ್ಭದಲ್ಲಿ ‘ಸಾಮಾಜಿಕ ಅಸಮಾನತೆ’ಗೆ ಕಾರಣವಾಗಿರುವ ವಿದ್ಯಮಾನವನ್ನು ಬ್ರಾಹ್ಮಣ್ಯ ಎಂದು ಗುರುತಿಸಲಾಗಿದೆ. ಈ ಸಮಾಜಶಾಸ್ತ್ರೀಯ ಪರಿಭಾಷೆ ಬಳಸಿದ ಮಾತ್ರಕ್ಕೆ, ಜಾತಿ ಸಂಘವೊಂದು ಅದಕ್ಕೆ ಪ್ರತಿಕ್ರಿಯಿಸುವುದು, ದೂರು ದಾಖಲಿಸುವುದು ಅಷ್ಟೇ ಹಾಸ್ಯಾಸ್ಪದ. ಈ ಪರಿಭಾಷೆಯಲ್ಲಿ ಸಮಸ್ಯೆ ಇದ್ದರೆ ಬೌದ್ಧಿಕ ಚರ್ಚೆಯ ಮೂಲಕ ಪರಿಹಾರ ಕಂಡುಕೊಳ್ಳಬೇಕು. ಮುಖ್ಯವಾಗಿ ಬಂಡವಾಳಶಾಹಿ, ವರ್ಣಭೇದ ನೀತಿ, ಬ್ರಾಹ್ಮಣ್ಯ ಇವು ಆಯಾ ಸಮಾಜಗಳಲ್ಲಿನ ಅಸಮಾನತೆಗೆ ಕಾರಣವಾದ ವಿದ್ಯಮಾನವನ್ನು ಗುರುತಿಸಲು ಕಟ್ಟಿಕೊಂಡ ಸಮಾಜ ಶಾಸ್ತ್ರೀಯ ಪರಿಭಾಷೆಗಳು. ಇವುಗಳನ್ನು ವ್ಯಕ್ತಿ ಅಥವಾ ವ್ಯಕ್ತಿಗಳ ಗುಂಪಿಗೆ ಅನ್ವಯಿಸಿಕೊಂಡು ಅರ್ಥಮಾಡಿಕೊಳ್ಳುವುದೇ ಸಂಕುಚಿತ ನೋಟ. ಅದನ್ನು ಮೀರಿಯೂ ನಮಗೆ ಅವುಗಳ ಬಳಕೆ ತಪ್ಪು ಅನ್ನಿಸುತ್ತಿದ್ದರೆ ನಮ್ಮೊಳಗೂ ಆ ಭಾವಗಳು ಇವೆ ಎಂದೇ ಅರ್ಥ.

- ಕಿರಣ್ ಎಂ. ಗಾಜನೂರು, ಕಲಬುರ್ಗಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.