ADVERTISEMENT

ಚರ್ಚೆ | ಅರ್ಚಕತ್ವ ಬಹಿರಾಚರಣೆಯಲ್ಲ

ದೇವಸ್ಥಾನಗಳ ಅರ್ಚಕ ವೃತ್ತಿಗೆ ಬ್ರಾಹ್ಮಣೇತರರನ್ನು ನೇಮಿಸಬೇಕೇ?

ಗ.ನಾ.ಭಟ್ಟ
Published 25 ಜೂನ್ 2021, 19:45 IST
Last Updated 25 ಜೂನ್ 2021, 19:45 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಯಾವಾಗ ನಮ್ಮ ರಾಜಕಾರಣಿಗಳಲ್ಲಿ ಮತಬ್ಯಾಂಕ್ ಎಂಬ ಪರಮ ಲಾಭದಾಯಕ ನಿಧಿ ಕಾಣಿಸಿಕೊಂಡಿತೋ ಆಗಲೇ ಜಾತಿ ತಾರತಮ್ಯಗಳು, ಜಾತಿಗಳ ಮುಖಂಡರನ್ನು ಎತ್ತಿಹಿಡಿಯುವುದು, ಅವರ ಮೌಢ್ಯ, ಅಜ್ಞಾನಗಳನ್ನು ತಮ್ಮ ಸ್ವಾರ್ಥಕ್ಕೆ ಬಳಸಿ ಕೊಳ್ಳುವುದು, ಅವರಿಗೆ ಆಮಿಷ ಒಡ್ಡುವುದು ಮೊದಲಾದ ಅನಿಷ್ಟಗಳು ಹುಟ್ಟಿಕೊಂಡವು. ಹಿಂದುಳಿದವರು, ಅತಿ ಹಿಂದುಳಿದವರು, ಮೇಲ್ವರ್ಗದವರು, ಕೆಳವರ್ಗದವರು ಮುಂತಾಗಿ ದೊಡ್ಡ ಪ್ರಮಾಣದ ವಿಭಜನೆ, ಕಂದಕ ಸೃಷ್ಟಿಗೊಂಡಿತು. ಅದು ಈಗ ಎಲ್ಲಿಯವರೆಗೆ ಬಂದು ನಿಂತಿದೆಯೆಂದರೆ ಜಾತಿಯ ಬಗ್ಗೆ ಮಾತನಾಡಿದರೇ ಸಾಕು. ಅದು ಭಗ್ಗನೆ ಹೊತ್ತಿಕೊಳ್ಳುತ್ತದೆ, ಜೈಲಿಗೇ ಹೋಗುವ ಸ್ಥಿತಿ ನಿರ್ಮಾಣವಾಗಿದೆ.

ತಮಾಷೆಯ ಸಂಗತಿಯೆಂದರೆ ಈಗ ದೊಡ್ಡ ಮಟ್ಟದ ಗುರಿ ಆಗಿರುವವರು ಬ್ರಾಹ್ಮಣರು. ಬ್ರಾಹ್ಮಣರು ಎಂದರೆ ಶೋಷಕರು, ವಿದ್ಯಾವಂತರು, ಮೇಲ್ವರ್ಗ ದವರು; ಸರ್ಕಾರದ ಎಲ್ಲಾ ಸೌಲಭ್ಯ ಅನುಭವಿಸುತ್ತಿದ್ದಾರೆ, ಸರ್ಕಾರದ ಆಯಕಟ್ಟಿನ ಜಾಗಗಳಲ್ಲಿ ತುಂಬಿ ಕೊಂಡಿದ್ದಾರೆ, ಹೇಗಾದರೂ ಮಾಡಿ ಅವರನ್ನು ಕೆಳಗಿಳಿಸಬೇಕು ಎಂಬ ಕೂಗು ಜೋರಾಗಿದೆ.

ಇದಕ್ಕೆ ಪೋಷಕವೋ ಎಂಬಂತೆ ತಮಿಳುನಾಡಿನಲ್ಲಿ ಮುಜರಾಯಿ ದೇವಸ್ಥಾನಗಳಿಗೆ ಹಿಂದುಳಿದವರನ್ನು ಮತ್ತು ಮಹಿಳೆಯರನ್ನು ಅರ್ಚಕರಾಗಿ ನೇಮಿಸುವುದಕ್ಕೆ ಅಲ್ಲಿಯ ರಾಜ್ಯ ಸರ್ಕಾರ ಅನುಮತಿಯನ್ನು ನೀಡಿದೆ. ಇದರಲ್ಲೇನೂ ವಿಶೇಷವಿಲ್ಲ. ದ್ರಾವಿಡ ಚಳವಳಿಯ ಮುಖಂಡ ಇ.ವಿ.ರಾಮಸ್ವಾಮಿ ಅವರು ‘ದಲಿತರನ್ನು ದೇವಸ್ಥಾನದ ಅರ್ಚಕರ ಸ್ಥಾನದಲ್ಲಿ ನೋಡುವುದು ನನ್ನ ಕನಸು’ ಎಂದು1970ರಲ್ಲಿ ಸಾರಿದ್ದರು. ಆಗಲೇ ಅದರ ಬಗ್ಗೆ ಪ್ರಯತ್ನಗಳು ನಡೆದಿದ್ದವು. ಇನ್ನೊಂದು ಚೋದ್ಯದ ಸಂಗತಿಯೆಂದರೆ- ದೇವಾಲಯಗಳ ನಾಡು ಎಂದೇ ಪ್ರಸಿದ್ಧವಾದ ತಮಿಳುನಾಡಿನಲ್ಲಿ ನಾಸ್ತಿಕರೇ ರಾಜ್ಯವಾಳುತ್ತಿರುವುದು. ಹಾಗಾಗಿ ಅಲ್ಲಿ ದಲಿತರೋ, ಇತರ ಹಿಂದುಳಿದವರೋ ದೇವಸ್ಥಾನಕ್ಕೆ ಅರ್ಚಕರಾದರೆ ವಿಶೇಷವೆ ನಿಸುವುದಿಲ್ಲ. ಯಾಕೆ ಅಂದರೆ ಅವರಿಗೆ ಯಾರಿಗೂ ವೇದ, ಉಪನಿಷತ್ತು, ಮಂತ್ರ ಬೇಕಿಲ್ಲ.

ADVERTISEMENT

ಇರಲಿ. ಇಡೀ ದೇಶವನ್ನು ಗಮನಿಸು ವುದಾದರೆ ಎಲ್ಲಾ ಕಡೆಯೂ, ಎಲ್ಲಾ ರಾಜ್ಯಗಳಲ್ಲೂ ಎಲ್ಲಾ ತರಹದ ನೌಕರಿಯ ವಿಭಾಗಕ್ಕೂ ಮೀಸಲಾತಿ ಇದೆ. ಹಾಗಿರುವಾಗ ಮುಜರಾಯಿ ದೇವಸ್ಥಾನಗಳಿಗೆ ದಲಿತರನ್ನು ಅಥವಾ ಹಿಂದುಳಿದವರನ್ನು ಅರ್ಚಕರಾಗಿ ನೇಮಿಸುವುದರಲ್ಲಿ ಯಾವ ವಿಶೇಷವೂ ಇಲ್ಲ. ಅದು ಮುಖ್ಯ ವಿಷಯವಲ್ಲ. ಮುಖ್ಯ ವಿಷಯ ಅಂದರೆ-ಕಾವಿ ಬಟ್ಟೆ ತೊಟ್ಟ ಮಾತ್ರಕ್ಕೆ ಸನ್ಯಾಸಿಯಾಗುತ್ತಾರೆಯೇ? ವಿಭೂತಿಪಟ್ಟೆ, ಗೋಪಿಚಂದನನಾಮ, ಅಂಗಾರಕ, ಕುಂಕುಮಲೇಪನ, ಬಣ್ಣದ ಮಕುಟ ಮೊದಲಾದವನ್ನು ಧರಿಸಿದವರೆಲ್ಲ ಅರ್ಚಕರಾಗುತ್ತಾರೆಯೇ.

ತಮಿಳುನಾಡಿನಲ್ಲಿ ಅರ್ಚಕರಾಗುವ ದಲಿತರಿಗೆ ಆಗಮೊಕ್ತಾನುಸಾರ ತರಬೇತಿ ನೀಡಲಾಗಿದೆ ಎಂಬ ಮಾತು ಬಂದಿದೆ. ‘ತರಬೇತಿ’ ಅಂದರೆ ಶಿಕ್ಷಣ, ಪ್ರಶಿಕ್ಷಣ ಎಂದು ಅರ್ಥ. ಆ ತರಬೇತಿಯನ್ನು ನಾವು ಮನುಷ್ಯರಾದಿಯಾಗಿ ಆನೆ, ಸಿಂಹ, ಚಿರತೆ, ನಾಯಿ, ಬೆಕ್ಕು, ಗಿಳಿ ಮೊದಲಾದ ಎಲ್ಲಾ ಪ್ರಾಣಿಗಳಿಗೂ ಕೊಡಬಹುದು. ತರಬೇತಿ ಅನ್ನುವುದು ಹೊರಗಿನದಕ್ಕೆ, ವ್ಯವಹಾರಕ್ಕೆ ಸಂಬಂಧಪಟ್ಟಿದ್ದು. ಅದು ಆಂತರ್ಯವನ್ನು ಸ್ಪರ್ಶಿಸಲಾರದು. ಅರ್ಚಕತ್ವ ಸಿದ್ಧಿಸುವುದು ತರಬೇತಿಯಿಂದಲ್ಲ. ಅದು ಸಿದ್ಧಿಸುವುದು ವಿದ್ಯೆ, ಸಂಸ್ಕಾರಗಳಿಂದ. ಶಾಸ್ತ್ರದ ಪರಿಭಾಷೆ ಯಲ್ಲಿ ‘ವಿದ್ಯೆ’ ಅಂದರೆ ‘ಬ್ರಹ್ಮವಿದ್ಯೆ’ ಎಂದು ಅರ್ಥ. ಅದು ಮನುಷ್ಯನ ಆಂತರ್ಯಕ್ಕೆ, ಒಳಗಿನದಕ್ಕೆ ಸಂಬಂಧಪಟ್ಟಿದ್ದು. ‘ಆಗಮಶಾಸ್ತ್ರ’ ಅನ್ನವುದು ಶಿಲ್ಪಶಾಸ್ತ್ರ, ದಂಡನೀತಿ, ವೇದಾಂತ, ಮೀಮಾಂಸಾ, ಅರ್ಥ ಶಾಸ್ತ್ರ ಮೊದಲಾದ ಶಾಸ್ತ್ರಗಳಂತೆ ಗಹನವಾದುದು. ಅದು ತರಬೇತಿಯಿಂದ ದೊರೆಯಲಾರದು. ಅದು ನಾಲ್ಕೈದು ವರ್ಷ ಗುರುಮುಖೇನ ಅಧ್ಯಯನ ಮಾಡಿ ಪಡೆಯಬೇಕಾದುದು. ಹಾಗೆ ಪಡೆಯುವವರು ದಲಿತರೇ ಆಗಲೀ, ಇತರ ಹಿಂದುಳಿದವರೇ ಆಗಲೀ ದೇವಸ್ಥಾನದ ಅರ್ಚಕತ್ವಕ್ಕೆ ಆರ್ಹರಾಗುತ್ತಾರೆ.

ವೈದ್ಯ, ಎಂಜಿನಿಯರ್‌, ಪ್ರೊಫೆಸರ್‌ ಆಗುವುದಕ್ಕೆ ಎಷ್ಟೊಂದು ಶ್ರಮಿಸುತ್ತಾರೆ, ಎಷ್ಟು ಸಮಯ ತೆಗೆದುಕೊಳ್ಳುತ್ತಾರೆ ಎಂದು ಗಮನಿಸಿದರೆ ಆಯಾ ವಿದ್ಯೆ, ವೃತ್ತಿಗಳ ಮಹತ್ವ ಅರಿವಿಗೆ ಬರುತ್ತದೆ. ಹೀಗಿರುವಾಗ ಅರ್ಚಕತ್ವಕ್ಕೆ ಈ ಯಾವ ಸಾಧನೆ, ಪರಿಶ್ರಮವೂ ಬೇಡವೇ ಎಂಬ ಪ್ರಶ್ನೆ ಹುಟ್ಟಿಕೊಳ್ಳುತ್ತದೆ. ಅರ್ಚಕತ್ವ ಅನ್ನು ವುದು ವೇಷಭೂಷಣ ಮಾತ್ರದ್ದಲ್ಲ. ಅನುಕರಣೆಯ ಕ್ರಿಯಾಕಲಾಪವಲ್ಲ. ಅದು ಸಾಧ್ಯವಾಗುವುದು ಸಾಧನೆಯಿಂದ, ತಪಸ್ಸಿನಿಂದ. ತಪಸ್ಸು ಅಂದರೆ ಮೂಗು ಹಿಡಿದು, ಕಣ್ಣುಮುಚ್ಚಿ ಕುಳಿತುಕೊಳ್ಳು ವುದಲ್ಲ. ಒಂದು ವಿಷಯದ ಕುರಿತು ಏಕಾಗ್ರವಾಗಿ ಧ್ಯಾನಿಸುವುದು ತಪಸ್ಸು ಅನ್ನಿಸಿಕೊಳ್ಳುತ್ತದೆ.

ಇನ್ನು ಅರ್ಚಕತ್ವಕ್ಕೆ ಅದರದ್ದೇ ಆದ ಸಂಪ್ರದಾಯ, ವಿಧಿವಿಧಾನಗಳಿವೆ; ಸ್ವತಃ ಬ್ರಾಹ್ಮಣರಲ್ಲೇ ಎಲ್ಲರೂ ಒಂದೇ ಮಟ್ಟದ ವೈದಿಕರಲ್ಲ. ಅರ್ಚಕರಲ್ಲ. ಅವರು ಗಳಿಸಿದ ವಿದ್ಯೆ, ಪರಿಣತಿಯ ಮೇಲೆ ಅವರಿಗೆ ಒಂದು ಪದವಿ, ಸ್ಥಾನ ನಿರ್ಧಾರವಾಗುತ್ತದೆ (ಇಲ್ಲಿ ಅರ್ಚಕ ಮತ್ತು ವೈದಿಕ ಪದವನ್ನು ಸಮಾನಪದವಾಗಿ ಬಳಸಿದ್ದೇನೆ). ಇದರ ಆಳ, ನೀಳ, ಅಗಲವನ್ನು ಅರಿಯದೇ ಕಂಡವರೆಲ್ಲ ಅರ್ಚಕರಾಗುತ್ತಾರೆ ಅನ್ನುವುದೇ ನಗೆಪಾಟಲು ಮತ್ತು ವಿಷಾದದ ಸಂಗತಿ.

ಹಾಗೆಯೇ ಪೂಜಾವಿಧಾನಕ್ಕೂ ಸಂಪ್ರದಾಯ, ಕ್ರಮಗಳಿವೆ. ಘಂಟಾರ್ಚನೆ, ಕಲಶಾರ್ಚನೆ, ಶಂಖಾರ್ಚನೆ, ಮಂಟಪಾರ್ಚನೆ, ಅಭಿಷೇಕ, ಪಂಚಾಮೃತಾಭಿಷೇಕ, ಆರತಿ, ಮಹಾ ಮಂಗಳಾರತಿ, ಮಂತ್ರಪುಷ್ಪ, ನೈವೇದ್ಯ, ಪ್ರಾರ್ಥನೆ, ಪ್ರಸಾದವಿತರಣೆ ಹೀಗೆ ಹಲವು ಹತ್ತು ಮೆಟ್ಟಿಲುಗಳಿವೆ. ಇಲ್ಲಿ ಕಾಣಿಸಿದ ಪ್ರತಿಯೊಂದು ಅರ್ಚನಾವಿಧಾನಕ್ಕೂ ಭಾವೋನ್ನತಿಕಾರಕವಾದ, ವಿಚಾರ ಪ್ರಚೋದಕವಾದ, ಸೊಗಸಾದ ಬೇರೆ ಬೇರೆ ಮಂತ್ರಗಳಿವೆ. ಇದನ್ನು ತಿಳಿಸಿಕೊಡುವುದಕ್ಕೆ ಕರ್ನಾಟಕದಲ್ಲಿ ಈಗಲೇ ಸಾಕಷ್ಟು ಸಂಖ್ಯೆಯಲ್ಲಿ ವೇದ-ಸಂಸ್ಕೃತ ಪಾಠಶಾಲೆ ಗಳೂ, ಕಾಲೇಜುಗಳೂ ಇವೆ. ನಿಜವಾಗಿ ಅರ್ಚಕರಾಗಬಯಸುವವರು ಯಾವುದೇ ಜಾತಿಯವರಾಗಿರಲಿ ಅಲ್ಲಿಂದಲೇ ಓದಿ, ಉತ್ತೀರ್ಣರಾಗಿ ಪ್ರಮಾಣಪತ್ರ ಪಡೆಯಬಹುದಲ್ಲ! ಅದನ್ನು ಯಾಕೆ ಹಿಂದುಳಿದವರು ಮಾಡುತ್ತಿಲ್ಲ? ಬ್ರಾಹ್ಮಣರೂ ಹತ್ತು-ಹನ್ನೆರಡು ವರ್ಷ ಕಷ್ಟಪಟ್ಟು ಓದಿಯೇ ಅಲ್ಲವೆ ವೈದಿಕರೂ, ಆಗಮಿಕರೂ, ಶಾಸ್ತ್ರಜ್ಞರೂ ಆಗಿದ್ದು. ಇದನ್ನು ಯಾಕೆ ಅವರು ಅರ್ಥ ಮಾಡಿಕೊಳ್ಳುತ್ತಿಲ್ಲ?

ಇನ್ನೊಂದು ಮಾತು ಕೇಳಿಬಂದಿದೆ. ‘ಅರ್ಚಕರಾಗುವವರು ಕಷ್ಟಪಡುವುದೇ ಬೇಕಿಲ್ಲ. ಪೂಜಾಕಲಾಪವೆಲ್ಲ ಪ್ರಾದೇಶಿಕ ಭಾಷೆಯಲ್ಲೇ ನಡೆದುಬಿಡಲಿ’ ಎಂದು. ಇದು ಅನುಷ್ಠಾನಕ್ಕೆ ಬಂದಲ್ಲಿ ಮತ್ತೊಂದು ದುರಂತವಾಗುವುದರಲ್ಲಿ ಸಂದೇಹವಿಲ್ಲ. ಯಾಕೆ ಅಂದರೆ- ವೈದಿಕ ಕರ್ಮಾಚರಣೆಗೂ, ಅರ್ಚಕತ್ವಕ್ಕೂ, ದೇವರಿಗೂ ಪರಸ್ಪರ ಸೇತುವೆಯಾಗಿರುವುದು ಸಂಸ್ಕೃತ ಮತ್ತು ವೇದಭಾಷೆ. ಹೀಗಿರುವಾಗ ಪ್ರಾದೇಶಿಕ ಭಾಷೆ ತಂದಲ್ಲಿ ಗಣಪತಿ ಮಾಡಲು ಹೋಗಿ ಹನುಮಂತನನ್ನು ಮಾಡಿದಂತಾಗುತ್ತದೆ ಅಷ್ಟೇ!

ಒಂದು ಭಾಷೆಗೆ ಅದರದ್ದೇ ಆದ ‘ಆವರಣ ಸನ್ನಿವೇಶ’ ಅಂತ ಇರುತ್ತದೆ. ‘ತಂಪು’ ಮತ್ತು ‘ತಣ್ಣಗೆ’ ಎಂಬ ಪದಗಳ ಮೂಲ ಒಂದೇ ಆದರೂ ಅವುಗಳ ‘ಧ್ವನಿ’ ಬೇರೆಬೇರೆಯೇ. ಕೆಲವು ಪದಗಳಿಗೂ ಪದಪ್ರಯೋಗಗಳಿಗೂ ಕೋಶ ಕೊಡುವ ಅರ್ಥದೊಂದಿಗೆ ವಿಶೇಷವಾದ ಒಂದು ಸೂಚಕಶಕ್ತಿ ಇರುತ್ತದೆ. ‘ಮಕರಂದ’ ಎಂಬ ಮಾತಿನಿಂದ ಉಂಟಾಗುವ ಭಾವನೆಯು ‘ಹೂವಿನ ರಸ’ ಅಂದರೆ ಉಂಟಾಗುವುದಿಲ್ಲ. ವೇದಮಂತ್ರಗಳ ಉಚ್ಚಾರಣೆಯಿಂದ ಮನಸ್ಸಿಗೆ ಆಗುವ ಭವ್ಯ, ದಿವ್ಯ, ಮಂಗಳಕರ ಭಾವವೇ ಬೇರೆ. ಅದು ಪ್ರಾದೇಶಿಕ ಭಾಷೆಯಿಂದ ಉಂಟಾಗುವುದಿಲ್ಲ.

ಕೊನೆಯದಾಗಿ ಒಂದು ಮಾತು. ನಮ್ಮಲ್ಲಿ ಅನೇಕರಿಗೆ ಒಂದು ತಪ್ಪು ಅಭಿಪ್ರಾಯವಿದೆ. ‘ವೇದವಿದ್ಯೆ ಸಂಸ್ಕೃತ ವಿದ್ಯೆ ಮೊದಲಾದವು ಬ್ರಾಹ್ಮಣರ ಸೊತ್ತಾಗಿ ಬಿಟ್ಟಿವೆ. ಅವರು ಇತರರಿಗೆ ಹೇಳಿಕೊಡಲಿಲ್ಲ. ಅವರು ಮಹಾಶೋಷಕರು’ ಇತ್ಯಾದಿ. ಇದು ತಳಬುಡವಿಲ್ಲದ ಒಂದು ವಿಚಿತ್ರವಾದ.

ವೇದವಿದ್ಯೆಯನ್ನು ಇತರರಿಗೆ ಹೇಳಿಕೊಡ ಬಾರದು, ಅದನ್ನು ಬಚ್ಚಿಟ್ಟುಕೊಳ್ಳಬೇಕು ಅನ್ನವುದು ಅವರ ದೃಷ್ಟಿಯಲ್ಲ. ತಕ್ಕವರಿಗಾಗಿ, ಅರ್ಹರಿ ಗಾಗಿ ಕಾಪಾಡ ಬೇಕೆನ್ನ ವುದು ಅವರ ದೃಷ್ಟಿ. ಇದನ್ನು ಸಮರ್ಥಿಸಲೋ ಎಂಬಂತೆ ಶ್ರೀಕೃಷ್ಣ ಹೇಳಿದ ಒಂದು ಮಾತು ಹೀಗಿದೆ-

ಇದಂ ತೇ ನಾತಪಸ್ಕಾಯ ನಾಭಕ್ತಾಯ ಕದಾಚನ |ನ ಚಾಶುಶ್ರೂಷವೇ ವಾಚ್ಯಂ
ನ ಚ ಮಾಂ ಯೋsಭ್ಯಸೂಯತಿ

||ಭಗವದ್ಗೀತೆ: 18-67

‘ಯಾರಿಗೆ ತಿಳಿದುಕೊಳ್ಳಬೇಕೆಂಬ ಮನೋಭಾವ ಇಲ್ಲವೋ, ಯಾವನು ಭಕ್ತನಲ್ಲವೋ, ಯಾವನಿಗೆ ಕಲಿಯಬೇಕೆಂಬ ಶ್ರದ್ಧೆ ಇಲ್ಲವೋ, ಯಾವನು ಮತ್ಸರಿಸುವನೋ ಅಂತಹವರಿಗೆ ಇದನ್ನು ಹೇಳತಕ್ಕದ್ದಲ್ಲ’ ಎಂದು ಕೃಷ್ಣ ಹೇಳಿದ ಈ ಮಾತು ಇಲ್ಲಿ ಸದಾ ಸ್ಮರಣೀಯವಾಗಿದೆ.

ಲೌಕಿಕವಾಗಿ ನೋಡುವುದಾದರೆ ವೈದ್ಯ, ಎಂಜಿನಿಯರ್‌, ಪ್ರೊಫೆಸರ್‌ ಆಗುವುದಕ್ಕೆ ಎಷ್ಟೊಂದು ಶ್ರಮಿಸುತ್ತಾರೆ, ಎಷ್ಟು ಸಮಯ ತೆಗೆದುಕೊಳ್ಳುತ್ತಾರೆ ಎಂದು ಗಮನಿಸಿದರೆ ಆಯಾ ವಿದ್ಯೆ, ವೃತ್ತಿಗಳ ಮಹತ್ವ ಅರಿವಿಗೆ ಬರುತ್ತದೆ. ಹೀಗಿರುವಾಗ ಅರ್ಚಕತ್ವಕ್ಕೆ ಈ ಯಾವ ಸಾಧನೆ, ಪರಿಶ್ರಮವೂ ಬೇಡವೇ ಎಂಬ ಪ್ರಶ್ನೆ ಹುಟ್ಟಿಕೊಳ್ಳುತ್ತದೆ.

ಲೇಖಕ: ನಿವೃತ್ತ ಸಂಸ್ಕೃತ ಶಿಕ್ಷಕ, ಲೇಖಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.