ADVERTISEMENT

ಎಣಿಕೆಗೆ ಸಿಗದ ಸಮುದಾಯಗಳು ಗಣತಿಯ ಲೆಕ್ಕಕ್ಕೆ ಸಿಗಲಿ

ಜಾತಿಗಳ ಆರ್ಥಿಕ ಪ್ರಗತಿಯ ಗಣತಿ ಏಕೆ ಅಗತ್ಯ?

​ಪ್ರಜಾವಾಣಿ ವಾರ್ತೆ
Published 27 ಆಗಸ್ಟ್ 2021, 22:00 IST
Last Updated 27 ಆಗಸ್ಟ್ 2021, 22:00 IST
ಎನ್. ರವಿಕುಮಾರ್
ಎನ್. ರವಿಕುಮಾರ್   

ಸರ್ಕಾರಿ ಸೌಲಭ್ಯಗಳ ಸಮಾನ ಹಂಚಿಕೆ, ಉದ್ಯೋಗ, ಶಿಕ್ಷಣ ಕ್ಷೇತ್ರದಲ್ಲಿ ಸರ್ವರಿಗೆ ಸಮಪಾಲು ದೊರೆಯಬೇಕಾದರೆ, ಮೀಸಲಾತಿಯೇ ಸಿಗದ ಸಮುದಾಯಗಳಿಗೆ ಸಾಮಾಜಿಕ ನ್ಯಾಯ ಸಿಗಬೇಕಾದರೆ ಆರ್ಥಿಕ–ಜಾತಿ ಗಣತಿ ಇಡೀ ದೇಶದಲ್ಲಿ ನಡೆಯಲೇಬೇಕಿದೆ.

ಸ್ವಾತಂತ್ರ್ಯ ಬಂದು ಇಷ್ಟು ಸುದೀರ್ಘ ವರ್ಷ ಕಳೆದರೂ ಇನ್ನೂ ಸಾಮಾಜಿಕ ನ್ಯಾಯದಿಂದ ವಂಚಿತವಾಗಿ, ಮುಖ್ಯವಾಹಿನಿಯಿಂದ ದೂರವೇ ಉಳಿದಿರುವ ನೂರಾರು ಸಮುದಾಯಗಳಿವೆ. ಶೈಕ್ಷಣಿಕ, ಆರ್ಥಿಕವಾಗಿ ಅತ್ಯಂತ ಹಿಂದುಳಿದಿರುವಿಕೆಯಲ್ಲೇ ಜೀವನ ಸಾಗಿಸುತ್ತಿರುವ ಸಮುದಾಯಗಳನ್ನು ಒಳಗೊಳ್ಳಬೇಕಾದ ತುರ್ತು ಇದೆ. ಈ ರೀತಿ ಜಾತಿ ಗಣತಿ ಮಾಡುವಾಗ ಅದು ರಾಜಕೀಯ ರಹಿತವಾಗಿರುವುದರ ಜತೆಗೆ, ಸೌಲಭ್ಯ ಹಾಗೂ ನ್ಯಾಯದ ಮರು ಹಂಚಿಕೆಯ ವಿಶಾಲ ಆಶಯವನ್ನು ಒಳಗೊಂಡಿರಬೇಕು. ಆರ್ಥಿಕ–ಜಾತಿ ಗಣತಿ ಮಾಡುವ ಹೊಣೆಯನ್ನು ರಾಜಕೀಯ ಸಂಪರ್ಕ ಇರುವ ವ್ಯಕ್ತಿಗಳಿಗೆ ವಹಿಸಬಾರದು. ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿಗಳು, ಸಮಾಜ ವಿಜ್ಞಾನ ಕ್ಷೇತ್ರದಲ್ಲಿ ತೊಡಗಿಸಿಕೊಂಡವರು, ಸಾಮಾಜಿಕ ಚಳವಳಿಗಳಲ್ಲಿ ಸಕ್ರಿಯರಾಗಿರುವವರು ಇರುವ ಸಮಿತಿ ರಚಿಸಬೇಕು. ಕರ್ನಾಟಕದಲ್ಲಿ ಸಾಮಾಜಿಕ–ಆರ್ಥಿಕ ಸಮೀಕ್ಷೆ ನಡೆಸಿದಾಗ ರಾಜಕೀಯ ನಂಟಿಲ್ಲದವರಿಗೆ ಹೊಣೆ ವಹಿಸಿರಲಿಲ್ಲ. ಆಗ ಸರ್ಕಾರ ನಡೆಸುತ್ತಿದ್ದವರ ಸೂಚನೆ ಮೇರೆಗೆ ನಡೆದಿದ್ದರಿಂದಲೇ, ಆ ವರದಿ ಅನೇಕ ವಿರೋಧಭಾಸಗಳಿಂದ ಕೂಡಿದೆ ಎಂಬ ಟೀಕೆಗೆ ಗುರಿಯಾಯಿತು. ಅಂತಹದು ನಡೆದರೆ ಪ್ರಯೋಜನವಿಲ್ಲ. ಆ ವರದಿ ಸರಿ ಇದ್ದರೆ, ಕಾಂಗ್ರೆಸ್‌ ನೇತೃತ್ವದ ಸರ್ಕಾರ ಇದ್ದಾಗಲೇ ಅದನ್ನು ಸ್ವೀಕರಿಸಬೇಕಿತ್ತಲ್ಲವೇ?

ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರ ಸಮಾನ ಅವಕಾಶಗಳನ್ನು ಕಲ್ಪಿಸುವ ದಿಸೆಯಲ್ಲಿ ಬಹಳ ದೊಡ್ಡ ಹೆಜ್ಜೆಗಳನ್ನು ಇಡುತ್ತಿದೆ. ಆರ್ಥಿಕವಾಗಿ ಹಿಂದುಳಿದವರಿಗೆ ಶೇ 10ರಷ್ಟು ಮೀಸಲಾತಿಯನ್ನು ನೀಡುವ ಮಹತ್ವದ ನಿರ್ಧಾರವನ್ನು ಕೈಗೊಳ್ಳುವ ಮೂಲಕ ಬದಲಾವಣೆಗೆ ನಾಂದಿ ಹಾಡಿದೆ. ಆರ್ಥಿಕವಾಗಿ ಹಿಂದುಳಿದವರಿಗೆ ಮೀಸಲಾತಿ ನೀಡುವ ಮೂಲಕ ಶೈಕ್ಷಣಿಕವಾಗಿ, ಔದ್ಯೋಗಿಕವಾಗಿ ಹಿಂದುಳಿದವರಿಗೆ ಅವಕಾಶಗಳನ್ನು ಕಲ್ಪಿಸಲಾಗಿದೆ. ಯಾವುದೇ ಸಮುದಾಯ ಮುಂದೆ ಬರಬೇಕಾದರೆ ಶಿಕ್ಷಣವೊಂದೇ ಪ್ರಮುಖ ದಾರಿ. ಉಚಿತ ಶಿಕ್ಷಣ, ವಿದ್ಯಾರ್ಥಿವೇತನ, ಉತ್ತಮ ಶಿಕ್ಷಣ ಪಡೆಯಲು ಬೇಕಾದ ಸೌಲಭ್ಯ ಕಲ್ಪಿಸುವ ಕೆಲಸವನ್ನು ಕೇಂದ್ರ ಸರ್ಕಾರ ಮಾಡುತ್ತಿದೆ. ರಾಷ್ಟ್ರೀಯ ಶಿಕ್ಷಣ ನೀತಿ ಇಂತಹದೊಂದು ದಿಟ್ಟ ಹೆಜ್ಜೆ. ಕೌಶಲಯುತ ಮಾನವ ಸಂಪನ್ಮೂಲ ಸೃಷ್ಟಿಗಾಗಿ ಈ ನೀತಿಯಲ್ಲಿ ಸಾಕಷ್ಟು ಅವಕಾಶಗಳಿವೆ. ಆರಂಭಿಕ ಹಂತದಲ್ಲೇ ಕೌಶಲ ಕಲಿಕೆ, ಐಚ್ಛಿಕ ವಿಷಯ ಆಯ್ಕೆಯಲ್ಲಿ ಸ್ವಾತಂತ್ರ್ಯ, ತಕ್ಷಣಕ್ಕೆ ಉದ್ಯೋಗ ಬಯಸುವ ಬಡ ಕುಟುಂಬದವರಿಗೆ ಉದ್ಯೋಗಾಧಾರಿತ ಶಿಕ್ಷಣ, ಉನ್ನತ ಶಿಕ್ಷಣದಲ್ಲಿ ಆಸಕ್ತಿ ಇರುವವರಿಗೆ ಪ್ರತ್ಯೇಕ ಆಯ್ಕೆ ದಾರಿಗಳನ್ನು ನೀತಿ ಒಳಗೊಂಡಿದೆ. ಈ ಸಮಿತಿಗೆ ಡಾ.ಕಸ್ತೂರಿ ರಂಗನ್ ಅವರನ್ನು ನೇಮಕ ಮಾಡಿ, ನೀತಿ ರೂಪಿಸಿದ್ದರಿಂದಾಗಿ ಯಾವುದೇ ವಿವಾದವಿಲ್ಲದೇ, ಸರ್ವರೂ ಒಪ್ಪುವ ರೀತಿಯೊಳಗೆ ಶಿಕ್ಷಣ ನೀತಿ ಸಿದ್ಧಗೊಂಡಿತು. ಈಗ ಅದು ದೇಶದಲ್ಲಿಯೇ ಸರ್ವಮಾನ್ಯವೂ ಆಯಿತು. ಆರ್ಥಿಕ–ಜಾತಿ ಗಣತಿ ಮಾಡುವಾಗಲೂ ಇಂತಹ ನಿಷ್ಪಕ್ಷಪಾತ, ರಾಜಕೀಯ ಸಂಪರ್ಕ ಇರದ ವ್ಯಕ್ತಿಗಳ ನೇತೃತ್ವದಲ್ಲಿ ಸಮಿತಿ ಮಾಡಿದರೆ ಹೆಚ್ಚು ವೈಜ್ಞಾನಿಕವಾಗಿ ನಡೆಯುತ್ತದೆ. ವಿಶ್ವಾಸಾರ್ಹತೆಯೂ ಮೂಡುತ್ತದೆ.

ADVERTISEMENT

ಹೀಗೆ ಗಣತಿ ನಡೆಸುವ ಮುನ್ನ ಸಾರ್ವಜನಿಕ ವಲಯದಲ್ಲಿ ಎಲ್ಲ ಸ್ತರಗಳಲ್ಲಿ ಸವಿಸ್ತಾರ ಚರ್ಚೆ ನಡೆಯಬೇಕಿದೆ. ಜತೆಗೆ ಲೋಕಸಭೆ, ವಿಧಾನಸಭೆ ಸೇರಿದಂತೆ ಶಾಸನ ಸಭೆಗಳಲ್ಲಿ ಕೂಡ ಸಮಗ್ರ ಚರ್ಚೆ ನಡೆಯಬೇಕು. ಯಾವ ರೀತಿ ನಡೆಸಿದರೆ ಹೆಚ್ಚು ಸೂಕ್ತ ಎಂಬ ಸಮಾಲೋಚನೆ ಸಮಾಜದ ಎಲ್ಲ ಸ್ತರಗಳಲ್ಲೂ ನಡೆದ ಬಳಿಕವೇ ಗಣತಿಗೆ ಮುಂದಡಿ ಇಟ್ಟರೆ ವರದಿ ಬಂದ ಬಳಿಕ ಯಾವುದೇ ಗೊಂದಲ, ವಿರೋಧ ಉದ್ಭವವಾಗುವುದಿಲ್ಲ. ಇವೆಲ್ಲ ನಡೆದ ಬಳಿಕವೇ ಮುಂದಿನ ಹೆಜ್ಜೆಯತ್ತ ಅಡಿ ಇಡಬೇಕು.

ಏಕೆಂದರೆ, ನಮ್ಮ ದೇಶವು ಸಾವಿರಾರು ಜಾತಿ, ಉಪ ಜಾತಿಗಳ ಸಂಗಮ. ಲಿಪಿಯೇ ಇಲ್ಲದ ಭಾಷೆಯನ್ನಾಡುವ ನೂರಾರು ಸಮುದಾಯಗಳು ಇವೆ. ಎಲ್ಲಕ್ಕಿಂತ ಮುಖ್ಯವಾಗಿ ಈವರೆಗೆ ಎಣಿಕೆಗೆ ಸಿಗದೇ, ಸಮಾಜದಿಂದ ದೂರವೇ ಉಳಿದಂತಿರುವ ಅಲೆಮಾರಿಗಳು, ಬುಡಕಟ್ಟು ಸಮುದಾಯದವರು ದೇಶದುದ್ದಕ್ಕೂ ಹಂಚಿಹೋಗಿದ್ದಾರೆ. ಹೀಗೆ, ಇಲ್ಲಿಯವರೆಗೆ ಸೌಲಭ್ಯಗಳ ಸಣ್ಣ ಹೂವನ್ನು ಕಾಣದೇ ಇರುವ, ಸೌಕರ್ಯಗಳೇ ಇಲ್ಲದೇ ಬದುಕುತ್ತಿರುವ ಲಕ್ಷಾಂತರ ಅಲಕ್ಷಿತ ಜನರನ್ನು ನೂತನ ಗಣತಿ ಒಳಗೊಂಡರೆ ಮಾತ್ರ, ಈ ಬೇಡಿಕೆಗೆ ಅರ್ಥ ಬರುತ್ತದೆ.

ಸರ್ವರನ್ನೂ ಒಳಗೊಳ್ಳುವ ಸರ್ವಸ್ಪರ್ಶಿ, ಸರ್ವರ ವಿಕಾಸ ಆಶಯದ ಮೇಲೆ ನಡೆಯುತ್ತಿರುವ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಈ ದಿಕ್ಕಿನತ್ತ ಹೆಜ್ಜೆ ಇಡಲಿದೆ ಎಂಬ ವಿಶ್ವಾಸ ಇದೆ. ಸಾಮಾಜಿಕ, ಶೈಕ್ಷಣಿಕ, ಆರ್ಥಿಕವಾಗಿ ಹಿಂದುಳಿದವರಿಗೆ ನ್ಯಾಯ ಸಿಗಬೇಕಾದರೆ ವೈಜ್ಞಾನಿಕವಾಗಿ ಗಣತಿ ನಡೆಯಬೇಕು. ಆಗ ಮಾತ್ರ ಸೌಲಭ್ಯಗಳ ಸಮಾನ ಹಂಚಿಕೆ ಸಾಧ್ಯವಾಗುತ್ತದೆ.

ತಗ್ಗಿರುವ ಕಡೆ ನೀರು ಹರಿದುಹೋಗುವುದು ಸಾಮಾನ್ಯ; ಆದರೆ, ಈವರೆಗೆ ಎಲ್ಲಿಗೆ ನೀರು ಹರಿದಿಲ್ಲವೋ ತಗ್ಗಿಲ್ಲದ ಕಡೆ ನೀರಿನ ಆಸರೆ ತಲುಪಿಲ್ಲವೋ ಅಂತಹ ಕಡೆ ನೀರು ಹರಿಸುವ ಕೆಲಸ ಆಗಬೇಕಿದೆ. ನೀರನ್ನು ತಲುಪಿಸಲು ಪೈಪ್‌ಲೈನ್‌, ಕಾಲುವೆ ನಿರ್ಮಾಣವಾಯಿತು. ಹರಿಸಲು ಸಾಧ್ಯವೇ ಇಲ್ಲದ ಕಡೆಗೆ ವಿದ್ಯುತ್ ಬಳಸಿ ಏತ ನೀರಾವರಿಯ ಮುಖೇನ ನೀರು ಹರಿಸುವ ಕೆಲಸವೂ ನಡೆಯುತ್ತಿದೆ. ಸಾಮಾಜಿಕ, ಶೈಕ್ಷಣಿಕ, ಆರ್ಥಿಕವಾಗಿ ಅತ್ಯಂತ ಹಿಂದುಳಿದವರಿಗೆ ಸೌಲಭ್ಯ ಕಲ್ಪಿಸಲು ಇಂತಹದೇ ಮಾರ್ಗಗಳನ್ನು ಹುಡುಕಬೇಕಾಗಿದೆ.

ವೈಜ್ಞಾನಿಕವಾಗಿ ಗಣತಿ ನಡೆದರೆ, ಇಷ್ಟು ಸುದೀರ್ಘ ವರ್ಷ ನೀಡಿರುವ ಮೀಸಲಾತಿಯ ಸೌಲಭ್ಯ ಯಾರಿಗೆಲ್ಲ ತಲುಪಿದೆ; ನ್ಯಾಯಯುತವಾಗಿ ಸಿಗಬೇಕಾದವರಿಗೆ ಎಷ್ಟರಮಟ್ಟಿಗೆ ದಕ್ಕಿದೆ ಎಂಬುದರ ಫಲಿತಾಂಶವೂ ಸಿಗುತ್ತದೆ. ಮೀಸಲಾತಿ ಮುಂದುವರಿಯಲೇಬೇಕು ಎಂಬುದರಲ್ಲಿ ಕೇಂದ್ರ ಸರ್ಕಾರಕ್ಕೆ, ನಮ್ಮ ಪಕ್ಷಕ್ಕೆ ಬದ್ಧತೆ ಇದೆ. ಅದರಲ್ಲಿ ಯಾವುದೇ ಗೊಂದಲವೂ ಇಲ್ಲ. ಉದ್ಯೋಗ, ಶಿಕ್ಷಣ ಕ್ಷೇತ್ರದಲ್ಲಿ ಯಾವ ಸಮುದಾಯಕ್ಕೆ ಮೀಸಲಾತಿ ಎಷ್ಟರಮಟ್ಟಿಗೆ ಸಿಗಬೇಕಿತ್ತೋ ಅಷ್ಟರಮಟ್ಟಿಗೆ ಸಿಕ್ಕಿದೆಯೇ ಎಂಬ ತಲಸ್ಪರ್ಶಿ ಅಧ್ಯಯನ ಹಾಗೂ ಸ್ಪಷ್ಟ ಚಿತ್ರಣ, ದತ್ತಾಂಶ ಈ ಗಣತಿಯಿಂದ ಸಿಗಲು ಸಾಧ್ಯ. ಹಾಗಾದಲ್ಲಿ ಸಿಗದೇ ಇರುವವರಿಗೆ ತಲುಪಿಸುವ ಯೋಜನೆ ರೂಪಿಸಲು ಇದು ಸಹಕಾರಿಯಾದೀತು.

ಲೇಖಕ: ವಿಧಾನಪರಿಷತ್ತಿನ ಸದಸ್ಯ ಹಾಗೂ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ

ನಿರೂಪಣೆ: ವೈ.ಗ.ಜಗದೀಶ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.