ADVERTISEMENT

ದಿಟ್ಟೆ ದೀಪಿಕಾ ಎತ್ತಿದ ಪ್ರಶ್ನೆ

ಕೇಸರಿ ಹರವು
Published 12 ಜನವರಿ 2020, 5:33 IST
Last Updated 12 ಜನವರಿ 2020, 5:33 IST
ಪ್ರತಿಭಟನಾನಿರತ ವಿದ್ಯಾರ್ಥಿಗಳ ಬೆಂಬಲಕ್ಕೆ ನಿಂತ ದೀಪಿಕಾ ಪಡುಕೋಣೆ
ಪ್ರತಿಭಟನಾನಿರತ ವಿದ್ಯಾರ್ಥಿಗಳ ಬೆಂಬಲಕ್ಕೆ ನಿಂತ ದೀಪಿಕಾ ಪಡುಕೋಣೆ   

ದೀಪಿಕಾ ಪಡುಕೋಣೆ ಮೊನ್ನೆ ದೆಹಲಿಯ ಪ್ರತಿಷ್ಠಿತ ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯಕ್ಕೆ ಭೇಟಿಯಿತ್ತು, ಅಲ್ಲಿ ಹಲ್ಲೆಗೊಳಗಾದ ವಿದ್ಯಾರ್ಥಿಗಳ ಹೋರಾಟದಲ್ಲಿ ಭಾಗಿಯಾಗಿ, ಅವರನ್ನು ಶ್ಲಾಘಿಸಿ ಬಂದರಲ್ಲವೇ? ದೇಶದಲ್ಲಿ ನಡೆಯುತ್ತಿರುವ ಪ್ರಚಲಿತ ವಿದ್ಯಮಾನಗಳು, ಹೋರಾಟಗಳ ಬಗ್ಗೆ ಹೆಚ್ಚೂ ಕಡಿಮೆ ಇಡೀ ಬಾಲಿವುಡ್ ಅಡ್ಡಗೋಡೆಯ ಮೇಲೆ ಕೂತಿರುವಾಗ ದೀಪಿಕಾರ ಈ ನಡೆ ಪ್ರಾಶಸ್ತ್ಯ ಪಡೆಯುತ್ತದೆ. ಆಕೆ ತನ್ನ ಪ್ರಜಾಪ್ರಭುತ್ವವಾದಿ ನಿಲುವಿನೊಂದಿಗೆ ಸ್ಪಷ್ಟವಾಗಿ ಪ್ರಕಟವಾಗಿದ್ದಾರೆ.

ನಾಸಿರುದ್ದೀನ್ ಷಾ, ಶಬನಾ ಅಜ್ಮಿ, ಜಾವೇದ್ ಅಖ್ತರ್, ಇನ್ನೂ ಅನೇಕರು ದೀಪಿಕಾಳಂತೆಯೇ, ಆಕೆ ಪ್ರಟಕವಾಗುವುದಕ್ಕಿಂತ ತುಂಬಾ ಮೊದಲಿನಿಂದಲೇ ಈ ರೀತಿಯ ಪುರೋಗಾಮಿ ನಿಲುವನ್ನು ಹೊಂದಿದ್ದಾರೆ. ಅದೇ ಅವರ ವೃತ್ತಿಪಾಲನಾ ಧರ್ಮವೂ ಆಗಿದೆ ಎಂದರೂ ತಪ್ಪಿಲ್ಲ. ಇನ್ನೂ ಹಲವಾರು ಬಾಲಿವುಡ್ ಪ್ರಮುಖರು ಇವರುಗಳಂತೆಯೇ ನಮ್ಮ ದೇಶದ ಸಂವಿಧಾನವೇ ಮೊದಲು ಮತ್ತು ಅಂತಿಮ, ದೇಶದ ಜಾತ್ಯತೀತ ನಿಲುವೇ ನನ್ನದು ಎನ್ನುವಂತಹ ಮನೋಭಾವ ಹೊಂದಿರಬಹುದು. ಆದರೂ ಅವರೆಲ್ಲ ಏಕೆ ಅದನ್ನು ನೇರವಾಗಿ ಪ್ರಕಟಿಸುವುದಕ್ಕೆ ಹಿಂಜರಿಯುತ್ತಿದ್ದಾರೆ? ದೀಪಿಕಾ ಕೂಡಾ ಈ ಮಾತುಗಳನ್ನು ನೇರವಾಗಿ ಹೇಳಿಲ್ಲ, ನಮ್ಮ ಯುವಜನರ ಧೈರ್ಯವನ್ನು ಮೆಚ್ಚಿಕೊಂಡಂತಹ ಮಾತುಗಳಲ್ಲಿ ಆ ಅರ್ಥ ಬರುವಂತೆ ಹೇಳಿದ್ದಾರೆ ಎನ್ನುವುದನ್ನೂ ನಾವು ಗಣನೆಗೆ ತೆಗೆದುಕೊಳ್ಳಬೇಕು.

ಬಾಲಿವುಡ್ ಎಷ್ಟೇ ಆಧುನಿಕತೆಯನ್ನು ಅಪ್ಪಿಕೊಳ್ಳುತ್ತಿದ್ದರೂ ಅದು ಮೊದಲಿಂದಲೂ ಸಂಪ್ರದಾಯವಾದಿ ಎನ್ನುವುದು ಸ್ಪಷ್ಟ. ಹಿಂದೂಯೇತರ ತಾರೆಯರು ಅಲ್ಲಿ ಮಿಂಚುವುದು ಬಹುತೇಕ ಹಿಂದೂ ಪಾತ್ರಗಳಾಗಿಯೇ. ಅಮರ್, ಅಕ್ಬರ್ ಮತ್ತು ಆಂತೋನಿ ಮೂವರೂ ಒಬ್ಬ ಹಿಂದೂ ತಾಯಿಯ ಹೊಟ್ಟೆಯಲ್ಲೇ ಹುಟ್ಟಿ ಬೇರೆ ಬೇರೆ ಧರ್ಮಗಳಲ್ಲಿ ಬೆಳೆದು ನಂತರ ಮತ್ತೆ ತಮ್ಮ ಹಿಂದೂ ತಾಯಿಯನ್ನೇ ಸೇರಿದವರು ಎನ್ನುವುದನ್ನು ನೆನಪಿಸಿಕೊಳ್ಳಿ. ಇದನ್ನು ಬಾಲಿವುಡ್ ಎಂದಿಗೂ ಪಾಲಿಸುತ್ತಲೇ ಬಂದಿರುವ ಸಂಪ್ರದಾಯ. ಹಿಂದೂಯೇತರ ಪ್ರೇಕ್ಷಕ ವರ್ಗ ಇಡೀ ಭಾರತದಲ್ಲಿ ಗಣನೀಯವಾಗಿ ಇದ್ದರೂ ಬಾಲಿವುಡ್ ಬಹುತೇಕವಾಗಿ ಓಲೈಸುವುದು ಬಹುಸಂಖ್ಯಾತ ವರ್ಗವನ್ನೇ.

ADVERTISEMENT

ಈ ಬಾಲಿವುಡ್‌ನ ಜನ ತಮ್ಮ ಸಂವಿಧಾನ ಬದ್ಧತೆ, ಜಾತ್ಯತೀತ ನಿಲುವುಗಳನ್ನು ಪ್ರಕಟಿಸಲು ಹಿಂಜರಿಯುವುದು ಈ ಕಾರಣಕ್ಕೇ. ನಾಳೆ ತಮ್ಮ ಚಿತ್ರಗಳನ್ನು ಈ ಬಹುಸಂಖ್ಯಾತರು ಎಲ್ಲಿ ಬಹಿಷ್ಕರಿಸುತ್ತಾರೋ ಎನ್ನುವ ಭಯ ಅಲ್ಲಿನ ಅನೇಕ ನಿರ್ಮಾಪಕರು, ನಿರ್ದೇಶಕರು, ತಂತ್ರಜ್ಞರು ಮತ್ತು ಕಲಾವಿದರಿಗೆ ಖಂಡಿತಾ ಇದೆ. ಹಾಗೆಂದು ಅಲ್ಲಿ ಎಲ್ಲರೂ ಇಂಥಾ ನಿಲುವನ್ನೇ ಹೊಂದಿದ್ದಾರೆ ಎನ್ನಲೂ ಆಗುವುದಿಲ್ಲ. ಬಹುತೇಕರು ಹಿಂದುತ್ವ ಪರ ಒಲವನ್ನೇ ಹೊಂದಿರುತ್ತಾರೆ ಎನ್ನುವುದು ನನ್ನ ಗುಮಾನಿ.

ಇವರುಗಳ ಆತಂಕಕ್ಕೆ ಇನ್ನೊಂದು ಮುಖ್ಯ ಕಾರಣ ಫೈನಾನ್ಸ್, ಹಂಚಿಕೆ ಮತ್ತು ಪ್ರದರ್ಶನ ವಲಯಗಳು. ಬಾಲಿವುಡ್‌ನ ಈ ಮೂರೂ ವಲಯಗಳಿಗೂ ಫೈನಾನ್ಸ್ ಮಾಡುವ ಬಹುತೇಕರು ಗುಜರಾತಿಗಳು ಮತ್ತು ರಾಜಸ್ಥಾನದ ಮಾರ್ವಾಡಿಗಳು. ಇಂದು ಧರ್ಮಾತೀತವಾಗಿ ಮೌನವಹಿಸಿರುವ ಬಹುತೇಕರು ಹಿಂದುತ್ವಕ್ಕೆ ಭಯಪಟ್ಟು ಮೌನ ವಹಿಸಿರುವುದು ಹೌದಾದರೂ, ಅವರ ಮೂಲ ಭಯ ಇರುವುದು ಈ ಮೇಲಿನ ಕಾರಣಕ್ಕೆ. ಆದರೆ, ಈ ಫೈನಾನ್ಷಿಯರುಗಳು ಕೂಡಾ ಎಂದಿಗೂ ಹೀಗೇ ಇರುತ್ತಾರೆಂದು ಹೇಳಲು ಬರುವುದಿಲ್ಲ.

ಭಾರತ ನಿಜಕ್ಕೂ ಜಾತ್ಯತೀತತೆಯೆಡೆಗೆ ಹೆಜ್ಜೆ ಇಡುತ್ತಿದ್ದ ಕಾಲದಲ್ಲಿ ಅವರು ಆ ನಿಟ್ಟಿನಲ್ಲೇ ಬಂಡವಾಳ ಹೂಡಿದರು. ಇಂದು ಬಲಪಂಥೀಯ ಆಳ್ವಿಕೆಯಲ್ಲಿ ಅವರು ಹೀಗೆ ನಡೆದುಕೊಳ್ಳುತ್ತಾರೆ. ನಾಳೆ ಇನ್ನೊಂದು ರೀತಿಯಾದರೆ ಆಗ ಅವರೂ ಹಾಗೇ. ಟ್ರೆಂಡ್ ಅನುಸರಿಸಿ ಬಂಡವಾಳದ ಸೇವೆ ಮಾಡುವುದೇ ಅವರ ಧರ್ಮ. ಸಲ್ಮಾನ್ ರಷ್ದಿ ತಮ್ಮ ಒಂದು ಕಾದಂಬರಿಯಲ್ಲಿ ತಮ್ಮ ಕಾಲವನ್ನಷ್ಟೇ ಸೇವೆ ಮಾಡುವವರನ್ನು ‘ಟೈಂ ಸರ್ವರ್ಸ್’ ಎನ್ನುತ್ತಾರೆ. ಹಾಗೆಯೇ ನಾವು ಕೂಡಾ ಈ ಬಂಡವಾಳಿಗರನ್ನು ‘ಮನಿ ಸರ್ವರ್ಸ್’ ಎಂದು ಕರೆಯಬಹುದೇನೋ! ಹೀಗಾಗಿ, ಇಂದು ಹೀಗೆ, ನಾಳೆ ಹೇಗೋ ಎಂದು ಮೌನ ವಹಿಸಿರುವವರು ಮೌನವಹಿಸಿದ್ದಾರೆ.

ಹಾಗಾದರೆ, ದೀಪಿಕಾ ಹೇಗೆ ದಿಟ್ಟವಾಗಿ ಪ್ರಕಟವಾಗಲು ಸಾಧ್ಯವಾಯಿತು? ಯಾವ ಭಯಗಳು ಕೆಲವರನ್ನು ಮೌನವಹಿಸುವಂತೆ ಮಾಡಿದವೋ, ಆ ಭಯಗಳನ್ನು ದಾಟಿ ಅನುಪಮ್ ಖೇರ್, ಪರೇಶ್‌ ರಾವಲ್ ಮುಂತಾದವರು ನಾವು ‘ಬಲಪಂಥೀಯರು’ ಎಂದು ಘೋಷಿಸಿಕೊಂಡರು. ಅದು ಒಂದು ರೀತಿಯಲ್ಲಿ ಅವರು ತೆಗೆದುಕೊಂಡ ರಿಸ್ಕ್. ಅವರ ಪ್ರೇಕ್ಷಕವರ್ಗದಲ್ಲಿ ಒಂದು ಪಾಲು ಅವರನ್ನು ಖಂಡಿಸಿತು. ಇನ್ನೊಂದು ಪಾಲು ಅವರನ್ನು ಪುರಸ್ಕರಿಸಿತು. ಹಾಗೆಯೇ, ದೀಪಿಕಾ ಕೂಡಾ ಆ ರಿಸ್ಕಿಗೆ ತದ್ವಿರುದ್ಧವಾದ ರಿಸ್ಕ್ ಒಂದನ್ನು ಈಗ ತೆಗೆದುಕೊಂಡಿದ್ದಾರೆ. ಈಕೆಯನ್ನೂ ಒಂದು ವರ್ಗ ಈಗ ಖಂಡಿಸುತ್ತಿದೆ, ಆಕೆಯ ಸಿನಿಮಾ ಬಹಿಷ್ಕರಿಸಿ ಎನ್ನುತ್ತಿದೆ. ಈ ರಿಸ್ಕ್ ತಿಳಿದಿದ್ದರೂ ಸಹ ಆಕೆ ತನ್ನನ್ನು ಪ್ರಕಟಿಸಿಕೊಂಡಿದ್ದಾರೆ.

ಸಿಎಎ ಮತ್ತು ಎನ್‌ಆರ್‌ಸಿ ವಿರೋಧಿ ಹೋರಾಟಗಳ ಸದ್ಯದ ಟ್ರೆಂಡಿನಲ್ಲಿ ಈ ರಿಸ್ಕ್ ಒಂದು ಅಡ್ವಾಂಟೇಜ್ ಆದರೂ ಆಗಬಹುದು ಎನ್ನುವುದು ಆಕೆಯ ಆಶಯ ಇರಬಹುದು. ಆದರೆ, ಈ ಆಶಯ ತೀರ ತಾತ್ಕಾಲಿಕವೇ ಅಥವಾ ಅವರ ನಿಲುವು ಪ್ರಾಮಾಣಿಕವೇ ಎಂದು ನಾನು ಖಂಡಿತಾ ಅನುಮಾನಿಸುತ್ತಿಲ್ಲ.

ಏಕೆಂದರೆ, ‘ಸರ್ವಜನಾಂಗದ ಶಾಂತಿಯ ತೋಟ’ ಎನ್ನುವ ಉದಾತ್ತ ಆದರ್ಶವನ್ನು ಎಂಬತ್ತು ತೊಂಬತ್ತರ ದಶಕದ ಕರ್ನಾಟಕದಲ್ಲಿ ಮೈಗೂಡಿಸಿಕೊಂಡು ನಾವೆಲ್ಲರೂ ಬೆಳೆದ ಸಾಂಸ್ಕೃತಿಕ ಪರಿಸರದಲ್ಲೇ ಆಕೆಯೂ ಬೆಳೆದವರು. ಈಗ ನಮ್ಮಲ್ಲೇ ಕೆಲವರು ಮೋಡಿಗೊಳಗಾಗಿ ಒಡಕು ಮೂಡಿಸಿಕೊಂಡಿದ್ದಾರೆ. ಆದರೂ ನಾವು ಬಹುತೇಕರು ಹಾಗೇ ಇದ್ದೇವೆ ಎನ್ನುವುದು ನಿರ್ವಿವಾದ.

ಜೊತೆಗೆ, ‘ಬದಲಾವಣೆ ತರಲು ನಾವು ಧೈರ್ಯವಾಗಿ, ಮುಕ್ತವಾಗಿ ಪ್ರಕಟಿಸಿಕೊಳ್ಳಬೇಕು’ ಎನ್ನುವ ಮಾತನ್ನು ಆಕೆ ಆಡಿದ್ದಾರೆ. ಸಂಪ್ರದಾಯಸ್ಥರ ಮೂಗಿನ ನೇರಕ್ಕೇ ಬಾಲಿವುಡ್ ಏಕೆ ನಡೆದುಕೊಳ್ಳಬೇಕು ಎನ್ನುವ ಆಧುನಿಕ ಪ್ರಶ್ನೆಯೊಂದನ್ನು ತನ್ನ ಮಿತಿಯೊಳಗೇ ದೀಪಿಕಾ ಹುಟ್ಟುಹಾಕಿದ್ದಾರೆ. ಈ ಪ್ರಶ್ನೆ ಬಾಲಿವುಡ್‌ ಅನ್ನೂ ದಾಟಿ ಇಡೀ ಭಾರತೀಯ ಸಮಾಜಕ್ಕೂ ಅನ್ವಯಿಸುವಂತದ್ದು. ಈಕೆ ನಿಜಕ್ಕೂ ಬದಲಾವಣೆ ಬಯಸಿದ್ದಾರೆ.
ನಾನು ಆಕೆಯ ನಿಲುವನ್ನು ಸ್ವಾಗತಿಸುವುದು ಈ ಕಾರಣಕ್ಕೇ. ಈ ನಮ್ಮ ವಿಶ್ವಾಸ ಹುಸಿಯಾಗದಿರಲಿಇನ್ನು ಸ್ಯಾಂಡಲ್‌ವುಡ್ ಬಗ್ಗೆ ನಾನೇನೂ ಹೇಳಲ್ಲ. ಅಲ್ಲಿ ಬಹಳಷ್ಟು ಜನಕ್ಕೆ ದೇಶದಲ್ಲಿ ಏನು ನಡೆಯುತ್ತಿದೆ ಎನ್ನುವುದನ್ನು ಸ್ಪಷ್ಟವಾಗಿ ತಿಳಿಯುವ ಮನಸ್ಸಿಲ್ಲ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.