ADVERTISEMENT

ಚರ್ಚೆ: ಹೆಣ್ಣಿಗೂ ಗಂಡಿಗೂ ಬೇಕು ಸ್ವಯಂ ನಿಯಂತ್ರಣ

ಮಹಿಳೆಯರ ಸುರಕ್ಷತೆ ಸ್ವಯಂ ನಿಯಂತ್ರಣ ಅಗತ್ಯವೆ?

ಡಾ.ಎಸ್.ಆರ್.ಲೀಲಾ
Published 3 ಸೆಪ್ಟೆಂಬರ್ 2021, 19:30 IST
Last Updated 3 ಸೆಪ್ಟೆಂಬರ್ 2021, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮಾಧ್ಯಮಗಳಲ್ಲಿ ಮೈಪ್ರದರ್ಶಿಸಿಕೊಂಡು ಕೂರುವುದು ಯುವತಿಯರಿಗೆ ಇಂದು ತೀರ ಸಾಧಾರಣವಾದ ವ್ಯವಹಾರವಾಗಿದೆ. ಇವರ ಅಂಗಾಂಗ ಪ್ರದರ್ಶನವನ್ನು ನಿತ್ಯವೂ ನೋಡುತ್ತಿರುವ ಧೂರ್ತ, ಕಾಮುಕ ಗಂಡಸರ ಮೇಲೆ ಈ ದೃಶ್ಯಗಳು ಯಾವ ಪರಿಣಾಮವನ್ನು ಬೀರಬಹುದು? ಯಾರೂ ಯೋಚಿಸುವುದಿಲ್ಲ.

ಮಹಿಳೆಯರ ಸುರಕ್ಷತೆ: ಸ್ವಯಂ ನಿಯಂತ್ರಣ ಅಗತ್ಯವೆ?– ಇಂದಿನ ಸಂದರ್ಭದಲ್ಲಿ ಇಂಥ ಒಂದು ಪ್ರಶ್ನೆ ಹಾಕುವುದು ಸರಿಯೇ, ಈ ವಿಷಯದ ಚರ್ಚೆ ಸೂಕ್ತವೇ, ಸಾಧುವೇ? ಎಂಬುದೇ ನಿಜವಾದ ತೊಡಕು.

ಹಾಗಾದರೆ ಇಂದಿನ ಸಂದರ್ಭ ಏನು? ಇಂದು ಸಿನಿಮಾ, ಮಾಡೆಲಿಂಗ್, ಪತ್ರಿಕೆಗಳು, ವಿದ್ಯುನ್ಮಾನ ಮಾಧ್ಯಮಗಳಲ್ಲಿ ಯುವತಿಯರು, ಹೆಂಗಸರು ದೇಹ ಪ್ರದರ್ಶನ ಮಾಡುವ ಹೀನಕಲೆಯಲ್ಲಿ ಒಬ್ಬರ ಮೇಲೊಬ್ಬರು ಪೈಪೋಟಿಗಿಳಿದಂತೆ ಕಾಣುತ್ತಿದ್ದಾರೆ. ಪಾಶ್ಚಾತ್ಯ ಹೆಣ್ಣುಗಳೂ ನಾಚುವಂತೆ ಅವರನ್ನು ಅನುಕರಣೆ ಮಾಡುತ್ತಿದ್ದಾರೆ. ಮಾಧ್ಯಮಗಳಲ್ಲಿ ಮೈಪ್ರದರ್ಶಿಸಿಕೊಂಡು ಕೂರುವುದು ಯುವತಿಯರಿಗೆ ಇಂದು ತೀರ ಸಾಧಾರಣವಾದ ವ್ಯವಹಾರವಾಗಿದೆ. ಇವರ ಅಂಗಾಂಗ ಪ್ರದರ್ಶನವನ್ನು ನಿತ್ಯವೂ ನೋಡುತ್ತಿರುವ ಧೂರ್ತ, ಕಾಮುಕ ಗಂಡಸರ ಮೇಲೆ ಈ ದೃಶ್ಯಗಳು ಯಾವ ಪರಿಣಾಮವನ್ನು ಬೀರಬಹುದು? ಯಾರೂ ಯೋಚಿಸುವುದಿಲ್ಲ. ತುಂಡು ಬಟ್ಟೆಯುಟ್ಟು ಕೋತಿಯಂತೆ ಹೇಗೆ ಬೇಕಾದರೂ ಕುಣಿದು ಕೋಟಿಕೋಟಿ ಬಾಚಿಕೊಳ್ಳುವ ಸಿನಿಮಾ ತಾರೆಯರಿಗೆ ಇಂದು ಯಾವ ನೀತಿ ನಿಯಮಗಳೂ ಇಲ್ಲ.

ADVERTISEMENT

ಮನರಂಜನಾ ಉದ್ಯಮ ಅನ್ನೋ ಹೆಸರಿನಲ್ಲಿ ಕಾಮೋದ್ದೀಪನವೆಂಬ ಅನಿಷ್ಟ ದಂಧೆಯಲ್ಲಿ ಎಷ್ಟು ಜನ ಹೆಂಗಸರು ತೊಡಗಿಸಿಕೊಂಡಿದ್ದಾರೆ? ಈ ಆಟಕ್ಕೆ ಎಷ್ಟು ಜನ ಅಮಾಯಕರು ಬಲಿಯಾಗುತ್ತಿದ್ದಾರೆ? ಇಂದು ಗಂಡು-ಹೆಣ್ಣುಗಳಿಬ್ಬರಿಗೂ ‘ಸೆಕ್ಸಿ’ ಎಂದು ಅನ್ನಿಸಿಕೊಳ್ಳುವುದು ತುಂಬು ಅಭಿಮಾನದ, ಗೌರವದ ಸಂಕೇತವಾಗಿದೆ!

ಹಿಂದೆ ಹೇಗಿತ್ತು? ಹಿಂದೆ ಎಂದರೆ ಎಷ್ಟು ಹಿಂದೆ? ಐದು-ಆರು ದಶಕಗಳ ಹಿಂದೆ ಹೆಂಗಸರ ಮೈಮಾಟ ಪ್ರದರ್ಶನ ಇಂದಿನಷ್ಟು ಅಂಕೆಯಿಲ್ಲದ ದಂಧೆಯಾಗಿರಲಿಲ್ಲ. ಅಂದಿನ ಸಿನಿಮಾಗಳನ್ನು ನೋಡಿದರೆ ಇದು ತಿಳಿಯುತ್ತದೆ. ಇದಕ್ಕೂ ಒಂದು ಕಾರಣ ಇತ್ತು. ಸಾಮಾಜಿಕ ರೀತಿನೀತಿಗಳಲ್ಲಿ ದೇಶಕ್ಕೆ ಕೀರ್ತಿ ತಂದ ಮಹನೀಯರ ಮಾತುಗಳಿಗೆ, ಚರ್ಯೆಗೆ ಒಂದಿಷ್ಟು ಗೌರವ ಕೊಡುವ ಪರಿಪಾಟ ಇತ್ತು. ಇದಕ್ಕೆ ನಿದರ್ಶನವಾಗಿ, ಪಾಶ್ಚಾತ್ಯ ದೇಶಗಳಲ್ಲಿ ಭಾರತೀಯ ಸ್ತ್ರೀಯನ್ನು ಕುರಿತ ಟೀಕೆಗಳಿಗೆ, ಭಾರತೀಯ ಹೆಂಗಸರು ಅಡಿಯಿಂದ ಮುಡಿಯವರೆಗೆ ಮೈ ಮುಚ್ಚಿಕೊಂಡು ಮನೆಯಲ್ಲೆ ಬಿದ್ದಿರುವ ಮೂದೇವಿಗಳೆಂಬ ಆಕ್ಷೇಪಕ್ಕೆ, ನಿಂದನೆಗೆ ಸ್ವಾಮಿ ವಿವೇಕಾನಂದರು ಹೀಗೆ ಉತ್ತರಿಸಿದ್ದರು-The girls of India would die, if they like American girls were obliged to expose half their bodies to the vulgar gaze of young men (ಅಮೆರಿಕದ ಹೆಣ್ಣು ಮಕ್ಕಳ ಹಾಗೆ ತಮ್ಮ ಅರ್ಧ ದೇಹವನ್ನು ಯುವಕರ ಅಸಭ್ಯ ನೋಟಕ್ಕೆ ಒಡ್ಡಿಕೊಳ್ಳಬೇಕಾಗಿ ಬಂದರೆ, ಅದರ ಬದಲು ಭಾರತೀಯ ಹೆಣ್ಣು ಮಕ್ಕಳು ಜೀವ ತೆಗೆದುಕೊಳ್ಳುತ್ತಾರೆ).

ಸ್ವಾಮಿ ವಿವೇಕಾನಂದರ ಮಾತನ್ನು ಅಪ್ಪಟ ಸುಳ್ಳೆಂದು, ಕೆಲ ವಲಯಗಳಲ್ಲಿ ದುಡಿಯುತ್ತಿರುವ ಭಾರತೀಯ ಮಹಿಳೆಯರು ಸಾಬೀತು ಮಾಡಿ ತುಂಬ ಮುಂದುವರಿದಿದ್ದಾರೆ! ಈ ಮಾತನ್ನು ಯಾಕೆ ಎತ್ತಿ ಹೇಳಬೇಕಾಯ್ತು ಅಂದರೆ ಇಂದಿನ ಬಹುತೇಕ ಯುವತಿಯರಿಗೆ ಅಂಗಾಂಗ ಪ್ರದರ್ಶನದಿಂದಲೇ ಐಶ್ವರ್ಯ, ಅಂತಸ್ತುಗಳನ್ನು ಗಳಿಸಿಕೊಳ್ಳುವ, ಮದುವೆ ಯಾದವರನ್ನೇ ಮದುವೆ ಆಗುವ ಸ್ವಚ್ಛಂದ ಬದುಕಿನ ತಾರೆಯರು ಆದರ್ಶವಾಗಿದ್ದಾರೆ. ಈ ತಾರೆಯರಲ್ಲಿರುವ ನಟನಾ ಸಾಮರ್ಥ್ಯ, ಪ್ರತಿಭೆ ಕೂಡ ಅವರು ಇತರರಿಗೆ ಮೇಲ್ಪಂಕ್ತಿಯಾಗಲು ಪೂರಕವಾಗಿದೆ ಎಂಬುದನ್ನು ಯಾರೂ ತಳ್ಳಿಹಾಕುವಂತಿಲ್ಲ.

ಮೈಸೂರಿನಲ್ಲಿ ನಡೆದಿರುವುದು ಹೇಯ ಪ್ರಸಂಗ: ಒಂದೊಂದು ಬಾರಿ ಇಂಥ ಅವಘಡ, ವಿಕೃತಿ ನಡೆದಾಗಲೂ ಈ ವಿಷಯದ ಚರ್ಚೆ ಮುನ್ನೆಲೆಗೆ ಬರುತ್ತದೆ. ಮುದ್ರಣ ಮಾಧ್ಯಮ, ವಿದ್ಯುನ್ಮಾನ ಮಾಧ್ಯಮ ಗಳಲ್ಲಿ ಇದರ ಪೂರ್ವಾಪರಗಳ ಬಗ್ಗೆ ಸಾಕಷ್ಟು ವಿವರಗಳು ಚೆಲ್ಲಾಡುತ್ತವೆ. ಇನ್ನು ಪೊಲೀಸ್, ರಾಜಕಾರಣಿಗಳು ಅದರಲ್ಲೂ ಗೃಹ ಸಚಿವ, ಮುಖ್ಯಮಂತ್ರಿಗಳ ಮಾತುಗಳನ್ನು ಕ್ಷಕಿರಣದ ಅನ್ವೇಷಣೆಗೊಳಪಡಿಸಿ ಹಿಗ್ಗಾಮುಗ್ಗಾ ಎಳೆದಾಡಿಬಿಡುವ ಪದ್ಧತಿಯನ್ನು ಮಾಧ್ಯಮದ ಮಂದಿ ರೂಢಿಸಿಕೊಂಡಿದ್ದಾರೆ.

ಇಂಥ ಪ್ರಕರಣಗಳಲ್ಲಿ ನಾಲ್ಕು ಮುಖಗಳಂತೂ ಮೇಲ್ನೋಟಕ್ಕೆ ಕಾಣುತ್ತವೆ:

1. ಅತ್ಯಾಚಾರಕ್ಕೀಡಾದ ಯುವತಿ ಮತ್ತವಳ ಜತೆಗಾರ.

2. ಅತ್ಯಾಚಾರಗೈದ ಪಶುಗಳು.

3. ಅಪರಾಧಾನ್ವೇಷಣೆಯಲ್ಲಿ ತೊಡಗಿದ ಪೊಲೀಸ್, ಸರ್ಕಾರ, ಗೃಹ ಸಚಿವರ ಹೇಳಿಕೆ ಇತ್ಯಾದಿ.

4. ಶಿಕ್ಷೆ ಏನಾಗಬೇಕು? ಹೇಗಾಗಬೇಕು?

ಈ ಚತುರ್ಮುಖಗಳ ಸುತ್ತಲೇ ಇಡಿ ಚರ್ಚೆ ಸುತ್ತುತ್ತದೆ. ಇದನ್ನು ಬಿಟ್ಟು ಒಂದಿಂಚೂ ಅತ್ತಿತ್ತ ಸುಳಿಯುವುದಿಲ್ಲ. ಈ ಅಂಶಗಳು ಬಹುಮುಖ್ಯ ಅನ್ನುವುದರಲ್ಲಿ ಸಂದೇಹವೇ ಇಲ್ಲ. ಇಂಥ ಅನಾಗರಿಕ, ಕ್ರೂರ, ಬರ್ಬರ ಪ್ರಕರಣಗಳು ಏಕೆ ಮತ್ತೆಮತ್ತೆ ಮರುಕಳಿಸುತ್ತಿವೆ? ಇದರ ಹಿನ್ನೆಲೆ ಏನು? ಇದನ್ನು ನಿಯಂತ್ರಿಸಲು ಸಾಧ್ಯವೊ, ಇಲ್ಲವೊ? ಸಾಧ್ಯವಾದರೆ ಏನು ಮಾಡಬೇಕು. ಹೀಗೇ ಆದರೆ ಮುಂದೇನಾಗಬಹುದು. ಇಂತಹ ಅತ್ಯಂತ ಸಂಗತವಾದ, ಅಗತ್ಯವಾದ ಅಂಶಗಳು ಮುನ್ನೆಲೆಗೆ ಬರುತ್ತಿಲ್ಲ. ಸಾಮಾಜಿಕ ಹೊಣೆಗಾರಿಕೆಯುಳ್ಳ ಎಲ್ಲರನ್ನೂ ಇದು ತೀವ್ರವಾಗಿ ಕಾಡಬೇಕಾಗಿದೆ ಅಲ್ಲವೇ?

ಇಂಥ ಪ್ರಸಂಗಗಳು ನಡೆದಾಗ ಸಾಮಾನ್ಯವಾಗಿ ಕೇಳಿಬರುವ ಕೆಲವು ಮಾತುಗಳಿವೆ– ‘ಯುವಕ-ಯುವತಿಯರು ನಿರ್ಜನ ಪ್ರದೇಶಕ್ಕೆ ಹೋಗಿ ಇಂಥ ಕೃತ್ಯಗಳಿಗೆ ಏಕೆ ಅವಕಾಶ ಕೊಡಬೇಕು?’– ಹೀಗೆ ಹೇಳಿದವರನ್ನು ಹೀಗಳೆಯುವುದು ಉಂಟು.

ಇದನ್ನೂ ಸ್ವಲ್ಪ ವಿಮರ್ಶಿಸೋಣ. ಹೆಂಗಸರು ಕಾಮಿನಿಯರಾಗಿ ಪುರುಷರಿಗೆ ಕಾಟ ಕೊಡುವುದು, ಕಾಮುಕರಾದ ಪುರುಷರು ಸ್ತ್ರೀಯರನ್ನು ಗೋಳುಗುಟ್ಟಿಸುವುದು ಎಲ್ಲ ಕಾಲದಲ್ಲೂ ಇದ್ದೇ ಇದೆ. ಪ್ರಾಚೀನ ಕಾಲದಿಂದ ಬಂದಿರುವ ಸಾಹಿತ್ಯರಾಶಿಯೇ ಇದಕ್ಕೆ ಸಾಕ್ಷಿಯಾಗಿ ನಿಂತಿದೆ. ವಸ್ತುಸ್ಥಿತಿ ಹೀಗಿರುವಾಗ ನಿಯಂತ್ರಣ, ಸ್ವಯಂನಿಯಂತ್ರಣ ಅಗತ್ಯ ಎಂದು ಹೇಳದೆ ವಿಧಿಯಿಲ್ಲ. ನಾವೇನು ಸತ್ಯಯುಗದಲ್ಲಿ ಬದುಕುತ್ತಿಲ್ಲ. ಆದರೆ ಈ ನಿಯಂತ್ರಣವೆನ್ನುವ ಹಗ್ಗವನ್ನು ಬಳಸಬೇಕಾದವರು ಕೇವಲ ಮಹಿಳೆಯರಷ್ಟೆ ಅಲ್ಲ, ಪುರುಷರು ಕೂಡ ಎಂಬುದನ್ನು ಮನಗಾಣಬೇಕು. ಹೆಣ್ಣು-ಗಂಡುಗಳೆರಡೂ ಸಮಾನವೆಂದು ಪ್ರತಿಪಾದಿಸುತ್ತಿರುವ ಈ ಕಾಲಘಟ್ಟದಲ್ಲಿ, ನಿಯಂತ್ರಣ ಇಬ್ಬರಿಗೂ ಬೇಕಲ್ಲವೆ? ಸ್ತ್ರೀ ನಿಯಂತ್ರಣ ಎಂದು ಹೇಳುವಾಗ ಅದೇ ಉಸಿರಿನಲ್ಲಿ ಪುರುಷರಿಗೂ ಬೇಕು ಎಂದು ಹೇಳಲೇಬೇಕಾಗಿದೆ.

ಗಂಡು-ಹೆಣ್ಣು ಎಂಬ ಭೇದವಿಲ್ಲದೆ, ಮನುಷ್ಯರ ಅನಿಯಂತ್ರಿತ ಸ್ವಚ್ಛಂದವಾದ ದುಷ್ಟಪ್ರವೃತ್ತಿಗಳೇ ಸಮಾಜದ ಸ್ವಾಸ್ಥ್ಯ ಕೆಡಿಸುತ್ತಿರುವುದು ಎಲ್ಲರಿಗೂ ಕಾಣುತ್ತಿದೆ. ಲಂಚಕೋರತನ, ಕಾಮುಕತೆ, ಈರ್ಷ್ಯೆ, ಅಸೂಯೆ, ದುರಾಸೆಗಳು ಎಲ್ಲ ವರ್ಗಗಳಲ್ಲೂ ತಾಂಡವಿಸುತ್ತಿವೆ. ಸಮಾಜದಲ್ಲಿ ಕಾಣುವ ಬದಲಾವಣೆಗಳಿಗೆ ಎಲ್ಲರೂ ಹೊಣೆಯಾಗುತ್ತಾರೆ. ಸರ್ಕಾರ, ಸಾಮಾನ್ಯರು, ಪೊಲೀಸರು, ನ್ಯಾಯಾಂಗ, ಮಾಧ್ಯಮ ಎಲ್ಲರೂ ಸಂವೇದನೆಯನ್ನು ಕಳೆದುಕೊಳ್ಳುತ್ತಿದ್ದಾರೇನೋ ಎಂಬ ಭಯ ಆವರಿಸುತ್ತಿದೆ. ಕಾನೂನಿಗಂತೂ ಕಣ್ಣಿಲ್ಲ.

ಪೊಲೀಸ್‌, ಆರೋಪಿ, ಪಬ್ಲಿಕ್ ಪ್ರಾಸಿಕ್ಯೂಟರ್, ವಕೀಲರು, ಸಾಕ್ಷಿಗಳು ಇವೆಲ್ಲದರ ನಡುವೆ ಸಿಕ್ಕಿಕೊಂಡ ನ್ಯಾಯಾಂಗ, ‘ಅನ್ಯಾಯ’ದ ಕಡೆ ವಾಲುವುದು ಸಹಜವೇ ಆಗಿಬಿಟ್ಟಿದೆ. ಅಪರಾಧಿಗೆ ಸೂಕ್ತ ಶಿಕ್ಷೆಯೇ ಆಗುತ್ತಿಲ್ಲ. ಗಲ್ಲುಶಿಕ್ಷೆ ಕಾಯಂ ಆದವರಿಗೆ, ಕ್ಷಮಾದಾನ ನೀಡಬೇಕೆಂದು ರಾಷ್ಟ್ರಪತಿಗೆ ಅರ್ಜಿಹಾಕಲು ಅವಕಾಶವೇಕೆ? ಸುಪ್ರೀಂ ಕೋರ್ಟ್ ತೀರ್ಪು ಕೊಟ್ಟಮೇಲೆ ಮತ್ತೆ ಅದನ್ನು ವಿಮರ್ಶಿಸುವ ಈ ಪುನರುಕ್ತಿಪಾಂಡಿತ್ಯವೇಕೆ? ಸರ್ಕಾರಗಳು ಇಂಥ ಅಸಂಗತಗಳನ್ನು ನಿವಾರಿಸಲು ಪ್ರಯತ್ನಿಸುವುದಿಲ್ಲ. ಮೈಸೂರಿನ ಪ್ರಸಂಗದಲ್ಲಿ ಸಂತ್ರಸ್ತೆಯ ಮನೆಯವರು ದೂರುಕೊಡಲು ಹಿಂಜರಿಯುತ್ತಿದ್ದಾರೆ ಏಕೆ? ಸಮಾಜಕ್ಕೆ, ಮರ್ಯಾದೆಗೆ ಅಂಜಿ, ಎನ್ನುವ ಸುದ್ದಿ! ಹಾಗಾದರೆ ಅಪರಾಧಿಗಳಿಗೆ ಶಿಕ್ಷೆ ಆಗಬೇಕೆಂಬುದು ತಪ್ಪೆ? ಪ್ರಸ್ತುತ ಅಪರಾಧದಲ್ಲಿ ಭಾಗವಹಿಸಿದ ಧೂರ್ತ ಕಾಮುಕರನ್ನು ಒಡನೆಯೇ ಗಲ್ಲಿಗೇರಿಸಬೇಕಾಗಿರುವುದು ಸೂಕ್ತ. ಇಲ್ಲಿ ದಯೆ- ದಾಕ್ಷಿಣ್ಯ ಎಂಬುದು ಅಸಂಗತ-ಅಪ್ರಕೃತ.

–ಡಾ. ಎಸ್.ಆರ್. ಲೀಲಾ, ವಿಧಾನ ಪರಿಷತ್ ಮಾಜಿ ಸದಸ್ಯೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.