ADVERTISEMENT

ಮುದೀರ್‌ ಆಗಾ ಆತ್ಮೀಯ ಸ್ನೇಹಿತ–ಸಿಎಂ

ವಿವಿಧ ರಾಜಕೀಯ ಪಕ್ಷಗಳ ಮುಖಂಡರು, ಸಂಘಸಂಸ್ಥೆಗಳ ಪದಾಧಿಕಾರಿಗಳಿಂದ ಅಂತಿಮ ನಮನ

​ಪ್ರಜಾವಾಣಿ ವಾರ್ತೆ
Published 10 ಜೂನ್ 2018, 13:51 IST
Last Updated 10 ಜೂನ್ 2018, 13:51 IST

ರಾಮನಗರ: ಸಯ್ಯದ್ ಮುದೀರ್‌ ಆಗಾ ಅವರ ಮೃತ ದೇಹವನ್ನು ಇಲ್ಲಿನ ಮಸೀದಿ ಮೊಹಲ್ಲಾ ಬಡಾವಣೆಯಲ್ಲಿ ಸಾರ್ವಜನಿಕ ದರ್ಶನಕ್ಕೆ ಶನಿವಾರ ಇಡಲಾಗಿತ್ತು. ವಿವಿಧ ರಾಜಕೀಯ ಪಕ್ಷಗಳ ಮುಖಂಡರು, ಸಂಘಸಂಸ್ಥೆಗಳ ಪದಾಧಿಕಾರಿಗಳು ಅಂತಿಮ ನಮನ ಸಲ್ಲಿಸಿದರು.

ಆತ್ಮೀಯ ಸ್ನೇಹಿತ: ‘ಸಯ್ಯದ್ ಮುದೀರ್‌ ಆಗಾ ನನಗೆ ಆತ್ಮೀಯ ಸ್ನೇಹಿತರಾಗಿದ್ದರು’ ಎಂದು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹೇಳಿದರು.

‘ಇವರ ತಂದೆ ಕಾಲದಿಂದಲೂ ಜೆಡಿಎಸ್ ಪಕ್ಷಕ್ಕೆ ದುಡಿದಿದ್ದಾರೆ. ಈಚೆಗೆ ನಡೆದ ಚುನಾವಣೆಯಲ್ಲೂ ಆಗಾ ಅವರು ಅನಾರೋಗ್ಯದ ನಡುವೆ ನನ್ನ ಗೆಲುವಿಗಾಗಿ ಶ್ರಮಿಸಿದ್ದರು. ಇವರ ನಿಧನದಿಂದ ನನಗೆ ತುಂಬಲಾರದ ನಷ್ಟವಾಗಿದೆ’ ಎಂದು ತಿಳಿಸಿದರು.

ADVERTISEMENT

ರಾಜಕೀಯ ಬೆಳವಣಿಗೆಗೆ ಸಹಕಾರ: ‘ನಾನು ರಾಜಕೀಯ ಪ್ರವೇಶಿಸಿದಾಗ ರಾಮನಗರದಲ್ಲಿ ಆಗಾರವರ ತಂದೆ ಸಯ್ಯದ್ ಅಹಮ್ಮದ್ ಆಗಾ ಪರಿಚಯರಾದರು. ನನ್ನ ರಾಜಕೀಯ ಬೆಳವಣಿಗೆಗೆ ಸಹಕರಿಸಿದರು’ ಎಂದು ಜೆಡಿಎಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ. ದೇವೇಗೌಡ ತಿಳಿಸಿದರು.

ಅವರನ್ನು ಎಂಎಲ್ ಸಿ ಮಾಡಲು ಸಾಧ್ಯವಾಗಲಿಲ್ಲ. ಅವರ ಮಗ ಮುದೀರ್ ಆಗಾರವರಿಗೆ ಎಂಎಲ್ ಸಿ ಮಾಡಿದೆವು. ಯಾರೊಂದಿಗೂ ಸಂಘರ್ಷ ಮಾಡಿಕೊಳ್ಳದ ಆಗಾ ತಾನಾಯಿತು, ತನ್ನ ಕೆಲಸವಾಯತು ಎಂಬಂತೆ ಇದ್ದರು. ಪಕ್ಷಕ್ಕೂ ನಿಷ್ಠೆಯಿಂದಿದ್ದರು. ಮುಸ್ಲಿಂ ಸಮುದಾಯದವರಿಗೆ ರಮ್ಜಾನ್ ಮಾಸ ಪವಿತ್ರವಾದದ್ದು. ಅವರನ್ನು ಅಲ್ಲಾ ಕರೆದುಕೊಂಡಿದ್ದಾನೆ. ಅವರ ಆತ್ಮಕ್ಕೆ ಶಾಂತಿ ಮತ್ತು ಕುಟುಂಬದವರಿಗೆ ನೋವು ಭರಿಸುವ ಶಕ್ತಿ ನೀಡಲೆಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದರು.

ಹಮ್ಮುಬಿಮ್ಮ ಇರಲಿಲ್ಲ: ಮುದೀರ್ ಆಗಾ ಮಗುವಿನ ಸ್ವಭಾವ ಹೊಂದಿದ್ದರು ಎಂದು ಸಚಿವ ಜಮೀರ್ ಅಹಮದ್‌ ಖಾನ್ ತಿಳಿಸಿದರು.

‘ನಾನು ಅವರು ಉತ್ತಮ ಸ್ನೇಹಿತರಾಗಿದ್ದವು. ವಿಧಾನ ಪರಿಷತ್ ಸದಸ್ಯ ಎಂಬ ಹಮ್ಮುಬಿಮ್ಮು ಇಲ್ಲದೆ ಸಾಮಾನ್ಯ ವ್ಯಕ್ತಿಯಂತಿದ್ದರು. ಯಾರನ್ನೂ ಟೀಕಿಸಿದವರಲ್ಲ. ದ್ವೇಷದ ರಾಜಕಾರಣ ಮಾಡಿದವರಲ್ಲ. ಅವರ ಅಗಲಿಕೆ ತುಂಬಾ ನೋವು ತಂದಿದೆ’ ಎಂದು ತಿಳಿಸಿದರು.

ಶಾಸಕ ಎ. ಮಂಜುನಾಥ್, ವಿಧಾನ ಪರಿಷತ್‌ ಸದಸ್ಯರಾದ ಸಿ.ಎಂ. ಲಿಂಗಪ್ಪ, ಎಸ್. ರವಿ, ಸಿ.ಎಂ. ಇಬ್ರಾಹಿಂ, ಸಂಸದ ಡಿ.ಕೆ. ಸುರೇಶ್, ಜೆಡಿಎಸ್ ನಾಯಕಿ ಅನಿತಾ ಕುಮಾರಸ್ವಾಮಿ, ಜಿಲ್ಲಾಧಿಕಾರಿ ಕ್ಯಾಪ್ಟನ್‌ ಕೆ.ರಾಜೇಂದ್ರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ. ರಮೇಶ್, ಉಪ ವಿಭಾಗಾಧಿಕಾರಿ ಡಾ.ಎಚ್‌.ಎಲ್. ನಾಗರಾಜ್, ಹಲವರು ಅಂತಿಮ ದರ್ಶನ ಪಡೆದು ಸಂತಾಪ ಸೂಚಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.