ADVERTISEMENT

ಚರ್ಚೆ: ಪರೀಕ್ಷೆ ವಿಧಾನದ ‘ಮರುಪರೀಕ್ಷೆ’

ಶಾಲೆಗೂ ಕೋಚಿಂಗ್‌ ಸೆಂಟರಿಗೂ ವ್ಯತ್ಯಾಸವೇ ಇಲ್ಲದಂತೆ ಆಗಿರುವ ಪರಿಸ್ಥಿತಿ ನಿರ್ಮಾಣವಾಗಿರುವುದಕ್ಕೆ ಪರೀಕ್ಷೆಗಳೇ ಮುಖ್ಯ ಕಾರಣ

ಉದಯ ಗಾಂವಕಾರ
Published 13 ಜೂನ್ 2021, 19:31 IST
Last Updated 13 ಜೂನ್ 2021, 19:31 IST
Sangatha 14-06-2021
Sangatha 14-06-2021   

ಕೋವಿಡ್‌- 19ರ ಮೊದಲ ಅಲೆ ಮತ್ತು ಎರಡನೇ ಅಲೆಯಿಂದಾಗಿ ಬಹಳಷ್ಟು ಶೈಕ್ಷಣಿಕ ದಿನಗಳು ನಷ್ಟ ವಾಗಿವೆ. ವಿಡಿಯೊ ಪಾಠಗಳು, ವರ್ಚುವಲ್‌ ಕ್ಲಾಸುಗಳು ಅಂತೆಲ್ಲ ಏಕಮುಖದ ಮತ್ತು ಎಲ್ಲರನ್ನೂ ತಲುಪದ ವಿಧಾನಗಳನ್ನು ಬೆಳಕಿಂಡಿಗಳೆಂದು ಭಾವಿಸಿ ಇನ್ನಷ್ಟು ನಷ್ಟ ಅನುಭವಿಸಿದೆವು. ಕಲಿಕೆಯ ಹೊಸ ದಾರಿಗಳನ್ನು ಹುಡುಕಲು ಈ ‘ಬೆಳಕಿಂಡಿ’ಗಳೇ ತಡೆಯಾದವು.

ಈ ನಡುವೆ ಸಿಬಿಎಸ್‌ಇ ಪಠ್ಯಕ್ರಮದ ಹತ್ತನೇ ತರಗತಿ ಪರೀಕ್ಷೆ ರದ್ದುಗೊಳಿಸಲಾಗಿದೆ. ರಾಜ್ಯ ಪಠ್ಯಕ್ರಮ
ದಲ್ಲೂ ಒಂಬತ್ತನೇ ತರಗತಿಯವರೆಗಿನ ವಿದ್ಯಾರ್ಥಿಗಳು ಮುಂದಿನ ತರಗತಿಗೆ ಉತ್ತೀರ್ಣಗೊಂಡಿದ್ದಾರೆ. ಕೋವಿಡ್‌ ತಂದೊಡ್ಡಿರುವ ಆರ್ಥಿಕ ಮತ್ತು ಆರೋಗ್ಯ ಬಿಕ್ಕಟ್ಟಿನಿಂದಾಗಿ ಎಸ್‌ಎಸ್‌ಎಲ್‌ಸಿ ಮಕ್ಕಳೂ ಪರೀಕ್ಷೆ ಕುರಿತು ಯೋಚಿಸುವ ಸ್ಥಿತಿಯಲ್ಲಿ ಇಲ್ಲ. ಪರೀಕ್ಷೆಯನ್ನು ಮುಂದೂಡಿದರೆ ಸಮಸ್ಯೆಯೂ ಮುಂದೂಡಲ್ಪಡು
ತ್ತದೆ, ಪರಿಹಾರವಾಗುವುದಿಲ್ಲ. ನೆಟ್‌ವರ್ಕಿಲ್ಲ, ಸ್ಮಾರ್ಟ್‌ಫೋನ್‌ ಇಲ್ಲ, ಡೇಟಾಪ್ಯಾಕ್‌ ಇಲ್ಲ... ಹತ್ತಾರು ಇಲ್ಲಗಳ ನಡುವೆ ಈ ಮಕ್ಕಳನ್ನು ವರ್ಚುವಲ್‌ ಕ್ಲಾಸ್‌ಗೆ, ಹೊಸ ಕ್ರಮದ ಪರೀಕ್ಷೆಗೆ ಅಣಿಗೊಳಿಸಬೇಕಾದ ಸ್ಥಿತಿ
ಅನಿವಾರ್ಯದ್ದಲ್ಲ. ಪರೀಕ್ಷೆ ನಡೆದಿದೆಯೋ ಇಲ್ಲವೋ ಎಂಬಲ್ಲಿಂದ ಕಲಿಕೆಯ ಅನುಭವಗಳನ್ನು ಒದಗಿಸಲಾಗಿದೆಯೋ ಇಲ್ಲವೋ ಎಂಬಲ್ಲಿಗೆ ಚರ್ಚೆಯ ಮಗ್ಗುಲು ಬದಲಾಯಿಸಲು ಇದು ಸಕಾಲ. 1938ರ ಜಾಕಿರ್‌ ಹುಸೇನ್‌ ಸಮಿತಿಯೇ ಪರೀಕ್ಷೆಗಳನ್ನು ಭಾರತೀಯ ಶಿಕ್ಷಣ ವ್ಯವಸ್ಥೆಯ ಶಾಪವೆಂದು ಕರೆದಿತ್ತು. ಪರೀಕ್ಷೆಗಳಿಗೆ ಅವಶ್ಯಕತೆಗಿಂತ ಹೆಚ್ಚು ಬೆಲೆ ನೀಡುತ್ತಿರುವುದರಿಂದಾಗಿ ಇಡೀ ವ್ಯವಸ್ಥೆ ಕೊಳೆಯುತ್ತಿದೆ ಎಂದು ಆರೋಪಿಸಿತ್ತು.

ಕಲಿಕೆಯನ್ನು ಖಾತರಿಗೊಳಿಸಲು ಪರಿಣಾಮ
ಕಾರಿಯಾದ ಯಾವುದೇ ಪ್ರಯತ್ನಗಳು ನಡೆಯದಿದ್ದರೂ ಪರೀಕ್ಷೆಗಳು ಬೇಕು ಎಂಬ ಪರಿಸರದಲ್ಲಿ ನಾವಿದ್ದೇವೆ. ಆದ್ದರಿಂದಲೇ, ಕೋವಿಡ್‌ ನಡುವೆಯೂ ಪರೀಕ್ಷೆ ನಡೆಸಿದರೆ ಮೆಚ್ಚುಗೆ ದೊರೆಯುತ್ತದೆ. ಪರೀಕ್ಷೆ ನಡೆಸದೆ ಮುಂದಿನ ತರಗತಿಗೆ ಕಳುಹಿಸಿದರೆ ಮಕ್ಕಳ ಭವಿಷ್ಯವನ್ನು ಹಾಳುಮಾಡಲಾಗಿದೆ ಎಂಬ ಟೀಕೆಗೆ ಗುರಿಯಾಗಬೇಕಾಗುತ್ತದೆ. ಎಲ್ಲರೂ ಉತ್ತೀರ್ಣ
ರಾದರೆ, ಜಾಣರಿಗೆ ಅನ್ಯಾಯವೆಂತಲೂ ಪರೀಕ್ಷೆಯಿಲ್ಲದೆ ಉತ್ತೀರ್ಣರಾಗುವುದು ಅನೈತಿಕವೆಂತಲೂ ಅನೇಕರು ಅಭಿಪ್ರಾಯಪಡುತ್ತಾರೆ. ಕಲಿಯುವುದು ಪರೀಕ್ಷೆಗಾಗಿ ಎಂಬ ಸಾಮಾನ್ಯ ನಂಬಿಕೆಯಿಂದ ಸೃಷ್ಟಿಯಾದ ಯೋಚನೆಗಳಿವು. ಇದರಿಂದ ಕಲಿಯುವ ಕ್ರಿಯೆಗೆ ಮಹತ್ವವೇ ಇಲ್ಲದಂತಾಗಿದೆ.

ADVERTISEMENT

ಪರೀಕ್ಷೆಗಳನ್ನು ಪಳಗಿಸಿ ಕಲಿಕೆಯ ದಾರಿಗೆ ಅವುಗಳನ್ನು ತರಲು ಸಾಧ್ಯವಾಗದಿರುವುದರ ಹಿಂದೆ ಸಂಕೀರ್ಣವಾದ ಕಾರಣಗಳಿವೆ. ಜನಾಭಿಪ್ರಾಯವನ್ನು ರೂಪಿಸುವಲ್ಲಿ ಪ್ರಭಾವಿಯಾಗಿರುವ ಹಿತಾಸಕ್ತಿಗಳು ಇದರ ಹಿಂದೆ ಕೆಲಸ ಮಾಡುತ್ತವೆ. ಸಂಕಲನಾತ್ಮಕವಾದ ಬೋರ್ಡ್‌ ಪರೀಕ್ಷೆಗಳು ಅರ್ಥಪೂರ್ಣ ಕಲಿಕೆಯನ್ನು ಬೆಂಬಲಿಸುವುದಿಲ್ಲ. ಬದಲಾಗಿ, ಪುನರಾವರ್ತನೆ, ಸರಣಿ ಪರೀಕ್ಷೆಗಳ ಒತ್ತಡ ಮತ್ತಿತ್ಯಾದಿ ಮಕ್ಕಳ ಕಲಿಕೆಯ ಸಮಯವನ್ನು ವಿವೇಚನೆಯಿಲ್ಲದೆ ಹಾಳುಮಾಡುತ್ತವೆ. ಶಾಲೆಗೂ ಕೋಚಿಂಗ್‌ ಸೆಂಟರಿಗೂ ವ್ಯತ್ಯಾಸವೇ ಇಲ್ಲದಂತಾಗಿರಲು ಈ ಪರೀಕ್ಷೆಗಳೇ ಕಾರಣ. ರಾಷ್ಟ್ರ ನಿರ್ಮಾಣಕ್ಕಾಗಿ ಸ್ವತಂತ್ರ ಚಿಂತಕರನ್ನು ತಯಾರು ಮಾಡುವ ಯಾವ ಉದ್ದೇಶವೂ ಇಲ್ಲದ ಮತ್ತು ಶಾಲೆಗಳನ್ನು ಟ್ಯೂಷನ್‌ ಸೆಂಟರುಗಳನ್ನಾಗಿ ಮಾಡುವ ಬೋರ್ಡ್‌ ಪರೀಕ್ಷೆಗಳು ರದ್ದಾಗುವುದು ಶಿಕ್ಷಣ ಕ್ಷೇತ್ರಕ್ಕೆ ದೊರೆಯುವ ದೊಡ್ಡ ಕೊಡುಗೆಯೇ ಆಗಬಲ್ಲದು. ಕೋವಿಡ್-19‌ ಜಗತ್ತನ್ನು ಬೇರೆಯದೇ ದೃಷ್ಟಿಕೋನ
ದಲ್ಲಿ ಗ್ರಹಿಸುವಂತೆ ಮಾಡಿರುವುದು ಸುಳ್ಳಲ್ಲ. ಪರೀಕ್ಷೆಗಳ ಕುರಿತಂತೆಯೂ ನಮ್ಮ ದೃಷ್ಟಿಕೋನ ಬದಲಾಗಬೇಕಿದೆ. ದೇಸಿ ದನಗಳನ್ನು ಬಾಲ ಹಿಡಿದು ಪಳಗಿಸಲಾಗದು, ಅವುಗಳ ಕೋಡು ಹಿಡಿಯಬೇಕು ಎನ್ನುತ್ತಾರೆ. ಭಾರತದಲ್ಲಿ ಶೈಕ್ಷಣಿಕ ಸುಧಾರಣೆ ತರುವ ಮೊದಲು ಬೋರ್ಡ್‌ ಪರೀಕ್ಷೆಗಳನ್ನು ರದ್ದುಪಡಿಸಬೇಕು.

2005ರ ಪಠ್ಯಕ್ರಮ ನೆಲೆಗಟ್ಟು ಮೌಲ್ಯಮಾಪನ ಸುಧಾರಣೆಗೆ ನೀಡಿದ ಸಲಹೆಗಳು ಮತ್ತು 2009ರ ಶಿಕ್ಷಣ ಹಕ್ಕು ಕಾಯ್ದೆ ನೀಡಿರುವ ಅವಕಾಶಗಳನ್ನು ಬಳಸಿಕೊಂಡು ನಿರಂತರ ಮತ್ತು ವ್ಯಾಪಕ ಮೌಲ್ಯ ಮಾಪನ ವಿಧಾನಗಳನ್ನು ಜಾರಿಗೆ ತರಲಾಯಿತಾದರೂ ಜನಾಭಿಪ್ರಾಯದ ಮೇಲೆ ಪ್ರಭಾವ ಬೀರುವ ಒಂದು ಗುಂಪಿನ ಒತ್ತಡಕ್ಕೆ ಮಣಿದು, ಆ ವ್ಯವಸ್ಥೆ ಬಣ್ಣ ಕಳೆದು ಕೊಂಡು ಹಿಂದಕ್ಕೆ ಸರಿಯಿತು. ಕಲಿಕೆ– ಮೌಲ್ಯಮಾಪನ ಗಳನ್ನು ಸಮನ್ವಯಗೊಳಿಸುವ ಪರಿಣಾಮಕಾರಿ ದಾರಿಗಳು ಹೊಳೆಯದೆ ಹಳೆಯ ಮಾದರಿಗೇ ಅಂಟಿಕೊಂಡಿರಬೇಕಾಯಿತು. ಹಳೆಯದರಿಂದ ಹೊರ
ಬರಲಾರದಷ್ಟು ಹೊರೆ ಇರುವುದೂ ಇದಕ್ಕೆ ಕಾರಣ ಇರಬಹುದು. ರಾಷ್ಟ್ರೀಯ ಶಿಕ್ಷಣ ನೀತಿಯು ಪರೀಕ್ಷಾ ಸುಧಾರಣೆ ಕುರಿತು ಮಾತನಾಡುತ್ತಿದೆಯಾದರೂ ಪರೀಕ್ಷೆ ನಡೆಸುವ ಸಲುವಾಗಿಯೇ ರಾಷ್ಟ್ರೀಯ ಪರೀಕ್ಷಾ ಪ್ರಾಧಿಕಾರ ಸ್ಥಾಪಿಸಲು ಹೊರಟಿದೆ!

ಮುಂದಿನ ವರ್ಷದ ಹೊತ್ತಿಗೆ ಎಲ್ಲವೂ ತಿಳಿಯಾಗಬಹುದು. ಕಠಿಣವಾದ ಬದುಕು ಅಷ್ಟರಲ್ಲಿ ಈ ಮಕ್ಕಳನ್ನು ಯಾವೆಲ್ಲ ದಾರಿಗೆ ಕೊಂಡೊಯ್ಯಬಹುದೋ ಹೇಳತೀರದು. ಎಲ್ಲಿಗೇ ಹೋಗಲಿ, ಹತ್ತು- ಹನ್ನೆರಡು ವರ್ಷಗಳವರೆಗೆ ಶಾಲೆಯ ಮೆಟ್ಟಿಲುಗಳನ್ನು ಸವೆಸಿದ ಮಕ್ಕಳಿಗೆ ಎಸ್‌ಎಸ್‌ಎಲ್‌ಸಿ- ಪಿಯು ಪ್ರಮಾಣ ಪತ್ರವನ್ನು ಹಿಡಿದುಕೊಳ್ಳುವ ಯೋಗ್ಯತೆ ಇದೆ. ಇಲ್ಲವೆಂದು ಯಾರಾದರೂ ಭಾವಿಸಿದರೆ ಅದು ಒಟ್ಟೂ ಶೈಕ್ಷಣಿಕ ವ್ಯವಸ್ಥೆಯ ಮೌಲ್ಯಮಾಪನವಾಗುತ್ತದೆಯೇ ಹೊರತು ಮಕ್ಕಳದ್ದಲ್ಲ. ಅಷ್ಟಲ್ಲದೆ, ಮಗು ಶಾಲೆಯಲ್ಲಿ ಪಡೆದ ಕಲಿಕೆಯ ಅನುಭವಗಳನ್ನು ಸ್ಮರಣೆಕೇಂದ್ರಿತ ಪ್ರಶ್ನೆಗಳಿಂದ ಅಳೆಯಲಾಗದು ಕೂಡಾ.

ಬೋರ್ಡ್ ಪರೀಕ್ಷೆಗಳು ರದ್ದಾದ ಮೇಲಷ್ಟೇ
ಕಲಿಕೆಯ ಜೊತೆಯಲ್ಲಿ ಸಾಗುವ ಮತ್ತು ಕಲಿಕೆಗಾಗಿಯೇ ನಡೆಯುವ ಮೌಲ್ಯಮಾಪನ ವಿಧಾನಗಳು ವಿಕಾಸ ಗೊಳ್ಳಲು ಸಾಧ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.