ADVERTISEMENT

ಸಂಗತ | ನೆಲ ಹದಗೊಂಡಿದೆ, ಆದರೆ...

ಕೃಷಿ ಮತ್ತು ಕಲಿಕೆ ಎರಡೂ ಚಿಗುರೊಡೆಯಬೇಕಾದ ಕಾಲ ಇದು

ಸತೀಶ್ ಜಿ.ಕೆ. ತೀರ್ಥಹಳ್ಳಿ
Published 18 ಜೂನ್ 2020, 2:11 IST
Last Updated 18 ಜೂನ್ 2020, 2:11 IST
   

ಮೇ ತಿಂಗಳು ಕಳೆದು ಜೂನ್ ಅಡಿಯಿಡುತ್ತಿದ್ದಂತೆ ಶುರುವಾಗುತ್ತದೆ, ಋತುಮಾನಗಳ ಚಲನೆಯ ರುಜುವಾಗಿ ಪ್ರಕೃತಿಯಲ್ಲೊಂದು ಗುರುತರ ಸ್ಥಿತ್ಯಂತರ. ಅಲ್ಲ್ಯಾವುದೋ ಜೀವಜಂತುವಿಗೆ ಮುದುಡಿಕೊಂಡು ಬೆಚ್ಚನೆಯ ಬಿಲದೊಳಗೆ ಸೇರಿಕೊಳ್ಳುವ ಅವಸರ, ಇನ್ಯಾವುದಕ್ಕೋ ಗೂಡಿನಿಂದ ಮೈಮುರಿದು ಹೊರ ಬರಲು ಕಾತರ, ಅನಾಥವಾಗಿ ಬಿದ್ದಿದ್ದ ಯಾವುದೋ ತತ್ತಿ- ಬೀಜಗಳಲ್ಲಿಯೂ ಜೀವಾಂಕುರದ ಹಂಬಲ. ಆಚೆಗೆ, ಮುಂಗಾರಿನಲ್ಲಿ ಮುಗಿಲ ತುಂತುರು ನೆಲ ತಾಕುವ ಹೊತ್ತಿಗೆ ಹೊಲದ ರೈತಾಪಿ ಮೈಮನಸ್ಸುಗಳಲ್ಲೊಂದು ವಿದ್ಯುತ್‌ಸಂಚಾರ. ತಾವು ಹದಗೊಳಿಸುವ ನೆಲದಲ್ಲಿ ಊರುವ ಭರವಸೆಯ ಬೀಜಗಳು ತೇವವುಂಡು ಮೊಳಕೆಯೊಡೆಯುವ ಹೊತ್ತದು...

ಜೂನ್ ತಿಂಗಳೆಂದರೆ, ಪ್ರಕೃತಿಗಷ್ಟೇ ತನ್ನ ಸಹಜ ವೈಭವಕ್ಕೆ ಮರಳುವ ಸಡಗರವಲ್ಲ. ರಜೆಯ ಮೋಜಿನಲ್ಲಿ ಮಿಂದೇಳುವ ಎಳೆಯ ಮನಸ್ಸುಗಳಿಗೂ ಶಾಲೆಗೆ ತೆರಳುವ, ಅರಳುವ ಸಂಭ್ರಮ. ರಜೆಯ ಕಾಲದಲ್ಲಿ ಲೋಕಾನುಭವಕ್ಕೆ ತೆರೆದುಕೊಳ್ಳುವ ಮನಸ್ಸುಗಳು ನಂತರದಲ್ಲಿ ತರಗತಿಯೊಳಗಿನ ಔಪಚಾರಿಕ ಕಲಿಕೆಯೊಡನೆ ಸರಸರನೆ ಅರಳಲು ಸಾಧ್ಯವಾಗುತ್ತದೆ. ಪುಸ್ತಕದಾಚೆಗಿನ ವಾಸ್ತವ, ಸಂಬಂಧದ ಮಹತ್ವ, ಹಿರಿಯರ ನಡೆ, ಹಸಿರಿನ ಸಾಂಗತ್ಯ, ಮಣ್ಣಿನ ಸಂಪರ್ಕ, ನಡೆ-ನುಡಿ, ಕಲೆ-ಸಂಸ್ಕೃತಿ, ಸಂಸ್ಕಾರ, ಉದಾತ್ತ ಭಾವ ಹೀಗೆ ಜಗತ್ತಿನ ಯಾವ ವ್ಯಕ್ತಿ, ಶಾಲೆ ಅಥವಾ ಭಾಷೆ-ಬರವಣಿಗೆಯಿಂದಲೂ ಕಲಿಸಲಾಗದ ಅರಿವನ್ನು ಮಕ್ಕಳು ತಮ್ಮ ಸ್ವಾನುಭವದಲ್ಲಿ ಕಂಡುಂಡು ಸಹಜವಾಗಿ ಕಲಿಯುತ್ತವೆ, ಬೆಳೆಯುತ್ತವೆ ಮತ್ತು ಬೆಳಗುತ್ತವೆ.

ಮುಂಗಾರಿನಲ್ಲಿ ಬೀಜವೂ ತನ್ನ ನಿಶ್ಚೇತನ ಕಾಲವಾಗಿರುವ ರಜಾ ಅವಧಿಯನ್ನು ಕಳೆದು, ಭೂಮಿಗೆ ಬಿದ್ದು ಮೊಳೆಯಲು ಸಜ್ಜಾಗುತ್ತದೆ. ಆವರೆಗೆ ತನ್ನೆಲ್ಲಾ ಸತ್ವವನ್ನೂ ಸಾಮರ್ಥ್ಯವನ್ನೂ ಪುಟ್ಟ ಕೋಶಭಿತ್ತಿಯಲ್ಲಿ ಬಚ್ಚಿಟ್ಟು ಸುಪ್ತಾವಸ್ಥೆಯಲ್ಲಿಯೇ ಕಾವುಕಟ್ಟಿ ಸೂಕ್ತ ಸಮಯಕ್ಕಾಗಿ ಕಾದಿರುತ್ತದೆ. ನೆಲದೊಳಗೆ ಕೂತು, ಹದಮಳೆಯೊಂದಿಗೆ ಬೆರೆತುಹೆಮ್ಮರವಾಗುವ ತವಕದಲ್ಲಿ ಮೊದಲ ಹಂತಕ್ಕೆ ಮೊಳಕೆಯೊಡೆಯು
ತ್ತದೆ. ನಂತರ ಮಣ್ಣು- ನೀರಿನಲ್ಲಿಯ ಅಗತ್ಯ ಪೋಷಕತ್ವವನ್ನು ಹೀರುತ್ತಾ ಚಿಗುರೊಡೆಯುತ್ತದೆ, ಬಲಿಯುತ್ತದೆ. ಹಾಗೆಯೇ ಬೆಳೆಯುವ ಮಗು...

ADVERTISEMENT

ಅತ್ತ ರೈತ ತನ್ನ ಹದಗೊಂಡ ನೆಲದಲ್ಲಿ ಬೀಜ ಬಿತ್ತುವ ಕಾತರದಲ್ಲಿದ್ದರೆ, ಇತ್ತ ಶಾಲೆಯೆಡೆಗೆ ಹೊರಳಬೇಕಾದ ಹೊತ್ತಿನಲ್ಲಿ ಮಗುವಿನ ಮನದೊಳಗೆ ಏನೋ ತಳಮಳ. ನಿಜ, ಯಃಕಶ್ಚಿತ್ ಪರಾವಲಂಬಿ, ಅರೆಜೀವಿ, ಅತಿಸೂಕ್ಷ್ಮಕಣವಾದ ಕೊರೊನಾ ವೈರಾಣು ಸೃಷ್ಟಿಸುತ್ತಿರುವ ಭಯಾನಕತೆಯಲ್ಲಿ ಜಗತ್ತಿನೆಲ್ಲೆಡೆ ಔದ್ಯೋಗಿಕ ರಂಗದೊಟ್ಟಿಗೆ ಜನಜೀವನವೂ ಲಯತಪ್ಪಿ ಅಸ್ತವ್ಯಸ್ತಗೊಂಡಿದೆ. ಪ್ರಸಕ್ತ ಸಾಲಿನ ಶೈಕ್ಷಣಿಕ ಚಟುವಟಿಕೆಗಳ ಮೇಲೂ ಕೊರೊನಾದ ಕರಿನೆರಳು ಗಾಢವಾಗಿ ಆವರಿಸಿರುವುದು ಸುಳ್ಳಲ್ಲ. ಮಕ್ಕಳ ಕಲಿಕೆ, ಪ್ರಗತಿ, ಪರೀಕ್ಷೆ, ಫಲಿತಾಂಶಗಳ ಗೊಂದಲದಲ್ಲಿ ಪಾಲಕರು ಚಿಂತಿತರಾಗಿದ್ದಾರೆ. ಇಂತಹ ವಿಲಕ್ಷಣ ಸನ್ನಿವೇಶದಲ್ಲಿ ಮಕ್ಕಳು ಗೊಂದಲಕ್ಕೀಡಾಗದೆಯೇ ಹೆಚ್ಚೆಚ್ಚು ಜವಾಬ್ದಾರಿಯುತರಾಗಿ, ಪೋಷಕರು-ಶಿಕ್ಷಕರ ಸಹಕಾರದಿಂದ ಸ್ವಯಂಕಲಿಕೆಯಲ್ಲಿ ತೊಡಗಿ ಕೊಳ್ಳುವುದು, ಅಭ್ಯಸಿಸುವುದನ್ನು ರೂಢಿಸಿಕೊಳ್ಳುವುದು ಹೆಚ್ಚು ಅವಶ್ಯಕ. ಸಹಜ ಮತ್ತು ಆಸಕ್ತಿ ದಾಯಕ ಚಟುವಟಿಕೆ ಆಧಾರಿತ ಕಲಿಕಾ ಪದ್ಧತಿಯನ್ನು ಅಳವಡಿಸಿಕೊಳ್ಳಬಹುದು. ಇದು ಏಕತಾನತೆಯನ್ನು ನಿವಾರಿಸಿ ತೊಡಗುವಿಕೆಯನ್ನು ಉತ್ತೇಜಿಸುತ್ತದೆ.

‘ಮೊದಲ ಪಾಠಶಾಲೆ’ಯಾದ ಮನೆಯಲ್ಲಿನ ಸ್ವಯಂಕಲಿಕೆಯ ಹೊಳಹುವಿನೊಂದಿಗೆ ಸಿದ್ಧಗೊಂಡು, ಮುಂದೆ ಶಾಲಾರಂಭಗೊಳ್ಳುತ್ತಿದ್ದಂತೆ ಅಲ್ಲಿಯ ಒತ್ತಡ ಮುಕ್ತ ಚಟುವಟಿಕೆಗಳಿಗೆ ವಿದ್ಯಾರ್ಥಿಗಳು ತೆರೆದು ಕೊಳ್ಳಬಹುದಾಗಿದೆ. ಪುಸ್ತಕ, ಟಿ.ವಿ-ಮೊಬೈಲು
ಅಂತರ್ಜಾಲಗಳಲ್ಲಿನ ವಿವಿಧ ತಂತ್ರಾಂಶಗಳನ್ನು ಬಳಸಿಕೊಳ್ಳುವುದು ಸೂಕ್ತ. ಕಲಿಯುವ ಪ್ರಕ್ರಿಯೆಗಳು ತಮ್ಮ ಬೆಳವಣಿಗೆಗೆ ಪೂರಕವೂ ಪ್ರೇರಕವೂ ಆಗಿರುವುದನ್ನು ಖಾತರಿಪಡಿಸಿಕೊಳ್ಳಬೇಕು. ತಮಗಿರುವ ಅವಕಾಶ ದಲ್ಲಿಯೇ ಬುದ್ಧಿಯೊಂದಿಗೆ ಭಾವಪರಿಧಿಯನ್ನು ಹಿಗ್ಗಿಸಬಲ್ಲ ಕ್ರೀಡೆ, ಸಾಹಿತ್ಯ, ಸಂಗೀತ, ಸಹಬಾಳ್ವೆ, ಒತ್ತಡ ನಿವಾರಣಾ ಕೌಶಲ, ನಾಯಕತ್ವ ಬೆಳವಣಿಗೆ ಯಂತಹ ವಿಭಿನ್ನವಾದ ಬಹುಮುಖ ಚಟುವಟಿಕೆಗಳಲ್ಲಿ ಮಕ್ಕಳು ಅಗತ್ಯ ಸುರಕ್ಷಾ ಕ್ರಮಗಳೊಂದಿಗೆ ಭಾಗಿಯಾಗಬೇಕು. ಆಗೆಲ್ಲಾ ಹೆತ್ತವರು, ಗುರುಗಳ ಮಾರ್ಗದರ್ಶನ ಹಾಗೂ ಪ್ರೇರಣೆಯು ಹದಮಳೆಯ ಹಾಗೆ ಹಿತವಾಗಿ ಹನಿಯಬೇಕು. ಪೋಷಕರು ಅತಿ ನಿರೀಕ್ಷೆಯ ಭಾರವನ್ನು ಹೇರದೆ, ಎಳೆಯ ಜೀವಗಳು ಮಾನಸಿಕವಾಗಿ ಕುಸಿಯದಂತೆ ಎಚ್ಚರ ವಹಿಸುವುದು ಅತ್ಯಗತ್ಯ.

ಪ್ರಸ್ತುತ, ಕೊರೊನಾವು ವಿಶ್ವಕ್ಕೆ ಸಾರಿದ್ದೂ ಅದನ್ನೇ. ನಾವು ಪರಿಸರ, ಕೃಷಿ, ಶಿಕ್ಷಣ ಎಲ್ಲೆಡೆಯಲ್ಲಿಯೂ ನಮ್ಮ ಅತಿಯಾದ ಹಸ್ತಕ್ಷೇಪ ಮತ್ತು ಯಾಂತ್ರಿಕತೆಯನ್ನು ನಿಯಂತ್ರಿಸಿ, ಸುಸ್ಥಿರವೂ ಜೀವನ್ಮುಖಿಯೂ ಸರಳವೂ ಆದ ನಿಸ್ವಾರ್ಥ ಬದುಕಿಗಾಗಿ ಹಂಬಲಿಸಬೇಕು. ಮುಂದಾದರೂ ದುರಾಸೆ, ಕೃತಕತೆ, ವೈಭೋಗದಂತಹ ಅಸ್ವಾಭಾವಿಕ ಜೀವನಶೈಲಿಯಿಂದ ದೂರ ಸರಿಯುತ್ತಾ, ದೂರಗಾಮಿ ಪರಿಣಾಮಗಳನ್ನು ಸೂಕ್ಷ್ಮವಾಗಿ ಗ್ರಹಿಸಿ, ಸಾಧ್ಯವಿರುವಷ್ಟೂ ಸರಳ ಮತ್ತು ಸಹಜ ಬದುಕನ್ನು ಒಲಿಸಿಕೊಳ್ಳಬೇಕಿದೆ. ಹಾಗಾಗದಿದ್ದಲ್ಲಿ ಲಾಭದಾಸೆಗೆ ಮಿತಿಮೀರಿ ರಾಸಾಯನಿಕಗಳನ್ನು ತಂದು ಸುರಿದು, ಸಮೃದ್ಧ ಮತ್ತು ಚೈತನ್ಯಯುತ ನೆಲವನ್ನು ನಿರ್ಜೀವಗೊಳಿಸುತ್ತಿರುವ ಆಧುನಿಕ ಕೃಷಿ ವಿಧಾನದ ಹಾಗೆಯೇ ಶಿಕ್ಷಣ ವ್ಯವಸ್ಥೆಯೂ ಇಂದಿನ ಕೃತಕ ಮತ್ತು ಯಾಂತ್ರಿಕ ಜಗತ್ತಿನ ಮುಂದುವರಿಕೆಗಷ್ಟೇ ಸಾಕ್ಷಿಯಾಗಬೇಕಾಗುತ್ತದೆ. ಹಾಗಾಗದಿರಲಿ ಎಂದು ಬಯಸುವುದಾದರೆ, ಕೃಷಿ ಮತ್ತು ಮಕ್ಕಳ ಕಲಿಕೆಗಳೆರಡೂ ಸಾಧ್ಯವಾದಷ್ಟೂ ಹೆಚ್ಚೆಚ್ಚು ಸಾವಯವಗೊಳ್ಳಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.