ADVERTISEMENT

ಡಬ್ಬಿಂಗ್‌ ಮತ್ತು ಭಾಷಾ ಅಸ್ಮಿತೆ

ಪ್ರಜಾವಾಣಿ ವಿಶೇಷ
Published 21 ಜುಲೈ 2020, 1:33 IST
Last Updated 21 ಜುಲೈ 2020, 1:33 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಕಿರುತೆರೆಯಲ್ಲಿ ‘ಮಹಾಭಾರತ’ ಮತ್ತು ‘ರಾಮಾಯಣ’ ಧಾರಾವಾಹಿಗಳು ಹಿಂದಿ ಭಾಷೆಯಲ್ಲಿ ದಶಕಗಳ ಹಿಂದೆ ಪ್ರಸಾರವಾಗುತ್ತಿದ್ದ ಸಂದರ್ಭದಲ್ಲಿ ರಸ್ತೆಗಳಲ್ಲಿ ಜನಸಂಚಾರವೇ ಇರುತ್ತಿರಲಿಲ್ಲ ಎನ್ನುವಷ್ಟರ ಮಟ್ಟಿಗೆ ಎಲ್ಲಾ ಭಾಷೆಯ ಜನ ಕಿರುತೆರೆಯ ಮುಂದೆ ಕುಳಿತು ಆಸಕ್ತಿಯಿಂದ, ಕುತೂಹಲದಿಂದ ಅವುಗಳನ್ನುವೀಕ್ಷಿಸುತ್ತಿದ್ದರು. ಹಿಂದಿ ಭಾಷಿಕರು ಆ ಧಾರಾವಾಹಿಗಳನ್ನು ಪೂರ್ಣವಾಗಿ ಆಸ್ವಾದಿಸುತ್ತಿದ್ದರು. ಹಿಂದಿಯೇತರ ಭಾಷೆಗಳ ಜನ ಅರ್ಥವಾದುದಷ್ಟಕ್ಕೇ ತೃಪ್ತಿಪಟ್ಟರೂ ನೋಡುವುದನ್ನು ಮಾತ್ರ ಬಿಡಲಿಲ್ಲ. ಆ ದೃಶ್ಯಕಾವ್ಯಗಳ ಸೆಳೆತ ಆ ಪರಿ ಇತ್ತು.

ಹಿಂದಿ ಚೆನ್ನಾಗಿ ಬಲ್ಲವರಿಗೆ ಅವರ ಗ್ರಹಿಕೆಗೆ ತಕ್ಕಂತೆ ಸಂಭಾಷಣೆಯು ದಕ್ಕುತ್ತಿತ್ತು. ಹಿಂದಿ ಗೊತ್ತಿಲ್ಲದವರಿಗೆ ಕೊರತೆಯಂತೂ ಕಾಡುತ್ತಿತ್ತು. ಪರಿಚಿತ ಕಾವ್ಯಗಳಾದ ಕಾರಣ ಹೇಗೋ ಸರಿದೂಗಿಸಿಕೊಂಡು ಒಟ್ಟಾರೆ ಅಂದವನ್ನು ದಕ್ಕಿದಷ್ಟು ಆಸ್ವಾದಿಸಿದರು. ಇದರಿಂದ ಭಾಷೆಯ ನೆಲೆಯಲ್ಲಿ ಆಗಿರಬಹುದಾದ ಪರಿಣಾಮಗಳ ಬಗೆಗೆ ಖಚಿತವಾಗಿ ಏನನ್ನೂ ಹೇಳಲು ಆಗದಿದ್ದರೂ ವ್ಯಕ್ತಿ ನೆಲೆಯಲ್ಲಿ ಸಿಗಬಹುದಾಗಿದ್ದ ಖುಷಿಗೆ ಭಂಗ ಉಂಟಾದದ್ದು ನಿಜ.

ಈಗ ಈ ಧಾರಾವಾಹಿಗಳು ಡಬ್ಬಿಂಗ್‌ ಮೂಲಕ ನಮ್ಮದೇ ಭಾಷೆಯಲ್ಲಿ ದಕ್ಕುತ್ತಿವೆ. ದೃಶ್ಯದಸೊಬಗಿನೊಂದಿಗೆ ಗೀತೆ–ಸಂಭಾಷಣೆಯೂ ಗೊತ್ತಾಗುವುದರಿಂದ ಧಾರಾವಾಹಿಗಳನ್ನು ಇನ್ನಷ್ಟು ಖುಷಿಯಿಂದ ಆಸ್ವಾದಿಸಲು ಕನ್ನಡಿಗರಿಗೆ ಅವಕಾಶವಾಗಿದೆ.

ADVERTISEMENT

ಜ್ಞಾನಾರ್ಜನೆಯ ಚಾನೆಲ್‌ಗಳೆಂದು ಪರಿಗಣಿಸಿರುವ ನ್ಯಾಷನಲ್ ಜಿಯಾಗ್ರಫಿ, ಡಿಸ್ಕವರಿ ಮುಂತಾದವು ತಮಿಳು ಭಾಷೆಗೆ ಡಬ್ ಆಗಿ ಪ್ರಸಾರವಾಗುತ್ತಿವೆ. ತಮಗೆ ಅರ್ಥವಾಗುವ ಭಾಷೆಯಲ್ಲಿ ದೊರಕಿದರೆ ಮಾತ್ರ ಅಲ್ಲಿನವರು ಅವುಗಳನ್ನು ವೀಕ್ಷಿಸುತ್ತಾರೆ. ಅವರ ಈ ಮನೋಭಾವವನ್ನು ಅರಿತ ಪ್ರಸಾರ ಮಾಧ್ಯಮಗಳು, ಅವರ ಭಾಷೆಯಲ್ಲೇ ಅವುಗಳನ್ನು ಕೊಡುತ್ತಿವೆ. ಹೀಗೆ ಆ ಸಮುದಾಯವು ತನಗೆ ಬೇಕಾದದ್ದನ್ನು ಗಿಟ್ಟಿಸಿಕೊಳ್ಳುತ್ತಿದೆ.

ಕನ್ನಡ ನೆಲದ ಸೊಗಡು ಇರುವಂತಹ, ಆಕರ್ಷಕವಾದ ಕನ್ನಡದ್ದೇ ಧಾರಾವಾಹಿಗಳನ್ನು ನಮ್ಮವರೂ ನಿರ್ಮಿಸಬೇಕು. ಅಂತಹವು ನಮ್ಮ ಆನಂದ ಮತ್ತು ಅಭಿಮಾನವನ್ನು ಹೆಚ್ಚಿಸುತ್ತವೆ. ಅಲ್ಲಿಯವರೆಗೆ, ಬೇರೆ ನೆಲದ ಬೆಳೆಯನ್ನಾದರೂ ಉಣ್ಣಲೇಬೇಕು.

– ನಾ.ಸು.ನಾಗೇಶ,ನಾಗಮಂಗಲ

ನಿಯಮಾವಳಿ ರೂಪಿಸಿ

ಡಬ್ಬಿಂಗ್ ವಿಷಯದಲ್ಲಿ ಪರ– ವಿರೋಧವೆಂಬ ಎರಡು ಧ್ರುವಗಳು ಎದುರು ಬದುರಾಗಿವೆ. ಈ ಹಿಂದೆ ಡಾ. ರಾಜ್‌ಕುಮಾರ್ ಅವರು ಡಬ್ಬಿಂಗ್ ಅನ್ನು ವಿರೋಧಿಸಿದ್ದರು ಮತ್ತು ಅವರು ಇರುವವರೆಗೆ ಡಬ್ಬಿಂಗ್ ಎಂಬ ಚಿಂತನೆಯನ್ನು ಕನ್ನಡದ ನೆಲಕ್ಕೆ ತರುವ ಸಾಹಸಕ್ಕೆ ಯಾರೂ ಮುಂದಾಗಿರಲಿಲ್ಲ.

ಇಂದು ಕಿರುತೆರೆ ಮತ್ತು ಬೆಳ್ಳಿತೆರೆ ಡಬ್ಬಿಂಗ್ ಸುನಾಮಿಗೆ ತುತ್ತಾಗಿವೆ. ಇಲ್ಲಿನ ಕಲಾವಿದರು, ತಂತ್ರಜ್ಞರು
ಕಂಗಾಲಾಗಿದ್ದಾರೆ. ಹಾಗಾಗಿ ಡಬ್ಬಿಂಗ್‌ಗೆ ತಡೆಯೊಡ್ಡಬೇಕೆಂಬ ಆಗ್ರಹ ಕೇಳಿಬಂದಿದೆ. ಕನ್ನಡದ ಹೆಸರಿನಲ್ಲಿ ನಿರಂತರ ರಿಮೇಕ್ ಆಗುತ್ತಿದ್ದ, ಗುಣಮಟ್ಟವಿಲ್ಲದ ಚಲನಚಿತ್ರಗಳು ಹಾಗೂ ಧಾರಾವಾಹಿಗಳ ದಾಳಿಯಿಂದ ನಲುಗಿದ್ದ ಒಂದು ವರ್ಗದ ಜನ, ಡಬ್ಬಿಂಗ್‌ಗೆ ಅವಕಾಶ ದೊರೆತಿದ್ದರಿಂದ ಸಂತಸಗೊಂಡಿದ್ದಾರೆ.

ಶಂಕರನಾಗ್ ನಿರ್ದೇಶನದ ‘ಮಾಲ್ಗುಡಿ ಡೇಸ್’ ಹಲವು ಕಾರಣಗಳಿಂದ ಕನ್ನಡಿಗರಿಗೆ ಆಪ್ತ. ಕನ್ನಡಿಗರು ಧಾರಾವಾಹಿಯೊಂದನ್ನು ಬೇರೊಂದು ಭಾಷೆಯಲ್ಲಿ ತಯಾರಿಸಿದ ಅಪರೂಪದ ದೃಷ್ಟಾಂತ ಅದು. ಇಂತಹ ಧಾರಾವಾಹಿ ಕನ್ನಡಕ್ಕೆ ಬರುವುದನ್ನು ವಿರೋಧಿಸುವುದರಲ್ಲಿ ಸಮಸ್ಯೆಯಿದೆ. ಕಾರಣ ಇದರ ತಾರಾಗಣ ಮತ್ತು ಮೇಕಿಂಗ್ ವೈಶಿ‌ಷ್ಟ್ಯ. ಹಾಗೆಯೇ ಬಿ.ಆರ್. ಛೋಪ್ರಾ ಅವರ ‘ಮಹಾಭಾರತ’ವನ್ನು ಕನ್ನಡದ ಸೀಮಿತ ಮಾರುಕಟ್ಟೆಗೆ ಕನ್ನಡದಲ್ಲೇ ಮತ್ತೆ ನಿರ್ಮಿಸುವ ಸಾಧ್ಯತೆಯನ್ನು ಕಲ್ಪಿಸಿಕೊಳ್ಳಲೂ ಆಗದು. ‘ಮಹಾನಾಯಕ’ ಎಂಬ ಬಾಬಾಸಾಹೇಬರ ಜೀವನಾಧಾರಿತ ಧಾರಾವಾಹಿಯು ಸಕಾಲಿಕ. ಮಹತ್ವಪೂರ್ಣ ಜೀವನಚಿತ್ರಗಳು ಎಲ್ಲರಿಗೂ ತಲುಪಬೇಕು ಎಂಬ ಕಾರಣಕ್ಕೆ ಇಂತಹ ಮೌಲಿಕ ಕೃತಿಗಳ ಡಬ್ಬಿಂಗ್ ಅವಶ್ಯಕ.

ಅದೇ ಸಮಯದಲ್ಲಿ, ಇಲ್ಲಿನ ಧಾರಾವಾಹಿಗಳ ಗುಣಮಟ್ಟ ಚೆನ್ನಾಗಿಲ್ಲ ಎಂದು ದೂರುತ್ತ, ಮಳೆಗಾಲದಲ್ಲಿ ನೀರಿನ ಜೊತೆ ಹರಿದು ಬರುವ ಕಸದಂತೆ ಅಲ್ಲಿನ ಕಸವನ್ನು ತಂದು ಇಲ್ಲಿ ತುಂಬುವುದು ಸರ್ವಥಾ ಯೋಗ್ಯವಲ್ಲ. ನಾಲ್ಕಾರು ಧಾರಾವಾಹಿಗಳನ್ನು
ಹೊರತುಪಡಿಸಿ ಇಲ್ಲಿನ ಕನ್ನಡ ಧಾರಾವಾಹಿಗಳ ಗುಣಮಟ್ಟ ಏರುತ್ತಿಲ್ಲ. ಹಾಗೆಂದು ಅದೇ ಗುಣಮಟ್ಟದ ಪರಭಾಷಿಕ ಧಾರಾವಾಹಿಗಳನ್ನು ತರುವುದು ಸಮರ್ಥನೀಯ ಅಲ್ಲ.

ಇದು ಸ್ಥಳೀಯ ಕಲಾವಿದರು, ತಂತ್ರಜ್ಞರ ಬದುಕಿನ ಪ್ರಶ್ನೆಯೂ ಹೌದು, ಭಾಷಾ ಸೊಗಡು ಮತ್ತು ಪ್ರಾದೇಶಿಕತೆಯ ಪ್ರಶ್ನೆಯೂ ಹೌದು. ಧಾರಾವಾಹಿಗಳ ಡಬ್ಬಿಂಗ್‌ ಹಾವಳಿಗೆ ಕಡಿವಾಣ ಹಾಕಬೇಕೆಂಬ ಬೇಡಿಕೆಯ ಜೊತೆಜೊತೆಗೆ ಸ್ಥಳೀಯ ಧಾರಾವಾಹಿಗಳು ಈ ನೆಲದ ಸೊಗಡನ್ನು ಮರೆಯದಂತೆ ನೋಡಿಕೊಳ್ಳಬೇಕಾದ ಹೊಣೆಗಾರಿಕೆಯೂ ಇದೆ.

ಡಬ್ಬಿಂಗ್ ವಿರೋಧಿಗಳು ಪ್ರಾದೇಶಿಕ ಧಾರಾವಾಹಿ, ಚಲನಚಿತ್ರಗಳ ಗುಣಮಟ್ಟ ಏರಿಕೆ ಮತ್ತು ಪ್ರಾದೇಶಿಕ ಸೊಗಡನ್ನು ಪಡಿಮೂಡಿಸಲು ಒತ್ತಾಯಿಸಬೇಕು. ಡಬ್ಬಿಂಗ್ ಪರ ಇರುವವರು ಭಾಷೆ ಮತ್ತು ಸಂಸ್ಕೃತಿ ಪರಸ್ಪರ ಪೂರಕ, ನುಡಿ ಮಾತ್ರ ಬದುಕಲ್ಲ, ಅದರೊಂದಿಗೆ ಪರಿಸರವೂ ಮೂಡಬೇಕು ಎಂಬುದನ್ನು ಗ್ರಹಿಸಬೇಕು. ಡಬ್ಬಿಂಗ್‌ನ ಸಂಪೂರ್ಣ ನಿಷೇಧ ಸಾಧ್ಯವಿಲ್ಲದ ಸಂದರ್ಭವಿದು. ಆದರೆ ಮೌಲಿಕವಾದದ್ದು ಮಾತ್ರ ಬರುವಂತೆ ನಿಯಂತ್ರಿಸಲು ಸಾಧ್ಯ. ಇದನ್ನು ಗಮನದಲ್ಲಿಟ್ಟು ಸರ್ಕಾರ ಅಗತ್ಯ
ನಿಯಮಾವಳಿಗಳನ್ನು ರೂಪಿಸಬೇಕು.

–ಕೆ.ವಿ.ರಾಧಾಕೃಷ್ಣ,ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.