ADVERTISEMENT

ಕೆಪಿಎಸ್‌ಸಿ ಭ್ರಷ್ಟರಿಗೆ ರಕ್ಷಣೆ, ಅಕ್ರಮಗಳಿಗೆ ಪ್ರಚೋದನೆ

2011ರ ಗೆಜೆಟೆಡ್ ಪ್ರೊಬೆಷನರಿ ಹುದ್ದೆಗಳ ನೇಮಕಾತಿಯಲ್ಲಿ ಅಕ್ರಮ ಪ್ರಕರಣ: ಆರೋಪಿಗಳ ವಿರುದ್ಧ ತನಿಖೆಗೆ ಅನುಮತಿ ನೀಡಬೇಕೇ?

ರವಿ ಕೃಷ್ಣಾರೆಡ್ಡಿ
Published 11 ಜೂನ್ 2021, 19:31 IST
Last Updated 11 ಜೂನ್ 2021, 19:31 IST
ರವಿ ಕೃಷ್ಣಾರೆಡ್ಡಿ
ರವಿ ಕೃಷ್ಣಾರೆಡ್ಡಿ   

ನೇಮಕವಾಗುವಾಗಲೇ ಲಕ್ಷ ಮತ್ತು ಕೋಟಿಗಳಲ್ಲಿ ಹಣ ಕೊಟ್ಟು ಬರುವ ಅಧಿಕಾರಿಗಳು ಕೆಲಸಕ್ಕೆ ಸೇರಿದ ನಂತರ ಭ್ರಷ್ಟಾಚಾರ ಮಾಡದೆ ಇರುತ್ತಾರೆಯೆ? ಈಗ ಲೋಕಾಯುಕ್ತವೂ ದುರ್ಬಲವಾಗಿದೆ ಮತ್ತು ನಿಷ್ಕ್ರಿಯವಾಗಿದೆ. ಎಸಿಬಿ ಎನ್ನುವುದು ಬೆದರುಬೊಂಬೆಯೂ ಅಲ್ಲ.

ಕೆಪಿಎಸ್‌ಸಿಯಲ್ಲಿ (ಕರ್ನಾಟಕ ಲೋಕಸೇವಾ ಆಯೋಗ) ಅಕ್ರಮಗಳು ಇತ್ತೀಚಿನ ಬೆಳವಣಿಗೆಗಳೇನೂ ಅಲ್ಲ. 1998, 1999 ಮತ್ತು 2004ರ ಸಾಲಿನ ಗೆಜೆಟೆಡ್ ಪ್ರೊಬೆಷನರಿ ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಎಷ್ಟು ಅಕ್ರಮಗಳಿಂದ ಕೂಡಿತ್ತು ಎಂದರೆ, ಕೆಪಿಎಸ್‌ಸಿ ಅಧ್ಯಕ್ಷರಾಗಿದ್ದ ಎಚ್.ಎನ್.ಕೃಷ್ಣ ಒಮ್ಮೆ ಜೈಲಿಗೆ ಹೋಗಿಬಂದರು ಮತ್ತು ಈಗಲೂ ವಿಚಾರಣೆ ಎದುರಿಸುತ್ತಿದ್ದಾರೆ. ಆ ಸಾಲಿನ ಅನೇಕ ಅಧಿಕಾರಿಗಳ ಮೇಲೆ ಈಗಲೂ ವಜಾ ಅಥವಾ ಹಿಂಬಡ್ತಿಯ ತೂಗುಗತ್ತಿ ಇದೆ. ವಂಚಿತ ಅಭ್ಯರ್ಥಿಗಳು ತಮಗಾದ ಅನ್ಯಾಯವನ್ನು ಪ್ರಶ್ನಿಸಿ ಹೈಕೋರ್ಟ್‌ಗೆ ಮಾತ್ರವಲ್ಲ, ಸುಪ್ರೀಂ ಕೋರ್ಟ್‌ಗೂ ಪ್ರಕರಣವನ್ನು ಒಯ್ದಿದ್ದಾರೆ ಮತ್ತು ಈಗಲೂ ನ್ಯಾಯಕ್ಕಾಗಿ ಹೋರಾಡುತ್ತಿದ್ದಾರೆ. ಅನ್ಯಾಯ ಮುಂದುವರಿದಿದೆ.

ಆದರೆ, 2011ರ ಸಾಲಿನ ಗೆಜೆಟೆಡ್ ಪ್ರೊಬೆಷನರಿ ಹುದ್ದೆಗಳ ನೇಮಕಾತಿ ಪ್ರಕ್ರಿಯೆಯಲ್ಲಿ ನಡೆದ ಅಕ್ರಮಗಳು ಅನುಮಾನಕ್ಕೆ ಎಡೆಯಿಲ್ಲದಂತೆ ಸ್ಪಷ್ಟವಾಗಿವೆ. 362 ಹುದ್ದೆಗಳ ನೇಮಕಕ್ಕೆ ಕೆಪಿಎಸ್‌ಸಿ 2011ರ ನವೆಂಬರ್ 3ರಂದು ಅರ್ಜಿ ಆಹ್ವಾನಿಸಿ, 2013ರ ಮಾರ್ಚ್ 22ರಂದು ತಾತ್ಕಾಲಿಕ ಪಟ್ಟಿ ಪ್ರಕಟಿಸಿತ್ತು. ಮುಖ್ಯಪರೀಕ್ಷೆಯಲ್ಲಿ ತಮ್ಮ ವಿಭಾಗದಲ್ಲಿ ಅತಿಹೆಚ್ಚು ಅಂಕ ಗಳಿಸಿದ್ದ ಡಾ. ಮೈತ್ರಿ ಎನ್ನುವವರು ವೈಯಕ್ತಿಕ ಸಂದರ್ಶನದಲ್ಲಿ ಕನಿಷ್ಠ ಅಂಕ ಪಡೆದಿದ್ದರು. ಎರಡನೇ ಸ್ಥಾನದಲ್ಲಿದ್ದ ಅಭ್ಯರ್ಥಿಗೆ ವೈಯಕ್ತಿಕ ಸಂದರ್ಶನದಲ್ಲಿ ಗರಿಷ್ಠ ಅಂಕ ಸಿಕ್ಕಿತ್ತು. ಆ ಕಾರಣ ಡಾ. ಮೈತ್ರಿಯವರಿಗೆ ಮೊದಲ ಸ್ಥಾನ ತಪ್ಪಿ ಅವರು ಎಸಿ ಹುದ್ದೆಯಿಂದ ವಂಚಿತರಾದರು. ಅವರ ಪ್ರಕಾರ, ಅವರಿಗೆ ಮೊದಲ ಸ್ಥಾನ ಖಚಿತಪಡಿಸಲು ಕೆಪಿಎಸ್‌ಸಿ ಸದಸ್ಯರ ಕಡೆಯಿಂದ ಪರೋಕ್ಷವಾಗಿ ಲಂಚಕ್ಕೆ ಕೋರಿಕೆ ಇಡಲಾಗಿತ್ತು. ಅದನ್ನು ತಿರಸ್ಕರಿಸಿದ್ದ ಕಾರಣಕ್ಕೆ ತಮಗೆ ಅನ್ಯಾಯವಾಗಿದೆ ಮತ್ತು ಇಡೀ ನೇಮಕಾತಿಯಲ್ಲಿ ಅಕ್ರಮ ನಡೆದಿದೆ ಎಂದು ಡಾ. ಮೈತ್ರಿ ಆಗ ರಾಜ್ಯದ ಅಡ್ವೊಕೇಟ್ ಜನರಲ್‌ಗೆ (ಎ.ಜಿ) ಪತ್ರ ಬರೆದಿದ್ದರು. ವಿಷಯ ಮಾಧ್ಯಮಗಳಲ್ಲಿಯೂ ಚರ್ಚೆಯಾಗಿತ್ತು. ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯು ಎ.ಜಿ ಅಭಿಪ್ರಾಯದ ಮೇರೆಗೆ ವಿಧಾನಸೌಧ ಪೊಲೀಸ್ ಠಾಣೆಗೆ ದೂರು ನೀಡಿತ್ತು. ಇದೊಂದು ಗಂಭೀರ ಪ್ರಕರಣವಾದ ಕಾರಣ, ಸಿದ್ದರಾಮಯ್ಯ ನೇತೃತ್ವದ ಸರ್ಕಾರ ತನಿಖೆಯನ್ನು ಸಿಐಡಿಗೆ ವಹಿಸಿತ್ತು. ದಕ್ಷವಾಗಿ ತನಿಖೆ ಮಾಡಿದ ಸಿಐಡಿ, ನೇಮಕಾತಿಯಲ್ಲಿ ಅಕ್ರಮ, ಸ್ವಜನಪಕ್ಷಪಾತ, ಭ್ರಷ್ಟಾಚಾರ ನಡೆದಿದೆ ಎಂದು ಸರ್ಕಾರಕ್ಕೆ ಮಧ್ಯಂತರ ವರದಿ ಸಲ್ಲಿಸಿತು.

ADVERTISEMENT

ಆ ಮಧ್ಯಂತರ ವರದಿ ಹಾಗೂ ಇತರ ಮೂಲಗಳ ಆಧಾರದ ಮೇಲೆ 2013ರ ಉತ್ತರಾರ್ಧದಲ್ಲಿ ಈ ಆಕ್ರಮಗಳ ಬಗ್ಗೆ ಪ್ರಜಾವಾಣಿಯಲ್ಲಿ ‘ಕೆಪಿಎಸ್‌ಸಿ ಕರ್ಮಕಾಂಡ’ ಎನ್ನುವ ಹೆಸರಿನಲ್ಲಿ ಸರಣಿ ವರದಿಗಳು ಪ್ರಕಟವಾಗಿದ್ದವು. ವರದಿಗಳಲ್ಲಿ ಇದ್ದ ಮಾಹಿತಿ ಮತ್ತು ನಡೆದಿದ್ದ ಅಕ್ರಮಗಳ ವಿವರಣೆಯನ್ನು ನೋಡಿ ಇಡೀ ರಾಜ್ಯವೇ ಬೆಚ್ಚಿಬಿತ್ತು.

ಪ್ರಜಾವಾಣಿಯಲ್ಲಿ ಪ್ರಕಟವಾದ ವರದಿಗಳ ಆಧಾರದ ಮೇಲೆ ಈ ಲೇಖನದ ಲೇಖಕನು ಆಗ ಪದಾಧಿಕಾರಿಯಾಗಿದ್ದ ಲೋಕಸತ್ತಾ ಪಕ್ಷವು ಕೆಪಿಎಸ್‌ಸಿ ಅಕ್ರಮಗಳ ವಿರುದ್ಧ ರಾಜ್ಯಾದ್ಯಂತ ದೊಡ್ಡಮಟ್ಟದಲ್ಲಿ ಧ್ವನಿಯೆತ್ತಿತ್ತು. ಕೆಪಿಎಸ್‌ಸಿ ಮುಂದೆ ಧರಣಿ, ವಿವಿಧೆಡೆ ಪತ್ರಿಕಾಗೋಷ್ಠಿಗಳು, ಸತ್ಯಾಗ್ರಹ, ರಾಜ್ಯಪಾಲರ ಭೇಟಿ, ‘ಸರ್ಕಾರಿ ನೌಕರಿ ಮಾರಾಟಕ್ಕಿದೆ’ ಎನ್ನುವ ಬ್ಯಾನರ್‌ಗಳನ್ನು ವಿಧಾನಸೌಧದ ಸುತ್ತಮುತ್ತ ಪ್ರದರ್ಶಿಸಿದ್ದು ಸೇರಿದಂತೆ ಹಲವು ಹೋರಾಟಗಳ ಮೂಲಕ ವಿಚಾರವನ್ನು ಇನ್ನಷ್ಟು ಕಾಲ ಜೀವಂತ ಇಟ್ಟಿತ್ತು.

ಅಂತಿಮವಾಗಿ, ಜನಾಭಿಪ್ರಾಯಕ್ಕೆ ಮಣಿದ ಸರ್ಕಾರ 2014ರ ಆಗಸ್ಟ್ 8ರಂದು ನೇಮಕಾತಿ ಅಧಿಸೂಚನೆಯನ್ನು ಹಿಂಪಡೆಯಿತು. ಆಯ್ಕೆಪಟ್ಟಿಯಲ್ಲಿದ್ದ ಕೆಲವು ಅಭ್ಯರ್ಥಿಗಳು ಇದನ್ನು ಪ್ರಶ್ನಿಸಿ ಕರ್ನಾಟಕ ಆಡಳಿತ ನ್ಯಾಯಮಂಡಳಿ (ಕೆಎಟಿ)ಮೆಟ್ಟಿಲೇರಿದ್ದರು. ಅಧಿಸೂಚನೆ ರದ್ದುಗೊಳಿಸಿದ್ದ ಸರ್ಕಾರದ ಆದೇಶವನ್ನು ವಜಾಗೊಳಿಸಿದ ಕೆಎಟಿ, ಅರ್ಹ ಅಭ್ಯರ್ಥಿಗಳಿಗೆ ನೇಮಕ ಪತ್ರ ನೀಡುವಂತೆ 2016ರ ಅಕ್ಟೋಬರ್ 19ರಂದು ಆದೇಶಿಸಿತ್ತು. ಕೆಎಟಿ ತೀರ್ಪು ಪ್ರಶ್ನಿಸಿ ವಂಚಿತ ಅಭ್ಯರ್ಥಿಗಳು ಹೈಕೋರ್ಟ್‌ಗೆ ಹೋದರು. ಕೆಎಟಿ ಆದೇಶವನ್ನು ಹೈಕೋರ್ಟ್‌ ರದ್ದುಪಡಿಸಿತ್ತು. ಸುಪ್ರೀಂ ಕೋರ್ಟ್‌ ಸಹ ಹೈಕೋರ್ಟ್ ಆದೇಶವನ್ನು ಎತ್ತಿಹಿಡಿದಿತ್ತು.

ಆದರೆ, ದೋಷಾರೋಪ ಪಟ್ಟಿಯಲ್ಲಿ ಹೆಸರಿಸಲ್ಪಟ್ಟಿದ್ದ ಕೆಪಿಎಸ್‌ಸಿಯ ಆಗಿನ ಅಧ್ಯಕ್ಷ ಗೋನಾಳ್ ಭೀಮಪ್ಪ ಮತ್ತು ಇತರ ಸದಸ್ಯರನ್ನು ರಕ್ಷಿಸುವ ಕೆಲಸ ಎಲ್ಲಾ ಸಾಕ್ಷ್ಯಾಧಾರಗಳ ನಡುವೆಯೂ ಜೋರಾಗಿ ನಡೆಯಿತು. ಗೋನಾಳ್ ಭೀಮಪ್ಪನವರು ಸಿದ್ದರಾಮಯ್ಯ ನೇತೃತ್ವದ ಸರ್ಕಾರದಲ್ಲಿ ಪ್ರಭಾವಿ ಮಂತ್ರಿಯಾಗಿದ್ದ ಎಚ್. ಆಂಜನೇಯರ ಹತ್ತಿರದ ಸಂಬಂಧಿ. ಸಂಬಂಧಿಯನ್ನು ರಕ್ಷಿಸುವುದು ತಮ್ಮ ಜವಾಬ್ದಾರಿ ಎಂದು ಸಚಿವರು ಸಾರ್ವಜನಿಕವಾಗಿಯೇ ಹೇಳಿದ್ದರು. ತತ್ಪರಿಣಾಮವಾಗಿ ದೋಷಾರೋಪ ಪಟ್ಟಿಯಲ್ಲಿ ಹೆಸರಿಸಲ್ಪಟ್ಟಿದ್ದ ಕೆಪಿಎಸ್‌ಸಿ ಅಧ್ಯಕ್ಷರು ಮತ್ತು ಇತರರ ವಿಚಾರಣೆ ಆರಂಭವಾಗಲೇ ಇಲ್ಲ. ಅವರ ವಿಚಾರಣೆಗೆ ಸಕ್ಷಮ ಪ್ರಾಧಿಕಾರದ ಅನುಮತಿ ಬೇಕಿದೆ ಎನ್ನುವ ಸಬೂಬನ್ನು ಮುಂದೆ ಮಾಡುತ್ತಾ, ಏಳು ವರ್ಷಗಳಿಂದ ಸಿದ್ದರಾಮಯ್ಯನವರ ನೇತೃತ್ವದ ಸರ್ಕಾರವೂ ಸೇರಿದಂತೆ ಕುಮಾರಸ್ವಾಮಿ ಮತ್ತು ಯಡಿಯೂರಪ್ಪ ಸರ್ಕಾರಗಳು ಆ ತಾಂತ್ರಿಕ ಅಗತ್ಯವನ್ನು ಪೂರೈಸುವ ಕೆಲಸಕ್ಕೆ ಮುಂದಾಗಲೇ ಇಲ್ಲ.

ಇದಿಷ್ಟೇ ಅಲ್ಲ, 2011ರ ನೇಮಕಾತಿ ಪಟ್ಟಿಯಲ್ಲಿದ್ದ ಅನರ್ಹರೂ ಸೇರಿದಂತೆ ಎಲ್ಲಾ ಅಭ್ಯರ್ಥಿಗಳಿಗೆ ನೇಮಕಾತಿ ಪತ್ರ ನೀಡಲು ಇತ್ತೀಚಿನ ದಿನಗಳಲ್ಲಿ ಬಿರುಸಿನ ಚಟುವಟಿಕೆ ನಡೆದಿದೆ. ಈ ತರಹದ ತೀರ್ಮಾನಕ್ಕೆ ಭ್ರಷ್ಟಾಚಾರವೊಂದು ಬಿಟ್ಟರೆ ಇನ್ಯಾವುದೇ ಕಾರಣ ಇರಲು ಸಾಧ್ಯವೇ ಇಲ್ಲ.

ಸಿಐಡಿ ವರದಿಯಲ್ಲಿ ದಾಖಲಾಗಿರುವಂತೆ ಆ ಸಾಲಿನ ಅನೇಕ ಅಭ್ಯರ್ಥಿಗಳು ಎಸಿ ಹುದ್ದೆಗೆ ₹1.5 ಕೋಟಿ, ಡಿವೈಎಸ್ಪಿ ಹುದ್ದೆಗೆ ₹80 ಲಕ್ಷ, ತಹಶೀಲ್ದಾರ್ ಹುದ್ದೆಗೆ ₹60 ಲಕ್ಷ ಲಂಚ ನೀಡಿದ್ದರು. ಪ್ರಾಮಾಣಿಕವಾಗಿ ಆಯ್ಕೆಯಾಗಿದ್ದ ಕೆಲವು ಅಭ್ಯರ್ಥಿಗಳ ನೈತಿಕ ಒತ್ತಡವೂ ಇದರಲ್ಲಿ ಅನೈತಿಕವಾಗಿ ಸೇರಿಕೊಂಡು, ಈಗಿನ ಭ್ರಷ್ಟ ಸರ್ಕಾರ ಅಕ್ರಮಗಳನ್ನು ಸಕ್ರಮ ಮಾಡಲು ಮುಂದಾಗಿದೆ ಎಂದು ನಿಸ್ಸಂಶಯವಾಗಿ ಹೇಳಬಹುದು

ಸರ್ಕಾರದ ಇತ್ತೀಚಿನ ಅಕ್ರಮಪರ ನಡೆಗೆ, ವಿರೋಧಪಕ್ಷಗಳಾಗಿರುವ ಕಾಂಗ್ರೆಸ್ ಮತ್ತು ಜೆಡಿಎಸ್‌ನ ಕೆಲವು ನಾಯಕರ ಬೆಂಬಲವೂ ಇದೆ. ಕೆಪಿಎಸ್‌ಸಿಗೆ‌ ಯಾವಾಗಲೂ ಪ್ರಭಾವಶಾಲಿಗಳೇ ನೇಮಕವಾಗುತ್ತಾರೆ. ಗೋನಾಳ್ ಭೀಮಪ್ಪ ಕೆಪಿಎಸ್‌ಸಿಗೆ‌ ನೇಮಕವಾಗಿದ್ದು ಎಚ್.ಡಿ.ಕುಮಾರಸ್ವಾಮಿ ಮೊದಲ ಬಾರಿಗೆ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ. ಜೊತೆಗೆ ಅವರ ಕುಟುಂಬ ಸದಸ್ಯರಿಗೆ ಹತ್ತಿರವಿದ್ದವರು ಎನ್ನುವ ಆರೋಪವೂ ಇದೆ. ಹಗರಣದ ಮತ್ತೊಬ್ಬ ಪ್ರಮುಖ ಆರೋಪಿ ಮಂಗಳಾ ಶ್ರೀಧರ್ ಮೊದಲು ಬಿಜೆಪಿಯಲ್ಲಿ ಸಕ್ರಿಯವಾಗಿದ್ದವರು ಮತ್ತು ಬಿಜೆಪಿ ಕೋಟಾದಲ್ಲಿ ಸದಸ್ಯರಾದವರು.

ಈ ಸೂಕ್ಷ್ಮಗಳ ಹಿನ್ನೆಲೆಯಲ್ಲಿ ನೋಡಿದಾಗ, 2011ರ ಅಕ್ರಮ ನೇಮಕಾತಿ ಪಟ್ಟಿಯನ್ನು ಅನುಮೋದಿಸಲು ಮತ್ತು ಆರೋಪಿತ ಕೆಪಿಎಸ್‌ಸಿ ಅಧ್ಯಕ್ಷ ಹಾಗೂ ಸದಸ್ಯರ ಮೇಲೆ ಕಾನೂನು ಕ್ರಮಕ್ಕೆ ಶಿಫಾರಸು ಮಾಡದೇ ಇರುವುದರಲ್ಲಿ ಸದ್ಯ ಆಡಳಿತ ನಡೆಸುತ್ತಿರುವವರಿಗೆ ಹಣಕಾಸಿನ ಲಾಭವಿದೆ, ವಿರೋಧಪಕ್ಷದ ನಾಯಕರ ಬೆಂಬಲವಿದೆ ಮತ್ತು ಕಣ್ಣಿಗೆ ಕಾಣಿಸದ ಹಲವು ಕಡೆಗಳಿಂದ ಒತ್ತಡವೂ ಇದೆ ಎಂದು ಖಚಿತವಾಗಿ ಹೇಳಬಹುದು.

ಈಗಲೂ ಕಾಲ ಮಿಂಚಿಲ್ಲ. ಸರ್ಕಾರ ಯಾವುದೇ ಕಾರಣಕ್ಕೂ 2011ರ ನೇಮಕಾತಿ ರದ್ದತಿ ತೀರ್ಮಾನದ ವಿರುದ್ಧವಾಗಿ ಹೋಗಬಾರದು. ಹಾಗೆಯೇ ದೋಷಾರೋಪ ಪಟ್ಟಿಯಲ್ಲಿರುವ ಆರೋಪಿಗಳನ್ನು ವಿಚಾರಣೆಗೆ ಒಳಪಡಿಸಲು ಸೂಕ್ತ ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ಈ ಎರಡೂ ವಿಷಯಗಳ ಮೇಲೆ ನ್ಯಾಯಾಂಗ ಹೋರಾಟ ಮಾಡುವುದು ನಮ್ಮಂತಹವರಿಗೆ ಅನಿವಾರ್ಯವಾಗುತ್ತದೆ. ಈಗಾಗಲೇ ಆ ದಿಕ್ಕಿನಲ್ಲಿ ಕೆಲಸಗಳು ಪುನರಾರಂಭವಾಗಿವೆ. ಅಕ್ರಮಗಳನ್ನು ಸಕ್ರಮ ಮಾಡುವ ಸರ್ಕಾರಕ್ಕೆ ಮುಂದಿನ ದಿನಗಳಲ್ಲಿ ಮುಖಭಂಗ ತಪ್ಪಿದ್ದಲ್ಲ.

ಲೇಖಕ: ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.