ADVERTISEMENT

ಚರ್ಚೆ: ಭಾಷಾ ತೊಡಕಿನ ಬಿಸಿತುಪ್ಪ

ಕ್ಲಿಷ್ಟ ವಿಜ್ಞಾನದ ಕಬ್ಬಿಣದ ಕಡಲೆಯನ್ನು ಭಾಷಾ ತೊಡಕಿನ ಬಿಸಿತುಪ್ಪದೊಂದಿಗೆ ಹುರಿದು, ಸುಲಭವಾಗಿ ಮೆಲ್ಲಬಲ್ಲ ಹುರಿಗಡಲೆಯಾಗಿಸಬೇಕಾಗಿದೆ

ಪ್ರಜಾವಾಣಿ ವಿಶೇಷ
Published 15 ಸೆಪ್ಟೆಂಬರ್ 2020, 1:21 IST
Last Updated 15 ಸೆಪ್ಟೆಂಬರ್ 2020, 1:21 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ಪದವಿಪೂರ್ವ ಶಿಕ್ಷಣ ಇಲಾಖೆಯು ಕನ್ನಡದಲ್ಲಿ ಹೊರತಂದಿರುವ ಪಿ.ಯು. ವಿಜ್ಞಾನ ಪಠ್ಯಪುಸ್ತಕಗಳ ಪಾರಿಭಾಷಿಕ ಪದ ಬಳಕೆಯ ಕುರಿತಂತೆ ಟಿ.ಆರ್.ಅನಂತರಾಮು ಅವರ ವಿಶ್ಲೇಷಣೆ (ಪ್ರ.ವಾ., ಸೆ. 12) ಸಮಯೋಚಿತವಾಗಿದೆ. ಭಾಷಾ ತೊಡಕಿನ ಬಿಸಿತುಪ್ಪ
ದೊಂದಿಗೆ ಕ್ಲಿಷ್ಟ ವಿಜ್ಞಾನದ ಕಬ್ಬಿಣದ ಕಡಲೆಯನ್ನು ಹುರಿದು ಸುಲಭವಾಗಿ ಮೆಲ್ಲಬಲ್ಲ ಹುರಿಗಡಲೆಯಾಗಿಸಬೇಕು. ಅದು ಸಾಧ್ಯವಾಗಬೇಕೆಂದರೆ ಕನ್ನಡದಲ್ಲಿಯೇ ವಿಜ್ಞಾನವನ್ನು ಬೋಧಿಸಲು ಅನುಕೂಲಕರವಾದ ಪದಕೋಶಗಳು ಸುಲಭ ಲಭ್ಯವಾಗಬೇಕು. ಅವುಗಳನ್ನು ಸಮರ್ಥವಾಗಿ ಬಳಸಿಕೊಂಡರೆ, ಎಸ್‌ಎಸ್‌ಎಲ್‌ಸಿಯ ತನಕ ಕನ್ನಡದಲ್ಲೇ ವಿಜ್ಞಾನ ಕಲಿತವರಿಗೆ ಅದರಲ್ಲೂ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ವಿಜ್ಞಾನ ಆಪ್ತವಾಗುತ್ತದೆ. ಬೋಧಕರೂ ಈ ದಿಸೆಯಲ್ಲಿ ತೀವ್ರ ಗಮನಹರಿಸಬೇಕು.

ಅನಂತರಾಮು ಅವರು ಉಲ್ಲೇಖಿಸಿರುವ ಪದಕೋಶಗಳ ಜತೆಗೆ, ‘ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ’ಯು ಬಾಹ್ಯಾಕಾಶ ವಿಜ್ಞಾನಿ ಡಾ. ಎಸ್.ಕೆ.ಶಿವಕುಮಾರ್ ಅವರ ಅಧ್ಯಕ್ಷತೆಯ ಅವಧಿಯಲ್ಲಿ ‘ಇಂಗ್ಲಿಷ್-ಕನ್ನಡ ವಿಜ್ಞಾನ ಪದಕೋಶ’ವೊಂದನ್ನು 2018ರಲ್ಲಿ ಪ್ರಕಟಿಸಿದೆ. ಡಾ. ಪಿ.ಎಸ್.ಶಂಕರ್ ಅವರ ಸಂಪಾದಕತ್ವದಲ್ಲಿ ಈ ಪದಕೋಶವನ್ನು ಪಿ.ಯು. ವಿದ್ಯಾರ್ಥಿಗಳನ್ನು ಗಮನದಲ್ಲಿ ಇರಿಸಿಕೊಂಡೇ ರೂಪಿಸಲಾಗಿದೆ. ಪಿ.ಯು. ಪಠ್ಯದಲ್ಲಿ ಬಳಕೆಯಾಗುವ ಸುಮಾರು 6,000ಕ್ಕೂ ಹೆಚ್ಚು ಇಂಗ್ಲಿಷ್ ಪದಗಳಿಗೆ ಪಾರಿಭಾಷಿಕ ಪದಗಳನ್ನು ಸೂಚಿಸಲಾಗಿದೆ. ಇಡೀ ಪದಕೋಶವನ್ನು ಪಿ.ಯು. ಬೋಧಕವರ್ಗದವರಿಂದಲೇ ಪರಾಮರ್ಶಿಸಿ
ಪ್ರಕಟಿಸಲಾಗಿದೆ.

ಶಾಲಾ-ಕಾಲೇಜು ಗ್ರಂಥಾಲಯಗಳನ್ನು ಮಾತ್ರ ಮುಟ್ಟಿರುವ ಈ ಪದಕೋಶವು ವಿದ್ಯಾರ್ಥಿ ಹಾಗೂ ಬೋಧಕವರ್ಗದವರನ್ನು ಇನ್ನೂ ತಲುಪಿಲ್ಲ. ಸಾಮಾನ್ಯ ಜನರಿಗೆ ವಿಜ್ಞಾನ-ತಂತ್ರಜ್ಞಾನವನ್ನು ತಲುಪಿಸುವ ಧ್ಯೇಯೋದ್ದೇಶದ ಅಕಾಡೆಮಿಯು ಈ ಪದಕೋಶವನ್ನು ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳ ಕೈಗೆಟಕುವಂತೆ ಮಾಡಬೇಕು. ಈ ಹಿಂದೆ ಕನ್ನಡ ಸಾಹಿತ್ಯ ಪರಿಷತ್ತು ‘ರತ್ನಕೋಶ’ವನ್ನು ಸರ್ಕಾರದ ವಿಶೇಷ ಅನುದಾನದಿಂದ ಕೇವಲ ಎರಡು ರೂಪಾಯಿಗೆ ಮಾರಾಟ ಮಾಡಿ ಲಕ್ಷಗಟ್ಟಲೆ ವಿದ್ಯಾರ್ಥಿ
ಗಳಿಗೆ ತಲುಪಿಸಿತ್ತು. ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯು ಇದೇ ಮಾದರಿಯಲ್ಲಿ ತನ್ನ ಪದಕೋಶವನ್ನು ವಿದ್ಯಾರ್ಥಿಗಳಿಗೆ ಮುಟ್ಟಿಸುವ ಕೆಲಸ ಮಾಡಬೇಕು.

ADVERTISEMENT

ಸುಧೀಂದ್ರ ಹಾಲ್ದೊಡ್ಡೇರಿ, ಬೆಂಗಳೂರು

***

ಕಳವಳಕಾರಿ ಧೋರಣೆ

ವಿಜ್ಞಾನ ಪಠ್ಯಪುಸ್ತಕಗಳ ಅನುವಾದದ ಕುರಿತು ಅನೇಕ ಆಕ್ಷೇಪಗಳು ಕೇಳಿಬರುತ್ತಲೇ ಇದ್ದರೂ ಪಠ್ಯಪುಸ್ತಕಗಳಲ್ಲಿ ಕೂಡ ಅದರ ನಿಖರತೆಯ ಬಗ್ಗೆ ಆಸಕ್ತಿ ತೋರಿಸದೇ ಇರುವುದನ್ನು ಲೇಖಕರು ತೋರಿಸಿಕೊಟ್ಟಿದ್ದಾರೆ. ಪಠ್ಯವನ್ನು ಹೇಗೋ ಮುಗಿಸಿದರಾಯಿತು ಎಂಬ ಈ ಧೋರಣೆ ನಿಜವಾಗಿಯೂ ಕಳವಳಕಾರಿ. ಏಕೆಂದರೆ ಈ ಪಠ್ಯಗಳನ್ನು ಓದಿ, ಪರೀಕ್ಷೆ ಪಾಸು ಮಾಡುವ ವಿದ್ಯಾರ್ಥಿಗಳೇ ನಾಳಿನ ಶಿಕ್ಷಕರು. ಅವರಿಂದ ಎಂತಹ ಗುಣಮಟ್ಟವನ್ನು ನಿರೀಕ್ಷಿಸೋಣ? ಇನ್ನು ಈ ವಿದ್ಯಾರ್ಥಿಗಳು ರಾಷ್ಟ್ರ ಮಟ್ಟದ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಬಲ್ಲರೇ? ನಿಜವಾಗಿ ಓದಿನ ಆಸಕ್ತಿ ಇರುವ ಮಕ್ಕಳಿಗೆ ಇದರಿಂದ
ಅನ್ಯಾಯವಾಗುವುದಲ್ಲವೇ?

ಬಿ.ಎಸ್‌.ಶೈಲಜಾ, ಬೆಂಗಳೂರು

***

ಶಿಕ್ಷಕರನ್ನು ಗುರುತಿಸಿ

ಕನ್ನಡದ ವಿಜ್ಞಾನ ಪಠ್ಯಪುಸ್ತಕಗಳಲ್ಲಿ ಅನುವಾದ ದೋಷಗಳ ಬಗೆಗಿನ ಮಾಹಿತಿ ಸ್ವಾಗತಾರ್ಹವಾದರೂ
ಇಲ್ಲಿನ ಕೆಲವು ಪದಗಳ ಬಳಕೆ ಕೂಡ ಆಕ್ಷೇಪಾರ್ಹವೇನಲ್ಲ. ಉದಾಹರಣೆಗೆ ‘ಕರಗುವುದು’ ಎಂಬುದು ಆಡುನುಡಿಯಾದರೂ ವಿಷಯ ಗ್ರಹಿಕೆಯ ದೃಷ್ಟಿಯಲ್ಲಿ ಈ ಪದವೇ ಹೆಚ್ಚು ಪ್ರಯೋಜಕ. ಇದೇ ಅರ್ಥ ಕೊಡುವ ‘ವಿಲೀನ’ ಎಂಬ ಪದ ‘ಶಿಷ್ಟಭಾಷೆ’ಯ ಸ್ವರೂಪವಷ್ಟೇ ವಿನಾ ವಿಷಯ ಗ್ರಹಿಕೆಯ ದೃಷ್ಟಿಯಲ್ಲಿ ಯಾವುದೇ ಮೌಲ್ಯವರ್ಧನೆ ತೋರುವುದಿಲ್ಲ. ಇನ್ನು ಸಿಂಥೆಟಿಕ್, ಟೆಂಪರೇಚರ್, ಸ್ಪೆಕ್ಟ್ರಮ್... ಹೀಗೆ ಮೂಲ ಭಾಷೆಯಲ್ಲಿನ ವಿಜ್ಞಾನ ಪದಗಳನ್ನು ಅನುವಾದ ಮಾಡದೆ ಹಾಗೆಯೇ ಮುಂದುವರಿಸಿದರೆ ತರಗತಿಗಳಲ್ಲಿ
ಇಂಗ್ಲಿಷ್‌ನಲ್ಲಿ ಉಪನ್ಯಾಸ ಕೇಳುವಾಗ ಈ ಪದಗಳು ಸಹಜವಾಗಿ ಹೆಚ್ಚು ಹೆಚ್ಚು ಪರಿಚಿತವಾಗುತ್ತವೆ.

ಇವೆಲ್ಲಕ್ಕೂ ಮಿಗಿಲಾಗಿ, ಇಲಾಖೆಯ ಆಲೋಚನೆಯಂತೆ ‘ಕನ್ನಡಕ್ಕೆ ಅನುವಾದಗೊಂಡ ವಿಜ್ಞಾನದ ಪುಸ್ತಕಗಳು ಪರಾಮರ್ಶೆಗೆ’ ಮಾತ್ರವೇ ಇರುವಾಗ ಎಷ್ಟು ವಿದ್ಯಾರ್ಥಿಗಳು ಈ ಪುಸ್ತಕಗಳನ್ನುಎರವಲು ಪಡೆದು ಪ್ರಯೋಜನ ಪಡೆಯುತ್ತಾರೆ ಎಂದು ತಿಳಿಯುವುದು ಸೂಕ್ತ. ಈ ರೀತಿಯ ಸಮೀಕ್ಷೆಯಿಂದ ಇಲಾಖೆಯ ಮುಂದಿನ ಹೆಜ್ಜೆಗೆ ಉಪಯೋಗವಾಗಬಹುದು.

ಕನ್ನಡದಲ್ಲಿ ವಿಜ್ಞಾನ ಕಲಿಯುವ ವಾತಾವರಣ ಸೃಷ್ಟಿಸಲು ನಾವಿನ್ನೂ ಬಹಳಷ್ಟು ಸಜ್ಜುಗೊಳ್ಳಬೇಕು. ಆದ್ದರಿಂದ ಕಾಲೇಜು ಶಿಕ್ಷಣದಲ್ಲಿ ಇಂಗ್ಲಿಷ್ ಹೊರತಾಗಿ ಯಾವುದೇ ಭಾರತೀಯ ಭಾಷೆ ಕೇವಲ ಭಾವನಾತ್ಮಕವೇ ಹೊರತು ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಲ್ಲಿ ಇದು ವ್ಯರ್ಥ ಪ್ರಯತ್ನವೇ ಸರಿ. ಈ ದಿಸೆಯಲ್ಲಿ ವಿಜ್ಞಾನವನ್ನು ಸರಳವಾದ ಇಂಗ್ಲಿಷ್ ಭಾಷೆಯಲ್ಲಿ ತಿಳಿಸುವ ಮತ್ತು ಕನ್ನಡ ಭಾಷೆಯನ್ನು ಸಮರ್ಥವಾಗಿ ಬಳಸಲು ಬರುವ ಉತ್ಸಾಹಿ ಶಿಕ್ಷಕರನ್ನು ಗುರುತಿಸುವ ಕೆಲಸ ನಡೆಯಲಿ.

ಡಾ. ಜಿ.ಬೈರೇಗೌಡ, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.