ADVERTISEMENT

ಸಂವಾದ: ಕೇರಳ ಸಚಿವ ಸಂಪುಟದಿಂದ ಶೈಲಜಾ ಟೀಚರ್‌ ಕೈಬಿಟ್ಟಿದ್ದು ಸರಿಯೆ?

ಪ್ರಜಾವಾಣಿ ವಿಶೇಷ
Published 22 ಮೇ 2021, 19:45 IST
Last Updated 22 ಮೇ 2021, 19:45 IST
ಶೈಲಜಾ ಟೀಚರ್‌
ಶೈಲಜಾ ಟೀಚರ್‌   

ಬೆಂಗಳೂರು: ಕೇರಳದಲ್ಲಿ ಪಿಣರಾಯಿ ವಿಜಯನ್‌ ನೇತೃತ್ವದ ಎಡ ಪ್ರಜಾಸತ್ತಾತ್ಮಕ ರಂಗ (ಎಲ್‌ಡಿಎಫ್‌) ಎರಡನೇ ಬಾರಿಗೆ ಅಧಿಕಾರಕ್ಕೆ ಬಂದಿದೆ. ವಿಜಯನ್‌ ಹೊರತಾಗಿ ಎಡ ಪಕ್ಷಗಳಲ್ಲಿನ ಎಲ್ಲ ಸಚಿವರನ್ನೂ ಈ ಬಾರಿ ಕೈಬಿಡಲಾಗಿದೆ. ಕೋವಿಡ್‌ ನಿಯಂತ್ರಣ, ಚಿಕಿತ್ಸೆ ಮತ್ತು ಆರೋಗ್ಯ ವ್ಯವಸ್ಥೆಯ ಸುಧಾರಣೆಯಲ್ಲಿ ಮೊದಲ ಕಳೆದ ಅವಧಿಯಲ್ಲಿ ಗಣನೀಯ ಕೆಲಸ ಮಾಡಿದ್ದ ಅಲ್ಲಿನ ಆರೋಗ್ಯ ಸಚಿವೆ ಶೈಲಜಾ ಟೀಚರ್‌ ಕುರಿತು ಜಗತ್ತಿನ ಮೂಲೆ ಮೂಲೆಗಳಿಂದಲೂ ಮೆಚ್ಚುಗೆ ವ್ಯಕ್ತವಾಗಿತ್ತು. ಈ ಬಾರಿ ಅವರನ್ನು ಸಂಪುಟದಿಂದ ಹೊರಗಿಟ್ಟಿರುವುದು ಚರ್ಚೆಗೆ ಗ್ರಾಸವಾಗಿದೆ.

ಇದೇ ಬೆಳವಣಿಗೆ ಕುರಿತು ‘ಸಚಿವ ಸಂಪುಟದಿಂದ ಶೈಲಜಾ ಟೀಚರ್‌ ಅವರನ್ನು ಕೈಬಿಟ್ಟಿದ್ದು ಸರಿಯೆ’ ಎಂಬ ವಿಷಯದಲ್ಲಿ ‘ಪ್ರಜಾವಾಣಿ’ ಶನಿವಾರ ನಡೆಸಿದ ಫೇಸ್‌ ಬುಕ್‌ ಸಂವಾದದಲ್ಲಿ ಮೂವರು ಅತಿಥಿಗಳು ಹಂಚಿಕೊಂಡಿರುವ ಅಭಿಪ್ರಾಯದ ಸಂಕ್ಷಿಪ್ತ ರೂಪ ಇಲ್ಲಿದೆ.

‘ಚುನಾವಣೆಗೂ ಮೊದಲೇ ಆದ ನಿರ್ಧಾರ’

ADVERTISEMENT

ಶೈಲಜಾ ಟೀಚರ್‌ ಒಬ್ಬರನ್ನೇ ಸಂಪುಟದಿಂದ ಕೈಬಿಟ್ಟಿಲ್ಲ. 17 ಜನರನ್ನು ಕೈಬಿಡಲಾಗಿದೆ. ಸಮರ್ಥವಾಗಿ ಹಣಕಾಸು, ಆಹಾರ ಖಾತೆಗಳನ್ನು ನಿಭಾಯಿಸಿದವರನ್ನೂ ಕೈಬಿಡಲಾಗಿದೆ. ಕೋವಿಡ್‌ ಎದುರಿಸಲು ಎಂಟರಿಂದ ಹತ್ತು ಸಚಿವರ ತಂಡ ಒಟ್ಟಾಗಿ ಕೆಲಸ ಮಾಡಿದೆ. ಈ ತಂಡದ ಹಿಂದೆ ವೈದ್ಯರು ಸೇರಿದಂತೆ ಹಲವರು ಇದ್ದರು. ಚುನಾವಣೆ ಆದ ಬಳಿಕ ಈ ತೀರ್ಮಾನ ಕೈಗೊಂಡಿಲ್ಲ. ಚುನಾವಣೆಗೂ ಮೊದಲೇ ಇದನ್ನು ಘೋಷಿಸಲಾಗಿತ್ತು. ವೈಯಕ್ತಿಕವಾಗಿ ಹೇಳಬೇಕಾದರೆ, ಇಂತಹದ್ದೊಂದು ಆಘಾತಕ್ಕೆ ನಾನು ತಯಾರಾಗಿದ್ದೆ.

ಜನಾಭಿಪ್ರಾಯ ಆಧರಿಸಿ ಅತ್ಯಂತ ಪ್ರಜಾಸತ್ತಾತ್ಮಕವಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಚುನಾವಣೆಯ ಹಂತದಲ್ಲೇ ಬದಲಾವಣೆಯ ನಿಲುವನ್ನು ಜನರು ಒಪ್ಪಿದ್ದಾರೆ. ಪಕ್ಷದ ಒಳಗಡೆ ಆ ನಿರ್ಣಯ ಕೈಗೊಂಡ ಸಿಪಿಎಂ ಕೇರಳ ರಾಜ್ಯ ಕಾರ್ಯದರ್ಶಿ ಮಂಡಳಿಯಲ್ಲಿ ಶೈಲಜಾ ಟೀಚರ್‌ ಕೂಡ ಭಾಗಿಯಾಗಿ, ತೀರ್ಮಾನವನ್ನು ಒಪ್ಪಿಕೊಂಡಿದ್ದಾರೆ. ಈಗ ಸಚಿವರಾಗಿರುವವರು ಸಚಿವರಾಗಿ ಮಾತ್ರ ಹೊಸಬರು. ಆದರೆ, ಸಾರ್ವಜನಿಕ ಜೀವನದಲ್ಲಿ ಹೆಚ್ಚು ಅನುಭವ ಹೊಂದಿರುವವರೇ ಆಗಿದ್ದಾರೆ.

ವಿಜಯನ್‌ ಅವರನ್ನೂ ಬದಲಾವಣೆ ಮಾಡಬಹುದಿತ್ತಲ್ಲ ಎಂಬ ಪ್ರಶ್ನೆ ಇರುವುದು ನಿಜ. ಅದನ್ನೂ ಮಾಡುವುದು ನಿಶ್ಚಿತ. ಆದರೆ, ಈಗ ಕ್ಲಿಷ್ಟಕರ ಪರಿಸ್ಥಿತಿಯಲ್ಲಿ ಕೇರಳ ಸರ್ಕಾರ ನಡೆಯುತ್ತಿದೆ. ಹೆಚ್ಚು ಸವಾಲುಗಳಿವೆ. ಶಬರಿಮಲೆ ವಿವಾದ, ಕೇಂದ್ರ ಸರ್ಕಾರವೇ ಮಾಡಿರುವ ಭ್ರಷ್ಟಾಚಾರದ ಆರೋಪ ಸೇರಿದಂತೆ ಸಂಕೀರ್ಣ ಸವಾಲುಗಳಿವೆ. ಅದನ್ನು ಎದುರಿಸಲು ಪಿಣರಾಯಿ ಅವರನ್ನು ಆಯ್ಕೆ ಮಾಡಲಾಗಿದೆ. ಇದು ಪಾಲಿಟ್‌ ಬ್ಯೂರೊ ತೀರ್ಮಾನ ಅಲ್ಲ. ಸಿಪಿಎಂ ರಾಜ್ಯ ಸಮಿತಿ ಕೈಗೊಂಡಿರುವ ತೀರ್ಮಾನ.

ಶೈಲಜಾ ಟೀಚರ್‌ ಅನುಭವ, ಸಾಧನೆ ಹೆಮ್ಮೆಯ ವಿಚಾರ. ಅದೇ ರೀತಿ ಗೌರ ಅಮ್ಮ ಮತ್ತು ಸುಶೀಲಾ ಗೋಪಾಲನ್‌ ಕೂಡ ಪಕ್ಷದಲ್ಲಿ ಪ್ರಮುಖರಾಗಿದ್ದರು. ಪಕ್ಷದ ಆಂತರಿಕ ಸಮಿತಿಗಳಲ್ಲಿ ಮಹಿಳಾ ಪ್ರಾತಿನಿಧ್ಯ ಹೆಚ್ಚಳಕ್ಕೆ 20 ವರ್ಷಗಳಿಂದ ಚರ್ಚೆ ನಡೆಯುತ್ತಿದೆ. ಮಹಿಳಾ ಮೀಸಲಾತಿ ಜಾರಿಗೆ ಬಂದರೆ ಮಾತ್ರ ಮಹಿಳೆಯರಿಗೆ ಸರಿಯಾದ ಪ್ರಾತಿನಿಧ್ಯ ಸಿಗಲು ಸಾಧ್ಯ.

– ಜಿ.ಎನ್‌. ನಾಗರಾಜ್‌, ಸಿಪಿಎಂ ರಾಜ್ಯ ಮಂಡಳಿ ಸದಸ್ಯರು

‘ಎಲ್ಲ ಪಕ್ಷಗಳಲ್ಲೂ ಸಾಮ್ಯತೆ ಕಾಣಿಸತೊಡಗಿದೆ’

ಬಿಜೆಪಿ ಮತ್ತು ಎಡ ಪಕ್ಷಗಳ ಕಾರ್ಯವಿಧಾನದಲ್ಲಿ ಸಾಮ್ಯತೆ ಇದೆ. ಅದಕ್ಕಾಗಿಯೇ ಇಬ್ಬರೂ ಈ ವಿಚಾರದಲ್ಲಿ ಒಂದೇ ರೀತಿ ಮಾತನಾಡುತ್ತಿದ್ದಾರೆ. ಕಮ್ಯುನಿಸ್ಟ್ ಪಕ್ಷವು ಇನ್ನೂನ ಹೆಚ್ಚಾಗಿ ಜನಪ್ರಿಯ ವಿಧಾನದಲ್ಲಿ ಕೆಲಸ ಮಾಡಲು ಆರಂಭಿಸಿದರೆ ಪ್ರಜಾಪ್ರಭುತ್ವ ಮತ್ತಷ್ಟು ಯಶಸ್ವಿಯಾಗುತ್ತಿತ್ತು. ಸಂಪುಟ ಹಳಬರು ಮತ್ತು ಹೊಸಬರ ಮಿಶ್ರಣ ಆಗಿರಬೇಕು. ಪಿಣರಾಯಿ ವಿಜಯನ್‌ ಮೇಲೆ ಅತಿಯಾದ ಅವಲಂಬನೆ ಕಾಣುತ್ತಿದೆ.

ಲಿಂಗ ಸಮಾನತೆಯ ವಿಚಾರದಲ್ಲಿ ರಾಜಕೀಯ ಪಕ್ಷಗಳು ಸರಿಯಾಗಿ ಆಲೋಚಿಸುತ್ತಿಲ್ಲ. ಎಲ್ಲ ಪ್ರಧಾನ ರಾಜಕೀಯ ಪಕ್ಷಗಳೂ ಮಹಿಳಾ ನಾಯಕತ್ವವನ್ನು ಬೆಂಬಲಿಸುವ ವಿಚಾರದಲ್ಲಿ ಪೂರಕವಾಗಿಲ್ಲ. ಸ್ವಂತ ವರ್ಚಸ್ಸಿನ ಆಧಾರದಲ್ಲಿ ಮಹಿಳಾ ನಾಯಕತ್ವ ಬೆಳೆಯುತ್ತಿದೆ ಅನಿಸಿದಾಗ ತಡೆ ಹಾಕಲಾಗುತ್ತಿದೆ. ಬಿಜೆಪಿಯಲ್ಲಿ ಉಮಾಭಾರತಿ ಅವರಿಗೂ ಇದೇ ರೀತಿ ಮಾಡಲಾಯಿತು. ಎಡ ಪಕ್ಷಗಳಲ್ಲಿ ಗೌರಿ ಅಮ್ಮ, ಸುಶೀಲಾ ಗೋಪಾಲನ್‌ ಕೂಡ ಅದೇ ರೀತಿ ಹಿನ್ನಡೆ ಅನುಭವಿಸಿದರು. ಕಾಂಗ್ರೆಸ್‌, ಜೆಡಿಎಸ್‌ ಸೇರಿದಂತೆ ಯಾವ ಪಕ್ಷವೂ ಇದಕ್ಕೆ ಹೊರತಾಗಿಲ್ಲ. ಮಹಿಳೆಯರು ನಾಯಕತ್ವದ ವಿಚಾರದಲ್ಲಿ ಎರಡನೆ ಸಾಲಿನಲ್ಲಿ ಇರುವವರು ಎಂಬ ಭಾವನೆ ಇದೆ.

ಕೇರಳದ ಈಗಿನ ಸಂಪುಟದಲ್ಲಿ ಕೂಡ ಜಾತಿ ವಿಚಾರದಲ್ಲಿ ಸಮಾನತೆ, ಪ್ರಾತಿನಿಧ್ಯ ಸರಿಯಾಗಿಲ್ಲ.

ಆರ್‌ಎಸ್‌ಎಸ್‌ನಲ್ಲಿ ಮಹಿಳಾ ಪ್ರಾತಿನಿಧ್ಯ ಇಲ್ಲ ಎಂದು ಪ್ರಶ್ನಿಸುವುದು ಕಷ್ಟ. ಅದು ಪುರುಷ ಪ್ರಧಾನ ವ್ಯವಸ್ಥೆ ಎಂಬುದು ಗೊತ್ತಿದೆ. ಎಡ ಪಕ್ಷಗಳಲ್ಲಿ ಆ ಪ್ರಶ್ನೆ ಎತ್ತಬಹುದು. ಇಂತಹ ಪ್ರಶ್ನೆಗಳಿಗೆ ಉತ್ತರ ನೀಡದಿದ್ದರೆ ಎಡ ಪಕ್ಷಗಳೂ ಯಥಾಸ್ಥಿತಿವಾದದ ಅನುಸರಣೆ ಮಾಡುತ್ತಿವೆಯೇ ಎಂಬ ಅನುಮಾನ ಮೂಡುತ್ತದೆ.

ಮಹಿಳಾ ಮೀಸಲಾತಿ ಮಸೂದೆಯನ್ನು ತಕ್ಷಣ ಜಾರಿಗೊಳಿಸುವಂತೆ ಎಲ್ಲ ರಾಜಕೀಯ ಪಕ್ಷಗಳನ್ನೂ ಆಗ್ರಹಿಸಬೇಕಿದೆ. ಲಿಂಗ ಸಮಾನತೆ, ಜಾತಿ ಸಮಾನತೆ ಮತ್ತು ಧರ್ಮ ಸಮಾನತೆಯ ವಿಚಾರದಲ್ಲಿ ಎಲ್ಲ ರಾಜಕೀಯ ಪಕ್ಷಗಳೂ ಮುಕ್ತವಾಗಿ ಚಿಂತಿಸಬೇಕು, ಕಾರ್ಯರೂಪಕ್ಕೆ ತರಬೇಕು. ಆಗ ಮಾತ್ರ ರಾಜಕೀಯದಲ್ಲಿ ಬದಲಾವಣೆ ಸಾಧ್ಯ ಆಗಬಹುದು.

– ಡಾ. ಬಂಜಗೆರೆ ಜಯಪ್ರಕಾಶ್, ಲೇಖಕ ಮತ್ತು ಚಿಂತಕ

‘ತಪ್ಪು ನಡೆ ಎನ್ನಲಾಗದು’

ಶೈಲಜಾ ಟೀಚರ್‌ ಸಾಮರ್ಥ್ಯದ ಬಗ್ಗೆ ಯಾರಿಗೂ ಅನುಮಾನ ಇಲ್ಲ. ಆದರೆ ಸಿಪಿಎಂ ಕೇಡರ್‌ ಆಧಾರಿತ ಪಕ್ಷ. ಸತತ ಎರಡನೇ ಬಾರಿಗೆ ಅಧಿಕಾರಕ್ಕೆ ಬಂದಿರುವ ಪಿಣರಾಯಿ ವಿಜಯನ್‌ ಅವರೊಬ್ಬರೇ ಸಂಪುಟದ ಕುರಿತು ನಿರ್ಧಾರ ಕೈಗೊಂಡಿಲ್ಲ. ಸ್ಥಳೀಯ ವಿಚಾರಗಳು, ಪಕ್ಷದ ವರಿಷ್ಠ ಮಂಡಳಿ ಸೇರಿಯೇ ಈ ತೀರ್ಮಾನ ಕೈಗೊಂಡಿರುತ್ತದೆ. ಸಂಪೂರ್ಣವಾಗಿ ಹೊಸಬರಿಗೆ ಅವಕಾಶ ನೀಡಿರುವುದು ಒಂದು ಹೊಸ ಪ್ರಯೋಗ. ನನ್ನ ಪ್ರಕಾರ ಇದು ತಪ್ಪು ನಡೆ ಎಂದು ಹೇಳಲಾಗದು.

ಕಮ್ಯುನಿಸ್ಟ್ ಪಕ್ಷ ಮೂಲಭೂತವಾಗಿ ಒಂದು ಸಿದ್ಧಾಂತದ ಮೇಲೆ ನಿಂತಿದೆ. ವರ್ಗರಹಿತ ಸಮಾಜ ಕಟ್ಟುವುದು ಅವರ ಗುರಿ. ಬಿಜೆಪಿ ವ್ಯಕ್ತಿಗಿಂತ ಪಕ್ಷ, ಪಕ್ಷಕ್ಕಿಂತ ದೇಶ ದೊಡ್ಡದು ಎಂದು ಕೆಲಸ ಮಾಡುತ್ತಿದೆ. ಪಕ್ಷದ ನಾಯಕತ್ವ ಕೈಗೊಳ್ಳುವ ತೀರ್ಮಾನವನ್ನು ಪಾಲಿಸುವ ಪದ್ಧತಿ ಎರಡೂ ಪಕ್ಷದಲ್ಲಿರುವ ಸಾಮ್ಯತೆ. ಬೇರೇನೂ ಹೋಲಿಕೆಗಳಿಲ್ಲ. ಶೈಲಜಾ ಟೀಚರ್‌ ಅವರಿಗೆ ಇನ್ನೊಂದು ಅವಕಾಶ ಕೊಡಬೇಕಿತ್ತು ಎಂಬ ಭಾವನೆ ಜನರಲ್ಲಿದೆ. ಶೈಲಜಾ ಟೀಚರ್‌ ಬಗ್ಗೆ ಇರುವ ಗೌರವ, ಮೆಚ್ಚುಗೆ, ಶ್ರದ್ಧೆಯನ್ನು ನಾನು ನೇರವಾಗಿ ನೋಡಿದ್ದೇನೆ. ಆದರೆ, ಈ ಎಲ್ಲದರ ಆಚೆಗೆ ಪಕ್ಷದ ನಿರ್ಧಾರವನ್ನು ಟೀಕಿಸುವುದು ಹೇಗೆ ಎಂದು ನನಗೆ ಅರ್ಥವಾಗುತ್ತಿಲ್ಲ.

ಮಹಿಳೆಯರನ್ನು ಕಡೆಗಣಿಸಲಾಗುತ್ತಿದೆ ಎಂಬುದನ್ನು ವೈಯಕ್ತಿಕವಾಗಿ ಒಪ್ಪುವುದಿಲ್ಲ. ಮಹಿಳೆಯರು ಕುಟುಂಬದ ಕೆಲಸಗಳಲ್ಲೇ ಹೆಚ್ಚು ಮಗ್ನರಾಗಿರುವುದರಿಂದ ರಾಜಕೀಯದಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಲು ಸಾಧ್ಯವಾಗಿಲ್ಲ. ಮಹಿಳೆಯರನ್ನು ರಾಜಕೀಯವಾಗಿ ಮುಖ್ಯ ವಾಹಿನಿಗೆ ಕರೆತರಲು ಎಲ್ಲ ರಾಜಕೀಯ ಪಕ್ಷಗಳೂ ಹೆಚ್ಚು ಕೆಲಸ ಮಾಡಬೇಕಾದ ಅಗತ್ಯವಿದೆ. ಹೆಣ್ಣು ಮಕ್ಕಳನ್ನು ರಾಜಕೀಯವಾಗಿ ತುಳಿಯುವ, ಅವಕಾಶ ಕಿತ್ತುಕೊಳ್ಳವ ಪ್ರಯತ್ನ ನಡೆದಿಲ್ಲ. ಆದರೆ, ಹೆಚ್ಚಿನ ಸಂಖ್ಯೆಯಲ್ಲಿ ಬೆಂಬಲಿಸುವ ಕೆಲಸ ಆಗದೇ ಇರಬಹುದು.

ಸಂಪುಟ ರಚನೆ ಎಂಬುದು ಅತ್ಯಂತ ಸವಾಲಿನ ಕೆಲಸ. ಪ್ರತಿ ನಿರ್ಧಾರವನ್ನೂ ಬೆಂಬಲಿಸಲು ಮತ್ತು ವಿರೋಧಿಸಲು ಸಾಕಷ್ಟು ಅವಕಾಶಗಳಿರುತ್ತವೆ. ಕರ್ನಾಟಕದಲ್ಲೂ ಸಂಪೂರ್ಣವಾಗಿ ಸಂಪುಟ ಬದಲಾವಣೆ ಸಾಧ್ಯವೇ ಎಂಬ ಪ್ರಶ್ನೆಗೆ ಕಾದು ನೋಡಿ ಎಂಬ ಉತ್ತರವನ್ನು ನೀಡಬಹುದು.

– ಗಣೇಶ ಕಾರ್ಣಿಕ್‌, ಮುಖ್ಯ ವಕ್ತಾರ, ಬಿಜೆಪಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.