ADVERTISEMENT

ಪ್ರಜಾವಾಣಿ ಚರ್ಚೆ: ಚುನಾವಣಾ ಆಯೋಗ, ನ್ಯಾಯಾಂಗ ಸ್ವತಂತ್ರ

ಸಾಂವಿಧಾನಿಕ ಸಂಸ್ಥೆಗಳ ದುರ್ಬಳಕೆ ಆಗುತ್ತಿದೆಯೇ?

ಸಿ.ಟಿ.ರವಿ
Published 16 ಏಪ್ರಿಲ್ 2021, 19:31 IST
Last Updated 16 ಏಪ್ರಿಲ್ 2021, 19:31 IST
   

ಶಾಸಕಾಂಗ ಹಾಗೂ ಕಾರ್ಯಾಂಗ ತಪ್ಪಿ ನಡೆದಾಗ ಅವುಗಳನ್ನು ಸರಿದಾರಿಗೆ ತರುವ ಹೊಣೆಯನ್ನು ನ್ಯಾಯಾಂಗವು ನಿರ್ವಹಿಸುತ್ತಾ ಬಂದಿದೆ. ಚುನಾವಣಾ ಆಯೋಗವು ನಿಷ್ಪಕ್ಷಪಾತವಾಗಿ, ಪ್ರಾಮಾಣಿಕವಾಗಿ ಚುನಾವಣೆಗಳನ್ನು ನಡೆಸುತ್ತಾ ಬಂದಿದೆ. ಆದರೆ, ಸೋತ ತಕ್ಷಣ ಮತಯಂತ್ರಗಳೇ ಸರಿ ಇಲ್ಲ ಎಂದು ವಿರೋಧ ಪಕ್ಷಗಳು ದೂಷಿಸುತ್ತವೆ

ಸಿ.ಟಿ. ರವಿ

ಈ ದೇಶದ ಅತ್ಯುನ್ನತ ತನಿಖಾ ಸಂಸ್ಥೆಯಾದ ಸಿಬಿಐ, ಆರ್ಥಿಕ ಅಪರಾಧ ನಿಯಂತ್ರಿಸುವ ಜಾರಿ ನಿರ್ದೇಶನಾಲಯ (ಇ.ಡಿ), ಆದಾಯ ತೆರಿಗೆ ಇಲಾಖೆಗಳನ್ನು ಬಿಜೆಪಿ ರಾಜಕೀಯವಾಗಿ ದುರುಪಯೋಗಪಡಿಸಿಕೊಳ್ಳುತ್ತಿದೆ ಎಂದು ಕಾಂಗ್ರೆಸ್ ಮತ್ತು ಕೆಲವು ವಿರೋಧ ಪಕ್ಷಗಳು ಆರೋಪಿಸುತ್ತಿವೆ. ನ್ಯಾಯಾಂಗ ಮತ್ತು ಚುನಾವಣಾ ಆಯೋಗದ ಮೇಲೂ ಸಂಶಯದ ಎಳೆಗಳನ್ನೂ ಚಾಚಲು ಮುಂದಾಗುತ್ತಿವೆ. ಆದರೆ, ಈ ರೀತಿ ಸಂಸ್ಥೆಗಳನ್ನು ದುರುಪಯೋಗ ಮಾಡಿಕೊಳ್ಳಲು ಸಾಧ್ಯವೇ ಎಂಬ ಪ್ರಶ್ನೆಯನ್ನು ಮಂಥಿಸಿ ನೋಡಬೇಕಾಗಿದೆ.

ಭಾರತವು ಅತ್ಯಂತ ಬೃಹತ್ತಾದ ಲಿಖಿತ ಸಂವಿಧಾನವನ್ನು ಹೊಂದಿದ್ದು ದೇಶದ ಆಡಳಿತವು ಸಂವಿಧಾನದ ನಿರ್ದೇಶನದಂತೆಯೇ ನಡೆಯಬೇಕು. ಅದನ್ನು ಕಡೆಗಣಿಸಿ ಯಾವ ಸರ್ಕಾರವೂ ಆಡಳಿತ ನಡೆಸಲು ಸಾಧ್ಯವಿಲ್ಲ. ಬದಲಾಗುತ್ತಿರುವ ಪರಿಸ್ಥಿತಿಗೆ ಅನುಗುಣವಾಗಿಸಂವಿಧಾನಕ್ಕೆ ಕೆಲವು ತಿದ್ದುಪಡಿ ಮಾಡಬಹುದೇ ಹೊರತು ಮೂಲತತ್ವಗಳನ್ನು ಬದಲಾಯಿಸಲು ಸಾಧ್ಯವಿಲ್ಲ. ಆದರೆ, ಈ ದೇಶವನ್ನು 60 ವರ್ಷಗಳ ಕಾಲ ಆಳಿದ ಕಾಂಗ್ರೆಸ್ ಮೂಲತತ್ವವನ್ನೇ ಬದಲಾಯಿಸಲು ಮುಂದಾಗಿತ್ತು ಎಂಬುದು ಈಗ ಇತಿಹಾಸ. ತನ್ನ ಅಧಿಕಾರ ಉಳಿಸಿಕೊಳ್ಳಲು ಜನರ ಮೂಲಭೂತ ಹಕ್ಕುಗಳನ್ನೇ ಕಿತ್ತುಕೊಂಡು ತುರ್ತು ಸ್ಥಿತಿ ಜಾರಿಗೊಳಿಸಿತು. ತುರ್ತು ಪರಿಸ್ಥಿತಿ ಹೇರಿಕೆಗೆ ಆಗ ಮಾದರಿಯಾದದ್ದು 1933ರಲ್ಲಿ ಜರ್ಮನಿ ದೇಶದ ಸರ್ವಾಧಿಕಾರಿ ಹಿಟ್ಲರ್‌ನ ಆಡಳಿತ. ಆತ ಆಗ ವಿಪಕ್ಷ ನಾಯಕರನ್ನು ಬಂಧಿಸಿದ್ದ, ಪತ್ರಿಕಾ ಸ್ವಾತಂತ್ರ್ಯಕ್ಕೆ ನಿರ್ಬಂಧ ಹೇರಿದ್ದ, ಜನರನ್ನು ಸಮಾಧಾನಪಡಿಸಲು 25 ಅಂಶಗಳ ಕಾರ್ಯಕ್ರಮಗಳನ್ನು ಜಾರಿಗೆ ತಂದಿದ್ದ. ಆತನ ಆಪ್ತನೊಬ್ಬ ‘ಜರ್ಮನಿಯೆಂದರೆ ಹಿಟ್ಲರ್, ಹಿಟ್ಲರ್ ಎಂದರೆ ಜರ್ಮನಿ’ ಎಂದು ಘೋಷಿಸಿದ್ದ. ಈ ಎಲ್ಲಾ ಅಂಶಗಳು ಈ ದೇಶದಲ್ಲಿ 1975ರಲ್ಲಿ ತುರ್ತುಸ್ಥಿತಿ ಘೋಷಣೆಯಾದಾಗ ಇಲ್ಲೂ ಜಾರಿಗೆ ಬಂದಿದ್ದನ್ನು ನೆನಪಿಸಿಕೊಂಡಾಗ ಸಂವಿಧಾನವನ್ನೇ ಸ್ಥಗಿತಗೊಳಿಸುವ ಕಾರ್ಯಕ್ಕೆ ಮುಂದಾದವರು ಯಾರೆಂದು ಗೊತ್ತಾಗುತ್ತದೆ.

ADVERTISEMENT

ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ವಾಕ್‌ ಸ್ವಾತಂತ್ರ್ಯ ರದ್ದತಿಯನ್ನು ಸಮರ್ಥಿಸಿ ಆಗಿನ ಅಟಾರ್ನಿ ಜನರಲ್‌ ನಿರೇನ್‌ ಡೇ ಸುಪ್ರೀಂ ಕೋರ್ಟ್‌ನಲ್ಲಿ ವಾದ ಮಂಡಿಸಿದ್ದರು. ‘ಸಂವಿಧಾನದ 21ನೇ ವಿಧಿ ಅಡಿಯಲ್ಲಿ ಪ್ರಜೆಗೆ ಸ್ವಾತಂತ್ರ್ಯವನ್ನು ಮಾತ್ರ ಕೊಟ್ಟಿಲ್ಲ. ಜತೆಗೆ ಜೀವಿಸುವ ಹಕ್ಕನ್ನೂ ನೀಡಿದೆ. ಹಾಗಾಗಿ, ಸರ್ಕಾರವು ಒಬ್ಬ ವ್ಯಕ್ತಿಯನ್ನು ಗುಂಡಿಟ್ಟು ಕೊಂದರೆ, ನ್ಯಾಯಾಂಗದಿಂದ ಪರಿಹಾರ ಪಡೆಯುವ ಹಕ್ಕು ಆ ವ್ಯಕ್ತಿಯ ಪರಿವಾರಕ್ಕೆ ಇಲ್ಲವೇ’ ಎಂದು ಆಗಿನ ನ್ಯಾಯಮೂರ್ತಿ ಎಚ್‌.ಆರ್‌. ಖನ್ನಾ ಅವರು ಡೇ ಅವರನ್ನು ಪ್ರಶ್ನಿಸಿದ್ದರು. ಅದಕ್ಕೆ ಡೇ ಹೀಗೆ ಉತ್ತರಿಸಿದ್ದರು: ‘ತುರ್ತು ಪರಿಸ್ಥಿತಿ ಜಾರಿಯಲ್ಲಿರುವಾಗ ಹಾಗೆ ಮಾಡಿದರೆ (ಸರ್ಕಾರದಿಂದ ಹತ್ಯೆ) ತಪ್ಪಿಲ್ಲ’.

ಅಂದರೆ, ಮನುಷ್ಯನ ಪ್ರಾಣಹರಣಕ್ಕೂ ಆಗ ಅವಕಾಶಪಡೆದುಕೊಳ್ಳಲಾಗಿತ್ತು. ಈ ರೀತಿ ಮನುಷ್ಯನ ಜೀವಿಸುವ ಹಕ್ಕನ್ನೇ ಕಿತ್ತುಕೊಂಡಿದ್ದ ಪಕ್ಷವೊಂದು ಈಗ ಬಿಜೆಪಿಯ ಮೇಲೆ ಆರೋಪ ಮಾಡುತ್ತಿರುವುದು ಹಾಸ್ಯಾಸ್ಪದ.

ಒಂದು ಕಾಲದಲ್ಲಿ ಬಲಿಷ್ಠ ಮರದಂತ್ತಿದ್ದ ಕಾಂಗ್ರೆಸ್‌, ಈಗ ಬಳ್ಳಿಯಂತಾಗಿದೆ. ಅಸ್ತಿತ್ವ ಉಳಿಸಿಕೊಳ್ಳಲು ಹೆಣಗಾಡುತ್ತಿದೆ. ಎರಡು ಬಾರಿ ಪೂರ್ಣ ಬಹುಮತದೊಂದಿಗೆ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಬಿಜೆಪಿ ಹಲವು ರಾಜ್ಯಗಳಲ್ಲಿಯೂ ಅಧಿಕಾರದಲ್ಲಿದೆ. ಬಿಜೆಪಿಯ ಯಶಸ್ಸು ಸಹಿಸಿಕೊಳ್ಳಲಾಗದ ಕಾಂಗ್ರೆಸ್‌ ಪಕ್ಷವು ಸ್ವಾಯತ್ತ ಸಂಸ್ಥೆಗಳನ್ನು ದುರುಪಯೋಗ ಮಾಡಿಕೊಳ್ಳಲಾಗುತ್ತಿದೆ ಎಂದು ತನ್ನ ಅಸಹನೆ ಹೊರಹಾಕುತ್ತಿದೆ.

ಈ ದೇಶದ ನ್ಯಾಯಾಂಗ ಇಂದು ಸ್ವತಂತ್ರ ಹಾಗೂ ಸ್ವಾಯತ್ತವಾಗಿದೆ. ಶಾಸಕಾಂಗ ಹಾಗೂ ಕಾರ್ಯಾಂಗ ತಪ್ಪಿ ನಡೆದಾಗ ಅವುಗಳನ್ನು ಸರಿದಾರಿಗೆ ತರುವ ಹೊಣೆಯನ್ನು ನಿರ್ವಹಿಸುತ್ತಾ ಬಂದಿದೆ. ಚುನಾವಣಾ ಆಯೋಗವು ಅತ್ಯಂತ ನಿಷ್ಪಕ್ಷಪಾತವಾಗಿ, ಪ್ರಾಮಾಣಿಕವಾಗಿ ಚುನಾವಣೆಯನ್ನು ನಡೆಸುತ್ತಾ ಬಂದಿದ್ದರೂ ಕಾಂಗ್ರೆಸ್ ಪಕ್ಷ ಸೇರಿದಂತೆ ಕೆಲವು ಪಕ್ಷಗಳು ತಮ್ಮ ಸಂಶಯವನ್ನು ತೇಲಿಬಿಡುತ್ತಿವೆ. ಪರಾಭವ ಅನುಭವಿಸಿದಾಕ್ಷಣ ಮತಯಂತ್ರಗಳನ್ನು ದೂಷಿಸಲು ಮುಂದಾಗುತ್ತವೆ. ತಮ್ಮ ಪರವಾಗಿ ಫಲಿತಾಂಶ ಬಂದಾಗ ಜನಾದೇಶವೆಂದು ಬೆನ್ನುತಟ್ಟಿಕೊಳ್ಳುವ ವಿಚಿತ್ರ ವರ್ತನೆಗೆ ಒಳಗಾಗಿವೆ.

ಪಶ್ಚಿಮ ಬಂಗಾಳದಲ್ಲಿ ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರು 24 ತಾಸು ಚುನಾವಣಾ ಪ್ರಚಾರ ಮಾಡುವುದನ್ನು ಆಯೋಗ ನಿರ್ಬಂಧಿಸಿತು. ತಪ್ಪು ಒಪ್ಪಿಕೊಳ್ಳುವ ಬದಲು ಆಯೋಗವನ್ನೇ ಬಿಜೆಪಿ ಪರ ಎಂದು ದೂರುವ ಕೀಳುಮಟ್ಟಕ್ಕೆ ತೃಣಮೂಲ ಕಾಂಗ್ರೆಸ್ ಮುಂದಾಯಿತು.

ಮಮತಾ ಅವರಂತೂ ಮಾಡೆಲ್ ಕೋಡ್ ಆಫ್ ಕಾಂಡಕ್ಟ್ ಅನ್ನು ಮೋದಿ ಕೋಡ್ ಆಫ್ ಕಾಂಡಕ್ಟ್ ಎಂದು ಅವಹೇಳನ ಮಾಡಿದರು. ಪಶ್ಚಿಮ ಬಂಗಾಳದಲ್ಲಿ ಚುನಾವಣಾ ಆಯೋಗ ಏಕಪಕ್ಷೀಯ ನಿರ್ಧಾರ ತಾಳಲಿಲ್ಲ. ಬಿಜೆಪಿ ಮುಖಂಡ ಸುವೇಂದು ಅಧಿಕಾರಿ ಅವರಿಗೆ ನೀತಿ ಸಂಹಿತೆ ಉಲ್ಲಂಘಿಸಿದ್ದಕ್ಕಾಗಿ ನೋಟಿಸ್ ಜಾರಿಗೊಳಿಸಿದರೆ, ರಾಹುಲ್ ಸಿನ್ಹಾ ಅವರನ್ನು 2 ದಿನ ಪ್ರಚಾರ ಮಾಡುವುದನ್ನು ನಿರ್ಬಂಧಿಸಿತು. ಇದನ್ನು ಅರ್ಥಮಾಡಿಕೊಳ್ಳದೆ ಆಯೋಗವನ್ನೇ ದೂರುವ ಪ್ರವೃತ್ತಿಗೆ ಕೆಲವು ಪಕ್ಷಗಳು ಮುಂದಾಗಿವೆ.

ಈ ಹಿಂದೆ ಯುಪಿಎ ಸರ್ಕಾರ ಇದ್ದಾಗ ಈ ಸಂಸ್ಥೆಗಳ ದುರುಪಯೋಗವಾಗಿದೆ. ಇಂದು ಕೇಂದ್ರದಲ್ಲಿ ಗೃಹ ಸಚಿವರಾಗಿರುವ ಬಿಜೆಪಿ ಮುಖಂಡ ಅಮಿತ್ ಶಾ ಅವರ ಮೇಲೆ ಅಂದು ಕಾಂಗ್ರೆಸ್ ಸರ್ಕಾರ ಸುಳ್ಳು ಆರೋಪ ಹೊರಿಸಿ ಮೊಕದ್ದಮೆ ದಾಖಲಿಸಿತ್ತು; ಮಾಲೇಗಾಂವ್ ಸ್ಫೋಟ ಪ್ರಕರಣದಲ್ಲಿ ಕರ್ನಲ್ ಪುರೋಹಿತ್ ಮತ್ತು ಸಾಧ್ವಿಯವರನ್ನು ಸಿಲುಕಿಸಲು ಯತ್ನಿಸಿದ್ದು, ಹಾಗೂ ಈ ದೇಶದಲ್ಲಿ ಹಿಂದೂ ಭಯೋತ್ಪಾದನೆ ಇದೆ ಎಂಬ ಸುಳ್ಳನ್ನು ಸತ್ಯವಾಗಿಸಲು ಯತ್ನಿಸಿದ್ದರ ಬಗ್ಗೆ ಕಾಂಗ್ರೆಸ್ ಮಾತನಾಡುವುದಿಲ್ಲ. ಬಿಜೆಪಿಗೆ ಸಾಂವಿಧಾನಿಕ ಸಂಸ್ಥೆಗಳ ಬಗ್ಗೆ ವಿಶ್ವಾಸ ಹಾಗೂ ಗೌರವವಿದೆ. ಕೇಂದ್ರದಲ್ಲಿ ಪ್ರಧಾನಿ ಮೋದಿಯವರ ನೇತೃತ್ವದ ಸರ್ಕಾರವು ಅತ್ಯಂತ ಸಮರ್ಥವಾಗಿ ಶುದ್ಧವಾದ ಆಡಳಿತ ನಡೆಸುತ್ತಿದೆ; ಟೀಕಿಸಲು ಯಾವುದೇ ವಿಷಯಗಳು ಈ ಪಕ್ಷಗಳಿಗೆ ದೊರಕುತ್ತಿಲ್ಲ. ಹಾಗಾಗಿಯೇ ಕಾಂಗ್ರೆಸ್‌ ಪಕ್ಷವು ಸಲ್ಲದ ಆರೋಪಗಳನ್ನು ಮಾಡುತ್ತಾ ಬರುತ್ತಿದೆ. ಸಂವಿಧಾನ ಈ ದೇಶದ ಅತ್ಯಂತ ಪವಿತ್ರವಾದ, ಜನರ ಬದುಕಿಗೆ ಪೂರಕವಾದ, ಆಡಳಿತಗಾರರಿಗೆ ದಾರಿದೀಪವಾದ ಗ್ರಂಥ ಎಂಬುದು ಬಿಜೆಪಿಯ ನಂಬಿಕೆ. ಅದನ್ನು ಅನುಸರಿಸಿ ಅದು ಈಗಲೂ ನಡೆಯುತ್ತಿದೆ. ಮುಂದೆಯೂ ನಡೆಯಲಿದೆ. ಮುಂದಿನ ಪೀಳಿಗೆಗೆ ಈ ಸಂವಿಧಾನವನ್ನು ಪರಿಶುದ್ಧವಾಗಿಯೇ ನೀಡುವ ನಿರ್ಧಾರ, ನಿಶ್ಚಯ, ಆಶಯ ಬಿಜೆಪಿಯದ್ದಾಗಿದೆ.

ಕುಂಬಳಕಾಯಿ ಕಳ್ಳ ಎಂದರೆ...

ಇ.ಡಿ, ಐಟಿ ದಾಳಿ ನಡೆಸಿದಾಗಲೆಲ್ಲಾ ‘ಇದು ಬಿಜೆಪಿ ಪ್ರೇರಿತ’ ಎಂಬುದು ಕಾಂಗ್ರೆಸ್ಸಿಗರ ಕೂಗು. ಆರ್ಥಿಕ ಅಪರಾಧದ ಆರೋಪದಲ್ಲಿ ದಾಳಿ ನಡೆದ ಪ್ರಕರಣಗಳಲ್ಲಿ ಕಾಂಗ್ರೆಸ್ಸಿನ ಹಿರಿಯ ಮುಖಂಡರೇ ಸಿಕ್ಕಿಬಿದ್ದು, ಸೆರೆಮನೆ ಸೇರಿ ಈಗ ಜಾಮೀನಿನ ಮೇಲೆ ಹೊರಬಂದಿದ್ದಾರೆ. ಜಾರಿ ನಿರ್ದೇಶನಾಲಯ ಬಿಜೆಪಿ ಮುಖಂಡರ ಮೇಲೂ ದಾಳಿ ನಡೆಸಿದೆ. ಇದನ್ನು ವಿರೋಧ ಪಕ್ಷಗಳು ಮನಗಾಣಬೇಕು. ಕುಂಬಳಕಾಯಿ ಕಳ್ಳ ಎಂದಾಕ್ಷಣ ಹೆಗಲು ಮುಟ್ಟಿನೋಡಿಕೊಳ್ಳುವ ಇವರ ವರ್ತನೆಯೇ ಅನುಮಾನಾಸ್ಪದ.

ಲೇಖಕ: ಶಾಸಕ, ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.