ADVERTISEMENT

ಚರ್ಚೆ: ಪ್ರತಿಭೆಗಳು ಬೇಕು, ಹಾಗಾಗಿ ಪರೀಕ್ಷೆಯೂ

ವಿದ್ಯಾರ್ಥಿಗಳ ಅಭ್ಯುದಯಕ್ಕಾಗಿ ವ್ಯವಸ್ಥೆಯು ಪರೀಕ್ಷೆಯ ಪರವಾದ ಧೋರಣೆಯನ್ನು ತಳೆಯಬೇಕಾದ ಅಗತ್ಯವಿದೆ

​ಪ್ರಜಾವಾಣಿ ವಾರ್ತೆ
Published 7 ಜೂನ್ 2021, 19:30 IST
Last Updated 7 ಜೂನ್ 2021, 19:30 IST
ಪರೀಕ್ಷೆ–ಪ್ರಾತಿನಿಧಿಕ ಚಿತ್ರ
ಪರೀಕ್ಷೆ–ಪ್ರಾತಿನಿಧಿಕ ಚಿತ್ರ   

ಪರೀಕ್ಷೆಯೇ ಮುಖ್ಯವೇ ಎಂದು ಕೇಳಬಹುದು. ಒಂದು ಕ್ಷಣಕ್ಕೆ ಈ ವಾದವನ್ನು ಒಪ್ಪಿಕೊಳ್ಳೋಣ. ಪರೀಕ್ಷೆ ಮುಖ್ಯ ಅಲ್ಲ ಎನ್ನುವ ಹಾಗಿಲ್ಲ. ಕೊರೊನಾ ಇಲ್ಲದ ಸಮಯದಲ್ಲಿ ಕೋಟ್ಯಂತರ ರೂಪಾಯಿ ಖರ್ಚು ಮಾಡಿಕೊಂಡು, ಅಷ್ಟೆಲ್ಲ ಸಿಬ್ಬಂದಿ ಸಂಯೋಜನೆ ಮಾಡಿಕೊಂಡು ಪರೀಕ್ಷೆಯನ್ನು ನಡೆಸುವುದೇಕೆ? ಅಂದರೆ ಪರೀಕ್ಷೆ ಮುಖ್ಯವೆಂದೇ ಆಯಿತು.

ಹಿಂದಿನ ವರ್ಷ ಐಸಿಎಸ್ಇ ಪರೀಕ್ಷೆಯಲ್ಲಿ ಎರಡು ಪತ್ರಿಕೆಗಳ ಪರೀಕ್ಷೆಯನ್ನು ರದ್ದುಪಡಿಸಿ ಆಂತರಿಕ ಮೌಲ್ಯಮಾಪನದ ಆಧಾರದಲ್ಲಿ ಉತ್ತೀರ್ಣಗೊಳಿಸಿದ್ದರಿಂದ, ನನ್ನ ಮಗಳು ಎಸ್ಎಸ್ಎಲ್‌ಸಿ ಉತ್ತೀರ್ಣಳಾದರೂ ಆಕೆಯಲ್ಲಿ ಹುಟ್ಟಿಕೊಂಡ ಕೀಳರಿಮೆ ಅನುಭವಕ್ಕೆ ಬಂದಿದೆ. ಪರೀಕ್ಷೆ ಇಲ್ಲದೆ ಉತ್ತೀರ್ಣರಾದಾಗ ಕೆಲವು ಪ್ರತಿಭಾವಂತ ವಿದ್ಯಾರ್ಥಿಗಳಲ್ಲಿ ಕೀಳರಿಮೆ ಬೆಳೆಯುತ್ತದೆ. ಏಕೆಂದರೆ ತಾನು ಏನು ಎಂಬುದನ್ನು ಸಾಬೀತುಪಡಿಸಿಕೊಳ್ಳಲು ಮತ್ತು ಸಾಬೀತು ಮಾಡಲು ಅವರಿಗೆ ಅವಕಾಶವೇ ಸಿಕ್ಕಿರುವುದಿಲ್ಲ. ರಾಷ್ಟ್ರದ ವಿಕಾಸಕ್ಕೆ ಪ್ರತಿಭಾವಂತರು ಬೇಕೇಬೇಕು. ಆದ್ದರಿಂದ ಪರೀಕ್ಷೆಯೂ ಬೇಕು.

ಪಬ್ಲಿಕ್‌ ಪರೀಕ್ಷೆ ಎನ್ನುವುದು ಒಂದು ಕಲಿಕಾ ಅನುಭವವಾಗಿರುತ್ತದೆ. ನಿಗದಿತ ಸಮಯದಲ್ಲಿ, ನಿಗದಿತ ವಿಚಾರವನ್ನು ವ್ಯವಸ್ಥಿತವಾಗಿ ಬರೆಯುವ ಅನುಭವವು ಪರೀಕ್ಷೆಯಲ್ಲೇ ದೊರಕುವುದು. ಪರೀಕ್ಷೆಯನ್ನು ಎದುರಿಸದೆ ಮುಂದಿನ ಹಂತಕ್ಕೆ ಹೋಗುವ ವಿದ್ಯಾರ್ಥಿಗಳಿಗೆ ಅವರ ವಿಕಾಸಕ್ಕೆ ಪೂರಕವಾದ ಈ ಅನುಭವ ದೊರಕುವುದಿಲ್ಲ. ಅಧ್ಯಯನ ಮಾಡಿದ ವಿಷಯಗಳಲ್ಲಿ ಪರೀಕ್ಷೆಯಲ್ಲಿ ಪ್ರಮಾಣೀಕೃತ ಪ್ರಶ್ನೆಗಳಿಗೆ ಉತ್ತರಿಸುವ ಮೂಲಕವೇ ಸ್ಪಷ್ಟವಾಗುವಂತಹವು ಇರುತ್ತವೆ. ಪರೀಕ್ಷೆ ಬರೆಯದಿದ್ದರೆ ಈ ಗೊಂದಲಗಳು ಹಾಗೆಯೇ ಉಳಿದುಕೊಳ್ಳುತ್ತವೆ.

ADVERTISEMENT

ಪಬ್ಲಿಕ್‌ ಪರೀಕ್ಷೆ ಇಲ್ಲದೆ ಉತ್ತೀರ್ಣಗೊಳಿಸುವುದುವಿದ್ಯಾರ್ಥಿಯ ಕಲಿಕಾ ವರ್ಷವನ್ನು ಹಾಳುಗೆಡಹುವುದಿಲ್ಲ ಎಂಬುದು ನಿಜ.‌ ಆದರೆ ಪರೀಕ್ಷೆಯ ಮೂಲಕ ತೋರಿಸುವ ನೈಜ ಪ್ರತಿಭೆಗೆ ಅವಕಾಶ ಇಲ್ಲವಾಗುತ್ತದೆ. ಮುಂದಿನ‌ ದಿನಗಳಲ್ಲಿ ಅದು, ಪರೀಕ್ಷೆ ಬರೆದು ಉತ್ತೀರ್ಣರಾದವರು- ಪರೀಕ್ಷೆ ಬರೆಯದೆ ಉತ್ತೀರ್ಣರಾದವರು ಎಂಬ ಎರಡು ವರ್ಗಗಳನ್ನು ಸೃಷ್ಟಿಸಿ, ತಾರತಮ್ಯ ಮತ್ತು ಕೀಳರಿಮೆಗೆ ಕಾರಣವಾಗಲಿದೆ. ಅಲ್ಲದೆ, ಕೆಲವು ಸರ್ಕಾರಿ ಮತ್ತು ಅರೆ ಸರ್ಕಾರಿ ನೇಮಕಾತಿಗಳು ಪಿಯು ಪರೀಕ್ಷೆಯ ಅಂಕಗಳನ್ನು ಆಧರಿಸಿರುತ್ತವೆ. ಪರೀಕ್ಷೆ ಇಲ್ಲದೆ ಉತ್ತೀರ್ಣರಾದಾಗ ಈ ನೇಮಕಾತಿಗಳಿಗೆ ಯಾವ ಆಧಾರವನ್ನು ಪರಿಗಣಿಸಬೇಕು ಎಂಬ ಸಮಸ್ಯೆ ಎದುರಾಗಲಿದೆ.

ಪರೀಕ್ಷೆಗಾಗಿ ಮಾಡಿದ ಅಧ್ಯಯನವು ವೃತ್ತಿಪರ ಪ್ರವೇಶ ಪರೀಕ್ಷೆಗಳಿಗೆ ಪೂರಕವಾಗಿರುತ್ತದೆ. ಪರೀಕ್ಷೆ ಇಲ್ಲವಾದಾಗ ವಿದ್ಯಾರ್ಥಿಗಳಲ್ಲಿ ಸಹಜವಾಗಿ ಕುಸಿಯುವ ಅಧ್ಯಯನಶೀಲತೆಯು ಪ್ರವೇಶ ಪರೀಕ್ಷೆಗಳ ಮೇಲೂ ನಕಾರಾತ್ಮಕ ಪರಿಣಾಮವನ್ನು ಉಂಟು ಮಾಡುತ್ತದೆ. ಈ ರೀತಿಯ ಪ್ರವೇಶ ಪರೀಕ್ಷೆಯು ರಾಷ್ಟ್ರೀಯ ಮಟ್ಟದ್ದಾದಾಗ ಅಕಡೆಮಿಕ್ ಪರೀಕ್ಷೆಗಳು ನಡೆದ ರಾಜ್ಯಗಳ ವಿದ್ಯಾರ್ಥಿಗಳ ಮುಂದೆ ಅಕಡೆಮಿಕ್ ಪರೀಕ್ಷೆಗಳು ನಡೆಯದ ರಾಜ್ಯಗಳ ವಿದ್ಯಾರ್ಥಿಗಳು ಹಿನ್ನಡೆಯನ್ನು ಅನುಭವಿಸಬೇಕಾಗುತ್ತದೆ.

ಪರೀಕ್ಷೆಯಲ್ಲಿ ಪಡೆದ ಅಂಕಗಳ ಆಧಾರ ಇಲ್ಲವಾದಾಗ, ವೃತ್ತಿಪರ ಕೋರ್ಸುಗಳಲ್ಲಿ ಸೀಟುಗಳು ಬಹು ಸುಲಭವಾಗಿ ಹಣ ಇದ್ದವರ ಪಾಲಾಗಿಬಿಡುತ್ತವೆ. ಬಹಳಷ್ಟು ವಿದ್ಯಾರ್ಥಿಗಳು ತಮ್ಮ ಮುಂದಿನ ಕೋರ್ಸುಗಳ ಆಯ್ಕೆಯನ್ನು ಪಬ್ಲಿಕ್‌ ಪರೀಕ್ಷೆಯಲ್ಲಿ ಪಡೆದ ಅಂಕಗಳ ಆಧಾರದಲ್ಲಿ ಮಾಡಿಕೊಳ್ಳುತ್ತಾರೆ. ಪರೀಕ್ಷೆಯೇ ಇಲ್ಲದಿದ್ದರೆ ಆಯ್ಕೆಯ ಈ ಮಾನದಂಡವು ಇಲ್ಲವಾಗುತ್ತದೆ.

ಪರೀಕ್ಷೆಯೇ ಕಲಿಕೆಯ ನಿರ್ಧಾರಕ ಅಲ್ಲ. ಆದರೆ ಸ್ಥಾಪಿತ ವ್ಯವಸ್ಥೆಯಲ್ಲಿ ವಿದ್ಯಾರ್ಥಿಗಳ ಅಧ್ಯಯನ
ಶೀಲತೆಯು ಪರೀಕ್ಷೆಯನ್ನು ಅವಲಂಬಿಸಿದೆ. ಪರೀಕ್ಷೆಯೇ ಇಲ್ಲವೆಂದಾಗ ಅಧ್ಯಯನದ ಆಸಕ್ತಿಯೂ ಕುಸಿಯುತ್ತದೆ. ಪರೀಕ್ಷೆಯು ವಿದ್ಯಾರ್ಥಿಗಳ ಅಧ್ಯಯನ ಮತ್ತು ವ್ಯಕ್ತಿತ್ವದ ವಿಕಾಸದಲ್ಲಿ ಶಿಸ್ತನ್ನು ತರುವ ಸಾಧನವಾಗಿದೆ. ಅಷ್ಟೇ ಅಲ್ಲದೆ ಉಪನ್ಯಾಸಕರು ವಹಿಸಿದ ಶ್ರಮಕ್ಕೆ ಗೌರವ ಸಲ್ಲಬೇಕಾದರೆ ವಿದ್ಯಾರ್ಥಿಗಳು ಪರೀಕ್ಷೆಯ ಮುಖಾಂತರ ಉತ್ತೀರ್ಣರಾಗಬೇಕು.

ಆದರ್ಶಗಳು ಏನೇ ಇದ್ದರೂ ವ್ಯಾವಹಾರಿಕ ಬದುಕು ಜಗತ್ತಿನಾದ್ಯಂತ ಸ್ಪರ್ಧಾತ್ಮಕತೆಯನ್ನು ಅವಲಂಬಿಸಿದೆ. ಹಾಗಿರುವಾಗ, ನಾವು ಹೇಳುವ ಆದರ್ಶಗಳೇ ಜಗತ್ತಿನ ಧೋರಣೆಯಾಗುವತನಕ ಸ್ಪರ್ಧಾತ್ಮಕವಾಗಿ ವಿಕಾಸಗೊಳ್ಳಲು ನಮ್ಮ‌ ಮಕ್ಕಳಿಗೆ ಇರುವ ಅವಕಾಶವನ್ನು‌ ನಿರಾಕರಿಸುವುದು ಸರಿಯಲ್ಲ.‌ ಆದ್ದರಿಂದ ಪರೀಕ್ಷೆ ನಡೆಯಬೇಕು.

ಹಾಗಿದ್ದರೆ ಪರೀಕ್ಷೆಯೇ ಮುಖ್ಯವೇ ಎಂದು ಕೇಳಬಹುದು. ಒಂದು ಕ್ಷಣಕ್ಕೆ ಈ ವಾದವನ್ನು ಒಪ್ಪಿಕೊಳ್ಳೋಣ. ಪರೀಕ್ಷೆ ಮುಖ್ಯ ಅಲ್ಲ ಎನ್ನುವ ಹಾಗಿಲ್ಲ. ಕೊರೊನಾ ಇಲ್ಲದ ಸಮಯದಲ್ಲಿ ಕೋಟ್ಯಂತರ ರೂಪಾಯಿ ಖರ್ಚು ಮಾಡಿಕೊಂಡು, ಅಷ್ಟೆಲ್ಲ ಸಿಬ್ಬಂದಿ ಸಂಯೋಜನೆ ಮಾಡಿಕೊಂಡು ಪರೀಕ್ಷೆಯನ್ನು ನಡೆಸುವುದೇಕೆ? ಅಂದರೆ ಪರೀಕ್ಷೆ ಮುಖ್ಯವೆಂದೇ ಆಯಿತು.

ಪರೀಕ್ಷೆ ಮುಖ್ಯವೇ, ಜೀವ ಮುಖ್ಯವೇ ಎಂದು ಕೇಳಿದಾಗ, ಜೀವವೇ ಮುಖ್ಯ ಎನ್ನುವುದರ ಬಗ್ಗೆ ವಿವಾದವಿಲ್ಲ. ಆದರೆ ಪರೀಕ್ಷೆ ಮಾಡಿದರೆ ಜೀವ ಉಳಿಯುವುದಿಲ್ಲ ಎಂಬ ಭಾವನೆಯೇ ತಪ್ಪು. ಜೀವ ಉಳಿಯುವ ಹಾಗೆ ಪರೀಕ್ಷೆಯನ್ನು ಹೇಗೆ ಮಾಡಬೇಕು ಎಂಬುದನ್ನು ಕಂಡುಕೊಳ್ಳಬೇಕು. ಪರೀಕ್ಷೆಯಲ್ಲಿ ಪಾಲ್ಗೊಳ್ಳುವ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳಿಗೆ ಲಸಿಕೆ ಹಾಕಿಸಿ, ಪರೀಕ್ಷಾ ಕೇಂದ್ರಗಳ ಸಂಖ್ಯೆಯನ್ನು ಹೆಚ್ಚಿಸಿ, ದೈಹಿಕ ಅಂತರವನ್ನು ಕಾಪಾಡಿಕೊಳ್ಳುವಂತೆ ನೋಡಿಕೊಂಡು ಪರೀಕ್ಷೆ ನಡೆಸಬೇಕು.

ವಿದ್ಯಾರ್ಥಿಗಳಿಗಾಗಿ ಪ್ರತ್ಯೇಕ ಬಸ್ ವ್ಯವಸ್ಥೆ ಮಾಡಬೇಕು. ತಾಲ್ಲೂಕು ಮಟ್ಟದಲ್ಲಿ ಮೌಲ್ಯಮಾಪನ ಕೇಂದ್ರಗಳನ್ನು ತೆರೆದು,ಸುರಕ್ಷತಾ ಕ್ರಮಗಳನ್ನು ತೆಗೆದುಕೊಂಡು ಮೌಲ್ಯಮಾಪನ ಕಾರ್ಯ ಕೈಗೊಳ್ಳಬೇಕು. ಆದರೆ ವಿದ್ಯಾರ್ಥಿಗಳ ಅಭ್ಯುದಯಕ್ಕಾಗಿ ಪರೀಕ್ಷೆಯ ಪರವಾದ ಧೋರಣೆಯನ್ನು ವ್ಯವಸ್ಥೆ ತಳೆಯಬೇಕಾದ ಅಗತ್ಯವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.