ADVERTISEMENT

ಚರ್ಚೆ: ಮಕ್ಕಳ ಸಾಮರ್ಥ್ಯ ಅಳತೆಗೆ ಪರೀಕ್ಷೆಗಳು ಅನಿವಾರ್ಯ

10 ಮತ್ತು 12ನೇ ತರಗತಿಗೆ ಅಂತಿಮ ಪರೀಕ್ಷೆಗಳನ್ನು ನಡೆಸುವುದು ಅನಿವಾರ್ಯವೇ?

ಡಾ.ಎಚ್.ಬಿ.ಚಂದ್ರಶೇಖರ್
Published 28 ಮೇ 2021, 19:30 IST
Last Updated 28 ಮೇ 2021, 19:30 IST
ಕಲಬುರ್ಗಿಯ ಸೇಂಟ್ ಜೋಸೆಫ್ ಬಾಲಕಿಯರ ಪ್ರೌಢ ಶಾಲೆಯಲ್ಲಿ ಶುಕ್ರವಾರ ವಿದ್ಯಾರ್ಥಿಗಳು ಎಸ್.ಎಸ್. ಎಲ್. ಸಿ. ಪರೀಕ್ಷೆ ಮುಗಿಸಿ ಸಾಲಾಗಿ ಹೊರನಡೆದರು.
ಕಲಬುರ್ಗಿಯ ಸೇಂಟ್ ಜೋಸೆಫ್ ಬಾಲಕಿಯರ ಪ್ರೌಢ ಶಾಲೆಯಲ್ಲಿ ಶುಕ್ರವಾರ ವಿದ್ಯಾರ್ಥಿಗಳು ಎಸ್.ಎಸ್. ಎಲ್. ಸಿ. ಪರೀಕ್ಷೆ ಮುಗಿಸಿ ಸಾಲಾಗಿ ಹೊರನಡೆದರು.   

ಪಿಯುಸಿ ನಂತರ ವಿದ್ಯಾರ್ಥಿಗಳಿಗೆ ಅನೇಕ ಶೈಕ್ಷಣಿಕ ಹಾಗೂ ವೃತ್ತಿ ಅವಕಾಶಗಳಿವೆ. ಎಂಜಿನಿಯರಿಂಗ್, ವೈದ್ಯ, ಕಾನೂನು ಇತ್ಯಾದಿ ಕೋರ್ಸ್‍ಗಳಿಗೆ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲು ಮಂಡಳಿಗಳು ನಡೆಸುವ ಪರೀಕ್ಷೆಗಳು ಅನಿವಾರ್ಯ. ಪ್ರಸಕ್ತ ಲಭ್ಯವಿರುವ ಸೀಮಿತ ಶೈಕ್ಷಣಿಕ ಹಾಗೂ ವೃತ್ತಿ ಅವಕಾಶಗಳ ಆಯ್ಕೆಗೆ ಹಲವಾರು ವರ್ಷಗಳಿಂದ ಚಾಲ್ತಿಯಲ್ಲಿರುವ ಪರೀಕ್ಷೆಗಳು, ಇರುವುದರಲ್ಲಿಯೇ ಅತ್ಯುತ್ತಮ ಮತ್ತು ಅನಿವಾರ್ಯ ಆಯ್ಕೆಯಾಗಿವೆ.

***

ಕೋವಿಡ್–19 ತಂದೊಡ್ಡಿರುವ ಸವಾಲಿನ ಜೊತೆಯಲ್ಲೇ ಎಸ್ಎಸ್ಎಲ್‌ಸಿ ಹಾಗೂ ಪಿಯುಸಿ ತರಗತಿಗಳಿಗೆ ಪರೀಕ್ಷೆಗಳನ್ನು ನಡೆಸಬೇಕೇ ಬೇಡವೇ ಎಂಬ ಚರ್ಚೆಯೂ ಶುರುವಾಗಿದೆ. ‘ಯಾವ ಪರೀಕ್ಷೆಯೂ ಮಕ್ಕಳ ಜೀವಕ್ಕಿಂತ ಮುಖ್ಯವಲ್ಲ’ ಎಂಬ ವಾಸ್ತವವನ್ನು ಮುಂದಿಟ್ಟುಕೊಂಡೇ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕಿದೆ.

ADVERTISEMENT

ವಿದ್ಯಾರ್ಥಿಗಳ ಜ್ಞಾನ, ತಿಳಿವಳಿಕೆಯ ಮಟ್ಟ ಹಾಗೂ ಕೌಶಲಗಳನ್ನು ಅಳೆಯಲು ಪರೀಕ್ಷಾ ಮಂಡಳಿಗಳು ಪರೀಕ್ಷೆಗಳನ್ನು ನಡೆಸುತ್ತವೆ. ಕೋವಿಡ್ ಬಿಕ್ಕಟ್ಟಿನ ಕಾರಣಕ್ಕೆ ಪರೀಕ್ಷೆಗಳನ್ನು ರದ್ದುಗೊಳಿಸಿದರೆ ಅದಕ್ಕೆ ಪರ್ಯಾಯವೇನು?

ಒಂದು ಸಾಧ್ಯತೆ ಎಂದರೆ, ಶೈಕ್ಷಣಿಕ ವರ್ಷದುದ್ದಕ್ಕೂ ಶಿಕ್ಷಕರು ನೀಡುವ ನಿಯೋಜಿತ ಕಾರ್ಯದ ಮೂಲಕ ವಿದ್ಯಾರ್ಥಿಗಳು ಅಭಿವ್ಯಕ್ತಿಸುವ ವಿಭಿನ್ನ, ವಿಶಿಷ್ಟ ಸಾಮರ್ಥ್ಯ ಹಾಗೂ ಅನುಭವಗಳನ್ನು ಅಳೆದು, ಅವರ ಮೌಲ್ಯಮಾಪನ ಮಾಡುವುದು. ಆದರೆ, ಕೋವಿಡ್ ಕಾರಣದಿಂದಾಗಿ ರಾಜ್ಯದ ವಿವಿಧೆಡೆ ಶಾಲಾ, ಕಾಲೇಜುಗಳಲ್ಲಿ ನಡೆದಿರುವ ತರಗತಿಗಳು ಹಾಗೂ ಶಿಕ್ಷಕರು ನೀಡಿರಬಹುದಾದ ನಿಯೋಜಿತ ಕಾರ್ಯಗಳ ಸಂಖ್ಯೆಯು ಸೀಮಿತವಾಗಿದ್ದು ಅದು ಏಕಪ್ರಕಾರವಾಗಿಲ್ಲ. ಆದ್ದರಿಂದ ಈ ವಿಧಾನದಿಂದ ಮಾಡುವ ಮೌಲ್ಯಮಾಪನವು ವಸ್ತುನಿಷ್ಠ ಎನಿಸಲಾರದು. ತಮ್ಮದೇ ಶಾಲೆ ಅಥವಾ ಕಾಲೇಜಿನ ವಿದ್ಯಾರ್ಥಿಗಳಿಗೆ ಶಿಕ್ಷಕರು ಉದಾರವಾಗಿ ಅಂಕಗಳನ್ನು ನೀಡುವ ಪರಿಪಾಟ ಹೊಸದೇನಲ್ಲ.

ಇನ್ನೊಂದೆಡೆ, ನಿರಂತರ ಹಾಗೂ ಸಮಗ್ರ ಮೌಲ್ಯಮಾಪನ ವ್ಯವಸ್ಥೆಯನ್ನು ಆಧರಿಸಿ ಎಸ್ಎಸ್ಎಲ್‌ಸಿ ಹಾಗೂ ಪಿಯುಸಿ ವಿದ್ಯಾರ್ಥಿಗಳನ್ನು ಮುಂದಿನ ಹಂತಕ್ಕೆ ತೇರ್ಗಡೆ ಮಾಡಲು ಅವಶ್ಯಕವಾದ ಪಾರದರ್ಶಕ ವ್ಯವಸ್ಥೆಯನ್ನು ಕಟ್ಟಿಕೊಳ್ಳುವಷ್ಟು ನಮ್ಮ ಶೈಕ್ಷಣಿಕ ವ್ಯವಸ್ಥೆಯು ಇನ್ನೂ ಪಕ್ವವಾಗಿಲ್ಲ.

ಪಿಯುಸಿ ನಂತರ ವಿದ್ಯಾರ್ಥಿಗಳಿಗೆ ಅನೇಕ ಶೈಕ್ಷಣಿಕ ಹಾಗೂ ವೃತ್ತಿ ಅವಕಾಶಗಳಿವೆ. ಎಂಜಿನಿಯರಿಂಗ್, ವೈದ್ಯ, ಕಾನೂನು ಇತ್ಯಾದಿ ಕೋರ್ಸ್‍ಗಳಿಗೆ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲು ಮಂಡಳಿಗಳು ನಡೆಸುವ ಪರೀಕ್ಷೆಗಳು ಅನಿವಾರ್ಯ. ಪ್ರಸಕ್ತ ಲಭ್ಯವಿರುವ ಸೀಮಿತ ಶೈಕ್ಷಣಿಕ ಹಾಗೂ ವೃತ್ತಿ ಅವಕಾಶಗಳ ಆಯ್ಕೆಗೆ ಹಲವಾರು ವರ್ಷಗಳಿಂದ ಚಾಲ್ತಿಯಲ್ಲಿರುವ ಪರೀಕ್ಷೆಗಳು, ಇರುವುದರಲ್ಲಿಯೇ ಅತ್ಯುತ್ತಮ ಮತ್ತು ಅನಿವಾರ್ಯ ಆಯ್ಕೆಯಾಗಿವೆ. ಈ ಪರೀಕ್ಷೆಗಳಲ್ಲಿ ಸುಧಾರಣೆಗಳನ್ನು ತರಲು ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಪ್ರತಿಪಾದಿಸಿರುವ ಕ್ರಮಗಳು ಜಾರಿಯಾಗುವವರೆಗೆ, ಮಂಡಳಿಗಳು ನಡೆಸುವ ಪರೀಕ್ಷೆಗಳು ಈಗಿರುವ ರೀತಿಯಲ್ಲಿಯೇ ಈ ವರ್ಷವೂ ನಡೆಸುವುದು ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಅನಿವಾರ್ಯ ಎನ್ನಬಹುದು.

ಎಸ್ಎಸ್ಎಲ್‌ಸಿ ಹಾಗೂ ಪಿಯುಸಿಯಲ್ಲಿ ವಿದ್ಯಾರ್ಥಿಯು ಗಳಿಸುವ ಅಂಕಗಳು ಮುಂದಿನ ಕನಿಷ್ಠ 5ರಿಂದ 10 ವರ್ಷಗಳವರೆಗೆ ಪ್ರಸ್ತುತವಾಗುತ್ತವೆ. ಒಂದುವೇಳೆ ಪರೀಕ್ಷೆಗಳನ್ನು ರದ್ದುಗೊಳಿಸಿದಲ್ಲಿ ಈ ಸಾಲಿನಲ್ಲಿ ಉತ್ತೀರ್ಣರೆಂದು ಭಾವಿಸುವ ವಿದ್ಯಾರ್ಥಿಗಳನ್ನು ಇತರೆ ಶೈಕ್ಷಣಿಕ ಸಾಲಿನಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳೊಂದಿಗೆ ಹೋಲಿಸುವುದು ಹೇಗೆ? ಕೆಲವು ಶೈಕ್ಷಣಿಕ ಹಾಗೂ ವೃತ್ತಿ ಅವಕಾಶಗಳಿಗೆ ವಿದ್ಯಾರ್ಥಿಗಳನ್ನು ಪರಿಗಣನೆಗೆ ತೆಗೆದುಕೊಳ್ಳಲು ಇಂತಹ ಹೋಲಿಕೆಯು ಅಗತ್ಯ ಹಾಗೂ ಅನಿವಾರ್ಯವಾಗಿದೆ.

ಪರೀಕ್ಷಾ ಮಂಡಳಿಯ ಪರೀಕ್ಷೆಗಳಿಗೆ ಪರ್ಯಾಯವಾಗಿ ಆನ್‍ಲೈನ್ ಮೂಲಕ ಕಂಪ್ಯೂಟರ್ ಆಧಾರಿತ ಪರೀಕ್ಷೆಗಳನ್ನು ಮಾಡಲು ಅಗತ್ಯವಾದ ತಾಂತ್ರಿಕ ಸಾಧನಗಳ ಲಭ್ಯತೆ ಹಾಗೂ ಅನುಕೂಲ ಹೆಚ್ಚಿನ ಕುಟುಂಬಗಳಿಗೆ ಇಲ್ಲ. ಜೊತೆಗೆ, ಪ್ರಾಯೋಗಿಕವಾಗಿಯೂ ಈ ವಿಧಾನದಲ್ಲಿ ಪರೀಕ್ಷೆಗಳನ್ನು ಈವರೆಗೆ ನಡೆಸಿಲ್ಲವಾದ್ದರಿಂದ, ‘ಆನ್‍ಲೈನ್‌ನಲ್ಲಿ ಪ್ರಶ್ನೆಪತ್ರಿಕೆ ಸೋರಿಕೆ, ನಕಲು ಹಾಗೂ ಇನ್ನಿತರ ಪರೀಕ್ಷಾ ಅಕ್ರಮಗಳು ನಡೆಯಲಾರವು’ ಎಂದು ಖಚಿತವಾಗಿ ಹೇಳಲೂ ಸಾಧ್ಯವಿಲ್ಲ. ಅಂದಮೇಲೆ, ಈಗಿನ ಸ್ಥಿತಿಯಲ್ಲಿ ಆನ್‍ಲೈನ್ ಮೂಲಕವೂ ಪರೀಕ್ಷೆ ನಡೆಸಲು ಸಾಧ್ಯವಿಲ್ಲ ಎಂದಾಯಿತು.

ಇರುವ ಏಕೈಕ ಸಾಧ್ಯತೆಯೆಂದರೆ, ಎಲ್ಲಾ ರೀತಿಯ ಸುರಕ್ಷತಾ ಕ್ರಮಗಳೊಂದಿಗೆ ಬೋರ್ಡ್ ಪರೀಕ್ಷೆಗಳನ್ನು ನಡೆಸುವುದು. ಇಂಥದ್ದೇ ಸನ್ನಿವೇಶದಲ್ಲಿ ಕಳೆದ ಬಾರಿ ಎಸ್ಎಸ್ಎಲ್‌ಸಿ ಪರೀಕ್ಷೆಯನ್ನು ರಾಜ್ಯದಲ್ಲಿ ಯಶಸ್ವಿಯಾಗಿ ನಡೆಸಲಾಗಿತ್ತು. ಪ್ರಸಕ್ತ ಕೋವಿಡ್ ಪ್ರಕರಣಗಳ ಸಂಖ್ಯೆ ಇಳಿಮುಖವಾಗುತ್ತಿರುವ ಆಶಾದಾಯಕ ಬೆಳವಣಿಗೆ ಕಂಡುಬರುತ್ತಿದ್ದು, ಪರಿಸ್ಥಿತಿಯನ್ನು ನೋಡಿಕೊಂಡು, ವೈದ್ಯಕೀಯ ತಜ್ಞರ ಅಭಿಪ್ರಾಯ ಪಡೆದು ಜೂನ್ ಕೊನೆಯ ವಾರ ಅಥವಾ ಜುಲೈ ಮೊದಲ ವಾರದಲ್ಲಿ ಬೋರ್ಡ್ ಪರೀಕ್ಷೆಗಳನ್ನು ನಡೆಸಲು ಕ್ರಮ ಕೈಗೊಳ್ಳಬಹುದು.

ಪ್ರತಿ ವಿದ್ಯಾರ್ಥಿಯೂ ಅನನ್ಯ ಹಾಗೂ ವಿಶಿಷ್ಟ. ವಿಭಿನ್ನ ಕ್ಷೇತ್ರಗಳಲ್ಲಿ ಅವರದೇ ಆದ ಮಟ್ಟದಲ್ಲಿ ಪ್ರತಿಭೆ, ಸಾಮರ್ಥ್ಯ ಇರುತ್ತದೆ. ವರ್ಷಕ್ಕೆ ಒಮ್ಮೆ ನಡೆಸುವ ಅಂತಿಮ ಪರೀಕ್ಷೆಯ ಅಂಕಗಳಿಂದ ವಿದ್ಯಾರ್ಥಿಯ ಇಂತಹ ವಿಶಿಷ್ಟ ಪ್ರತಿಭೆಯನ್ನು ಗುರುತಿಸಲಾಗದು. ಪರೀಕ್ಷೆಗಳಿಗೂ ಅದರದ್ದೇ ಆದ ಮಿತಿಗಳಿವೆ. ವಿದ್ಯಾರ್ಥಿಗಳ ಸಾಮರ್ಥ್ಯ ಗುರುತಿಸಿ, ಅವರ ಪ್ರತಿಭೆಯ ಮಾಪನ ಮಾಡಿ, ಒಂದು ಸಂಯುಕ್ತ ಸೂಚ್ಯಂಕವನ್ನು ಪಾರದರ್ಶಕವಾಗಿ ನಿರ್ಧರಿಸುವಷ್ಟು ಶಾಲೆ, ಕಾಲೇಜುಗಳು ಸಶಕ್ತಗೊಳ್ಳಬೇಕು.

ವಿದ್ಯಾರ್ಥಿಯು ತನ್ನ ಪೋಷಕರು ಹಾಗೂ ಪರಿಸರದ ಪ್ರಭಾವ ಹಾಗೂ ಬೆಂಬಲದಿಂದ ಕಟ್ಟಿಕೊಳ್ಳುವ ಅನುಭವಗಳನ್ನೂ ಕಲಿಕೆಯ ವಿಶಾಲ ವ್ಯಾಪ್ತಿಗೆ ತರುವಂಥ ವ್ಯವಸ್ಥೆ ಬರಬೇಕು. ವಿವಿಧ ರೀತಿಯ ಕೌಟುಂಬಿಕ ಹಾಗೂ ಸಾಮಾಜಿಕ ಪರಿಸರದಲ್ಲಿ ವಿದ್ಯಾರ್ಥಿಯು ಹೆಚ್ಚು ಹೆಚ್ಚು ಶೈಕ್ಷಣಿಕ ಅನುಭವಗಳನ್ನು ದಕ್ಕಿಸಿಕೊಳ್ಳಲು ನೆರವಾಗುವಂತೆ ಕುಟುಂಬ ಹಾಗೂ ಸಮಾಜದ ಘಟಕಗಳಿಗೆ ಶಾಲೆಯು ಅಗತ್ಯ ಬೆಂಬಲ ನೀಡುವಂತೆ ಸಜ್ಜುಗೊಳಿಸಬೇಕು. ಹೀಗಾದಲ್ಲಿ ಕೋವಿಡ್‍ನಂತಹ ಸಾಂಕ್ರಾಮಿಕದ ಸಂದರ್ಭದಲ್ಲಿ ಉದ್ಭವಿಸುವ ಶೈಕ್ಷಣಿಕ ಬಿಕ್ಕಟ್ಟಿನಿಂದ ಪಾರಾಗಲು ಸಾಧ್ಯವಿದೆ.

ಡಾ.ಎಚ್.ಬಿ.ಚಂದ್ರಶೇಖರ್

ಲೇಖಕ: ಹಿರಿಯ ಸಹಾಯಕ ನಿರ್ದೇಶಕ, ಡಿ.ಎಸ್.ಇ.ಆರ್.ಟಿ., ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.