ADVERTISEMENT

ದೇಶ ವಿಭಜನೆಯ ಕ್ರೌರ್ಯದ ನೆನಪು ವರ್ತಮಾನದಲ್ಲಿ ಸಾಮರಸ್ಯಕ್ಕೆ ನೆರವಾಗದು

​ಪ್ರಜಾವಾಣಿ ವಾರ್ತೆ
Published 18 ಆಗಸ್ಟ್ 2021, 19:46 IST
Last Updated 18 ಆಗಸ್ಟ್ 2021, 19:46 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ದೇಶ ‘ವಿಭಜನೆಯ ಕ್ರೌರ್ಯದ ನೆನಪಿನ ದಿನ’ವನ್ನು ಪ್ರತೀ ಆಗಸ್ಟ್‌ 14ರಂದು ಆಚರಿಸುವುದಾಗಿ ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದಾರೆ.ಹಿಂದೆ ಅನುಭವಿಸಿದ ಕ್ರೌರ್ಯವನ್ನು ಮತ್ತೆ ಮತ್ತೆ ನೆನಪಿಸುವುದು ಯಾವುದೇ ಸಮಾಜಕ್ಕೆ ಅಥವಾ ವ್ಯಕ್ತಿಗೆ ಒಳ್ಳೆಯದನ್ನು ಮಾಡುವುದಿಲ್ಲ. ಕರಾಳ ನೆನಪನ್ನು ಜನರು ಮರೆಯಲು ಯತ್ನಿಸುತ್ತಾರೆಯೇ ಹೊರತು ಪದೇ ಪದೇ ನೆನಪಿಸಿಕೊಳ್ಳುವುದಕ್ಕೆ ಅಲ್ಲ.

ಈ ಹಿನ್ನೆಲೆಯಲ್ಲಿ ನೋಡಿದಾಗ ಪ್ರಧಾನಿಯವರ ಘೋಷಣೆಯು ವಿವೇಕದ ತೀರ್ಮಾನ ಅಲ್ಲ ಎಂದೇ ಹೇಳಬೇಕಾಗುತ್ತದೆ. ಇತಿಹಾಸದ ಯಾವ ನೆನಪು ತನ್ನನ್ನು ಆರೋಗ್ಯಪೂರ್ಣವಾಗಿಸುತ್ತದೆ, ಯಾವ ವಿಚಾರಗಳು ಮನಸ್ಸನ್ನು ಕೆಡಿಸುತ್ತವೆ ಎಂಬುದನ್ನೆಲ್ಲ ಪ್ರಜ್ಞಾಪೂರ್ವಕವಾಗಿ, ಅಪ್ರಜ್ಞಾಪೂರ್ವಕವಾಗಿ
ಲೆಕ್ಕ ಹಾಕುತ್ತಾ ಸಮಾಜವು ನೆನಪಿಸಿಕೊಳ್ಳುವಿಕೆ ಮತ್ತು ಮರೆವಿನ ಮೂಲಕ ಮುಂದಕ್ಕೆ ಸಾಗುತ್ತದೆ. ಇದೊಂದು ಸಾಮೂಹಿಕ ಪ್ರಕ್ರಿಯೆ.

ಆದ್ದರಿಂದಲೇ, ಕೆಡುಕನ್ನು ಮತ್ತೆ ಮತ್ತೆ ನೆನಪಿಸಿಕೊಳ್ಳಬಾರದು ಮತ್ತು ಒಳಿತನ್ನು ಮರೆವಿನ ಮರೆಗೆ ತಳ್ಳಬಾರದು ಎಂಬುದು ವಿವೇಕದ ಮಾತು. ಭಾರತದ ಇತ್ತೀಚಿನ ಇತಿಹಾಸದಲ್ಲಿ ಇರುವ ಅತ್ಯಂತ ಕ್ರೂರವಾದ ಸಾಮೂಹಿಕ ಅನುಭವ ಎಂದು ದೇಶ ವಿಭಜನೆಯನ್ನು ಪರಿಗಣಿಸಬಹುದು. ವಿಭಜನೆಗೆ ಸಂಬಂಧಿಸಿದಂತೆ ಅತೀವ ವೇದನೆ ಮತ್ತು ಸಂಕಷ್ಟದ ಸಾವಿರಾರು ವೈಯಕ್ತಿಕ ಕಥನಗಳಿವೆ. ವಿಭಜನೆಯ ಕರಾಳ ದಿನಗಳು ಉಪಖಂಡದ ಮೂರೂ ರಾಷ್ಟ್ರಗಳಿಗೆ ಅತಿ ಹೆಚ್ಚು ನೋವನ್ನು ಉಂಟುಮಾಡಿವೆ.

ಹಳೆಯ ಗಾಯಗಳನ್ನು ಕೆದಕಿ ಅವನ್ನು ವ್ರಣವಾಗಿಸುವುದರಲ್ಲಿ ಅರ್ಥವಿಲ್ಲ. ಕಳೆದ ದಶಕಗಳಲ್ಲಿ ಗಾಯವು ನಿಧಾನವಾಗಿ ಮಾಯತೊಡಗಿದೆ. ಈಗ ಅದನ್ನು ಕೆದಕಲೇಬಾರದು. ‘ಸಾಮಾಜಿಕ ವಿಭಜನೆ ಮತ್ತು ಸಂಘರ್ಷದಲ್ಲಿರುವ ವಿಷವನ್ನು ಹೊರತೆಗೆದು ಒಗ್ಗಟ್ಟಿನ ಸ್ಫೂರ್ತಿ, ಸಾಮಾಜಿಕ ಸಾಮರಸ್ಯವನ್ನು ಬಲಪಡಿಸಲು ಐತಿಹಾಸಿಕ ಕ್ರೌರ್ಯದ ವಾರ್ಷಿಕ ದಿನಾಚರಣೆ ಅಗತ್ಯ’ ಎಂದು ಮೋದಿ ಪ್ರತಿಪಾದಿಸಿದ್ದಾರೆ. ಆದರೆ, ವಿಭಜನೆಯ ದಿನದ ಅಚರಣೆಯು ಕಹಿ ಪ್ರಸಂಗಗಳು ಮತ್ತೆ ಮತ್ತೆ ಕಣ್ಣಮುಂದೆ ಹಾದು ಹೋಗಲು ಕಾರಣ ಆಗಬಹುದು.

ಎರಡು ದೇಶಗಳ ನಡುವಣ ರಕ್ತಸಿಕ್ತ ಗಡಿಯ ಚಿತ್ರಣ ಜನರ ಮನಸ್ಸಿನೊಳಗೆ ನೆಲೆಗೊಳ್ಳಬಹುದು. ವಿಭಜನೆಯ ಕರಾಳ ದಿನದ ನೆನಪು ಜನರ ಮನಸ್ಸುಗಳು ಮತ್ತೆ ವಿಭಜನೆಗೊಳ್ಳಲು ಕಾರಣವಾದೀತೇ ವಿನಾ ಅವರನ್ನು ಒಗ್ಗೂಡಿಸುವುದಕ್ಕೆ ಅಲ್ಲ. ಕೆಟ್ಟ ನೆನಪುಗಳನ್ನು ಕೆದಕುವುದು ವಿಭಜನಕಾರಿ ರಾಜಕಾರಣಕ್ಕೆ ಅನುಕೂಲವನ್ನು ಮಾಡಿಕೊಡಬಹುದೇ ವಿನಾ ಬೇರೆ ಯಾವ ಪ್ರಯೋಜನವೂ ಆಗದು.

ದೇಶ ವಿಭಜನೆಯ ಸಂದರ್ಭದಲ್ಲಿ ನಡೆದ ಕರಾಳ ಕೃತ್ಯಗಳು ಮತ್ತೆಂದೂ ನಡೆಯಬಾರದು ಎಂಬ ಎಚ್ಚರ ವಹಿಸುವುದಕ್ಕೆ ಮಾತ್ರ ಈ ನೆನಪು ಸೀಮಿತವಾಗಬೇಕು. ಅದನ್ನು ಬಿಟ್ಟು, ದೇಶಗಳ ನಡುವೆ, ಸಮುದಾಯಗಳ ನಡುವೆ ದ್ವೇಷ ಸೃಷ್ಟಿಯಾಗಲು ಈ ನೆನಪು ಬಳಕೆ ಆಗಲೇಬಾರದು ಎಂಬ ಎಚ್ಚರ ವಹಿಸಬೇಕಾದುದು ಸರ್ಕಾರದ ಕರ್ತವ್ಯ. ಪಾಕಿಸ್ತಾನದ ಜತೆ ಗಡಿ ಹಂಚಿಕೊಂಡಿರುವ ಪಂಜಾಬ್‌, ರಾಜಕೀಯವಾಗಿ ಅತ್ಯಂತ ಮಹತ್ವದ್ದಾದ ಉತ್ತರಪ್ರದೇಶ ಸೇರಿ ಐದು ರಾಜ್ಯಗಳ ವಿಧಾನಸಭಾ ಚುನಾವಣೆ ಕೆಲವೇ ತಿಂಗಳಲ್ಲಿ ನಡೆಯಲಿದೆ. ಇತ್ತೀಚಿನ ದಿನಗಳಲ್ಲಿ ನಮ್ಮ ದೇಶದಲ್ಲಿ ಚುನಾವಣೆಯ ಸಂದರ್ಭದಲ್ಲಿ ಧ್ರುವೀಕರಣ ಅಸ್ತ್ರವು ಅತ್ಯಂತ ವ್ಯಾಪಕವಾಗಿ ಬಳಕೆಯಾಗುತ್ತಿದೆ.

ಹಾಗಾಗಿ, ದೇಶವು ಎರಡಾಗಿ ತುಂಡಾದ ನಂತರದ ದಿನಗಳಲ್ಲಿ ನಡೆದ ಹಿಂಸಾಚಾರ ಮತ್ತು ಕೆಡುಕಿನ ನೆನಪುಗಳು ಮತ ಗಳಿಕೆಯ ಅಸ್ತ್ರವಾಗಿ ಬಳಕೆಯಾಗುವ ಅಪಾಯವಿದೆ ಎಂಬ ಕಳವಳವು ವ್ಯಕ್ತವಾಗಿದೆ. ವರ್ತಮಾನದ ರಾಜಕೀಯ ಲಾಭಕ್ಕಾಗಿ ಇತಿಹಾಸದ ಕ್ರೌರ್ಯದ ನೆನಪಿನ ಮೊರೆ ಹೋಗುವುದು ದೇಶದ ಭವಿಷ್ಯಕ್ಕೆ ಮಾರಕ ಆಗಬಹುದು.

ADVERTISEMENT

ಸ್ವಾತಂತ್ರ್ಯದ ಹಿಂದಿನ ರಾತ್ರಿಯನ್ನು ಗಮನಿಸಿದರೂ, ಸ್ವಾತಂತ್ರ್ಯಕ್ಕೆ ಹಿಂದಿನ ಕತ್ತಲು ಮತ್ತು ಸ್ವಾತಂತ್ರ್ಯದ ಸಂಭ್ರಮದ ಬೆಳಗು ಎಂಬ ಎರಡು ಭಾಗಗಳನ್ನು ಗುರುತಿಸಬಹುದು. ಸಾಮರಸ್ಯ ಮತ್ತು ಒಗ್ಗಟ್ಟಿಗಾಗಿ ಪ್ರಧಾನಿಯವರು ವಿಭಜನೆಯ ಕತ್ತಲಿನತ್ತ ನೋಡುವುದರ ಬದಲಿಗೆ, ಸ್ವಾತಂತ್ರ್ಯದ ಮುಂಜಾವಿನತ್ತ ದೃಷ್ಟಿ ಹರಿಸಬಹುದಾಗಿತ್ತು. ಆಗಸ್ಟ್‌ 15ರಂದು ನಾವು ಆಚರಿಸುವ ಸ್ವಾತಂತ್ರ್ಯದ ಸಂಭ್ರಮದ ಮೇಲೆ ಅದರ ಹಿಂದಿನ ದಿನ ಆಚರಿಸುವ ವಿಭಜನೆಯ ಕರಾಳ ನೆನಪಿನ ದಿನದ ಪ್ರತಿಕೂಲ ಪರಿಣಾಮ ಉಂಟಾಗುವ ಅಪಾಯ ಖಂಡಿತಾ ಇದೆ. ರಾಷ್ಟ್ರಪ‍್ರಜ್ಞೆ ಮತ್ತು ರಾಷ್ಟ್ರೀಯತೆಯ ಮೇಲೆಯೂ ಅದರ ಪರಿಣಾಮ ಇರಲಿದೆ. ನಮ್ಮ ದೃಷ್ಟಿಯು ಹಿಮ್ಮುಖವಾಗಿರಬೇಕೇ ಅಥವಾ ಭವಿಷ್ಯವನ್ನು ನೋಡಬೇಕೇ? ಸ್ವಾತಂತ್ರ್ಯ ದಿನದ ಭಾಷಣದಲ್ಲಿಯೂ ಮೋದಿಯವರುವಿಭಜನೆಯ ದಿನದ ಕರಾಳ ನೆನಪಿನ ಬಗ್ಗೆ ಮಾತನಾಡಿದ್ದಾರೆ. ಕಾಲ ಅಥವಾ ಸಮಯ ಎಂಬುದು ಅವರ ಭಾಷಣದ ಉದ್ದಕ್ಕೂ ಎದ್ದು ಕಂಡ ಅಂಶವಾಗಿತ್ತು. ಕಾಲದ ಹಲವು ಗಡುವುಗಳನ್ನು ಅವರು ಮುಂದೂಡಿದ್ದಾರೆ ಮತ್ತು ಹೊಸ ಗಡುವುಗಳನ್ನು ಹಾಕಿಕೊಂಡಿದ್ದಾರೆ.

ಹೌದು, ದೇಶವು ಈ ಗಡುವುಗಳೊಳಗೆ ಮಾಡಬೇಕಿರುವ ಕೆಲಸಗಳನ್ನು ಮಾಡುತ್ತಾ ಮುಂದಕ್ಕೆ ಸಾಗಬೇಕಿದೆ. ಯಾವುದೇ ದೇಶವು ಮುಂದಕ್ಕೆ ಸಾಗಬೇಕೇ ವಿನಾ ಹಿಂದಕ್ಕೆ ಅಲ್ಲ. ಹೊಸ ಮನಸ್ಸಿನೊಂದಿಗೆ ನಾವು ನಮ್ಮನ್ನು ಪುನಶ್ಚೇತನಗೊಳಿಸಿಕೊಳ್ಳಬೇಕು ಎಂದು ಶ್ರೀ ಅರವಿಂದೊ ಹೇಳಿದ್ದನ್ನು ಮೋದಿ ಉಲ್ಲೇಖಿಸಿದ್ದಾರೆ. ಭವಿಷ್ಯವನ್ನು ಚಿಂತಿಸಿ, ಭವಿಷ್ಯದತ್ತ ಮುಖಮಾಡಿ ಎಂದು ಅರವಿಂದೊ ಹೇಳಿದ್ದನ್ನೂ ಮೋದಿ ಅವರು ನೆನಪಿಸಿಕೊಳ್ಳಬೇಕಿತ್ತು. ಇತಿಹಾಸಕ್ಕೆ, ಕರಾಳ ನೆನಪಿಗೆ ಜೋತು ಬೀಳುವುದರಲ್ಲಿ ದೇಶಕ್ಕೆ ಯಾವ ಪ್ರಯೋಜನವೂ ಇಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.