ADVERTISEMENT

ಸಂಪಾದಕೀಯ | ಸಂಪುಟ ರಚನೆ: ಪ್ರಾದೇಶಿಕ ಅಸಮತೋಲನ, ಮಹಿಳೆಯರ ನಿರ್ಲಕ್ಷ್ಯ

​ಪ್ರಜಾವಾಣಿ ವಾರ್ತೆ
Published 4 ಆಗಸ್ಟ್ 2021, 20:01 IST
Last Updated 4 ಆಗಸ್ಟ್ 2021, 20:01 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಮ್ಮ ಸಂಪುಟಕ್ಕೆ 29 ಸಚಿವರನ್ನು ಸೇರಿಸಿಕೊಂಡಿದ್ದು ಎಲ್ಲರೂ ಬುಧವಾರ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಮುಖ್ಯಮಂತ್ರಿ ಸ್ಥಾನಕ್ಕೆ ಬಿ.ಎಸ್.ಯಡಿಯೂರಪ್ಪ ರಾಜೀನಾಮೆ ಸಲ್ಲಿಸಿದ ಬಳಿಕ ಉಂಟಾದ ರಾಜಕೀಯ ಗೊಂದಲದಿಂದ ಸಂಪುಟ ರಚನೆ ವಿಳಂಬವಾಗ ಬಹುದು ಎಂಬ ವಿಶ್ಲೇಷಣೆಗಳಿದ್ದವು. ಆದರೆ, ಆ ಕೆಲಸ ಕ್ಷಿಪ್ರವಾಗಿ ನಡೆದಿದೆ. ಕೊರೊನಾ ಮೂರನೇ ಅಲೆಯ ಆತಂಕ ಮತ್ತು ಉತ್ತರ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಪ್ರವಾಹ ಪರಿಸ್ಥಿತಿ ಇರುವಾಗ ರಾಜ್ಯದಲ್ಲಿ ನಾಯಕತ್ವ ಬದಲಾವಣೆಗೆ ಮುಂದಾದ ಬಿಜೆಪಿ ವರಿಷ್ಠರ ನಡೆ ಬಗ್ಗೆ ಕೆಲವರಲ್ಲಿ ಅಸಮಾಧಾನ ಇದ್ದದ್ದು ಸುಳ್ಳಲ್ಲ. ಸಂಪುಟ ರಚನೆಗೆ ವಿಘ್ನಗಳು ಎದುರಾಗಿದ್ದಲ್ಲಿ ಅದು ಇನ್ನಷ್ಟು ಹೆಚ್ಚುತ್ತಿತ್ತು. ಆ ಕಸರತ್ತು ಬೇಗ ಮುಗಿದಿರುವುದರಿಂದ ಹೊಸ ಸರ್ಕಾರಕ್ಕೆ ಜನರ ಸಮಸ್ಯೆಗಳ ನಿವಾರಣೆಯತ್ತ ಗಮನಹರಿಸಲು ಅನುಕೂಲ ಆಗಲಿದೆ.ಬೊಮ್ಮಾಯಿ ಅವರ ಸಂಪುಟದಲ್ಲಿ ಹೊಸಬರಿಗೆ ಮತ್ತು ಯುವಜನರಿಗೆ ಹೆಚ್ಚು ಆದ್ಯತೆ ದೊರೆಯಲಿದೆ ಎಂಬ ನಿರೀಕ್ಷೆ ಇತ್ತು. ಅದು ಹುಸಿಯಾಗಿದೆ. ಯಡಿಯೂರಪ್ಪ ಅವರ ಸಂಪುಟದಲ್ಲಿದ್ದ ಹಿರಿಯರಾದ ಜಗದೀಶ ಶೆಟ್ಟರ್, ಲಕ್ಷ್ಮಣ ಸವದಿ, ಎಸ್‌. ಸುರೇಶ್ ಕುಮಾರ್, ಅರವಿಂದ ಲಿಂಬಾವಳಿ ಸಹಿತ ಒಟ್ಟು ಏಳು ಮಂದಿಗೆ ಈಗಿನ ಸಂಪುಟದಲ್ಲಿ ಸ್ಥಾನ ಇಲ್ಲ. 29 ಸಚಿವರಲ್ಲಿ 23 ಮಂದಿ ಈ ಹಿಂದೆ ಯಡಿಯೂರಪ್ಪ ಅವರ ಸಂಪುಟದಲ್ಲಿ ಕಾರ್ಯನಿರ್ವಹಿಸಿದವರೇ ಆಗಿದ್ದಾರೆ. ಆರು ಮಂದಿಗೆ ಇದೇ ಮೊದಲ ಸಲ ಸಚಿವರಾಗುವ ಅವಕಾಶ ದೊರೆತಿದೆ. ಮತ್ತೊಬ್ಬ ಹಿರಿಯರಾದ ಕೆ.ಎಸ್. ಈಶ್ವರಪ್ಪ ಅವರಿಗೂ ಈ ಸಲ ಸಚಿವ ಸ್ಥಾನ ಕೈತಪ್ಪಬಹುದು ಎಂಬ ಸುದ್ದಿಗಳು ಮಾಧ್ಯಮಗಳಲ್ಲಿ ಹರಿದಾಡಿದ್ದವು. ಆದರೆ, ಅವರಿಗೆ ಪುನಃ ಅವಕಾಶ ಒಲಿದಿದೆ. ‘ಆಪರೇಷನ್ ಕಮಲ’ದ ಮೂಲಕ ಕಾಂಗ್ರೆಸ್ ಮತ್ತು ಜೆಡಿಎಸ್‍ನಿಂದ ಬಿಜೆಪಿಗೆ ಬಂದವರ ಪೈಕಿ ಇಬ್ಬರು ಸಚಿವ ಸ್ಥಾನವನ್ನು ಕಳೆದುಕೊಂಡಿರುವುದು ಗಮನಾರ್ಹ. ಹೊಸ ಸಂಪುಟದಲ್ಲಿ ತಮ್ಮ ಮಗ ಬಿ.ವೈ. ವಿಜಯೇಂದ್ರ ಅವರಿಗೆ ಸ್ಥಾನ ದೊರಕಿಸಿಕೊಡಲು ಯಡಿಯೂರಪ್ಪ ನಡೆಸಿದರು ಎನ್ನಲಾದ ಯತ್ನ ಫಲಕಾರಿಯಾಗಿಲ್ಲ. ಯಡಿಯೂರಪ್ಪ ಅವರು ಅಧಿಕಾರದಲ್ಲಿದ್ದಾಗ ವಿಜಯೇಂದ್ರ ಅವರು ಆಡಳಿತದಲ್ಲಿ ಹಸ್ತಕ್ಷೇಪ ನಡೆಸುತ್ತಿದ್ದರು ಎಂಬ ಆರೋಪ ಇತ್ತು. ಆಡಳಿತ ಪಕ್ಷದ ಕೆಲವು ಶಾಸಕರೇ ಇಂತಹ ಆರೋಪ ಮಾಡಿದ್ದರು. ಮತ್ತೊಂದು ಅಧಿಕಾರ ಕೇಂದ್ರ ನೆಲೆಗೊಳ್ಳುವುದು ಬೇಡ ಎಂಬ ಮುನ್ನೆಚ್ಚರಿಕೆಯ ಕ್ರಮವಾಗಿ ಅವರ ಸೇರ್ಪಡೆಗೆ ವರಿಷ್ಠರು ಅನುಮತಿ ನಿರಾಕರಿಸಿರುವ ಸಾಧ್ಯತೆ ಇದೆ.ಅಷ್ಟರಮಟ್ಟಿಗೆ ಯಡಿಯೂರಪ್ಪ ಅವರಿಗೆ ಹಿನ್ನಡೆಯಾಗಿದೆ ಎನ್ನಲು ಅಡ್ಡಿಯಿಲ್ಲ. ಆದರೆ ತಮ್ಮ ನೇತೃತ್ವದ ಸರ್ಕಾರದ ವಿರುದ್ಧ ಬಹಿರಂಗವಾಗಿ ವಾಗ್ದಾಳಿ ನಡೆಸಿದ ಶಾಸಕರಾದ ಬಸನಗೌಡ ಪಾಟೀಲ ಯತ್ನಾಳ್, ಅರವಿಂದ ಬೆಲ್ಲದ ಮತ್ತು ಸಿ.ಪಿ. ಯೋಗೇಶ್ವರ್ ಅವರ ಸಂಪುಟ ಸೇರ್ಪಡೆ ಯತ್ನವನ್ನು ತಡೆಯುವಲ್ಲಿ ಯಡಿಯೂರಪ್ಪ ಯಶಸ್ವಿಯಾಗಿ ದ್ದಾರೆ ಎನ್ನಬಹುದು. ಕೋವಿಡ್ ಎರಡನೇ ಅಲೆಯನ್ನು ಪರಿಣಾಮಕಾರಿಯಾಗಿ ಎದುರಿಸಲು ರಾಜ್ಯ ಸರ್ಕಾರಕ್ಕೆ ಸಾಧ್ಯವಾಗಿರಲಿಲ್ಲ. ಸಚಿವರ ನಡುವೆ ಹೊಂದಾಣಿಕೆ ಇಲ್ಲದೇ ಇದ್ದುದು ಅದಕ್ಕೆ ಒಂದು ಕಾರಣ. ಹೊಸ ಸಂಪುಟದಲ್ಲೂ ಹೆಚ್ಚಿನವರು ಅವರೇ ಇದ್ದಾರೆ. ಆದಕಾರಣ, ಆಡಳಿತದಲ್ಲಿ ದೊಡ್ಡ ಮಟ್ಟದಲ್ಲಿ ಬದಲಾವಣೆ ತರುವುದು,ಹೊಸಚೈತನ್ಯ ತುಂಬುವುದು ಮುಖ್ಯಮಂತ್ರಿಯವರಿಗೆ ಸವಾಲಿನ ಕೆಲಸವಾಗ ಬಹುದು. ಹೊಸ ನಿರೀಕ್ಷೆಗಳನ್ನು ಮೂಡಿಸಬಲ್ಲಂತಹ ತಂಡವನ್ನು ಹೊಂದುವ ಅವಕಾಶ ಇತ್ತು. ಆ ಸಾಧ್ಯತೆಯನ್ನು ಮುಖ್ಯಮಂತ್ರಿ ಮತ್ತು ಪಕ್ಷದ ವರಿಷ್ಠರು ಬಳಸಿಕೊಂಡಿಲ್ಲ. ಸಚಿವ ಸಂಪುಟ ರಚನೆಯ ಬೆನ್ನಲ್ಲೇ ಅಸಮಾಧಾನಗಳು ಕೂಡ ಹೊರಬಿದ್ದಿವೆ. ಅವಕಾಶವಂಚಿತ ಕೆಲವು ಶಾಸಕರ ಬೆಂಬಲಿಗರು ಕೆಲವೆಡೆ ಪ್ರತಿಭಟನೆ ನಡೆಸಿದ್ದಾರೆ. ಇದನ್ನು ಊಹಿಸಿಯೇ ಸಂಪುಟದಲ್ಲಿ ನಾಲ್ಕು ಸ್ಥಾನಗಳನ್ನು ಖಾಲಿ ಉಳಿಸಿಕೊಳ್ಳಲಾಗಿದೆ ಎನ್ನುವುದು ಸರ್ವವೇದ್ಯ. ಆಡಳಿತಕ್ಕೆ ಹೊರೆಯೆನಿಸಿದ್ದ ಉಪಮುಖ್ಯಮಂತ್ರಿ ಸ್ಥಾನಗಳನ್ನು ಕೈಬಿಟ್ಟಿರುವುದು ಸ್ವಾಗತಾರ್ಹ.

ಸಚಿವ ಸಂಪುಟ ರಚನೆಯಲ್ಲಿ ಪ್ರಾದೇಶಿಕ ಅಸಮತೋಲನ ಎದ್ದು ಕಾಣುವಂತಿದೆ. ಬೆಂಗಳೂರು ನಗರಕ್ಕೆ ಸಿಂಹಪಾಲು ಲಭಿಸಿದೆ. ಆರು ಜಿಲ್ಲೆಗಳಿಂದ ತಲಾ ಇಬ್ಬರು ಸಚಿವರಾಗಿದ್ದರೆ, 13 ಜಿಲ್ಲೆಗಳಿಗೆ ಸಚಿವ ಸಂಪುಟದಲ್ಲಿ ಪ್ರಾತಿನಿಧ್ಯವೇ ಸಿಕ್ಕಿಲ್ಲ. ಅದರಲ್ಲೂ ಉತ್ತರ ಕರ್ನಾಟಕದ ಕಲಬುರ್ಗಿ, ಬಳ್ಳಾರಿ, ವಿಜಯ ಪುರ, ರಾಯಚೂರು, ಯಾದಗಿರಿ ಜಿಲ್ಲೆಗಳನ್ನು ಸಂಪೂರ್ಣ ನಿರ್ಲಕ್ಷಿಸಲಾಗಿದೆ. ಚಾಮರಾಜನಗರ, ಮೈಸೂರು, ಕೊಡಗು, ಹಾಸನ ಜಿಲ್ಲೆಗೂ ಪ್ರಾತಿನಿಧ್ಯ ದೊರೆತಿಲ್ಲ. ರಾಜಕೀಯ ಅನಿವಾರ್ಯಗಳು ಏನೇ ಇದ್ದರೂ ಈ ರೀತಿಯ ಪ್ರಾದೇಶಿಕ ತಾರತಮ್ಯವು ಅಭಿವೃದ್ಧಿಯ ಅಸಮಾನತೆಗೆ ಕಾರಣವಾಗುವುದು ಸುಳ್ಳಲ್ಲ. ಮಹಿಳೆಯರ ಪ್ರಾತಿನಿಧ್ಯದ ವಿಷಯದಲ್ಲೂ ಇತ್ತೀಚೆಗೆ ನಿಸ್ಸೀಮ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ. ಯಡಿಯೂರಪ್ಪ ನೇತೃತ್ವದ ಸರ್ಕಾರದಲ್ಲಿ ಸಚಿವೆ ಆಗಿದ್ದ ಶಶಿಕಲಾ ಜೊಲ್ಲೆ ಅವರಿಗೆ ಸ್ಥಾನ ಕೈತಪ್ಪಬಹುದು ಎಂಬ ವದಂತಿ ಇತ್ತು. ಅದು ನಿಜವಾಗಿಲ್ಲ. ಹೊಸ ಸಚಿವ ಸಂಪುಟದಲ್ಲಿ ಮಹಿಳಾ ಸಮುದಾಯವನ್ನು ಪ್ರತಿನಿಧಿಸುವ ಏಕೈಕ ಪ್ರತಿನಿಧಿ ಅವರು. ಇಸ್ಲಾಂ, ಕ್ರೈಸ್ತ, ಜೈನ ಮುಂತಾದ ಅಲ್ಪಸಂಖ್ಯಾತ ಧರ್ಮಗಳಿಗೆ ಪ್ರಾತಿನಿಧ್ಯ ಸಿಕ್ಕಿಲ್ಲ. ಜಾತಿಗಳ ಪ್ರಾತಿನಿಧ್ಯವನ್ನು ಗಮನಿಸಿದರೂ ಪ್ರಬಲ ಜಾತಿಗಳ ಪಾರಮ್ಯವೇ ಎದ್ದು ಕಾಣುತ್ತಿದೆ. ಕೋವಿಡ್‌ ಸಾಂಕ್ರಾಮಿಕ ಮತ್ತು ಪ್ರವಾಹದ ಕಾರಣದಿಂದ ರಾಜ್ಯದ ಜನರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರಗಳಲ್ಲಿ ವಿವಿಧ ಸಮಸ್ಯೆಗಳಿವೆ. ಈಗಿನದ್ದು ಸಾಮಾನ್ಯ ಸ್ಥಿತಿ ಅಲ್ಲ. ಹಾಗಾಗಿ, ಜನರ ಸಂಕಷ್ಟದ ತೀವ್ರತೆ ತಗ್ಗಿಸಲು ಸರ್ಕಾರವು ಅತ್ಯಂತ ದಕ್ಷವಾಗಿ ಮತ್ತು ಚುರುಕಿನಿಂದ ಕೆಲಸ ಮಾಡಬೇಕಿದೆ. ನೆಲಕಚ್ಚಿರುವ ಆರ್ಥಿಕತೆಗೆ ಪುನಶ್ಚೇತನ ತುಂಬಿ, ಸಂಪನ್ಮೂಲ ಕ್ರೋಡೀಕರಣಕ್ಕೂ ಒತ್ತು ಕೊಡಬೇಕಿದೆ. ಖಾತೆ ಹಂಚಿಕೆಯ ಕೆಲಸವನ್ನು ಕ್ಷಿಪ್ರವಾಗಿ ಪೂರ್ಣಗೊಳಿಸಿ, ಸಚಿವರು ತಕ್ಷಣವೇ ಕಾರ್ಯಪ್ರವೃತ್ತರಾಗಲು ಮುಖ್ಯಮಂತ್ರಿ ಅನುವು ಮಾಡಿಕೊಡಬೇಕಿದೆ. ಎರಡು ವರ್ಷಗಳ ರಾಜಕೀಯ ಅಸ್ಥಿರತೆಯಿಂದ ಜಡಗೊಂಡಿರುವ ಆಡಳಿತ ವ್ಯವಸ್ಥೆಗೆ ಚುರುಕು ಮುಟ್ಟಿಸುವ ಕೆಲಸವು ತುರ್ತಾಗಿ ಆಗಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT