ADVERTISEMENT

ಸಂಪಾದಕೀಯ: ಲಸಿಕೆ ನೀತಿಯಲ್ಲಿ ಗೊಂದಲ ಸರ್ಕಾರದ ಅಸಡ್ಡೆಗೆ ಪುರಾವೆ

​ಪ್ರಜಾವಾಣಿ ವಾರ್ತೆ
Published 13 ಮೇ 2021, 19:31 IST
Last Updated 13 ಮೇ 2021, 19:31 IST
   

ಅತ್ಯಂತ ಅಸಾಮಾನ್ಯವಾದ ಆರೋಗ್ಯ ಬಿಕ್ಕಟ್ಟನ್ನು ನಿಭಾಯಿಸಲು ನೇರ ನಡೆ–ನುಡಿ, ಕೈಗೊಳ್ಳುವ ಕ್ರಮಗಳಲ್ಲಿ ಪಾರದರ್ಶಕತೆ, ಪ್ರಾಮಾಣಿಕತೆ ಬೇಕು. ಗೊಂದಲಕ್ಕೆ ಆಸ್ಪದ ಇಲ್ಲದ ರೀತಿಯ ನೀತಿಗಳನ್ನು ರೂಪಿಸಬೇಕು. ತಪ್ಪು ಆದಾಗ ಅದನ್ನು ಒಪ್ಪಿಕೊಂಡು, ತಿದ್ದಿಕೊಳ್ಳುವ ವಿನಯ ಬೇಕು. ಕೋವಿಡ್‌–19ರಂತಹ ಸಾಂಕ್ರಾಮಿಕದ ನಿರ್ವಹಣೆಯಲ್ಲಿ ಆಗುವ ತಪ್ಪುಗಳು ಜನರನ್ನು ಬಲಿ ಪಡೆಯಬಹುದು ಎಂಬ ಎಚ್ಚರ ಬೇಕು. ನಮ್ಮ ಆಡಳಿತಾರೂಢರು ಈ ಎಲ್ಲದರಲ್ಲೂ ಎಡವಿದ್ದಾರೆ ಎಂಬುದಕ್ಕೆ ದೇಶದ ಜನರ ಕಣ್ಣೀರು, ರೋದನವೇ ಸಾಕ್ಷಿ.

ಕೋವಿಡ್‌ ನಿರ್ವಹಣೆಗೆ ಏನೇನು ಬೇಕೋ ಅವು ಯಾವುವೂ ಇಲ್ಲ ಎಂಬುದು ನಮ್ಮ ದೇಶದ ಈಗಿನ ಸ್ಥಿತಿ. ಆಸ್ಪತ್ರೆಗಳಲ್ಲಿ ಹಾಸಿಗೆ ಇಲ್ಲ, ಆಮ್ಲಜನಕ ಇಲ್ಲ, ವೆಂಟಿಲೇಟರ್‌ ಇಲ್ಲ, ಔಷಧ ಇಲ್ಲ, ಆಂಬುಲೆನ್ಸ್‌ ಇಲ್ಲ. ಎಲ್ಲೆಡೆಯೂ ರೋಗಿಗಳು ಮತ್ತು ಸಾವು ನೋವು ಮಾತ್ರ ಇದೆ. ಕೋವಿಡ್‌ ಎರಡನೇ ಅಲೆ ಬರಲಿದೆ ಎಂದು ತಜ್ಞರು ಮೊದಲೇ ಹೇಳಿದ್ದರೂ ಅಗತ್ಯ ಸಿದ್ಧತೆ ಮಾಡಿಕೊಳ್ಳದೆ ಅಸಡ್ಡೆ ತೋರಿದ ಅಧಿಕಾರಸ್ಥರು ನಾಚಿಕೆಯಿಂದ ತಲೆ ತಗ್ಗಿಸಬೇಕಾದ ಸಂದರ್ಭ ಇದು. ದೇಶವನ್ನು ಈ ಸ್ಥಿತಿಗೆ ತಳ್ಳಿದ್ದರಲ್ಲಿ ಆಡಳಿತಾರೂಢರ ಪಾಲೇ ದೊಡ್ಡದು.

ಕೋವಿಡ್‌ನಿಂದ ರಕ್ಷಣೆ ಪಡೆಯಲು ಇರುವ ಒಂದು ದಾರಿ ಲಸಿಕೆ ಹಾಕಿಸಿಕೊಳ್ಳುವುದು. ಆದರೆ, ಜಗತ್ತಿನಲ್ಲಿ ಅತ್ಯಂತ ಹೆಚ್ಚು ಲಸಿಕೆ ತಯಾರಿಸುವ ಸಾಮರ್ಥ್ಯದ ಭಾರತದಲ್ಲಿ ದೇಶದ ಪೌರರಿಗೆ ಪೂರೈಸಲು ಲಸಿಕೆ ಇಲ್ಲ ಎಂಬ ದಯನೀಯ ಸ್ಥಿತಿ ಈಗ ಸೃಷ್ಟಿಯಾಗಿದೆ. ಎಲ್ಲರಿಗೂ ತಕ್ಷಣಕ್ಕೆ ಲಸಿಕೆ ಪೂರೈಸಲು ಸಾಧ್ಯವಿಲ್ಲ ಎಂಬುದು ನಿಜ. ಇರುವ ಲಸಿಕೆಯನ್ನು ಗೊಂದಲವಿಲ್ಲದೆ ಪೂರೈಸುವ ನೀತಿಯನ್ನು ರೂಪಿಸಬಹುದಲ್ಲವೇ? ಜನವರಿ 16ರಂದು ಆರಂಭವಾದ ಲಸಿಕೆ ಅಭಿಯಾನವು ನಾಲ್ಕು ತಿಂಗಳು ಪೂರೈಸುವ ಈ ಹೊತ್ತಿನಲ್ಲಿಯೂ ಕುಂಟುತ್ತಲೇ ಸಾಗಿದೆ.

ಗೊಂದಲ, ಅವ್ಯವಸ್ಥೆ ದಿನ ಕಳೆದಂತೆ ಹೆಚ್ಚುತ್ತಲೇ ಇದೆ. ಲಸಿಕೆ ಅಭಿಯಾನವನ್ನು ನಿರ್ವಹಿಸುವುದಕ್ಕಾಗಿ ಕೋವಿನ್‌ ಎಂಬ ಪೋರ್ಟಲ್‌ ಸಿದ್ಧಪಡಿಸಲಾಗಿದೆ; ಯಾವ ಗೊಂದಲವೂ ಇಲ್ಲದೆ ಅಭಿಯಾನ ನಡೆಯಲಿದೆ ಎಂದು ಸರ್ಕಾರ ಹೇಳಿತ್ತು. ಪೋರ್ಟಲ್‌ನಲ್ಲಿ ನೋಂದಣಿ ಮಾಡಿಕೊಂಡ ಜನರು ಲಸಿಕೆ ಕೇಂದ್ರಕ್ಕೆ ಹೋದರೆ ಹಲವೆಡೆ ‘ಲಸಿಕೆ ಇಲ್ಲ’ ಎಂಬ ಫಲಕವಷ್ಟೇ ಕಾಣಿಸುತ್ತದೆ. ಎರಡನೇ ಡೋಸ್‌ ಹಾಕಿಸಿಕೊಳ್ಳುವವರಿಗೂ ಲಸಿಕೆ ಸಿಗುತ್ತಿಲ್ಲ. 70–80 ವರ್ಷ ವಯಸ್ಸಾಗಿರುವ ಹಿರಿಯ ನಾಗರಿಕರು ಲಸಿಕೆ ಕೇಂದ್ರದ ಮುಂದೆ ಇಡೀ ದಿನ ಕಾಯುವಂತಹ ಪರಿಸ್ಥಿತಿ ಇದೆ. ಅಲ್ಲಿ ಅಂತರ ಕಾಯ್ದುಕೊಳ್ಳುವಿಕೆಯೂ ಇಲ್ಲದೆ ಕೋವಿಡ್‌ ಹರಡುವ ಅಪಾಯವೂ ದಟ್ಟವಾಗಿದೆ.

45 ವರ್ಷ ದಾಟಿದವರಿಗೆ ಉಚಿತವಾಗಿ ಲಸಿಕೆ ಪೂರೈಸುವುದಾಗಿ ಕೇಂದ್ರ ಸರ್ಕಾರ ಹೇಳಿದೆ. ಈ ವರ್ಗದ ಎಲ್ಲರಿಗೆ ಲಸಿಕೆ ಪೂರೈಸುವುದಕ್ಕೂ ಮುನ್ನವೇ 18 ದಾಟಿದ ಎಲ್ಲರೂ ಲಸಿಕೆಗೆ ಅರ್ಹರು ಎಂದು ಘೋಷಿಸಲಾಗಿದೆ. ಈ ವರ್ಗದ ಕೆಲವರಿಗಷ್ಟೇ ಲಸಿಕೆ ನೀಡಿದ ಬಳಿಕ ಹೆಚ್ಚಿನ ರಾಜ್ಯಗಳು, ‘18 ದಾಟಿದವರಿಗೆ ಸದ್ಯಕ್ಕೆ ಲಸಿಕೆ ಇಲ್ಲ’ ಎಂದು ಪ್ರಕಟಿಸಿವೆ.

ಇದು ಸಾಲದು ಎಂಬಂತೆ, ಲಸಿಕೆ ನೀತಿಗೆ ಸಂಬಂಧಿಸಿ ಸರ್ಕಾರ ಆಗಾಗ ಹೊರಡಿಸುವ ಸೂಚನೆಗಳು ಜನರಲ್ಲಿ ಲಸಿಕೆ ಬಗ್ಗೆ ಇರುವ ನಂಬಿಕೆಯೇ ಕುಂದುವಂತೆ ಮಾಡಿವೆ. ಮೊದಲ ಡೋಸ್‌ ಪಡೆದುಕೊಂಡ 28 ದಿನಗಳ ಬಳಿಕ ಎರಡನೇ ಡೋಸ್‌ ಹಾಕಿಸಿಕೊಳ್ಳಬೇಕು ಎಂದು ಮೊದಲು ಹೇಳಲಾಗಿತ್ತು. ಬಳಿಕ, 6 ವಾರಗಳ ಅಂತರದಲ್ಲಿ ಎರಡನೇ ಡೋಸ್‌ ತೆಗೆದುಕೊಳ್ಳಬೇಕು ಎನ್ನಲಾಯಿತು. ಈಗ, ಕೋವಿಶೀಲ್ಡ್‌ ಲಸಿಕೆಯ ಎರಡನೇ ಡೋಸ್‌ ಅನ್ನು 12ರಿಂದ 16 ವಾರಗಳ ಅಂತರದಲ್ಲಿ ತೆಗೆದುಕೊಳ್ಳಬೇಕು ಎಂದು ಸೂಚಿಸಲಾಗಿದೆ.

ಲಸಿಕೆ ಕೊರತೆಯನ್ನು ಮುಚ್ಚಿಡುವುದಕ್ಕಾಗಿಯೇ ಇಂತಹ ಬದಲಾವಣೆ ಮಾಡಲಾಗುತ್ತಿದೆ ಎಂಬ ಅನುಮಾನಕ್ಕೆ ಇದು ಕಾರಣವಾಗಿದೆ. ಕೋವಿಡ್‌ನಿಂದ ಚೇತರಿಸಿಕೊಂಡವರು ಆರು ತಿಂಗಳ ನಂತರವಷ್ಟೇ ಲಸಿಕೆ ಹಾಕಿಸಿಕೊಳ್ಳಬೇಕು ಎಂದು ಸರ್ಕಾರ ನೇಮಿಸಿದ್ದ ತಜ್ಞರ ಸಮಿತಿ ಹೇಳಿದೆ. ಮೊದಲ ಡೋಸ್‌ ಹಾಕಿಸಿಕೊಂಡ ಬಳಿಕ ಕೋವಿಡ್‌ಗೆ ಒಳಗಾದವರು ಏನು ಮಾಡಬೇಕು? ಕೋವಿಡ್‌ನಿಂದ ಚೇತರಿಸಿಕೊಂಡ ಬಳಿಕ, ಆರು ತಿಂಗಳ ಮೊದಲೇ ಎರಡೂ ಡೋಸ್‌ ಹಾಕಿಸಿಕೊಂಡವರ ಸ್ಥಿತಿ ಏನು? ದಿನಕ್ಕೊಂದು ನೀತಿ ಜಾರಿಗೆ ತರುವುದನ್ನು ನೋಡಿದರೆ ಸರ್ಕಾರವು ಜನರ ಜೀವದ ಜತೆ ಚೆಲ್ಲಾಟ ಆಡುತ್ತಿದೆ ಎಂದು ಅನಿಸದೇ? ‘ಲಸಿಕೆ ನೀತಿಯನ್ನು ವಿಜ್ಞಾನಿಗಳು ಮತ್ತು ಪರಿಣತ ವೈದ್ಯರು ರೂಪಿಸಿದ್ದಾರೆ. ಹಾಗಾಗಿ ನ್ಯಾಯಾಂಗದ ಮಧ್ಯಪ್ರವೇಶ ಬೇಡ’ ಎಂದು ಸುಪ್ರೀಂ ಕೋರ್ಟ್‌ಗೆ ಕೇಂದ್ರವು ಇತ್ತೀಚೆಗೆ ತಿಳಿಸಿದೆ.

ADVERTISEMENT

ಪರಿಣತರು ರೂಪಿಸಿದ ನೀತಿಯಲ್ಲಿ ಇಷ್ಟೊಂದು ಗೊಂದಲಗಳು ಇವೆ ಎಂದಾದರೆ ಅದಕ್ಕೆ ಅರ್ಥವೇನು? ತಮ್ಮನ್ನು ಆಳುವುದಕ್ಕಾಗಿ ಆರಿಸಿ ಕಳುಹಿಸಿದ ಪೌರರಿಗೆ ಉತ್ತರ ಹೇಳುವ ಹೊಣೆಗಾರಿಕೆಯನ್ನಾದರೂ ಸರ್ಕಾರ ನಿಭಾಯಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.