ADVERTISEMENT

ಸಂಪಾದಕೀಯ: ಮಕ್ಕಳ ಪರೀಕ್ಷೆಗಳನ್ನು ಮತ್ತೆ ಪರೀಕ್ಷೆಗೆ ಒಡ್ಡಿದ ಕೊರೊನಾ

​ಪ್ರಜಾವಾಣಿ ವಾರ್ತೆ
Published 15 ಏಪ್ರಿಲ್ 2021, 19:30 IST
Last Updated 15 ಏಪ್ರಿಲ್ 2021, 19:30 IST
ಸಂಪಾದಕೀಯ
ಸಂಪಾದಕೀಯ   

ಕೇಂದ್ರ ಪ್ರೌಢ ಶಿಕ್ಷಣ ಮಂಡಳಿಯು (ಸಿಬಿಎಸ್‌ಇ) ಪ್ರಸಕ್ತ ಶೈಕ್ಷಣಿಕ ಸಾಲಿನ ಹತ್ತನೇ ತರಗತಿ ಪರೀಕ್ಷೆಯನ್ನು ರದ್ದುಗೊಳಿಸಿದ್ದು, 12ನೇ ತರಗತಿ ಪರೀಕ್ಷೆಯನ್ನು ಮುಂದೂಡಲು ತೀರ್ಮಾನಿಸಿದೆ. ಕೋವಿಡ್‌ನ ಎರಡನೇ ಅಲೆ ಏರುಗತಿಯಲ್ಲಿರುವ ಸಂದರ್ಭದಲ್ಲಿ ಸಿಬಿಎಸ್‌ಇ ಕೈಗೊಂಡಿರುವ ಈ ನಿರ್ಧಾರದಿಂದ ವಿದ್ಯಾರ್ಥಿಗಳಲ್ಲಿ ಒಂದು ರೀತಿಯ ನಿರಾಳಭಾವ ಮೂಡಿರಬೇಕು. ಕಳೆದ ವರ್ಷ ಬೀಸಿದ ಸಾಂಕ್ರಾಮಿಕದ ಅಲೆಗೂ ಈ ವರ್ಷ ಶುರುವಾಗಿರುವ ಅದರ ಎರಡನೇ ಅಲೆಗೂ ವ್ಯತ್ಯಾಸವಿದೆ. ಏಕೆಂದರೆ, ಈಗ ಚಿಕ್ಕ ವಯಸ್ಸಿನವರೂ ದೊಡ್ಡಸಂಖ್ಯೆಯಲ್ಲಿ ಸೋಂಕುಪೀಡಿತರಾಗುತ್ತಿದ್ದಾರೆ. ಆರೋಗ್ಯ ಇಲಾಖೆಯೇ ನೀಡಿರುವ ಮಾಹಿತಿ ಪ್ರಕಾರ, ಹದಿಹರೆಯದ ಮಕ್ಕಳೂ ಈಗ ಸಾಂಕ್ರಾಮಿಕದಿಂದ ಬಳಲುತ್ತಿದ್ದಾರೆ. ಇಂತಹ ಸನ್ನಿವೇಶದಲ್ಲಿ ವಿದ್ಯಾರ್ಥಿಗಳ ಸುರಕ್ಷತೆಗೆ ಒತ್ತು ನೀಡಲು ಈ ನಿರ್ಧಾರ ಕೈಗೊಳ್ಳಲಾಗಿದೆ ಎನ್ನುವುದು ಸಿಬಿಎಸ್‌ಇ ಸ್ಪಷ್ಟನೆ. ವಿದ್ಯಾರ್ಥಿಗಳ ಶಿಕ್ಷಣದ ಮಟ್ಟವನ್ನು ಅಳೆಯುವ ಆಂತರಿಕ ವ್ಯವಸ್ಥೆಯೊಂದು ಅದರ ಪಠ್ಯಕ್ರಮದಲ್ಲಿ ಮೊದಲಿನಿಂದಲೂ ಇದೆ. ಅಂಕಗಳನ್ನು ನೀಡಲು ಈಗ ಮಾನದಂಡವನ್ನೂ ಅದು ಸಿದ್ಧಪಡಿಸುತ್ತಿದೆ. ಹೀಗಾಗಿ ಹತ್ತನೇ ತರಗತಿಯ ಪರೀಕ್ಷೆಯನ್ನು ನಡೆಸದೆಯೇ ಫಲಿತಾಂಶ ಘೋಷಿಸಲು ಸಿಬಿಎಸ್‌ಇಗೆ ಹೆಚ್ಚಿನ ಕಷ್ಟವೇನೂ ಆಗಲಿಕ್ಕಿಲ್ಲ. ಅಲ್ಲದೆ, ಅಂಕಗಳು ತೃಪ್ತಿ ತಂದಿಲ್ಲ ಎಂದು ಭಾವಿಸುವ ವಿದ್ಯಾರ್ಥಿಗಳಿಗೆ ಪರಿಸ್ಥಿತಿ ಸುಧಾರಿಸಿದ ಮೇಲೆ ಪರೀಕ್ಷೆ ಬರೆಯಲೂ ಅವಕಾಶ ನೀಡುವುದಾಗಿ ತಿಳಿಸಲಾಗಿದೆ. ಹಾಗೆಯೇ 12ನೇ ತರಗತಿ ಪರೀಕ್ಷೆಯನ್ನು ಸದ್ಯ ಮುಂದೂಡಿದ್ದು ಕೂಡ ಸಿಬಿಎಸ್‌ಇ ಪಾಲಿಗೆ ‘ತೀರಾ ಅನಿವಾರ್ಯವಾಗಿದ್ದ ನಿರ್ಧಾರ’. ಆ ತರಗತಿಯ ವಿದ್ಯಾರ್ಥಿಗಳು ಸದ್ಯಕ್ಕೆ ನಿರಾಳರಾಗಿರಬಹುದು. ಆದರೆ, ಪರೀಕ್ಷೆಗೆ ಸಂಬಂಧಿಸಿದಂತೆ ಮುಂದಿನ ನಿರ್ಧಾರವನ್ನು ಜೂನ್‌ ಒಂದರಂದು ಕೈಗೊಳ್ಳುವುದಾಗಿ ಮಂಡಳಿ ಹೇಳಿದೆ. ಅಲ್ಲಿಯವರೆಗೂ ಒತ್ತಡ ಇದ್ದೇ ಇರುತ್ತದೆ.

ಸಿಬಿಎಸ್‌ಇ ಕೈಗೊಂಡ ತೀರ್ಮಾನದ ಬೆನ್ನಹಿಂದೆಯೇ ಎಸ್‌ಎಸ್‌ಎಲ್‌ಸಿ ಮತ್ತು ದ್ವಿತೀಯ ಪಿಯು ಪರೀಕ್ಷೆಗಳ ಸಂಬಂಧ ರಾಜ್ಯ ಸರ್ಕಾರ ಏನು ನಿರ್ಧಾರ ಕೈಗೊಳ್ಳಲಿದೆ ಎಂಬುದನ್ನು ಕಾದು ನೋಡಬೇಕಿದೆ. ಸಿಬಿಎಸ್‌ಇ ರೀತಿಯಲ್ಲಿ ಪರೀಕ್ಷೆಯನ್ನೇ ರದ್ದುಗೊಳಿಸುವುದು ಎಸ್‌ಎಸ್‌ಎಲ್‌ಸಿ ಓದುತ್ತಿರುವ ಮಕ್ಕಳ ಭವಿಷ್ಯದ ಹಿತದೃಷ್ಟಿಯಿಂದ ಸೂಕ್ತ ನಿರ್ಧಾರವಾಗದು. ಹಲವು ದೃಷ್ಟಿಯಿಂದ ವಿದ್ಯಾರ್ಥಿಗಳ ಪಾಲಿಗೆ ಎಸ್‌ಎಸ್‌ಎಲ್‌ಸಿ ಹಾಗೂ ದ್ವಿತೀಯ ಪಿಯು ಪರೀಕ್ಷೆಗಳು ನಿರ್ಣಾಯಕ. ಇಂತಹ ನಿರ್ಣಾಯಕ ಪರೀಕ್ಷೆಗಳನ್ನು ರದ್ದುಗೊಳಿಸುವುದು ಇಲ್ಲವೆ ದೀರ್ಘಾವಧಿಗೆ ಮುಂದೂಡುವುದು ಸಮಸ್ಯೆಗೆ ಪರಿಹಾರವಲ್ಲ. ಕಳೆದ ವರ್ಷ ಕೊರೊನಾ ಸೋಂಕು ತೀವ್ರವಾಗಿದ್ದ ಸಂದರ್ಭದಲ್ಲೇ ಪರೀಕ್ಷೆಯ ಸವಾಲನ್ನು ಎದುರಿಸಿ ಯಶಸ್ವಿಯಾದ ಉದಾಹರಣೆ ನಮ್ಮ ಬೆನ್ನಿಗಿದೆ. ‘ಪರೀಕ್ಷೆ ನಡೆಸುವುದಕ್ಕಿದು ಸರಿಯಾದ ಸಮಯವಲ್ಲ’ ಎಂದು ಹುಯಿಲು ಎಬ್ಬಿಸುವುದಕ್ಕಿಂತ ಸಾಮೂಹಿಕವಾಗಿ ಲಸಿಕೆ ಅಭಿಯಾನವನ್ನು ತೀವ್ರಗೊಳಿಸಿ, ಸೋಂಕು ಹರಡುವ ಭೀತಿಯನ್ನು ಕಡಿಮೆ ಮಾಡುವುದು ಇಂದಿನ ತುರ್ತು. ಅಮೆರಿಕದಲ್ಲಿ 16 ವರ್ಷದ ಮೇಲಿನ ಎಲ್ಲರಿಗೂ ಲಸಿಕೆ ಹಾಕುವ ಅಭಿಯಾನ ನಡೆದಿದೆ. 12ರಿಂದ 15 ವರ್ಷದೊಳಗಿನ ಮಕ್ಕಳಿಗೂ ಲಸಿಕೆ ಹಾಕಬಹುದೇ ಎಂಬ ಪ್ರಯೋಗಗಳು ಕೂಡ ಅಲ್ಲಿ ನಡೆಯುತ್ತಿವೆ. ವಿದ್ಯಾರ್ಥಿಗಳಲ್ಲಿ ಸೋಂಕಿನ ಭೀತಿ ದೂರ ಮಾಡಲು ಶಿಕ್ಷಣ ಇಲಾಖೆ ಹಾಗೂ ಆರೋಗ್ಯ ಇಲಾಖೆ ಜಂಟಿಯಾಗಿ ಕಾರ್ಯಪ್ರವೃತ್ತವಾಗಬೇಕು. ಏಕೆಂದರೆ, ಪರೀಕ್ಷೆಗಳನ್ನು ನಡೆಸದೆ ಅರ್ಹ ವಿದ್ಯಾರ್ಥಿಗಳಿಗೆ ಮುಂದಿನ ಅವಕಾಶಗಳನ್ನು ದೊರಕಿಸಿಕೊಡುವ ಪರ್ಯಾಯ ಆಯ್ಕೆಗಳು ನಮ್ಮ ಮುಂದೆ ಇಲ್ಲ. ಪರೀಕ್ಷೆಗಳನ್ನು ರದ್ದುಗೊಳಿಸುವುದರಿಂದ ಇಲ್ಲವೆ ಅನಿರ್ದಿಷ್ಟ ಅವಧಿಗೆ ಮುಂದೂಡುವುದರಿಂದ ಅನುಕೂಲಕ್ಕಿಂತ ಸಮಸ್ಯೆಗಳೇ ಹೆಚ್ಚು. ಪರೀಕ್ಷೆಗಳನ್ನು ದೀರ್ಘಕಾಲ ಮುಂದೂಡಿದರೆ ಅದರಿಂದ ವಿದ್ಯಾರ್ಥಿಗಳ ಮೇಲಿನ ಮಾನಸಿಕ ಒತ್ತಡ ಹೆಚ್ಚಾಗುವ ಸಾಧ್ಯತೆಯೂ ಉಂಟು. ಪರಸ್ಪರ ಅಂತರ ಕಾಯ್ದುಕೊಳ್ಳು ವುದು ಮತ್ತು ಮಾಸ್ಕ್‌ ಧರಿಸುವುದು ಸೋಂಕು ಹರಡುವುದನ್ನು ತಡೆಯಲು ಇರುವ ಮಾರ್ಗೋಪಾಯಗಳಲ್ಲಿ ಎರಡು ಮುಖ್ಯ ಉಪಕ್ರಮಗಳು ಎಂದು ತಜ್ಞರು ಪದೇ ಪದೇ ಹೇಳಿದ್ದಾರೆ. ಅವುಗಳನ್ನು ಅಳವಡಿಸಿಕೊಂಡುಸುರಕ್ಷಿತ ವಾತಾವರಣದಲ್ಲಿ ಪರೀಕ್ಷೆ ಬರೆಯಲು ವಿದ್ಯಾರ್ಥಿ
ಗಳಿಗೆ ಅವಕಾಶ ಕಲ್ಪಿಸುವ ಕುರಿತು ಸರ್ಕಾರ ಯೋಚಿಸಬಹುದು. ಸೋಂಕು ಹರಡುವಿಕೆ ತಡೆಯಲು ಹೊರಡಿಸಿರುವ ಮಾರ್ಗಸೂಚಿಯನ್ನು ಎಲ್ಲ ಪರೀಕ್ಷಾ ಕೇಂದ್ರಗಳಲ್ಲಿ ಕಟ್ಟುನಿಟ್ಟಾಗಿ ಪಾಲನೆ ಆಗುವಂತೆ ನೋಡಿಕೊಳ್ಳಬೇಕು. ಸೂಕ್ತ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವ ಮೂಲಕ ವಿದ್ಯಾರ್ಥಿಗಳು ಹಾಗೂ ಪೋಷಕರಲ್ಲಿ ಆತ್ಮವಿಶ್ವಾಸವನ್ನು ತುಂಬಿ, ಪರೀಕ್ಷೆಗಳು ಸುಸೂತ್ರವಾಗಿ ನಡೆಯುವಂತೆ ನೋಡಿಕೊಳ್ಳಲು ಸರ್ಕಾರಕ್ಕೆ ಸಮಯ ಮತ್ತು ಅವಕಾಶ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT