ADVERTISEMENT

ಗ್ರಾಮೀಣ ಪ್ರದೇಶಗಳಲ್ಲಿ ಕೊರೊನಾಸೋಂಕು ತಡೆಗೆ ವ್ಯಾಪಕ ಕ್ರಮ ಅಗತ್ಯ

​ಪ್ರಜಾವಾಣಿ ವಾರ್ತೆ
Published 17 ಮೇ 2021, 19:30 IST
Last Updated 17 ಮೇ 2021, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನಗರ ಕೇಂದ್ರಿತವಾಗಿರುವ ಕೊರೊನಾ ಸೋಂಕಿನ ನಿಯಂತ್ರಣದ ಕಾರ್ಯಕ್ರಮಗಳನ್ನು ಗ್ರಾಮೀಣ ಪ್ರದೇಶಗಳಿಗೂ ಹೊಂದುವಂತೆ ಪರಿಷ್ಕರಿಸಿ ವಿಸ್ತರಿಸಲು ಇದು ಸಕಾಲ. ಗ್ರಾಮೀಣ ಪ್ರದೇಶಗಳಲ್ಲಿ ಕೊರೊನಾ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಸೋಂಕನ್ನು ನಿಯಂತ್ರಿಸುವ ಉದ್ದೇಶದಿಂದ ಸಮರೋಪಾದಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕಾದುದು ಸದ್ಯದ ತುರ್ತು. ಈ ತುರ್ತಿಗೆ ಸ್ಪಂದಿಸುವಂತೆ ಸೋಂಕನ್ನು ನಿಯಂತ್ರಿಸುವ ಉದ್ದೇಶದಿಂದ ಕೇಂದ್ರ ಸರ್ಕಾರವು ಮಾರ್ಗಸೂಚಿ ಬಿಡುಗಡೆ ಮಾಡಿರುವುದು ಹಾಗೂ ರಾಜ್ಯ ಸರ್ಕಾರವು ಹಲವು ಕಾರ್ಯಕ್ರಮಗಳನ್ನು ಪ್ರಕಟಿಸಿರುವುದು ಅಗತ್ಯವಾಗಿದ್ದ ಕ್ರಮಗಳು. ಕೊರೊನಾ ಸೋಂಕಿನ ಮೊದಲ ಅಲೆ ಗ್ರಾಮೀಣ ಪ್ರದೇಶಗಳನ್ನು ಹೆಚ್ಚು ಬಾಧಿಸಿರಲಿಲ್ಲ. ಆದರೆ, ಪ್ರಸ್ತುತ ಬಾಧಿಸುತ್ತಿರುವ ಎರಡನೇ ಅಲೆಯು ನಗರ ಪ್ರದೇಶಗಳ ಜೊತೆಗೆ ಗ್ರಾಮೀಣ ಪ್ರದೇಶಗಳಲ್ಲೂ ಹೆಚ್ಚಿನ ಸಾವುನೋವು ಉಂಟು ಮಾಡಿದೆ. ನಗರ ಪ್ರದೇಶಗಳಿಗೆ ಹೋಲಿಸಿದರೆ, ಗ್ರಾಮೀಣ ಪ್ರದೇಶ
ಗಳಲ್ಲಿ ವೈದ್ಯಕೀಯ ಸೌಲಭ್ಯಗಳು ಕಡಿಮೆಯಿರುವುದರಿಂದ, ಸೋಂಕಿನ ಹೆಚ್ಚಳಕ್ಕೆ ಆರಂಭದಲ್ಲೇ ಕಡಿವಾಣ ಹಾಕುವುದು ಅನಿವಾರ್ಯವಾಗಿದೆ. ಕೊರೊನಾ ಸೋಂಕು ಹೆಚ್ಚಿನ ಪ್ರಮಾಣದಲ್ಲಿ ವರದಿಯಾಗಿರುವ ಗ್ರಾಮೀಣ ಪ್ರದೇಶಗಳಲ್ಲಿ ಪರೀಕ್ಷೆಗಳನ್ನು ಹೆಚ್ಚಿಸಬೇಕು ಹಾಗೂ ಮನೆ ಮನೆಗೆ ತೆರಳಿ ಪರೀಕ್ಷೆಗಳನ್ನು ನಡೆಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿರುವುದನ್ನು ಕೂಡ ಹಳ್ಳಿಗಳಲ್ಲಿ ಕೊರೊನಾ ಸೋಂಕನ್ನು ನಿಯಂತ್ರಿಸುವ ತುರ್ತಿನ ನೆಲೆಗಟ್ಟಿನಲ್ಲಿಯೇ ನೋಡಬೇಕಾಗಿದೆ. ಆ ಕಾಳಜಿಯನ್ನು ಕಾರ್ಯರೂಪಕ್ಕೆ ತರುವ ಪ್ರಯತ್ನದ ರೂಪದಲ್ಲಿ, ಹಳ್ಳಿಗಳು ಮತ್ತು ಕೊಳೆಗೇರಿಗಳಲ್ಲಿನ ಕೋವಿಡ್‌ ಪೀಡಿತರಿಗೆ ಮನೆಯಲ್ಲಿಯೇ ಪ್ರತ್ಯೇಕ ವಾಸಕ್ಕೆ ಅವಕಾಶ ನೀಡದಿರಲು ರಾಜ್ಯ ಸರ್ಕಾರ ನಿರ್ಧರಿಸಿದೆ ಹಾಗೂ ಸೋಂಕಿತರನ್ನು ಕೋವಿಡ್‌ ಆರೈಕೆ ಕೇಂದ್ರಗಳಿಗೆ ಸ್ಥಳಾಂತರಿಸಲು ತೀರ್ಮಾನಿಸಿದೆ. ಮನೆಗಳಲ್ಲಿಯೇ ಚಿಕಿತ್ಸೆ ಪಡೆಯುವ ಬದಲು, ಕೋವಿಡ್‌ ಕೇಂದ್ರಗಳಿಗೆ ಸೋಂಕಿತರನ್ನು ಕರೆತರುವುದರಿಂದ ಅವರಿಗೆ ಗುಣಮಟ್ಟದ ಚಿಕಿತ್ಸೆಯೊಂದಿಗೆ ಉತ್ತಮ ಆಹಾರವೂ ದೊರೆಯಲಿದೆ ಎನ್ನುವುದು ಸರ್ಕಾರದ ಉದ್ದೇಶ. ಪ್ರತೀ ಆರೋಗ್ಯ ಕೇಂದ್ರದ ಮಟ್ಟದಲ್ಲಿ ಕೋವಿಡ್‌ ಆರೈಕೆ ಕೇಂದ್ರಗಳನ್ನು ಸ್ಥಾಪಿಸುವುದಾಗಿ ಸರ್ಕಾರ ಹೇಳಿದೆ. ಗ್ರಾಮೀಣ ಮತ್ತು ನಗರದ ಹೊರವಲಯ ಪ್ರದೇಶಗಳಲ್ಲಿ ಕನಿಷ್ಠ 30 ಹಾಸಿಗೆಗಳ ಕೋವಿಡ್‌ ಆರೈಕೆ ಕೇಂದ್ರಗಳನ್ನು ಸ್ಥಾಪಿಸುವಂತೆ ಕೇಂದ್ರ ಸರ್ಕಾರ ಪ್ರಕಟಿಸಿರುವ ಮಾರ್ಗದರ್ಶಿ ಸೂತ್ರವೂ ರಾಜ್ಯ ಸರ್ಕಾರದ ಪ್ರಯತ್ನಕ್ಕೆ ಪೂರಕವಾಗಿದೆ.

ಗ್ರಾಮೀಣ ಭಾಗಗಳಲ್ಲಿ ಕೊರೊನಾ ಸೋಂಕಿನ ಸರಪಳಿಯನ್ನು ತುಂಡರಿಸುವ ದಿಸೆಯಲ್ಲಿ ಸರ್ಕಾರ ಹಮ್ಮಿಕೊಂಡಿರುವ ಕಾರ್ಯಕ್ರಮಗಳು ಗಮನಸೆಳೆಯುವಂತಿವೆ. ಈ ಎಲ್ಲ ಕಾರ್ಯಕ್ರಮಗಳನ್ನು ವಿಳಂಬವಿಲ್ಲದೆ ಅನುಷ್ಠಾನಗೊಳಿಸುವುದು ಸರ್ಕಾರದ ಮುಂದಿರುವ ಸವಾಲು. ಸೋಂಕಿತರ ಪ್ರಾಥಮಿಕ ಸಂಪರ್ಕದಲ್ಲಿ ಇದ್ದವರನ್ನು ಗುರುತಿಸಿ ತಕ್ಷಣ ಪರೀಕ್ಷೆಗೊಳಪಡಿಸುವ ಕೆಲಸಕ್ಕೆ ಆದ್ಯತೆ ದೊರಕಬೇಕಾಗಿದೆ. ಕೊರೊನಾ ಪರೀಕ್ಷೆ ಮತ್ತು ಚಿಕಿತ್ಸೆಗೆ ಸಂಬಂಧಿಸಿದ ಮಾರ್ಗಸೂಚಿಗಳನ್ನು ಗ್ರಾಮೀಣ ಭಾಗದ ಜನರಿಗೆ ಸರಳವಾಗಿ ಅರ್ಥವಾಗುವಂತೆ ರೂಪಿಸಿ ತಲುಪಿಸಬೇಕಾಗಿದೆ. ಪ್ರಾತ್ಯಕ್ಷಿಕೆ ಮೂಲಕ ಜನರಲ್ಲಿ ಕೊರೊನಾ ಕುರಿತ ಜಾಗೃತಿ ಮೂಡಿಸಲು ಪ್ರಯತ್ನಿಸಬಹುದು. ಸೋಂಕಿತರಿಗೆ ಚಿಕಿತ್ಸೆಯ ಜೊತೆಗೆ, ಅರ್ಹರಿಗೆ ಲಸಿಕೆ ನೀಡುವ ಪ್ರಕ್ರಿಯೆಗೂ ಹೆಚ್ಚಿನ ವೇಗ ದೊರೆಯಬೇಕಾಗಿದೆ. ಪ್ರಸ್ತುತ ಆಮೆಗತಿಯಲ್ಲಿರುವ ಲಸಿಕಾ ಆಂದೋಲನ ಚುರುಕಾಗದಿದ್ದರೆ, ಕೊರೊನಾ ವಿರುದ್ಧದ ಹೋರಾಟ ಲಂಬಿಸುವುದರ ಜೊತೆಗೆ ಸಾವುನೋವಿನ ಪ್ರಮಾಣವೂ ಹೆಚ್ಚಲಿದೆ. ಗ್ರಾಮೀಣ ಭಾಗದಲ್ಲಿನ ಕೊರೊನಾ ವಿರುದ್ಧದ ಹೋರಾಟ ನಗರಪ್ರದೇಶಗಳಿಗಿಂತಲೂ ಭಿನ್ನವಾದುದು. ಜನಸಂಖ್ಯೆಯ ಸಾಂದ್ರತೆ ಕಡಿಮೆ ಇರುವುದರಿಂದ ಲಾಕ್‌ಡೌನ್‌ ಉದ್ದೇಶವನ್ನು ಗ್ರಾಮೀಣ ಪ್ರದೇಶಗಳಲ್ಲಿ ಸುಲಭವಾಗಿ ಕಾರ್ಯಗತಗೊಳಿಸಬಹುದು. ಪಡಿತರ ವ್ಯವಸ್ಥೆಯನ್ನು ಚುರುಕುಗೊಳಿಸುವ ಹಾಗೂ ಸರಳಗೊಳಿಸುವ ಮೂಲಕ ಜನರನ್ನು ಮನೆಯಲ್ಲೇ ಇರುವಂತೆ ಮಾಡಬಹುದು. ಸೀಮಿತ ಜನಸಂಖ್ಯೆಯಿಂದಾಗಿ ಲಸಿಕೆ ಅಭಿಯಾನವು ಗ್ರಾಮೀಣ ಪ್ರದೇಶಗಳಲ್ಲಿ ಯಶಸ್ವಿಯಾಗುವುದು ಸುಲಭ. ಪರೀಕ್ಷೆ, ಚಿಕಿತ್ಸೆ ಹಾಗೂ ಲಸಿಕೆಯ ಸೂತ್ರಗಳನ್ನು ಪರಿಣಾಮಕಾರಿಯಾಗಿ ಜಾರಿಗೆ ತಂದರೆ ದೇಶದ ಜೀವನಾಡಿಗಳಾದ ಹಳ್ಳಿಗಳಲ್ಲಿ ಕೊರೊನಾ ಸೋಂಕಿನ ಸರಪಳಿಯನ್ನು ತುಂಡರಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT