ADVERTISEMENT

ಸಂಪಾದಕೀಯ: ಕೋವಿಡ್‌ ಸಂಕಷ್ಟದ ಸನ್ನಿವೇಶದಲ್ಲಿ ಮಹಲುಗಳ ನಿರ್ಮಾಣ ಅತ್ಯಗತ್ಯವೇ?

​ಪ್ರಜಾವಾಣಿ ವಾರ್ತೆ
Published 25 ಮೇ 2021, 18:28 IST
Last Updated 25 ಮೇ 2021, 18:28 IST
ಸಂಪಾದಕೀಯ
ಸಂಪಾದಕೀಯ   

ದೆಹಲಿಯಲ್ಲಿ ಸೆಂಟ್ರಲ್ ವಿಸ್ತಾ ಪುನರಾಭಿವೃದ್ಧಿ ಯೋಜನೆಯನ್ನು ಕೈಗೆತ್ತಿಕೊಳ್ಳುವುದಾಗಿ ಕೇಂದ್ರ ಸರ್ಕಾರವು ಪ್ರಸ್ತಾವ ಮಂಡಿಸಿದಾಗಲೇ ಹಲವು ಪ್ರಶ್ನೆಗಳು ಕೇಳಿಬಂದಿದ್ದವು. ಅದರ ನಡುವೆಯೇ ತೀರಾ ಅವಸರದಲ್ಲಿ ಸೆಂಟ್ರಲ್ ವಿಸ್ತಾ ಅಭಿವೃದ್ಧಿ ಕಾಮಗಾರಿಗಳು ಆರಂಭವಾದವು. ದೇಶದ ಆರ್ಥಿಕತೆಯು ಅತ್ಯಂತ ಕ್ಲಿಷ್ಟ ಸನ್ನಿವೇಶವನ್ನು ಎದುರಿಸುತ್ತಿರುವ ಸಂದರ್ಭದಲ್ಲಿ ಸರ್ಕಾರಕ್ಕೆ ಆದ್ಯತೆಗಳು ಬೇರೆ ಇರಬೇಕಾಗಿರುವಾಗ ಇದೊಂದು ಒಣಪ್ರತಿಷ್ಠೆಯ ಯೋಜನೆ ಎನ್ನುವ ಟೀಕೆಗಳು ವ್ಯಾಪಕವಾಗಿ ಕೇಳಿಬಂದವು. ಕೊರೊನಾ ಸಾಂಕ್ರಾಮಿಕವು ದೇಶದಾದ್ಯಂತ ಈಗ ತಲ್ಲಣದ ಅಲೆಗಳನ್ನು ಎಬ್ಬಿಸಿದೆ. ದೇಶವು ಆರ್ಥಿಕವಾಗಿ ದುಃಸ್ಥಿತಿಯಲ್ಲಿರುವಾಗ ಈ ಯೋಜನೆಯ ಬಗ್ಗೆ ವಿರೋಧ ಪುನಃ ವ್ಯಕ್ತವಾಗಿದೆ.

ಈ ಸಂಕಷ್ಟದ ಕಾಲಘಟ್ಟದಲ್ಲಿ ಸೆಂಟ್ರಲ್ ವಿಸ್ತಾದಂತಹ ಅತ್ಯಗತ್ಯವಲ್ಲದ ಯೋಜನೆಗಳ ಮೇಲೆ ದೊಡ್ಡ ಮಟ್ಟದಲ್ಲಿ ಹಣ ಸುರಿಯುವುದನ್ನು ತಡೆಯುವಂತೆ ಕೋರಿ ಪ್ರಧಾನಿ ನರೇಂದ್ರ ಮೋದಿಯವರಿಗೆ ನಿವೃತ್ತ ನಾಗರಿಕ ಸೇವಾ ಅಧಿಕಾರಿಗಳು ಹಲವರು ಕಳೆದ ವಾರ ಪತ್ರವನ್ನೂ ಬರೆದಿದ್ದರು. ಈ ಯೋಜನೆಗೆ ಖರ್ಚು ಮಾಡುತ್ತಿರುವ ಹಣದ ಬಗ್ಗೆ ಮಾಧ್ಯಮಗಳಲ್ಲಿಟೀಕೆ ವ್ಯಕ್ತವಾಗಿದೆ ಮತ್ತು ಸಮಾಜದ ವಿವಿಧ ವರ್ಗಗಳ ಹಲವರು ಕಳವಳವನ್ನೂ ವ್ಯಕ್ತಪಡಿಸಿದ್ದಾರೆ.

ಕಾಮಗಾರಿ ನಡೆಯುತ್ತಿರುವ ಸ್ಥಳದಲ್ಲಿ ನೂರಾರು ಕಾರ್ಮಿಕರು ಸೇರುತ್ತಿರುವುದರಿಂದ ಕೊರೊನಾ ಸೋಂಕು ಇನ್ನಷ್ಟು ಹಬ್ಬುವ ಸಾಧ್ಯತೆಯ ಹಿನ್ನೆಲೆಯಲ್ಲಿ ಕಾಮಗಾರಿಯನ್ನು ಸದ್ಯಕ್ಕೆ ಸ್ಥಗಿತಗೊಳಿಸಲು ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಬೇಕೆಂದು ಕೋರಿದ ಅರ್ಜಿಗೆ ಸಂಬಂಧಿಸಿದಂತೆ ದೆಹಲಿ ಹೈಕೋರ್ಟ್ ತೀರ್ಪನ್ನು ಕಾಯ್ದಿರಿಸಿದೆ. ಈ ಯೋಜನೆಗೆ ಸುಪ್ರೀಂ ಕೋರ್ಟ್ ಒಮ್ಮೆ ಅನುಮತಿ ನೀಡಿದ್ದರೂ ವಿವಿಧ ನೆಲೆಗಳಲ್ಲಿ ಈ ಯೋಜನೆಗೆ ವಿರೋಧ ವ್ಯಕ್ತವಾಗುತ್ತಲೇ ಇದೆ. ಪರಿಸರಕ್ಕೆ ಆಗುತ್ತಿರುವ ಹಾನಿ, ಪಾರಂಪರಿಕ ಕಟ್ಟಡಗಳ ನೆಲಸಮ, ಆದ್ಯತೆ ಗುರುತಿಸುವಲ್ಲಿನ ಎಡವಟ್ಟು, ವಾಸ್ತುಶಿಲ್ಪಿಗಳ ಆಯ್ಕೆಯಲ್ಲಿ ಸ್ವಜನಪಕ್ಷಪಾತ, ಪಾರದರ್ಶಕತೆಯ ಕೊರತೆ, ಸಾರ್ವಜನಿಕ ಹಣದ ಪೋಲು ಮತ್ತು ದುರುಪಯೋಗ ಮುಂತಾದ ಹಲವು ಕಾರಣಗಳಿಗೆ ಈ ಯೋಜನೆಯನ್ನು ವಿರೋಧಿಸಲಾಗುತ್ತಿದೆ. ಇವುಗಳಲ್ಲಿನ ಯಾವುದೇ ಒಂದು ಅಂಶವು ಈ ಯೋಜನೆಯ ಮರುಪರಿಶೀಲನೆಗೆ ಕಾರಣವಾಗಬಹುದು. ಆದರೆ, ಕೇಂದ್ರ ಸರ್ಕಾರವು ಈ ಯಾವ ಆಕ್ಷೇಪಗಳ ಕಡೆಗೂ ಗಮನ ನೀಡುತ್ತಿಲ್ಲ. ಮುಂದಿನ ಲೋಕಸಭಾ ಚುನಾವಣೆಯು 2024ರಲ್ಲಿ ನಡೆಯಲಿದೆ. ಅಷ್ಟರೊಳಗೇ ಈ ಯೋಜನೆಯನ್ನು ಪೂರ್ಣಗೊಳಿಸುವುದಾಗಿ ಸರ್ಕಾರ ಹೇಳುತ್ತಿದೆ.

ADVERTISEMENT

ಈ ಯೋಜನೆಯ ಒಟ್ಟು ಅಂದಾಜುವೆಚ್ಚ ₹ 20 ಸಾವಿರ ಕೋಟಿ ಎಂದು ಸರ್ಕಾರ ಪ್ರಕಟಿಸಿದ್ದರೂ ಯೋಜನೆ ಪೂರ್ಣಗೊಳ್ಳುವ ಹೊತ್ತಿಗೆ ವೆಚ್ಚ ಇನ್ನಷ್ಟು ಹೆಚ್ಚುವುದು ಖಚಿತ. ಆರ್ಥಿಕವಾಗಿ ತೀವ್ರ ಸಂಕಷ್ಟದಲ್ಲಿರುವ ದೇಶವೊಂದಕ್ಕೆ ಇದು ಬಹುದೊಡ್ಡ ಮೊತ್ತವೇ ಸರಿ. ಕೊರೊನಾ ಸಾಂಕ್ರಾಮಿಕವನ್ನುಪರಿಣಾಮಕಾರಿಯಾಗಿ ಎದುರಿಸಲಾಗದೆ, ಅಸಂಖ್ಯಾತ ಸಾವು-ನೋವುಗಳ ಮಧ್ಯೆ ಇಡೀ ದೇಶವೇ ಗೊಂದಲ ಮತ್ತು ದುಃಖದಲ್ಲಿ ಮುಳುಗಿರುವಾಗ, ಸರ್ಕಾರವೊಂದು ಭವ್ಯ ಮಹಲುಗಳ ನಿರ್ಮಾಣದಲ್ಲಿ ತೊಡಗುವುದು ವಿವೇಚನಾರಹಿತ ಕೃತ್ಯವೇ ಸರಿ. ಈ ಯೋಜನೆ ಕುರಿತು ಸರ್ಕಾರ ಏನೇ ಸಮರ್ಥನೆ ಮತ್ತು ಸ್ಪಷ್ಟೀಕರಣ ನೀಡಿದರೂ ಸಂಕಷ್ಟದ ಕಾಲದಲ್ಲಿ ಇಂತಹ ಆಡಂಬರದ ಯೋಜನೆಗಳ ಔಚಿತ್ಯವನ್ನು ಒಪ್ಪಿಕೊಳ್ಳಲಾಗದು.

ರಾಜಪ್ರಭುತ್ವದ ಕಾಲದಲ್ಲಿ ಭವ್ಯಮಹಲುಗಳ ನಿರ್ಮಾಣಗಳನ್ನು ದೊರೆಗಳು ತಮ್ಮ ಪ್ರತಿಷ್ಠೆಯನ್ನು ಮೆರೆಸಲು ಕೈಗೊಳ್ಳುತ್ತಿದ್ದರು. ಅಂತಹ ಧೋರಣೆಯು ಪ್ರಜಾಪ್ರಭುತ್ವಕ್ಕೆ ಒಪ್ಪುವುದಿಲ್ಲ. ಪ್ರಜಾಸತ್ತಾತ್ಮಕ ದೇಶದಲ್ಲಿ ಪಾರದರ್ಶಕತೆಗೆ ಹೆಚ್ಚಿನ ಮಹತ್ವ ಇದೆ. ಆದರೆ ಈ ಯೋಜನೆಯ ವಿಚಾರದಲ್ಲಿ ಅದು ಕಾಣುತ್ತಿಲ್ಲ. ರಾಜಧಾನಿಯ ಹೃದಯಭಾಗದಲ್ಲಿ ಹಲವು ಪಾರಂಪರಿಕ ಕಟ್ಟಡಗಳನ್ನು ಕೆಡವಿ ಇಷ್ಟು ದೊಡ್ಡ ಯೋಜನೆಯನ್ನು ಕೈಗೆತ್ತಿಕೊಳ್ಳುವಾಗ ಸಾರ್ವಜನಿಕ ಚರ್ಚೆಗೆ ಮುಕ್ತ ಅವಕಾಶ ಕಲ್ಪಿಸಬೇಕಾಗಿತ್ತು ಮತ್ತು ವಿರೋಧ ಪಕ್ಷಗಳ ಜೊತೆಗೂ ಈ ಬಗ್ಗೆ ಮಾಹಿತಿ ಹಂಚಿಕೊಳ್ಳಬೇಕಿತ್ತು. ಕಾಮಗಾರಿ ಸ್ಥಳದ ಚಿತ್ರ ತೆಗೆಯುವುದನ್ನೂ ನಿಷೇಧಿಸಿರುವುದನ್ನು ನೋಡಿದರೆ ಅನುಮಾನ ಹುಟ್ಟುವುದು ಸಹಜ. ಇದೊಂದು ಸಾರ್ವಜನಿಕ ಕಾಮಗಾರಿ ಆಗಿರುವಾಗ ಈ ಮಟ್ಟದಲ್ಲಿ ಗೋಪ್ಯತೆ ಕಾಯ್ದುಕೊಳ್ಳುವ ಅಗತ್ಯವೇನಿದೆ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.