ADVERTISEMENT

ಸಂಪಾದಕೀಯ: ಕೇಂದ್ರದ ಆರ್ಥಿಕ ಪ್ಯಾಕೇಜ್; ಉದ್ದೇಶ ಈಡೇರುವುದೇ?

​ಪ್ರಜಾವಾಣಿ ವಾರ್ತೆ
Published 30 ಜೂನ್ 2021, 21:20 IST
Last Updated 30 ಜೂನ್ 2021, 21:20 IST
   

ಕೋವಿಡ್‌ ಸಾಂಕ್ರಾಮಿಕ ಹಾಗೂ ಅದು ಹರಡುವುದನ್ನು ತಡೆಯುವ ಉದ್ದೇಶದಿಂದ ಜಾರಿಗೆ ತಂದ ಲಾಕ್‌ಡೌನ್‌ನಿಂದಾಗಿ ತೀವ್ರ ತೊಂದರೆಗೆ ಒಳಗಾದ ಕೆಲವು ಉದ್ಯಮ ವಲಯಗಳ ಪುನಶ್ಚೇತನವನ್ನು ಗಮನದಲ್ಲಿ ಇರಿಸಿಕೊಂಡು ಕೇಂದ್ರ ಸರ್ಕಾರವು ಸೋಮವಾರ ಕೆಲವು ಆರ್ಥಿಕ ಕ್ರಮಗಳನ್ನು ಘೋಷಿಸಿದೆ.

ಈ ಆರ್ಥಿಕ ಪ್ಯಾಕೇಜ್‌ನ ಒಟ್ಟು ಮೊತ್ತವು ₹ 6.29 ಲಕ್ಷ ಕೋಟಿ ಎಂದು ಕೇಂದ್ರ ಸರ್ಕಾರ ಹೇಳಿದೆ. ಆದರೆ, ಇದು ಬಹಳ ತಡವಾಗಿ ಘೋಷಣೆ ಆಗಿರುವ, ಉದ್ದೇಶವನ್ನು ಪೂರ್ತಿಯಾಗಿ ಈಡೇರಿಸಲಾರದ ಪ್ಯಾಕೇಜ್‌ ಎಂಬಂತೆ ಮೇಲ್ನೋಟಕ್ಕೆ ಕಾಣಿಸುತ್ತಿದೆ. ಈ ಪ್ಯಾಕೇಜ್‌ನಿಂದಾಗಿ ಆರ್ಥಿಕ ಪುನಶ್ಚೇತನ ನಿಜಕ್ಕೂ ಸಾಧ್ಯವಾಗುತ್ತದೆಯೇ ಎಂಬ ಅನುಮಾನ ಇರುವುದಾಗಿಯೂ ಪ್ಯಾಕೇಜ್‌ನಿಂದಾಗಿ ಈ ವರ್ಷದಲ್ಲಿ ದೇಶದ ವಿತ್ತೀಯ ಕೊರತೆಯು ಜಾಸ್ತಿ ಆಗುವುದು ಖಚಿತ ಎಂಬುದಾಗಿಯೂ ಅರ್ಥಶಾಸ್ತ್ರಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಕೆಲವು ವಲಯಗಳಲ್ಲಿ ಮೂಲ ಸೌಕರ್ಯ ಹೆಚ್ಚಿಸುವುದು, ಕೆಲವು ವಲಯಗಳಿಗೆ ಸಾಲ ನೀಡಲು ಬ್ಯಾಂಕ್‌ಗಳಿಗೆ ಸರ್ಕಾರವೇ ಖಾತರಿದಾರನಾಗಿ ನಿಲ್ಲುವುದು, ಒಂದಿಷ್ಟು ಉದ್ಯಮಗಳಿಗೆ ಹೊಸ ನೇಮಕಾತಿ ಹೆಚ್ಚಿಸಲು ಪ್ರೋತ್ಸಾಹಕ ಕ್ರಮಗಳನ್ನು ಮುಂದುವರಿಸುವುದು ಪ್ಯಾಕೇಜ್‌ನ ಮುಖ್ಯ ಅಂಶಗಳು. ಆರೋಗ್ಯ ಸೇವಾ ವಲಯ, ಪ್ರವಾಸೋದ್ಯಮ, ಕೃಷಿ ವಲಯ ಗುರಿಯಾಗಿ ಇರಿಸಿಕೊಂಡು ಪ್ಯಾಕೇಜ್‌ ರೂಪಿಸಲಾಗಿದೆ.

ಗ್ರಾಮೀಣ ಪ್ರದೇಶಗಳಲ್ಲಿ ಇಂಟರ್ನೆಟ್ ಮೂಲಸೌಕರ್ಯ ವೃದ್ಧಿಗೆ ಕೂಡ ಇದು ಆದ್ಯತೆ ನೀಡಿದೆ. ಉದ್ಯಮಗಳಿಗೆ ತುರ್ತಾಗಿ ಸಾಲ ನೀಡುವ ಉದ್ದೇಶದಿಂದ ಈಗಾಗಲೇ ಜಾರಿಗೆ ತಂದಿರುವ ತುರ್ತು ಸಾಲ ಖಾತರಿ (ಇಸಿಎಲ್‌ಜಿಎಸ್‌) ಯೋಜನೆಗೆ ನಿಗದಿ ಮಾಡಿದ್ದ ಮೊತ್ತವನ್ನು ₹ 3 ಲಕ್ಷ ಕೋಟಿಯಿಂದ ₹ 4.5 ಲಕ್ಷ ಕೋಟಿಗೆ ಹೆಚ್ಚಿಸಲಾಗಿದೆ. ಪ್ರವಾಸೋದ್ಯಮ ವಲಯದಲ್ಲಿ ಕೆಲಸ ಮಾಡುವ ಏಜೆನ್ಸಿಗಳಿಗೆ ಹಾಗೂ ಪ್ರವಾಸಿ ಗೈಡ್‌ಗಳಿಗೆ ಸಾಲ ನೀಡುವ ಉದ್ದೇಶ ಸರ್ಕಾರಕ್ಕೆ ಇದೆ.

ADVERTISEMENT

ಕೋವಿಡ್‌ ಮತ್ತು ಲಾಕ್‌ಡೌನ್‌ ಕ್ರಮಗಳಿಂದಾಗಿ ಸಂಕಷ್ಟಕ್ಕೆ ಸಿಲುಕಿರುವುದು ಒಂದೆರಡು ಉದ್ಯಮ ವಲಯಗಳು ಮಾತ್ರವೇ ಅಲ್ಲ. ಆರ್ಥಿಕ ಚಕ್ರದ ಚಾಲಕ ಶಕ್ತಿಗಳಂತೆ ಇದ್ದ ಬಹುತೇಕ ಎಲ್ಲ ವಲಯಗಳೂ ಏಟು ತಿಂದಿವೆ. ಸೇವಾ ವಲಯ ಹಾಗೂ ತಯಾರಿಕಾ ವಲಯದ ಉದ್ದಿಮೆಗಳು ತಾವು ಒದಗಿಸುವ ಸೇವೆಗೆ, ತಾವು ತಯಾರಿಸುವ ಉತ್ಪನ್ನಕ್ಕೆ ಮಾರುಕಟ್ಟೆಯೂ ಇಲ್ಲ, ಗ್ರಾಹಕರು ಕೋವಿಡ್‌ಗೂ ಮೊದಲಿನಂತೆ ಖರೀದಿಸುತ್ತಲೂ ಇಲ್ಲ ಎಂದು ಹೇಳುತ್ತಿವೆ. ಸಗಟು ಮತ್ತು ಚಿಲ್ಲರೆ ಹಣದುಬ್ಬರವು ಭಾರಿ ಪ್ರಮಾಣದಲ್ಲಿ ಏರಿಕೆ ಕಂಡು ಉದ್ದಿಮೆಗಳ ಖರ್ಚುವೆಚ್ಚಗಳು ಏರಿಕೆ ಆಗಿವೆ, ಜನಸಾಮಾನ್ಯರ ದೈನಂದಿನ ಖರ್ಚುಗಳು ಗಗನಮುಖಿಯಾಗಿವೆ. ಸಗಟು ಹಣದುಬ್ಬರವು ಸಾರ್ವಕಾಲಿಕ ದಾಖಲೆ ಸೃಷ್ಟಿಸಿದೆ.

ಇದು ಇಂದಿನ ಸಮಸ್ಯೆಯ ಒಂದು ಚಿತ್ರಣ. ಕೋವಿಡ್‌ ಆವರಿಸುವುದಕ್ಕೂ ಮೊದಲು ಭಾರತದ ಅರ್ಥ ವ್ಯವಸ್ಥೆಯಲ್ಲಿ ಸೇವೆಗಳನ್ನು ಒದಗಿಸುವ ವಿಚಾರದಲ್ಲಿ, ಸಿದ್ಧ ವಸ್ತುಗಳ ಉತ್ಪಾದನೆಯ ವಿಚಾರದಲ್ಲಿ ದೊಡ್ಡ ಸಮಸ್ಯೆ ಇರಲಿಲ್ಲ. ಆದರೆ, ಗ್ರಾಹಕರಿಂದ ಹೆಚ್ಚಿನ ಬೇಡಿಕೆ ಸೃಷ್ಟಿಯಾಗುತ್ತಿರಲಿಲ್ಲ. ಕೋವಿಡ್‌ ನಂತರದಲ್ಲಿ ಉತ್ಪಾದನೆ ಹಾಗೂ ಬೇಡಿಕೆ ಇವೆರಡರ ಮೇಲೆಯೂ ತೀರಾ ಕೆಟ್ಟ ಪರಿಣಾಮ ಉಂಟಾಗಿದೆ. ವಾಸ್ತವದಲ್ಲಿ, ಉದ್ದಿಮೆಗಳು ಹಾಗೂ ಗ್ರಾಹಕರಿಗೆ ಹೆಚ್ಚು ಹೆಚ್ಚು ಸಾಲ ಕೊಡುವುದರಲ್ಲಿ ಭಾರತದಲ್ಲಿನ ಇಂದಿನ ಸಮಸ್ಯೆಗೆ ಪರಿಹಾರ ಇದ್ದಂತಿಲ್ಲ. ದೇಶ ಎದುರಿಸುತ್ತಿರುವುದು ತೀರಾ ಅಸಾಮಾನ್ಯ ಸಂದರ್ಭ. ಇಂತಹ ಹೊತ್ತಿನಲ್ಲಿ ಸಾಂಪ್ರದಾಯಿಕ ಕ್ರಮಗಳು ಹೆಚ್ಚಿನ ಪ್ರಯೋಜನ ಉಂಟುಮಾಡಲಾರವು.

ಎಲ್ಲ ಉದ್ದಿಮೆಗಳ ಶಕ್ತಿಯೂ ಉಡುಗಿರುವಾಗ, ಯಾವುದೋ ಒಂದೆರಡು ಉದ್ಯಮ ವಲಯಗಳನ್ನು ಮಾತ್ರ ಗುರುತಿಸಿ ಆ ವಲಯಕ್ಕೆ ಹೆಚ್ಚು ಸಾಲ, ಸುಲಭ ಸಾಲ ಒದಗಿಸುವುದರಿಂದ ದೊಡ್ಡ ಪ್ರಯೋಜನವೇನೂ ಆಗಲಿಕ್ಕಿಲ್ಲ. ಸುಲಭ ಸಾಲದಿಂದ ಪ್ರಯೋಜನವೇ ಇಲ್ಲವೆಂದು ಅಲ್ಲ. ಅವು ಉದ್ದಿಮೆಗಳ ದುಡಿಯುವ ಬಂಡವಾಳದ ಅಗತ್ಯವನ್ನು ತಕ್ಷಣಕ್ಕೆ ಪೂರೈಸಬಹುದು. ಆದರೆ, ಅದಕ್ಕಿಂತ ಹೆಚ್ಚಾಗಿ ಆಗಬೇಕಿರುವುದು ಮಾರುಕಟ್ಟೆಯಲ್ಲಿ ಬೇಡಿಕೆ ಸೃಷ್ಟಿಸುವ ಕೆಲಸ. ಅದನ್ನು ಸಾಲ ಕೊಟ್ಟು ಮಾಡಲು ಈಗಿನ ಸಂದರ್ಭದಲ್ಲಿ ಆಗುವುದಿಲ್ಲ. ಸಾಲ ಪಡೆಯಲು, ಅದನ್ನು ತೀರಿ ಸಲು ಅಗತ್ಯವಿರುವ ಆತ್ಮವಿಶ್ವಾಸ ಕೂಡ ಕುಗ್ಗಿರುವ ಹೊತ್ತು ಇದು.

ಹಲವು ಅರ್ಥಶಾಸ್ತ್ರಜ್ಞರು ಈಗಾಗಲೇ ಹೇಳಿರುವಂತೆ ಆರ್ಥಿಕವಾಗಿ ದುರ್ಬಲರನ್ನು ಗುರುತಿಸಿ, ಅವರಿಗಾಗಿ ನೇರ ನಗದು ವರ್ಗಾವಣೆಯಂತಹ ಕ್ರಮಗಳನ್ನು ಜಾರಿಗೆ ತಂದು, ಆ ಮೂಲಕ ಮಾರುಕಟ್ಟೆಯಲ್ಲಿ ಎಲ್ಲ ಬಗೆಯ ಸೇವೆಗಳಿಗೆ, ಉತ್ಪನ್ನಗಳಿಗೆ ಬೇಡಿಕೆ ಸೃಷ್ಟಿಯಾಗುವಂತೆ ಮಾಡಲು ‍ಪ್ರಯತ್ನಿಸಬಹುದು. ಆರ್ಥಿಕವಾಗಿ ತೀರಾ ದುರ್ಬಲರಲ್ಲದವರು ಕೂಡ ಬೆಲೆ ಏರಿಕೆಯ ಪ್ರತಾಪಕ್ಕೆ ತತ್ತರಿಸಿದ್ದಾರೆ. ಕೋವಿಡ್‌ಗೂ ಮೊದಲಿನ ಕಾಲಘಟ್ಟದಲ್ಲಿ ಮಾಡುತ್ತಿದ್ದ ಬಗೆಯಲ್ಲೇ ಈಗಲೂ ಖರ್ಚು ಮಾಡುವ ಬಯಕೆ ಅವರಲ್ಲಿ ಉಳಿದುಕೊಂಡಿದೆ ಎನ್ನಲಾಗದು.

ಪೆಟ್ರೋಲ್, ಡೀಸೆಲ್‌ ಬೆಲೆಯನ್ನು ತಕ್ಷಣಕ್ಕೆ ತಗ್ಗಿಸಿ, ಆ ಮೂಲಕ ಇತರ ಅಗತ್ಯ ವಸ್ತುಗಳ ಬೆಲೆಯೂ ಇಳಿಯುವಂತೆ ಮಾಡಿ, ಈ ವರ್ಗದವರು ಕೂಡ ಹೆಚ್ಚೆಚ್ಚು ವಸ್ತುಗಳನ್ನು ಖರೀದಿಸುವಂತೆ, ಬಗೆಬಗೆಯ ಸೇವೆಗಳನ್ನು ಪಡೆದುಕೊಳ್ಳುವಂತೆ ಕೇಂದ್ರ ಸರ್ಕಾರ ಮಾಡಬಹುದು. ಈ ಕಾರ್ಯಕ್ಕೆ ರಾಜ್ಯ ಸರ್ಕಾರಗಳೂ ಕೈಜೋಡಿಸಬಹುದು. ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚಾದರೆ ಉದ್ಯಮಗಳ ಆರ್ಥಿಕ ಆರೋಗ್ಯ ಸುಧಾರಿಸಬಹುದು. ಉದ್ಯಮಗಳಲ್ಲಿ ಕೆಲಸ ಮಾಡುವವರ ಆರ್ಥಿಕ ಬದುಕಿಗೆ ಒಂದಿಷ್ಟು ಭದ್ರತೆ ದೊರೆಯಬಹುದು. ಸಂಕಷ್ಟದಲ್ಲಿ ಇರುವ ಉದ್ದಿಮೆಗಳಿಗೆ ಸಾಲ ನೀಡಲು ಬ್ಯಾಂಕ್‌ಗಳು ತೀರಾ ಉತ್ಸುಕತೆಯನ್ನೇನೂ ತೋರಿಸುತ್ತಿಲ್ಲ ಎಂಬ ವರದಿಗಳು ಇವೆ. ಹೀಗಾಗಿ, ಸಾಲಕ್ಕೆ ಖಾತರಿದಾರನಾಗಿ ಕೇಂದ್ರ ಸರ್ಕಾರ ನಿಲ್ಲುವುದರಿಂದ ನಿಜಕ್ಕೂ ಆಗುತ್ತಿರುವ ಪ್ರಯೋಜನ ಏನು ಎಂಬ ಪ್ರಶ್ನೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.