ADVERTISEMENT

ಸಂಪಾದಕೀಯ: ದೇವರ ಹೆಸರಿನಲ್ಲಿ ಆಹಾರಧಾನ್ಯ ಪೋಲು ಮಾಡುವುದು ಅಮಾನವೀಯ

​ಪ್ರಜಾವಾಣಿ ವಾರ್ತೆ
Published 26 ಮೇ 2021, 20:04 IST
Last Updated 26 ಮೇ 2021, 20:04 IST
   

ಕೊರೊನಾ ಸೋಂಕಿನಿಂದ ಪಾರಾಗಲು ಪೂಜೆ, ಹೋಮ, ಹವನಗಳ ಹೆಸರಿನಲ್ಲಿ ಆಹಾರಧಾನ್ಯಗಳನ್ನು ಪೋಲು ಮಾಡುತ್ತಿರುವ ಪ್ರಸಂಗಗಳು ನಾಡಿನ ಕೆಲವು ಭಾಗಗಳಿಂದ ವರದಿಯಾಗಿವೆ. ಬಳ್ಳಾರಿ ಜಿಲ್ಲೆಯ ಎರಡು ಗ್ರಾಮಗಳಲ್ಲಿ, ಬೇಳೆಯೊಂದಿಗೆ ಬೇಯಿಸಿ ಮೊಸರಿನಲ್ಲಿ ಕಲಸಿದ ಅನ್ನವನ್ನು ಟ್ರ್ಯಾಕ್ಟರ್‌ನಲ್ಲಿ ತುಂಬಿ ಊರಿನ ಸುತ್ತ ಚೆಲ್ಲಲಾಗಿದೆ. ಚಾಮರಾಜನಗರದಲ್ಲಿ ‘ಕೊರೊನಾ ಮಾರಮ್ಮ’ನನ್ನು ಪ್ರತಿಷ್ಠಾಪಿಸಿ ಕೋಳಿಗಳನ್ನು ಬಲಿ ಕೊಡಲಾಗಿದೆ.

ಮಂಡ್ಯ ಜಿಲ್ಲೆಯ ಕೆಲವು ಗ್ರಾಮಗಳಲ್ಲೂ ದೇವಿಗೆ ಕೋಳಿಗಳನ್ನು ಬಲಿ ಕೊಡಲಾಗಿದೆ. ಬೆಳಗಾವಿಯಲ್ಲಂತೂ ಶಾಸಕರೊಬ್ಬರ ನೇತೃತ್ವದಲ್ಲಿ ಮನೆಗಳ ಎದುರು ಅಗ್ನಿಕುಂಡಗಳನ್ನು ಸ್ಥಾಪಿಸಿ, ಪೂಜಾದ್ರವ್ಯಗಳೊಂದಿಗೆ ಆಹಾರ ಪದಾರ್ಥಗಳನ್ನು ಸುಡಲಾಗಿದೆ. ಸಂಕಷ್ಟದ ಸಮಯದಲ್ಲಿ ಜನರು ದೇವರಿಗೆ ಮೊರೆ ಹೋಗುವುದು ಸಾಮಾನ್ಯ. ಜೀವಕ್ಕೆ ಕುತ್ತು ತರಬಹುದಾದ ಕೊರೊನಾ ವೈರಸ್‌ ಸೋಂಕು ತೀವ್ರವಾಗಿರುವ ಸಂದರ್ಭದಲ್ಲಿ ಜನ ಸಹಜವಾಗಿಯೇ ದೇವರ ಮೊರೆ ಹೋಗಿರಬಹುದು. ಜನರ ನಂಬಿಕೆ ಹಾಗೂ ದೇವರ ಆರಾಧನೆಯು ತೀರಾ ವೈಯಕ್ತಿಕ ವಿಚಾರ.

ಆ ಕುರಿತು ಯಾರದೂ ತಕರಾರು ಇರಲಾರದು. ಆದರೆ, ಹಸಿದ ಕುಟುಂಬಗಳು ನಮ್ಮ ಸುತ್ತಮುತ್ತಲೇ ಇರುವಾಗ ಆಹಾರಧಾನ್ಯಗಳನ್ನು ಪೋಲು ಮಾಡುವುದಕ್ಕೆ ಯಾವ ಸಮರ್ಥನೆಯೂ ಇಲ್ಲ. ದೇವರ ಹೆಸರಿನಲ್ಲಿ ದುಂದುವೆಚ್ಚಗಳಿಗೆ ಇದು ಸಮಯವಲ್ಲ. ಅಸಹಾಯಕತೆ ಹಾಗೂ ಆತಂಕದ ಸಂದರ್ಭದಲ್ಲಿ ಪೂಜೆ– ಪುನಸ್ಕಾರವು ಜನರ ಮನಸ್ಸಿಗೆ ನೆಮ್ಮದಿ ತಂದುಕೊಡಬಹುದು. ಅದರ ಬಗ್ಗೆ ಯಾರದೂ ಆಕ್ಷೇಪ ಇರಲಾರದು. ಆದರೆ, ದೇವರ ಹೆಸರಿನಲ್ಲಿ ಟ್ರ್ಯಾಕ್ಟರ್‌ನಲ್ಲಿ ಅನ್ನವನ್ನು ತುಂಬಿಕೊಂಡು ಮಣ್ಣುಪಾಲು ಮಾಡುವುದು ಮೌಢ್ಯ, ಅಮಾನವೀಯ, ಅಕ್ಷಮ್ಯ. ಅನ್ನವನ್ನು ಅಗತ್ಯವಿದ್ದವರಿಗೆ ನೀಡಬೇಕೇ ಹೊರತು ಚೆಲ್ಲಬಾರದು ಎನ್ನುವುದು ಸಾಮಾನ್ಯಜ್ಞಾನ. ಇದನ್ನು ಅರ್ಥ ಮಾಡಿಕೊಳ್ಳಲು ವಿಶೇಷ ಪಾಂಡಿತ್ಯ ಬೇಕಾಗಿಲ್ಲ.

ADVERTISEMENT

ಜನಸಾಮಾನ್ಯರು ವೈಚಾರಿಕತೆಯನ್ನು ಮರೆತು ದೇವರಿಗೆ ಮೊರೆ ಹೋಗುತ್ತಿರುವುದರ ಹಿನ್ನೆಲೆಯಲ್ಲಿ ಅವರ ಅಸಹಾಯಕತೆಯನ್ನು ಗಮನಿಸಬೇಕು. ನಾಗರಿಕರ ಆತ್ಮವಿಶ್ವಾಸ ಕುಗ್ಗಲು ಹಾಗೂ ಅವರಲ್ಲಿ ಅಸಹಾಯಕತೆಯ ಭಾವನೆ ಉಂಟಾಗುವಲ್ಲಿ ವ್ಯವಸ್ಥೆಯ ಪಾತ್ರವೂ ಇದೆ. ಸುತ್ತಮುತ್ತಲೂ ರೋಗಬಾಧೆ ಹಾಗೂ ಸಾವಿನ ನೆರಳು ಕಾಣಿಸುತ್ತಿರುವಾಗ, ಜನಸಾಮಾನ್ಯರು ಮಾನಸಿಕವಾಗಿ ಕುಗ್ಗುವುದರಲ್ಲಿ ಆಶ್ಚರ್ಯವೇನೂ ಇಲ್ಲ. ಭರವಸೆ ಕಳೆದುಕೊಂಡ ಜನರಲ್ಲಿ ಆತ್ಮವಿಶ್ವಾಸ ಮೂಡಿಸುವ ಕೆಲಸವನ್ನು ಸರ್ಕಾರ, ಧರ್ಮಗುರುಗಳು ಹಾಗೂ ಸಂಘಸಂಸ್ಥೆಗಳು ಮಾಡಬೇಕು. ದೇವರು, ಧರ್ಮದ ಹೆಸರಿನಲ್ಲಿ ಆಹಾರಧಾನ್ಯಗಳನ್ನು ಹಾಳು ಮಾಡುತ್ತಿರುವವರಲ್ಲಿ ಜಾಗೃತಿ ಮೂಡಿಸಬೇಕು.

ಆದರೆ, ವೈಚಾರಿಕತೆ ಮೂಡಿಸಬೇಕಾದ ಜನನಾಯಕರೇ ತಪ್ಪು ಮಾದರಿಗಳನ್ನು ಹಾಕಿಕೊಡುತ್ತಿದ್ದಾರೆ. ಜನರ ಸಮಸ್ಯೆಗಳಿಗೆ ವಾಸ್ತವದ ನೆಲೆಗಟ್ಟಿನಲ್ಲಿ ಪರಿಹಾರ ಕಲ್ಪಿಸಬೇಕಾದ ಜನಪ್ರತಿನಿಧಿಗಳಲ್ಲಿ ಕೆಲವರು, ಕಾಯಿಲೆ ನಿವಾರಣೆಗೆ ಅವೈಜ್ಞಾನಿಕ ಮಾರ್ಗಗಳ ಮೊರೆ ಹೋಗಿದ್ದಾರೆ. ಕೋವಿಡ್‌ ಮಾರ್ಗಸೂಚಿಗಳನ್ನು ಉಲ್ಲಂಘಿಸುತ್ತಿದ್ದಾರೆ. ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರ ಪುತ್ರ ವಿಜಯೇಂದ್ರ ಅವರು ಕೋವಿಡ್‌ ಮಾರ್ಗಸೂಚಿಯನ್ನು ಉಲ್ಲಂಘಿಸಿ ನಂಜನಗೂಡಿನ ದೇವಸ್ಥಾನದಲ್ಲಿ ಪೂಜೆ ಮಾಡಿಸಿದ್ದಾರೆ. ಇಂತಹ ನಡೆ ಸಮಾಜಕ್ಕೆ ತಪ್ಪು ಸಂದೇಶ ರವಾನಿಸುತ್ತದೆ.

ಜವಾಬ್ದಾರಿಯುತ ಸ್ಥಾನದಲ್ಲಿ ಇರುವವರು ಹೊಣೆ ಅರಿತು ನಡೆದುಕೊಳ್ಳಬೇಕು. ಪ್ರಧಾನಿ ನರೇಂದ್ರ ಮೋದಿ ಅವರು ಕೊರೊನಾ ಮೊದಲನೇ ಅಲೆಯ ಸಂದರ್ಭದಲ್ಲಿ ಮನೆಗಳ ಎದುರು ತಟ್ಟೆ– ಲೋಟ, ಜಾಗಟೆ ಬಡಿಯಲು ಹಾಗೂ ದೀಪ ಬೆಳಗಿಸಲು ಜನರಿಗೆ ಕರೆ ನೀಡಿದರು. ಕೊರೊನಾ ಯೋಧರಿಗೆ ಗೌರವ ಸಲ್ಲಿಸಲು ಹಾಗೆ ಮಾಡಿ ಎಂದು ಪ್ರಧಾನಿ ಹೇಳಿದ್ದನ್ನು ತಪ್ಪಾಗಿ ಗ್ರಹಿಸಿಕೊಂಡ ಕೆಲವರು, ಶಂಖ ಮತ್ತು ಜಾಗಟೆಯ ಸದ್ದಿಗೆ ವೈರಾಣು ಇಲ್ಲವಾಗುತ್ತದೆ ಎಂದು ಅರ್ಥೈಸಿಕೊಂಡಿದ್ದೂ ಇತ್ತು! ಸದ್ಯದ ಬಿಕ್ಕಟ್ಟಿನ ಸಂದರ್ಭದಲ್ಲಿ ವೈಚಾರಿಕ ಪ್ರಜ್ಞೆಯು ಪ್ರಜೆಗಳಿಗಷ್ಟೇ ಅಲ್ಲ, ಪ್ರಜಾಪ್ರತಿನಿಧಿಗಳಿಗೂ ಅಗತ್ಯವಾದುದು. ವೈಚಾರಿಕ ಮತ್ತು ವೈಜ್ಞಾನಿಕ ಪ್ರಜ್ಞೆ ಹೆಚ್ಚು ಹೆಚ್ಚು ಜಾಗೃತಗೊಂಡಂತೆಲ್ಲ ಕೊರೊನಾ ವಿರುದ್ಧದ ಹೋರಾಟ ಹೆಚ್ಚು ಪರಿಣಾಮಕಾರಿ ಆಗತೊಡಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.