ADVERTISEMENT

ಸಂಪಾದಕೀಯ | ಆರೋಗ್ಯ ಕ್ಷೇತ್ರದ ಬಲವರ್ಧನೆ ಕಾಲಮಿತಿಯಲ್ಲಿ ಕೈಗೂಡಲಿ

​ಪ್ರಜಾವಾಣಿ ವಾರ್ತೆ
Published 20 ಆಗಸ್ಟ್ 2021, 20:00 IST
Last Updated 20 ಆಗಸ್ಟ್ 2021, 20:00 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ಜನರ ಆರೋಗ್ಯಕ್ಕೆ ಸಂಬಂಧಿಸಿ ಸರ್ಕಾರ ಹೆಚ್ಚು ಆದ್ಯತೆಯಿಂದ ಕಾರ್ಯನಿರ್ವಹಿಸಬೇಕಾದ ಅಗತ್ಯವಿದೆ ಎನ್ನುವುದು ಕೋವಿಡ್ ಕಾಲದಲ್ಲಿ ಎಲ್ಲರ ಅನುಭವಕ್ಕೆ ಬಂದಿದೆ. ಕರ್ನಾಟಕ ಸರ್ಕಾರವು ಜನರಿಗೆ ಆರೋಗ್ಯ ಸೇವೆಯ ಜೊತೆಗೆ ಕ್ಷೇಮವನ್ನೂ ಕಲ್ಪಿಸುವ ಆಶಯದಿಂದ 2,859 ಆರೋಗ್ಯ ಉಪಕೇಂದ್ರಗಳನ್ನು ಮೇಲ್ದರ್ಜೆಗೇರಿಸಲು ನಿರ್ಧರಿಸಿರುವುದನ್ನು ಈ ಹಿನ್ನೆಲೆಯಲ್ಲೇ ಗಮನಿಸಬಹುದು. ಕೋವಿಡ್ ಸೋಂಕಿನ ಎರಡೂ ಅಲೆಗಳು ರಾಜ್ಯದ ಆರೋಗ್ಯ ಕ್ಷೇತ್ರದ ಎಲ್ಲ ಹುಳುಕುಗಳನ್ನೂ ಬಯಲಿಗೆ ತಂದದ್ದು ಸುಳ್ಳಲ್ಲ.

ಸರ್ಕಾರಿ ಆರೋಗ್ಯ ವಲಯದಲ್ಲಿ ಮೂಲ ಸೌಕರ್ಯಗಳ ಕೊರತೆಯು ಕಣ್ಣಿಗೆ ರಾಚುವಂತೆ ಎದ್ದು ಕಂಡರೆ, ಖಾಸಗಿ ಆರೋಗ್ಯ ವಲಯದ ಲಾಭಕೋರತನ ಜನಸಾಮಾನ್ಯರನ್ನು ಕಂಗಾಲಾಗಿಸಿತ್ತು. ಕೋವಿಡ್‍ನ ಎರಡೂ ಅಲೆಗಳ ಹೊಡೆತದಿಂದ ಜನಸಾಮಾನ್ಯರು ದೈಹಿಕವಾಗಿ ಚೇತರಿಸಿಕೊಂಡಿರಬಹುದು. ಆದರೆ ಆರ್ಥಿಕ ನೆಲೆಯಲ್ಲಿ ಮತ್ತು ಮಾನಸಿಕವಾಗಿ ಇನ್ನೂ ಪೂರ್ಣವಾಗಿ ಚೇತರಿಸಿಕೊಂಡಿಲ್ಲ. ಈಗ ರಾಜ್ಯ ಸರ್ಕಾರವು ಆರೋಗ್ಯ ಕ್ಷೇತ್ರವನ್ನು ಬಲಪಡಿಸಲು ಹಲವು ಉಪಕ್ರಮಗಳನ್ನು ಕೈಗೊಂಡಿರುವುದು ಸ್ವಾಗತಾರ್ಹ ಸಂಗತಿ.

2,859 ಆರೋಗ್ಯ ಉಪಕೇಂದ್ರಗಳನ್ನು ‘ಆರೋಗ್ಯ ಮತ್ತು ಕ್ಷೇಮ ಕೇಂದ್ರ’ಗಳಾಗಿ ಮೇಲ್ದರ್ಜೆಗೇರಿಸಲು ₹ 478.91 ಕೋಟಿ ವ್ಯಯಿಸಲು ಸರ್ಕಾರ ನಿರ್ಧರಿಸಿದೆ. 750 ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ‘ಅಮೃತ ಆರೋಗ್ಯ ಮೂಲಸೌಕರ್ಯ ಉನ್ನತೀಕರಣ ಯೋಜನೆ’ಗಾಗಿ ₹ 150 ಕೋಟಿ ಅನುದಾನ ಒದಗಿಸಲು ಸರ್ಕಾರ ತೀರ್ಮಾನಿಸಿದೆ. ಇದೇ ವೇಳೆ ‘ಕರ್ನಾಟಕ ರಾಜ್ಯ ಮಾನಸಿಕ ಆರೋಗ್ಯ ಆರೈಕೆ ನಿಯಮ-2021’ಕ್ಕೂ ಸಚಿವ ಸಂಪುಟ ಒಪ್ಪಿಗೆ ನೀಡಿದೆ.

ಕೋವಿಡ್‍ನ ಮೂರನೇ ಅಲೆಯ ಭೀತಿ ಇನ್ನೂ ದೂರವಾಗಿಲ್ಲ. ಸರ್ಕಾರವು ಮೂರನೆಯ ಅಲೆಯನ್ನು ಎದುರಿಸುವ ಸಿದ್ಧತೆಯ ಜೊತೆಗೇ ಆರೋಗ್ಯ ಕ್ಷೇತ್ರದಲ್ಲಿ ಮೂಲಸೌಕರ್ಯಗಳನ್ನು ಬಲಪಡಿಸಬೇಕಾದ ತುರ್ತು ಅಗತ್ಯವೂ ಇದೆ. ಮುಂದಿನ ಬಜೆಟ್ ಮಂಡನೆಯ ಸಂದರ್ಭದಲ್ಲಿ ಆರೋಗ್ಯ ಕ್ಷೇತ್ರಕ್ಕೆ ಸಿಂಹಪಾಲು ಒದಗಿಸುವ ಮೂಲಕ ಸರ್ಕಾರದ ಆದ್ಯತೆಗಳನ್ನು ಪುನರ್‌ರೂಪಿಸುವ ಕುರಿತೂ ಸರ್ಕಾರ ಚಿಂತಿಸಬೇಕಿದೆ.

ರಾಜ್ಯದ ಆರೋಗ್ಯ ವಲಯ ಎದುರಿಸುತ್ತಿರುವ ಗಂಭೀರ ಸಮಸ್ಯೆಗಳು ಹಲವಾರು. ಸರ್ಕಾರಿ ವಲಯದತ್ತ ತಜ್ಞ ವೈದ್ಯರ ನಿರಾಸಕ್ತಿ ಅದರಲ್ಲಿ ಪ್ರಮುಖವಾದುದು. ಗ್ರಾಮೀಣ ಪ್ರದೇಶಗಳಲ್ಲಿ ತಜ್ಞ ವೈದ್ಯರ ಸೇವೆ ಅಗತ್ಯವಿರುವಷ್ಟು ಲಭ್ಯವಾಗದಿರುವುದು ಗಮನಿಸಬೇಕಾದ ಇನ್ನೊಂದು ಸಂಗತಿ. ಈ ಸಮಸ್ಯೆಗಳನ್ನು ನಿವಾರಿಸುವ ದಿಸೆಯಲ್ಲಿ ಸರ್ಕಾರವು ದೃಢ ಕ್ರಮಗಳನ್ನು ಕೈಗೊಳ್ಳಬೇಕಿದೆ. ತಜ್ಞ ವೈದ್ಯರ ನೇಮಕಾತಿಗೆ ಸರ್ಕಾರ ಹಲವು ಪ್ರಯತ್ನಗಳನ್ನು ನಡೆಸಿರುವುದು ನಿಜ. ಆದರೆ ಆ ಕ್ರಮಗಳು ಏಕೆ ಸಫಲವಾಗುತ್ತಿಲ್ಲ ಎನ್ನುವುದನ್ನೂ ಕೂಲಂಕಷವಾಗಿ ಪರಾಮರ್ಶಿಸಬೇಕಿದೆ.

ಆರೋಗ್ಯ ಇಲಾಖೆಯ ಮೂಲಗಳ ಪ್ರಕಾರ, ಮೇ ಮತ್ತು ಜೂನ್ ತಿಂಗಳಲ್ಲಿ ಆರೋಗ್ಯ ಇಲಾಖೆಯು ನೇಮಕ ಮಾಡಿಕೊಂಡಿದ್ದ 692 ತಜ್ಞ ವೈದ್ಯರ ಪೈಕಿ 364 ವೈದ್ಯರು ಕರ್ತವ್ಯಕ್ಕೆ ಹಾಜರಾಗಿಲ್ಲ ಎನ್ನುವುದು ಕಳವಳದ ಸಂಗತಿ. ಸರ್ಕಾರವು ಈಗ ತಜ್ಞರಿಗೆ ಹೆಚ್ಚಿನ ವೇತನದ ಆಹ್ವಾನ ನೀಡುತ್ತಿದೆ. ಹಾಗಾಗಿ ಇದು ಬರೀ ವೇತನದ ಪ್ರಶ್ನೆಯಾಗಿರಲಿಕ್ಕಿಲ್ಲ ಎನ್ನುವುದನ್ನು ಅಧಿಕಾರಸ್ಥರು ಅರ್ಥ ಮಾಡಿಕೊಳ್ಳಬೇಕು. ಮುಖ್ಯವಾಗಿ ಸರ್ಕಾರಿ ವೈದ್ಯಕೀಯ ಸಂಸ್ಥೆಗಳಲ್ಲಿ ಮೂಲ ಸೌಕರ್ಯಗಳ ಕೊರತೆ, ಆಡಳಿತದಲ್ಲಿ ಅದಕ್ಷತೆ ಮತ್ತು ರಾಜಕಾರಣಿಗಳ ಹಸ್ತಕ್ಷೇಪದ ಪ್ರಶ್ನೆಯೂ ಅಡಕವಾಗಿದೆ ಎನ್ನುವುದನ್ನು ಅಲ್ಲಗಳೆಯುವಂತಿಲ್ಲ.

ಆರೋಗ್ಯ ಇಲಾಖೆಯ ಅಧಿಕಾರಿಗಳು ಮತ್ತು ನೌಕರರ ವರ್ಗಾವಣೆ ಪ್ರಕ್ರಿಯೆಯನ್ನು ಇನ್ನು ಮುಂದೆ ಕಡ್ಡಾಯವಾಗಿ ಕೌನ್ಸೆಲಿಂಗ್ ಮೂಲಕವೇ ನಡೆಸಬೇಕು ಎಂದು ಆರೋಗ್ಯ ಸಚಿವ ಡಾ. ಕೆ.ಸುಧಾಕರ್‌ ಅವರು ಸೂಚಿಸಿರುವುದು ಈ ದಿಸೆಯಲ್ಲಿ ಸ್ವಾಗತಾರ್ಹ ಹೆಜ್ಜೆ. ಈ ಕ್ರಮವು ಆರೋಗ್ಯ ಇಲಾಖೆಯಲ್ಲಿ ಆಡಳಿತದ ಬಿಗು ತರಲು ಮತ್ತು ಭ್ರಷ್ಟಾಚಾರ ತಡೆಗೆ ಸ್ವಲ್ಪಮಟ್ಟಿಗೆ ನೆರವಾಗಬಹುದು. ಪಾರದರ್ಶಕವಾಗಿ ಮತ್ತು ನಿಗದಿತ ಕಾಲಮಿತಿಯಲ್ಲಿ ಸಕ್ಷಮ ಪ್ರಾಧಿಕಾರಗಳ ಮೂಲಕ ವರ್ಗಾವಣೆ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತಂದರೆ ಇಲಾಖೆಯ ಕಾರ್ಯಕ್ಷಮತೆ ಹೆಚ್ಚಬಹುದು.

ಲಕ್ಷಾಂತರ ಜನರನ್ನು ದಿಕ್ಕುಗೆಡಿಸಿದ ಕೋವಿಡ್‍ ಪಿಡುಗನ್ನು ಎದುರಿಸಲು ಅಪಾರ ಸಂಪನ್ಮೂಲ ವ್ಯಯಿಸುವ ಮೂಲಕ ರಾಜ್ಯ ಸರ್ಕಾರದ ಆರ್ಥಿಕತೆಯೂ ಕಂಗೆಟ್ಟಿದೆ ಎನ್ನುವುದು ಸರ್ವವೇದ್ಯ. ಆರೋಗ್ಯ ಕ್ಷೇತ್ರಕ್ಕೆ ಅನುದಾನ ಹೆಚ್ಚಿಸುವುದರ ಜೊತೆಗೆ ಅದರ ಸಮರ್ಪಕ, ಪಾರದರ್ಶಕ ಬಳಕೆಯ ಕಡೆಗೂ ಸರ್ಕಾರ ಗಮನಹರಿಸುವ ಅಗತ್ಯವಿದೆ. ಹಾಗಾದಲ್ಲಿ ಮಾತ್ರ ಜನರಿಗೆ ಉತ್ತಮ ಆರೋಗ್ಯ ಸೇವೆ ಲಭ್ಯವಾಗಬಹುದು. ಅದನ್ನು ಖಾತರಿಪಡಿಸುವುದು ಸರ್ಕಾರದ ಜವಾಬ್ದಾರಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT