ADVERTISEMENT

ವೇಗ ಕಳೆದುಕೊಂಡ ಲಸಿಕೆ ಅಭಿಯಾನ – ರಾಜ್ಯಗಳನ್ನು ದೂಷಿಸುವುದು ಪರಿಹಾರವಲ್ಲ

​ಪ್ರಜಾವಾಣಿ ವಾರ್ತೆ
Published 16 ಜುಲೈ 2021, 19:31 IST
Last Updated 16 ಜುಲೈ 2021, 19:31 IST
ಸಂಪಾದಕೀಯ
ಸಂಪಾದಕೀಯ   

ದೇಶದಲ್ಲಿ 18 ವರ್ಷಕ್ಕಿಂತ ಹೆಚ್ಚು ವಯಸ್ಸಾದವರಿಗೆ ಕೋವಿಡ್ ಲಸಿಕೆ ನೀಡುವ ಅಭಿಯಾನವು ಜುಲೈ ತಿಂಗಳಿನಲ್ಲಿ ವೇಗ ಕಳೆದುಕೊಂಡಿದೆ. ಇದಕ್ಕೂ ಮೊದಲು ಅಭಿಯಾನವು ಕೆಲವು ದಿನಗಳ ಕಾಲ ಗಮನಾರ್ಹ ವೇಗ ದಾಖಲಿಸಿತ್ತು. ಕಳೆದ ಏಳು ದಿನಗಳ ಅವಧಿಯಲ್ಲಿ ಪ್ರತಿದಿನ ನೀಡಲಾದ ಸರಾಸರಿ ಡೋಸ್‌ಗಳ ಸಂಖ್ಯೆಯು ಅಂದಾಜು 35 ಲಕ್ಷ ಇದೆ. ಜೂನ್‌ 21ರ ನಂತರದ ವಾರದಲ್ಲಿ ಪ್ರತಿದಿನ ಸರಾಸರಿ 58 ಲಕ್ಷ ಡೋಸ್ ಲಸಿಕೆ ನೀಡಲಾಗಿತ್ತು. ಆಗಿನ ಸಂಖ್ಯೆಗೆ ಹೋಲಿಸಿದರೆ ಈಗ ನೀಡಲಾಗುತ್ತಿರುವ ಡೋಸ್‌ಗಳ ಸಂಖ್ಯೆ ಬಹಳ ಕಡಿಮೆ ಇದೆ ಎಂಬುದು ಸ್ವಯಂವೇದ್ಯ. ಕೇಂದ್ರ ಸರ್ಕಾರವು ಲಸಿಕೆ ನೀಡುವ ನೀತಿಯಲ್ಲಿ ಮಹತ್ವದ ಬದಲಾವಣೆಗಳನ್ನು ತಂದು, ಜೂನ್‌ 21ರಿಂದ ಭಾರಿ ಪ್ರಚಾರದೊಂದಿಗೆ ಲಸಿಕೆ ನೀಡುವ ಕಾರ್ಯಕ್ರಮಕ್ಕೆ ವೇಗ ತುಂಬಿತು. ಕೆಲವು ದಿನಗಳವರೆಗೆ ವೇಗವಾಗಿಯೇ ಸಾಗುತ್ತಿದ್ದ ಲಸಿಕೆ ನೀಡುವ ಅಭಿಯಾನವು ನಂತರದಲ್ಲಿ ಮೊದಲಿನ ವೇಗ ಕಳೆದುಕೊಂಡಿದೆ. ತಮಗೆ ಅಗತ್ಯ ಪ್ರಮಾಣದಲ್ಲಿ ಲಸಿಕೆ ಸಿಗುತ್ತಿಲ್ಲ ಎಂದುಮಹಾರಾಷ್ಟ್ರ ಸರ್ಕಾರ ಮತ್ತು ದೆಹಲಿ ಸರ್ಕಾರ ದೂರುತ್ತಿವೆ. ಒಡಿಶಾ ಮತ್ತು ಮಧ್ಯಪ್ರದೇಶ ರಾಜ್ಯಗಳು ಕೆಲವು ಜಿಲ್ಲೆಗಳಲ್ಲಿ ಲಸಿಕೆ ನೀಡುವುದನ್ನು ಸ್ಥಗಿತಗೊಳಿಸಿರುವ ವರದಿಗಳಿವೆ. ‘ನಮಗೆ ನಿಗದಿ ಮಾಡಿರುವ ಲಸಿಕೆಗಳ ಸಂಖ್ಯೆಯು ಬೇಡಿಕೆಗೆ ತಕ್ಕಂತೆ ಇಲ್ಲ. ಅಷ್ಟೇ ಅಲ್ಲ, ಬಿಜೆಪಿ ಆಡಳಿತ ಇರುವ ಕರ್ನಾಟಕ ಮತ್ತು ಗುಜರಾತ್ ರಾಜ್ಯಗಳಿಗೆ ಹೋಲಿಸಿದರೆ ನಮಗೆ ಕಡಿಮೆ ಸಂಖ್ಯೆಯಲ್ಲಿ ಲಸಿಕೆ ನಿಗದಿ ಮಾಡಲಾಗಿದೆ’ ಎಂದು ತಮಿಳುನಾಡು ಆರೋಪಿಸಿದೆ. ಲಸಿಕೆ ಪೂರೈಕೆಯು ನಿಯಮಿತವಾಗಿ ಇಲ್ಲ ಎಂದು ಕೆಲವು ರಾಜ್ಯಗಳು ಆರೋಪಿಸಿವೆ. ರಾಜ್ಯಗಳು ಲಸಿಕೆ ನೀಡಲು ಸರಿಯಾದ ಯೋಜನೆ ರೂಪಿಸಿಲ್ಲ, ಇದರಿಂದಾಗಿಯೇ ಅವು ಸಮಸ್ಯೆ ಎದುರಿಸುತ್ತಿವೆ ಎಂದು ಕೇಂದ್ರ ಸರ್ಕಾರ ಪ್ರತ್ಯಾರೋಪ ಮಾಡಿದೆ. ಕೇಂದ್ರ ಆರೋಗ್ಯ ಸಚಿವರಾಗಿ ಹೊಸದಾಗಿ ಅಧಿಕಾರ ಸ್ವೀಕರಿಸಿರುವ ಮನಸುಖ್ ಮಾಂಡವಿಯ ಅವರು, ರಾಜ್ಯಗಳು ನಿಷ್ಪ್ರಯೋಜಕ ಹೇಳಿಕೆಗಳನ್ನು ನೀಡುತ್ತಿವೆ, ಜನರಲ್ಲಿ ಭೀತಿ ಹುಟ್ಟಿಸುತ್ತಿವೆ ಎಂದು ಹೇಳಿದ್ದಾರೆ. ಲಸಿಕೆಗಳ ಕೊರತೆ ಇಲ್ಲ ಎಂದು ಅವರು ಪ್ರತಿಪಾದಿಸಿದ್ದಾರೆ.

ಲಭ್ಯ ಲಸಿಕೆಗಳ ನಿರ್ವಹಣೆಗಿಂತಲೂ ಹೆಚ್ಚಾಗಿ ಲಸಿಕೆಗಳ ಲಭ್ಯತೆ ಇಲ್ಲದಿರುವುದೇ ದೊಡ್ಡ ಸಮಸ್ಯೆ ಎಂಬುದನ್ನು ಅಂಕಿ–ಅಂಶಗಳು ಹೇಳುತ್ತಿವೆ. ಲಸಿಕೆ ನೀಡುವ ಕೆಲಸವನ್ನು ಪರಿಣಾಮಕಾರಿಯಾಗಿ ಜಾರಿಗೆ ತರುವುದನ್ನು ಮಾತ್ರ ರಾಜ್ಯಗಳಿಂದ ನಿರೀಕ್ಷಿಸ
ಬಹುದು. ಲಸಿಕೆ ನೀಡುವ ಯೋಜನೆಯನ್ನು ರಾಜ್ಯಗಳು ಅಸಮರ್ಪಕವಾಗಿ ಜಾರಿಗೆ ತಂದಿರುವ ವರದಿಗಳು ಇಲ್ಲ. ಲಸಿಕೆ ಪಡೆಯಲು ಅರ್ಹತೆ ಹೊಂದಿರುವ ಎಲ್ಲ ವಯಸ್ಕರಿಗೂ ಈ ವರ್ಷದ ಅಂತ್ಯದೊಳಗೆ ಲಸಿಕೆ ನೀಡಲಾಗುವುದು ಎಂದು ಕೇಂದ್ರವು ಘೋಷಿಸಿದೆ. ಇದು ಸಾಧ್ಯವಾಗಬೇಕು ಎಂದಾದರೆ ಪ್ರತಿದಿನ ಅಂದಾಜು 88 ಲಕ್ಷ ಜನರಿಗೆ ಲಸಿಕೆ ನೀಡಬೇಕು. ಇಷ್ಟು ಸಂಖ್ಯೆಯಲ್ಲಿ ಲಸಿಕೆ ನೀಡಲು ಸಾಧ್ಯವಾಗಿದ್ದು ಜೂನ್‌ 21ರಂದು ಮಾತ್ರ. ಈಗ ಪ್ರತಿದಿನ 30 ಲಕ್ಷದಿಂದ 35 ಲಕ್ಷದವರೆಗೆ ಲಸಿಕೆ ನೀಡಲಾಗುತ್ತಿದ್ದು, ವರ್ಷದ ಅಂತ್ಯದೊಳಗೆ ಎಲ್ಲರಿಗೂ ಲಸಿಕೆ ಕೊಡಲು ಸಾಧ್ಯವಿಲ್ಲ. ಲಸಿಕೆಗಳನ್ನು ಆದಷ್ಟು ತ್ವರಿತವಾಗಿ ಪೂರೈಕೆ ಮಾಡುವ ತುರ್ತು ಇದೆ.

ಲಸಿಕೆ ಉತ್ಪಾದನೆಗೆ ವೇಗ ದೊರೆತರೆ ಮಾತ್ರ ಲಸಿಕೆ ಪೂರೈಕೆ ಇನ್ನಷ್ಟು ಚುರುಕಾಗಲು ಸಾಧ್ಯ. ದೇಶದಲ್ಲಿ ಲಸಿಕೆಯನ್ನು ಈಗಿನ ಮಟ್ಟಕ್ಕಿಂತ ಹೆಚ್ಚು ವೇಗವಾಗಿ ಉತ್ಪಾದಿಸಲು ಸಾಧ್ಯವಿಲ್ಲ ಎಂದಾದರೆ, ಲಸಿಕೆಯನ್ನು ವಿದೇಶಗಳಿಂದ ಆಮದು ಮಾಡಿಕೊಳ್ಳುವತ್ತ ಕೇಂದ್ರ ಸರ್ಕಾರ ಗಮನ ಹರಿಸಬೇಕು. ಕೋವಿಡ್‌ನ ಮೂರನೆಯ ಅಲೆಯು ಸದ್ಯದಲ್ಲೇ ಎದುರಾಗಲಿದೆ ಎಂಬ ಆತಂಕ ಇರುವ ಈ ಸಂದರ್ಭದಲ್ಲಿ, ಲಸಿಕೆ ನೀಡುವ ಪ್ರಕ್ರಿಯೆಯನ್ನು ಇನ್ನಷ್ಟು ಚುರುಕುಗೊಳಿಸಲೇಬೇಕು. ಆಗಸ್ಟ್‌ ಮತ್ತು ಡಿಸೆಂಬರ್ ನಡುವಿನ ಅವಧಿಯಲ್ಲಿ ಒಟ್ಟು 216 ಕೋಟಿ ಡೋಸ್ ಲಸಿಕೆ ಲಭ್ಯವಿರುವಂತೆ ಮಾಡಲಾಗುವುದು ಎಂದು ಕೇಂದ್ರವು ಈ ಹಿಂದೆ ಹೇಳಿತ್ತು. ನಂತರ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ ಪ್ರಮಾಣಪತ್ರದಲ್ಲಿ ಅದು ಬೇರೊಂದು ಮಾಹಿತಿ ನೀಡಿತು; ಆಗಸ್ಟ್‌–ಡಿಸೆಂಬರ್ ಅವಧಿಯಲ್ಲಿ ಒಟ್ಟು 135 ಕೋಟಿ ಡೋಸ್ ಲಸಿಕೆ ಸಿಗುವಂತೆ ಮಾಡಲಾಗುತ್ತದೆ ಎಂದು ಹೇಳಿತು. ಕೇಂದ್ರವೇ ನಿಗದಿ ಮಾಡಿಕೊಂಡಿರುವ ಗುರಿಯನ್ನು ತಲುಪಬೇಕು ಎಂದಾದಲ್ಲಿ, 188 ಕೋಟಿ ಡೋಸ್ ಲಸಿಕೆ ಬೇಕಾಗುತ್ತದೆ. ಲಸಿಕೆ ಉತ್ಪಾದನೆ ಹೆಚ್ಚಿಸಲು ಲಸಿಕೆ ತಯಾರು ಮಾಡುವ ಕಂಪನಿಗಳಿಗೆ ಪ್ರೋತ್ಸಾಹ ನೀಡಬೇಕು. ಲಸಿಕೆ ತಯಾರಿಸಲು ಅಗತ್ಯವಿರುವ ಕೆಲವು ಕಚ್ಚಾವಸ್ತುಗಳು ಸಿಗುತ್ತಿಲ್ಲ, ವ್ಯಾಪಾರ ವಹಿವಾಟಿಗೆ ಸಂಬಂಧಿಸಿದ ಕೆಲವು ನಿರ್ಬಂಧಗಳನ್ನು ತೆರವು ಮಾಡಬೇಕು ಎಂದು ಕಂಪನಿಗಳು ಕೇಂದ್ರಕ್ಕೆ ಮನವಿ ಮಾಡಿವೆ. ಕೋವ್ಯಾಕ್ಸಿನ್ ಲಸಿಕೆಯನ್ನು ತಯಾರಿಸುವ ಭಾರತ್ ಬಯೋಟೆಕ್ ಕಂಪನಿಯು ತನ್ನ ಲಸಿಕೆ ಉತ್ಪಾದನೆ ಸಾಮರ್ಥ್ಯವನ್ನು ಮೂರು ಪಟ್ಟು ಹೆಚ್ಚಿಸಿಕೊಳ್ಳುವುದಾಗಿ ಹೇಳಿತ್ತು. ಆದರೆ, ಹಲವು ಕಾರಣಗಳಿಂದಾಗಿ ಗುರಿ ತಲುಪುವುದು ವಿಳಂಬವಾಗಿದೆ ಎಂಬ ವರದಿಗಳು ಇವೆ. ಅಗತ್ಯ ಇರುವಷ್ಟು ಲಸಿಕೆ ದೇಶದಲ್ಲಿ ಉತ್ಪಾದನೆ ಆಗಬೇಕು ಅಥವಾ ಅಷ್ಟು ಲಸಿಕೆಗಳನ್ನು ವಿದೇಶಗಳಿಂದಾದರೂ ತರಿಸಿಕೊಡುವ ಕೆಲಸವನ್ನು ಕೇಂದ್ರ ಸರ್ಕಾರ ಮಾಡಬೇಕು. ಲಸಿಕೆ ಹಂಚಿಕೆಯು ನ್ಯಾಯಸಮ್ಮತವಾಗಿ, ಪಾರದರ್ಶಕವಾಗಿ ಆಗಬೇಕು. ರಾಜ್ಯಗಳನ್ನು ದೂಷಿಸುತ್ತ ಕುಳಿತಿರುವುದರಿಂದ ಪ್ರಯೋಜನ ಇಲ್ಲ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.