ADVERTISEMENT

ಸಂಪಾದಕೀಯ: ಡೆಟ್ ಫಂಡ್‌: ತೆರಿಗೆ ಬದಲಾವಣೆ ಸಣ್ಣ ಹೂಡಿಕೆದಾರರಿಗೆ ಹೊರೆ

​ಪ್ರಜಾವಾಣಿ ವಾರ್ತೆ
Published 26 ಮಾರ್ಚ್ 2023, 20:31 IST
Last Updated 26 ಮಾರ್ಚ್ 2023, 20:31 IST
.
.   

ಕೇಂದ್ರ ಸರ್ಕಾರ ಮಂಡಿಸಿದ ಹಣಕಾಸು ಮಸೂದೆ– 2023ಕ್ಕೆ ಲೋಕಸಭೆಯು ಚರ್ಚೆಯಿಲ್ಲದೆ ಅನುಮೋದನೆ ನೀಡಿದೆ. ಪ್ರಮುಖ ಮಸೂದೆಗಳು ಚರ್ಚೆಯಿಲ್ಲದೆ ಶಾಸನಸಭೆಗಳ ಅನುಮೋದನೆ ಪಡೆದುಕೊಳ್ಳುವುದು ಹೊಸದೇನೂ ಅಲ್ಲ. ಆದರೆ, ಕಳೆದ ವಾರ ಲೋಕಸಭೆಯ ಅನುಮೋದನೆ ಪಡೆದ ಹಣಕಾಸು ಮಸೂದೆಯಲ್ಲಿ, ಡೆಟ್ (ಸಾಲಪತ್ರ) ಮ್ಯೂಚುವಲ್ ಫಂಡ್‌ಗಳ ತೆರಿಗೆ ವಿಚಾರವಾಗಿ ಮಹತ್ವದ ಬದಲಾವಣೆಗಳು ಅಡಕವಾಗಿವೆ. ಇದು ಚರ್ಚೆಯಿಲ್ಲದೆ ಅನುಮೋದನೆ ಪಡೆದುಕೊಂಡಿದ್ದು ಸಣ್ಣ ಹೂಡಿಕೆದಾರರ ಪಾಲಿಗೆ ಹಿತಕರವಾಗಿ ಇಲ್ಲ. ಈ ಬದಲಾವಣೆಗಳು ಏಕೆ ಅಹಿತಕರ ಎಂಬುದನ್ನು ತಿಳಿದುಕೊಳ್ಳುವ ಮೊದಲು ಮಾರ್ಚ್‌ 31ರವರೆಗೆ ಜಾರಿಯಲ್ಲಿ ಇರುವ ನಿಯಮಗಳು ಏನು ಹೇಳುತ್ತವೆ ಎಂಬುದನ್ನು ಗಮನಿಸಬೇಕು. ಹೂಡಿಕೆದಾರರು ತಮ್ಮ ಹಣವನ್ನು ಡೆಟ್ ಮ್ಯೂಚುವಲ್‌ ಫಂಡ್‌ಗಳಲ್ಲಿ ಮೂರು ವರ್ಷಗಳಿಗಿಂತ ಹೆಚ್ಚಿನ ಅವಧಿಗೆ ತೊಡಗಿಸಿದ್ದರೆ, ಅದರಿಂದ ಸಿಗುವ ಲಾಭಕ್ಕೆ ದೀರ್ಘಾವಧಿ ಬಂಡವಾಳ ವೃದ್ಧಿ (ಎಲ್‌ಟಿಸಿಜಿ) ತೆರಿಗೆ ವಿಧಿಸಲಾಗುತ್ತದೆ. ಇಷ್ಟೇ ಅಲ್ಲ, ತೆರಿಗೆ ಲೆಕ್ಕ ಹಾಕುವಾಗ ಹೂಡಿಕೆದಾರರಿಗೆ ಇಂಡೆಕ್ಸೇಷನ್ (ಹಣದುಬ್ಬರದ ಪ್ರಮಾಣವನ್ನು ಪರಿಗಣಿಸಿ ತೆರಿಗೆ ಲೆಕ್ಕ ಮಾಡುವುದು) ಪ್ರಯೋಜನ ಸಿಗುತ್ತದೆ. ಇಂಡೆಕ್ಸೇಷನ್‌ ಪ್ರಯೋಜನ
ವನ್ನು ಬಳಸಿಕೊಂಡರೆ ಹೂಡಿಕೆದಾರರು ಡೆಟ್ ಮ್ಯೂಚುವಲ್‌ ಫಂಡ್‌ಗಳಿಂದ ಸಿಗುವ ಲಾಭಕ್ಕೆ ಕೊಡಬೇಕಾದ ತೆರಿಗೆ ಮೊತ್ತವು ತಗ್ಗುತ್ತದೆ. ಬ್ಯಾಂಕ್‌ ನಿಶ್ಚಿತ ಠೇವಣಿಗಳಿಗೆ ಸಿಗುವ ಲಾಭಕ್ಕೆ ತೆರಿಗೆ ಲೆಕ್ಕ ಹಾಕುವಾಗ ಈ ಬಗೆಯ ಸೌಲಭ್ಯ ಇಲ್ಲ. ಇಲ್ಲಿ ದೊರೆಯುವ ಬಡ್ಡಿಗೆ ಠೇವಣಿ ಇರಿಸಿದವರ ವೈಯಕ್ತಿಕ ತೆರಿಗೆ ಹಂತಕ್ಕೆ ಅನುಗುಣವಾಗಿ ತೆರಿಗೆ ‍ಪಾವತಿ ಮಾಡಬೇಕಾಗುತ್ತದೆ. ಡೆಟ್ ಮ್ಯೂಚುವಲ್‌ ಫಂಡ್‌ಗಳು ಜನಪ್ರಿಯವಾಗುವುದಕ್ಕೆ ಎಲ್‌ಟಿಸಿಜಿ ಹಾಗೂ ಇಂಡೆಕ್ಸೇಷನ್ ಪ್ರಯೋಜನ ಪಡೆದುಕೊಳ್ಳುವ ಅವಕಾಶ ಕಲ್ಪಿಸಿದ್ದೂ ಒಂದು ಕಾರಣ.

ಡೆಟ್ ಮ್ಯೂಚುವಲ್‌ ಫಂಡ್‌ಗಳಲ್ಲಿ ಮಾಡಿದ ಹೂಡಿಕೆಯನ್ನು ಮೂರು ವರ್ಷಗಳಿಗಿಂತ ಮೊದಲೇ ನಗದೀಕರಿಸಿಕೊಂಡರೆ ಹೂಡಿಕೆದಾರರು ತಮ್ಮ ವೈಯಕ್ತಿಕ ಆದಾಯ ತೆರಿಗೆ ಹಂತಕ್ಕೆ ಅನುಗುಣವಾಗಿ ತೆರಿಗೆ ಪಾವತಿಸಬೇಕು. ಆದರೆ, ಏಪ್ರಿಲ್‌ 1ರಿಂದ ಅನ್ವಯ ಆಗುವ ಹೊಸ ನಿಯಮಗಳ ಪ್ರಕಾರ, ಡೆಟ್‌ ಮ್ಯೂಚುವಲ್‌ ಫಂಡ್‌ ಹೂಡಿಕೆಗಳಿಂದ ಸಿಗುವ ಲಾಭಕ್ಕೆ ಅಲ್ಪಾವಧಿ ಬಂಡವಾಳ ವೃದ್ಧಿ ತೆರಿಗೆಯನ್ನು ವಿಧಿ
ಸಲಾಗುತ್ತದೆ. ಅಂದರೆ, ಇಂಡೆಕ್ಸೇಷನ್ ಪ್ರಯೋಜನ ಇರುವುದಿಲ್ಲ. ಹಣದುಬ್ಬರ ಯಾವುದೇ ಮಟ್ಟದ
ಲ್ಲಿರಲಿ, ಲಾಭಕ್ಕೆ ತೆರಿಗೆಯನ್ನು ಹೂಡಿಕೆದಾರನು ತನ್ನ ವೈಯಕ್ತಿಕ ತೆರಿಗೆ ಹಂತಕ್ಕೆ ಅನುಗುಣವಾಗಿ ಪಾವತಿ ಮಾಡಬೇಕಾಗುತ್ತದೆ. ದೇಶಿ ಕಂಪನಿಗಳ ಷೇರುಗಳಲ್ಲಿ ಶೇಕಡ 35ಕ್ಕಿಂತ ಕಡಿಮೆ ಮೊತ್ತವನ್ನು ತೊಡಗಿಸಿರುವ ಮ್ಯೂಚುವಲ್‌ ಫಂಡ್‌ಗಳಿಗೆ, ಚಿನ್ನದ ವಿನಿಮಯ ವಹಿವಾಟು ನಿಧಿಗಳಿಗೆ (ಇಟಿಎಫ್) ಇದು ಅನ್ವಯವಾಗುತ್ತದೆ. ಇದರಿಂದಾಗಿ, ತೆರಿಗೆ ಲೆಕ್ಕಹಾಕುವ ವಿಚಾರದಲ್ಲಿ, ಈ ಬಗೆಯ ಮ್ಯೂಚುವಲ್‌ ಫಂಡ್‌ಗಳು ಹಾಗೂ ಬ್ಯಾಂಕ್ ಠೇವಣಿಗಳು ಒಂದೇ ಆಗಲಿವೆ. ಕೇಂದ್ರ ಸರ್ಕಾರವು ತರಲಿರುವ ಬದಲಾವಣೆಯ ಪರಿಣಾಮವಾಗಿ, ಡೆಟ್‌ ಫಂಡ್‌ಗಳಿಂದ ಒಂದಿಷ್ಟು ಹಣ ಬ್ಯಾಂಕ್‌ ನಿಶ್ಚಿತ ಠೇವಣಿಗಳ ಕಡೆ ಹರಿಯಬಹುದು ಎಂಬ ನಿರೀಕ್ಷೆ ಇದೆ. ಡೆಟ್ ಫಂಡ್‌ಗಳಿಗೆ ಬ್ಯಾಂಕ್ ನಿಶ್ಚಿತ ಠೇವಣಿಗಳು ಕೊಡುವ ಬಡ್ಡಿಗಿಂತ ಹೆಚ್ಚಿನ ಲಾಭವನ್ನು ತಂದುಕೊಡುವ ಶಕ್ತಿ ಇದೆ ಎಂಬುದು ಇಲ್ಲಿ ಗಮನಾರ್ಹ.

ದೇಶದ ಬ್ಯಾಂಕ್‌ಗಳು ನೀಡುವ ಸಾಲದ ಪ್ರಮಾಣ ಹೆಚ್ಚುತ್ತಿದೆ. ಆದರೆ ಬ್ಯಾಂಕ್‌ಗಳಲ್ಲಿ ಜನ ಠೇವಣಿ ಇರಿಸುವ ಪ್ರಮಾಣವು ಇದಕ್ಕೆ ಹೋಲಿಸಿದರೆ ಕಡಿಮೆ ಇದೆ. ಷೇರು ಮಾರುಕಟ್ಟೆಯ ‘ರಿಸ್ಕ್‌’ ತೆಗೆದುಕೊಳ್ಳಲು ಇಷ್ಟಪಡದ ಸಣ್ಣ ಹೂಡಿಕೆದಾರರು ತಮ್ಮ ಹಣವನ್ನು ತೊಡಗಿಸುವುದು ನಿಶ್ಚಿತ ಠೇವಣಿಗಳಲ್ಲಿ ಅಥವಾ ಡೆಟ್ ಮ್ಯೂಚುವಲ್ ಫಂಡ್‌ಗಳಲ್ಲಿ. ಡೆಟ್ ಮ್ಯೂಚುವಲ್‌ ಫಂಡ್‌ಗಳ ಆಕರ್ಷಣೆ
ಯನ್ನು ತಗ್ಗಿಸಿ, ಅಲ್ಲಿನ ಹಣವು ನಿಶ್ಚಿತ ಠೇವಣಿಗಳ ಕಡೆ ಹರಿಯುವಂತೆ ಮಾಡುವ ಉದ್ದೇಶ ಕೂಡ ಕೇಂದ್ರದ ನಡೆಯ ಹಿಂದೆ ಇದ್ದಿರಬಹುದು. ಆದರೆ ಈ ನಡೆಯು ದೇಶದ ಬಾಂಡ್‌ ಮಾರುಕಟ್ಟೆಯ ಮೇಲೆ ಕೆಟ್ಟ ಪರಿಣಾಮ ಬೀರಬಹುದು ಎಂಬ ಕಳವಳವನ್ನು ಉದ್ಯಮದ ಪ್ರತಿನಿಧಿಗಳು ವ್ಯಕ್ತಪಡಿಸಿದ್ದಾರೆ.ದೇಶದ ಕಾರ್ಪೊರೇಟ್ ವಲಯಕ್ಕೆ ಬಂಡವಾಳ ಸಂಗ್ರಹಿಸಲು ಬಾಂಡ್ ಮಾರುಕಟ್ಟೆ ಕೂಡ ಒಂದು ವೇದಿಕೆ. ಸಣ್ಣ ಹೂಡಿಕೆದಾರರಿಗೆ ಬಾಂಡ್‌ಗಳಿಂದ ಸಿಗುವ ನಿಶ್ಚಿತ ಆದಾಯವನ್ನು ಅನುಭವಿಸುವುದಕ್ಕೆ ಡೆಟ್ ಮ್ಯೂಚುವಲ್‌ ಫಂಡ್‌ಗಳು ಸುಲಭದ ಸಾಧನ. ದೇಶದ ಬಾಂಡ್‌ ಮಾರುಕಟ್ಟೆ ಇನ್ನಷ್ಟು ಶಕ್ತಿಯುತವಾಗಬೇಕು ಎಂದಾದರೆ, ಸಣ್ಣ ಹೂಡಿಕೆದಾರರು ಅಲ್ಲಿ ಹೆಚ್ಚು ಹಣ ತೊಡಗಿಸಲು ಇನ್ನಷ್ಟು ಉತ್ತೇಜನ ಕೊಡಬೇಕು. ಇರುವ ಉತ್ತೇಜಕ ಕ್ರಮಗಳನ್ನು ಕಿತ್ತುಕೊಳ್ಳಬಾರದು. ಅದರಲ್ಲೂ, ಹಣದುಬ್ಬರ ಮಿತಿ ಮೀರಿರುವ ಸಂದರ್ಭದಲ್ಲಿ, ತುಸು ಹೆಚ್ಚಿನ ಲಾಭ ಗಳಿಸಲು ಸಣ್ಣ ಹೂಡಿಕೆದಾರರಿಗೆ ಇರುವ ಅವಕಾಶವನ್ನು ಮೊಟಕುಗೊಳಿಸಬಾರದು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.