ADVERTISEMENT

ಸಾಮೂಹಿಕ ಅತ್ಯಾಚಾರ: ದುಷ್ಕರ್ಮಿಗಳಿಗೆ ಕಠಿಣ ಶಿಕ್ಷೆ ಆಗುವಂತೆ ನೋಡಿಕೊಳ್ಳಿ..

​ಪ್ರಜಾವಾಣಿ ವಾರ್ತೆ
Published 26 ಆಗಸ್ಟ್ 2021, 22:45 IST
Last Updated 26 ಆಗಸ್ಟ್ 2021, 22:45 IST
ಸಂಪಾದಕೀಯ
ಸಂಪಾದಕೀಯ   

ಸಾಂಸ್ಕೃತಿಕ, ಶೈಕ್ಷಣಿಕ ಮತ್ತು ಪ್ರವಾಸಿ ಕೇಂದ್ರವಾಗಿ ಹೆಸರುವಾಸಿ ಆಗಿರುವ ಮೈಸೂರು ನಗರ ಈಗ ಕೆಟ್ಟ ಕಾರಣಕ್ಕಾಗಿ ಸುದ್ದಿಯಲ್ಲಿದೆ. ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿರುವ ಲಲಿತಾದ್ರಿಪುರ ಗುಡ್ಡದಲ್ಲಿ ಮಂಗಳವಾರ ರಾತ್ರಿ 7.30ರ ಸುಮಾರಿಗೆ ಎಂಬಿಎ ವಿದ್ಯಾರ್ಥಿನಿಯೊಬ್ಬರ ಮೇಲೆ ದುಷ್ಕರ್ಮಿಗಳು ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆ. ಆಕೆಯ ಜೊತೆಗಿದ್ದ ಸಹಪಾಠಿ ಗೆಳೆಯನ ಮೇಲೆ ದುಷ್ಕರ್ಮಿಗಳು ಹಲ್ಲೆ ನಡೆಸಿದ್ದು ಇಬ್ಬರೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಹಲ್ಲೆಗೊಳಗಾದ ವಿದ್ಯಾರ್ಥಿ ನೀಡಿರುವ ಹೇಳಿಕೆ ಆಧರಿಸಿ ಎಫ್‌ಐಆರ್ ದಾಖಲಿಸಿರುವ ಪೊಲೀಸರು, ದುಷ್ಕರ್ಮಿಗಳ ಪತ್ತೆಗೆ ವಿಶೇಷ ತನಿಖಾ ದಳ ರಚಿಸಿದ್ದಾರೆ. ಈ ಪೈಶಾಚಿಕ ಕೃತ್ಯವನ್ನು ಗಂಭೀರವಾಗಿ ಪರಿಗಣಿಸಿರುವುದಾಗಿ ಹೇಳಿರುವ ರಾಜ್ಯದ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು, ತನಿಖಾ ಪ್ರಗತಿಯ ಪರಿಶೀಲನೆಗೆ ಮೈಸೂರಿಗೆ ಭೇಟಿ ನೀಡಿರುವುದು ಸೂಕ್ತವಾಗಿದೆ. ಆದರೆ, ನಿರ್ಜನ ಪ್ರದೇಶಕ್ಕೆ ಯುವತಿ–ಯುವಕ ರಾತ್ರಿ 7.30ರ ಸಮಯದಲ್ಲಿ ಹೋಗಬಾರದಿತ್ತು ಎಂದು ಗೃಹ ಸಚಿವರು ಹೇಳಿರುವುದು ಸಂವೇದನೆರಹಿತವಾದ ನಡವಳಿಕೆ.

ಶಾಂತಿ–ಸುವ್ಯವಸ್ಥೆ ಕಾಪಾಡುವ ಹೊಣೆ ಹೊತ್ತವರ ಇಂತಹ ಹೊಣೆಗೇಡಿ ಹೇಳಿಕೆಯು ಸಂತ್ರಸ್ತೆಯನ್ನೇ ಅಪರಾಧಿ ಸ್ಥಾನದಲ್ಲಿ ನಿಲ್ಲಿಸುತ್ತದೆ. ಇದನ್ನು ಲಿಂಗತಾರತಮ್ಯ ಮತ್ತು ಅಮಾನವೀಯವಾದ ಹೇಳಿಕೆ ಎಂದೇ ಪರಿಗಣಿಸಬೇಕಾಗುತ್ತದೆ. ಗೋವಾ ಮುಖ್ಯಮಂತ್ರಿ ಪ್ರಮೋದ್‌ ಸಾವಂತ್‌ ಅವರು ಇದೇ ರೀತಿಯ ಹೇಳಿಕೆಯನ್ನು ಇತ್ತೀಚೆಗಷ್ಟೇ ನೀಡಿ ವಿವಾದಕ್ಕೆ ಒಳಗಾಗಿದ್ದರು. ಅಷ್ಟಾಗಿಯೂ ನಮ್ಮ ಗೃಹ ಸಚಿವರು ಈ ವಿಚಾರದಲ್ಲಿ ಸಂವೇದನೆ ತೋರದೇ ಇದ್ದುದು ಖಂಡನೀಯ. ಆಘಾತಕ್ಕೆ ಒಳಗಾಗಿರುವ ವಿದ್ಯಾರ್ಥಿನಿಯ ಹೇಳಿಕೆಯನ್ನು ಪೊಲೀಸರು ಇನ್ನಷ್ಟೇ ಪಡೆಯಬೇಕಾಗಿದೆ.

ADVERTISEMENT

ಮೈಸೂರು ಸಾಂಸ್ಕೃತಿಕ ಕೇಂದ್ರ ಮಾತ್ರವಲ್ಲ, ಶೈಕ್ಷಣಿಕ ಕೇಂದ್ರವಾಗಿಯೂ ದೇಶ–ವಿದೇಶಗಳ ವಿದ್ಯಾರ್ಥಿಗಳನ್ನು ಆಕರ್ಷಿಸುತ್ತಿದೆ. ಈ ಆಕರ್ಷಣೆಗೆ ಇಲ್ಲಿರುವ ವಿಶ್ವವಿದ್ಯಾಲಯ ಮಾತ್ರವಲ್ಲದೆ, ಹಲವು ಖಾಸಗಿ ಶಿಕ್ಷಣ ಸಂಸ್ಥೆಗಳ ಗುಣಮಟ್ಟವೂ ಕಾರಣ. ನಗರದಲ್ಲಿ ಸಾವಿರಕ್ಕೂ ಹೆಚ್ಚು ವಿದೇಶಿ ವಿದ್ಯಾರ್ಥಿಗಳಿದ್ದಾರೆ. ಹೊರರಾಜ್ಯಗಳ ಎರಡು ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಮೈಸೂರು ಶಾಂತಿಪ್ರಿಯ ನಗರವಾಗಿದ್ದು ಹೊರ ರಾಜ್ಯ ಮತ್ತು ವಿದೇಶಗಳಿಂದ ಬರುವ ವಿದ್ಯಾರ್ಥಿಗಳಿಗೆ ಸುರಕ್ಷಿತ ತಾಣವೂ ಹೌದು ಎನ್ನುವ ಭಾವನೆ ಹಿಂದಿನಿಂದಲೂ ಇದೆ. ಆದರೆ, ಈಗ ನಡೆದಿರುವ ಸಾಮೂಹಿಕ ಅತ್ಯಾಚಾರ ಪ್ರಕರಣವು ಇಂತಹ ನಂಬಿಕೆಗಳಿಗೆ ಪೆಟ್ಟು ಕೊಡಬಹುದು.

ದೇಶ–ವಿದೇಶಗಳ ಪ್ರವಾಸಿಗರು ಅತಿದೊಡ್ಡ ಸಂಖ್ಯೆಯಲ್ಲಿ ಬರುವ ಕರ್ನಾಟಕದ ಎರಡು ಕೇಂದ್ರಗಳೆಂದರೆ ಹಂಪಿ ಮತ್ತು ಮೈಸೂರು. ಹಂಪಿ ಮುಖ್ಯವಾಗಿ ವಿದೇಶಿಯರ ಆಕರ್ಷಣೆಯ ಕೇಂದ್ರವಾಗಿದ್ದರೆ, ಮೈಸೂರು ವಿದೇಶಿಯರು ಮಾತ್ರವಲ್ಲದೆ, ನೆರೆ ರಾಜ್ಯಗಳ ಮಕ್ಕಳ ಶೈಕ್ಷಣಿಕ ಪ್ರವಾಸಕ್ಕೂ ಹೆಸರುವಾಸಿ. ಈ ಹಿನ್ನೆಲೆಯಲ್ಲಿ ಮೈಸೂರಿನ ಮಹತ್ವವನ್ನು ಅರಿತುಕೊಂಡು ಇಲ್ಲಿ ಕಾನೂನು ಮತ್ತು ಶಾಂತಿ– ಸುವ್ಯವಸ್ಥೆಯನ್ನು ಬಲಪಡಿಸುವ ಕೆಲಸ ಆದ್ಯತೆಯ ಮೇಲೆ ನಡೆಯಬೇಕಿದೆ.

ಮೈಸೂರಿನಲ್ಲಿ ಕೊಲೆ, ಸುಲಿಗೆಯಂತಹ ಪ್ರಕರಣಗಳುಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿರುವುದು ಆತಂಕಕಾರಿ ಸಂಗತಿ. ಆರು ತಿಂಗಳ ಹಿಂದೆ ಭಿಕ್ಷುಕಿಯೊಬ್ಬರ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿದ್ದು, ಆಕೆಯ ಜೊತೆಗೇ ಭಿಕ್ಷುಕರಾಗಿದ್ದ ಆರೋಪಿಗಳನ್ನು ಬಂಧಿಸಲಾಗಿದೆ. ಕಳೆದ ವಾರ ಚಿನ್ನಾಭರಣ ಮಾರಾಟ ಮಳಿಗೆಯೊಂದರ ಮೇಲೆ ದಾಳಿ ನಡೆಸಿದ ದರೋಡೆಕೋರರ ಗುಂಡಿಗೆ ಗ್ರಾಹಕರೊಬ್ಬರು ಬಲಿಯಾಗಿದ್ದಾರೆ.

ಆ ಪ್ರಕರಣದ ಆರೋಪಿಗಳಲ್ಲಿ ಕೆಲವರನ್ನು ಬಂಧಿಸಲಾಗಿದೆ, ಇನ್ನು ಕೆಲವರ ಪತ್ತೆ ಕೆಲಸ ಮುಂದುವರಿದಿದೆ. ಲಲಿತಾದ್ರಿಪುರದ ಗುಡ್ಡದ ಬದಿಯ ರಸ್ತೆಯಲ್ಲೇ ಕಳೆದ ವಾರ ಆಟೊ ಚಾಲಕನ ಮೇಲೆ ಹಲ್ಲೆಗೈದು ಆಟೊ ಮತ್ತು ಹಣವನ್ನು ದರೋಡೆ ಮಾಡಿರುವ ಪ್ರಕರಣದಲ್ಲಿ ಆರೋಪಿಗಳು ಇನ್ನೂ ಪತ್ತೆಯಾಗಿಲ್ಲ. ಸಣ್ಣ ಪುಟ್ಟ ಕಳ್ಳತನಗಳಂತೂ ಮೈಸೂರಿನಲ್ಲಿ ಸಾಮಾನ್ಯ ಎಂಬಂತಾಗಿದೆ. ಇದರ ಮಧ್ಯೆ ‘ಮೀಟರ್ ಬಡ್ಡಿ’ ವ್ಯವಹಾರದ ಗ್ಯಾಂಗ್‌ಗಳ ನಡುವಣ ಕಲಹ, ಹೊಡೆದಾಟ ಕೂಡಾ ನಗರದ ಶಾಂತಿಯನ್ನು ಕದಡುತ್ತಿದೆ. ಈ ಎಲ್ಲ ಅಂಶಗಳನ್ನೂ ಗಮನಿಸಿದರೆ, ಮೈಸೂರಿನ ಪೊಲೀಸ್ ವ್ಯವಸ್ಥೆಯನ್ನು ಬಲಪಡಿಸುವ ಮತ್ತು ಪುನರ್‌ರೂಪಿಸುವ ಅಗತ್ಯ ಎದ್ದು ಕಾಣುತ್ತದೆ.

ಮೈಸೂರು ನಗರ ಮತ್ತು ಹೊರವಲಯದಲ್ಲಿ ಪೊಲೀಸರು ಸತತವಾಗಿ ಕಠಿಣ ಗಸ್ತು ನಡೆಸಿ, ನಾಕಾಬಂದಿ ಹಾಕಬೇಕಿದೆ. ಯಾವುದೋ ದರೋಡೆಯೊಂದು ನಡೆದಾಗ ನಾಕಾಬಂದಿ ಹಾಕುವುದರ ಬದಲಿಗೆ, ನಗರದ ಕಾನೂನು ಸುವ್ಯವಸ್ಥೆಯ ಸಮಗ್ರ ಪುನರವಲೋಕನ ಈಗ ನಡೆಯಬೇಕಿರುವ ಕೆಲಸ. ವಿದ್ಯಾರ್ಥಿನಿ ಮೇಲಿನ ಸಾಮೂಹಿಕ ಅತ್ಯಾಚಾರದ ಆರೋಪಿಗಳನ್ನು ಶೀಘ್ರವೇ ಬಂಧಿಸಿ, ಅಪರಾಧಿಗಳಿಗೆ ಕ್ಷಿಪ್ರವಾಗಿ ಕಠಿಣಶಿಕ್ಷೆ ಆಗುವಂತೆ ಮಾಡದಿದ್ದರೆ, ಹೊರರಾಜ್ಯಗಳಿಂದ ಬರುವ ವಿದ್ಯಾರ್ಥಿ ಸಮುದಾಯಕ್ಕೆ ತಪ್ಪು ಸಂದೇಶ ಹೋಗುವ ಸಾಧ್ಯತೆ ಇದೆ.

ಸಾಮೂಹಿಕ ಅತ್ಯಾಚಾರ ಎನ್ನುವುದು ಸಮಷ್ಟಿಯೇ ಮಾನಸಿಕ ಅಸ್ವಸ್ಥ ಸ್ಥಿತಿಗೆ ತೆರಳುತ್ತಿರುವುದರ ಮುನ್ಸೂಚನೆ. ಪೊಲೀಸರ ಬಿಗಿ ಕ್ರಮದ ಜೊತೆಗೆ, ಸಮಾಜದಲ್ಲಿ ಇಂತಹ ಹೇಯ ಪ್ರವೃತ್ತಿ ಬೆಳೆಯದಂತೆ ಮೈಸೂರಿನ ನಾಗರಿಕರೂ ಎಚ್ಚರ ಮೂಡಿಸಬೇಕಾದ ಅಗತ್ಯವಿದೆ. ಕನ್ನಡ ನಾಡಿನ ಸಾಂಸ್ಕೃತಿಕ ಹೆಮ್ಮೆಯ ಶಾಂತಿಪ್ರಿಯ ಮೈಸೂರಿನ ಹೆಗ್ಗಳಿಕೆಗೆ ಕುಂದು ಉಂಟಾಗುವುದನ್ನು ತಡೆಯಲು ಆಡಳಿತವೂ ಚುರುಕುಗೊಳ್ಳಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.