ADVERTISEMENT

ಸಂಪಾದಕೀಯ: ಪಠ್ಯಪುಸ್ತಕ ಪರಿಶೀಲನೆ ಕಸರತ್ತು; ಓಲೈಕೆಯ ರಾಜಕಾರಣ ಸಲ್ಲದು

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2021, 18:54 IST
Last Updated 20 ಸೆಪ್ಟೆಂಬರ್ 2021, 18:54 IST
ಸಂಪಾದಕೀಯ
ಸಂಪಾದಕೀಯ   

ಸಾರ್ವಜನಿಕ ಶಿಕ್ಷಣ ಇಲಾಖೆಯ ಪಠ್ಯಪುಸ್ತಕಗಳ ಪರಿಶೀಲನೆಗೆ ಹೊಸ ಸಮಿತಿ ರಚಿಸಿರುವ ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರದ ನಡೆ, ಶೈಕ್ಷಣಿಕ ವಲಯದಲ್ಲಿ ಹಲವು ಅನುಮಾನಗಳಿಗೆ ಕಾರಣವಾಗಿದೆ. ಪಠ್ಯದಲ್ಲಿ ಪಕ್ಷದ ಅಜೆಂಡಾ ತುರುಕುವ ಯತ್ನ ನಡೆಯಬಹುದು ಎಂಬ ಶಂಕೆ ವ್ಯಕ್ತವಾಗಿದೆ.

ಪಠ್ಯಪುಸ್ತಕಗಳ ಪರಿಷ್ಕರಣೆ ನಿರಂತರ ಪ್ರಕ್ರಿಯೆ ಎನ್ನುವುದು ನಿಜ. ಆದರೆ, ವಿಷಯ ತಜ್ಞರು ಮಾಡಬೇಕಾದ ಕೆಲಸವನ್ನು ಹಿಂದುತ್ವ ವಿಚಾರಧಾರೆಯ ಪ್ರಬಲ ಪ್ರತಿಪಾದಕರಿಗೆ ವಹಿಸಲಾಗಿದೆ. ಇದರಿಂದಾಗಿ ಪರಿಷ್ಕರಣೆಯ ಹಿಂದಿನ ಉದ್ದೇಶದ ಬಗ್ಗೆ ಪ್ರಶ್ನೆಗಳು ಮೂಡಿವೆ. 1ರಿಂದ 10ನೇ ತರಗತಿಯವರೆಗಿನ ಸಮಾಜ ವಿಜ್ಞಾನ, ಪರಿಸರ ವಿಜ್ಞಾನ ಮತ್ತು ಭಾಷಾ ವಿಷಯಗಳ ಪಠ್ಯಗಳಲ್ಲಿ ಇರಬಹುದಾದ ಕೆಲವು ಆಕ್ಷೇಪಗಳ ಪರಿಶೀಲನೆಗಾಗಿ ಸಮಿತಿಯನ್ನು ಸರ್ಕಾರ ರಚಿಸಿದೆ.

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಹಾಗೂ ಹಿಂದುತ್ವ ವಿಚಾರಧಾರೆಯ ಪ್ರಬಲ ಪ್ರತಿಪಾದಕ ರೋಹಿತ್‌ ಚಕ್ರತೀರ್ಥ ಅಧ್ಯಕ್ಷತೆಯಲ್ಲಿ ಈ ಸಮಿತಿಯನ್ನು ರಚಿಸಿರುವ ಬಗ್ಗೆ ಶೈಕ್ಷಣಿಕ ವಲಯದಲ್ಲಿ ತೀವ್ರ ವಿರೋಧ ವ್ಯಕ್ತವಾಗಿದೆ. ಮಾಹಿತಿ ದೋಷಗಳು ಇದ್ದಲ್ಲಿ ಅವುಗಳನ್ನು ಸರಿಪಡಿಸುವುದಕ್ಕೆ ಯಾರ ಆಕ್ಷೇಪವೂ ಇಲ್ಲ. ಕಾಲದ ಅಗತ್ಯಕ್ಕೆ ತಕ್ಕಂತೆ ಹೊಸ ಪಠ್ಯಗಳ ಸೇರ್ಪಡೆಯೂ ಅಪೇಕ್ಷಣೀಯ. ಆಕ್ಷೇಪಗಳು ಕೇಳಿಬಂದಾಗ ಅವುಗಳ ಸತ್ಯಾಸತ್ಯತೆಯನ್ನು ಪರಿಶೀಲಿಸಿ ಸರಿಪಡಿಸುವುದಕ್ಕೂ ಅವಕಾಶವಿದೆ. ಆದರೆ, ಪಠ್ಯಗಳನ್ನು ಪರಿಷ್ಕರಿಸುವ ಕೆಲಸವನ್ನು ವಿಷಯ ತಜ್ಞರು ಮಾಡಬೇಕೇ ಹೊರತು, ಧರ್ಮ ಮತ್ತು ರಾಜಕಾರಣದ ಹೆಸರಿನಲ್ಲಿ ಸಂಘರ್ಷಕ್ಕೆ ಇಳಿದವರಲ್ಲ.

ADVERTISEMENT

ಪ್ರೊ. ಬರಗೂರು ರಾಮಚಂದ್ರಪ್ಪ ಅವರ ಅಧ್ಯಕ್ಷತೆಯಲ್ಲಿ 172 ಸದಸ್ಯರನ್ನೊಳಗೊಂಡ 27 ವಿಷಯವಾರು ಸಮಿತಿಗಳ ಶಿಫಾರಸಿನ ಮೇರೆಗೆ 2017ರಲ್ಲಿ ಪಠ್ಯಪುಸ್ತಕಗಳನ್ನು ಪರಿಷ್ಕರಿಸಲಾಗಿತ್ತು. ನೂರಾರು ಪುಟಗಳ ಆಕ್ಷೇಪಗಳನ್ನು ಪರಿಶೀಲಿಸಿದ್ದ ಸಮಿತಿ, ಪಠ್ಯಪುಸ್ತಕಗಳನ್ನು ವೈಜ್ಞಾನಿಕ ನೆಲೆಗಟ್ಟಿನೊಂದಿಗೆ ಸಾಮಾಜಿಕ ಹಾಗೂ ಪ್ರಾದೇಶಿಕ ನ್ಯಾಯದ ಹಿನ್ನೆಲೆಯಲ್ಲಿ ರಚಿಸಲು ಪ್ರಯತ್ನಿಸಿತ್ತು. 35 ಸಂಘ–ಸಂಸ್ಥೆಗಳ ಜೊತೆ ಮಾತುಕತೆ ನಡೆಸಿ, ಪಠ್ಯಗಳನ್ನು ಅಂತಿಮಗೊಳಿಸಿತ್ತು. ಪಠ್ಯಗಳ ಪರಿಷ್ಕರಣೆ ಪ್ರಕ್ರಿಯೆಯಲ್ಲಿ ಶಿಕ್ಷಕರೂ ಭಾಗಿಯಾಗಿದ್ದರು. ಪ್ರಜಾಸತ್ತಾತ್ಮಕ ನೆಲೆಯಲ್ಲಿ ರೂಪುಗೊಂಡ ಪಠ್ಯಗಳಲ್ಲಿ ತೊಡಕು ಕಂಡುಬಂದಲ್ಲಿ ಅದನ್ನು ಪರಿಷ್ಕರಿಸುವುದಕ್ಕಾಗಿ ವಿಷಯತಜ್ಞರ ಸಮಿತಿಯನ್ನು ರಚಿಸುವುದು ಸರ್ಕಾರದ ಜವಾಬ್ದಾರಿ. ಆದರೆ, ಅದು ಯಾವುದೇ ಪಕ್ಷದ ಕಾರ್ಯಸೂಚಿ ಜಾರಿಗೆ ಅನುವು ಮಾಡಿಕೊಡುವ ಯತ್ನದಂತೆ ಕಾಣಬಾರದು. ಸರ್ಕಾರದ ಚುಕ್ಕಾಣಿ ಹಿಡಿಯುವ ಪಕ್ಷಗಳು ಬದಲಾದಂತೆ ಪಠ್ಯಪುಸ್ತಕಗಳನ್ನೂ ಬದಲಿಸುವ ಕೆಟ್ಟ ಮಾದರಿಗೆ ಅವಕಾಶ ಕಲ್ಪಿಸುವ ನಡೆಯಂತೆಯೂ ಇರಬಾರದು.

ಈಗಿನ ಸಮಿತಿ ಸೂಚಿಸುವ ಪರಿಷ್ಕಾರಗಳನ್ನು ಒಳಗೊಂಡ ಪಠ್ಯಪುಸ್ತಕಗಳ ಬಗ್ಗೆ ಮತ್ತೆ ಯಾರಾದರೂ ಅಪಸ್ವರ ಎತ್ತಿದಲ್ಲಿ, ಆಗ ಹೊಸತಾಗಿ ಮತ್ತೊಂದು ಸಮಿತಿಯನ್ನು ಸರ್ಕಾರ ರಚಿಸುತ್ತದೆಯೇ? ಇತಿಹಾಸವನ್ನು ಅದು ಇರುವಂತೆಯೇ ಬೋಧಿಸಬೇಕೇ ವಿನಾ ಯಾವುದೋ ಸಿದ್ಧಾಂತ ಅಥವಾ ಸಮುದಾಯಕ್ಕೆ ಇಷ್ಟವಾಗುವ ರೀತಿಯಲ್ಲಲ್ಲ. ಅಪ್ರಿಯವಾದ ಸಂಗತಿಗಳು ಇತಿಹಾಸದಲ್ಲಿರುವುದು ಸಹಜ. ಅಂಥ ಸಂಗತಿಗಳೂ ವಿದ್ಯಾರ್ಥಿಗಳಿಗೆ ತಿಳಿದಿರಬೇಕು ಹಾಗೂ ವರ್ತಮಾನವನ್ನು ಜೀವಪರವಾಗಿ ಕಟ್ಟುವ ನಿಟ್ಟಿನಲ್ಲಿ ಅವು ವಿಮರ್ಶಾ ಮಾನದಂಡಗಳಾಗಿ ಒದಗಿಬರಬೇಕು. ಮೌಢ್ಯವನ್ನು ಒಳಗೊಂಡ ಆಚರಣೆಗಳು, ಅಸ್ಪೃಶ್ಯತೆಯಂತಹ ಸಾಮಾಜಿಕ ಅನಿಷ್ಟಗಳು ವರ್ತಮಾನದಲ್ಲಿ ಕೆಲವರಿಗೆ ಅಹಿತಕರ ಎನ್ನಿಸಬಹುದು. ಹಾಗೆಂದು ಇತಿಹಾಸವನ್ನು ತಿರುಚುವುದು ಅಥವಾ ಮುಚ್ಚಿಡುವುದರಿಂದ ಉಪಯೋಗವಿಲ್ಲ. ಇತಿಹಾಸದ ಕಟುಸತ್ಯಗಳನ್ನು ಒಪ್ಪಿಕೊಂಡು ಮುಂದುವರಿಯುವುದು ಅನಿವಾರ್ಯ.

ಪಠ್ಯಪುಸ್ತಕಗಳ ಪರಿಷ್ಕರಣೆಗೆ ಸಂಬಂಧಿಸಿದಂತೆ ಸರ್ಕಾರದ ನಡವಳಿಕೆಯಲ್ಲಿ ಕೆಲವೊಮ್ಮೆ ಮಕ್ಕಳ ಬಗೆಗಿನ ಕಾಳಜಿ ಅಥವಾ ಶೈಕ್ಷಣಿಕ ಬದ್ಧತೆಗಿಂತ ಸಮುದಾಯ ಮತ್ತು ಧರ್ಮಗಳ ಓಲೈಕೆಯ ರಾಜಕಾರಣವು ಕಾಣಿಸುತ್ತದೆ. 6ನೇ ತರಗತಿಯ ಸಮಾಜ ವಿಜ್ಞಾನ ಪಠ್ಯಪುಸ್ತಕದಲ್ಲಿ ‘ಹೊಸ ಧರ್ಮಗಳ ಉದಯ’ ಎನ್ನುವ ಅಧ್ಯಾಯವು ಬ್ರಾಹ್ಮಣ ಸಮುದಾಯದ ಭಾವನೆಗಳಿಗೆ ನೋವನ್ನುಂಟು ಮಾಡುತ್ತದೆ ಎಂದು ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಆರೋಪಿಸಿದಾಗ, ಆ ಪಠ್ಯವನ್ನು ಮಕ್ಕಳಿಗೆ ಬೋಧಿಸದಂತೆ ಶಿಕ್ಷಕರಿಗೆಸರ್ಕಾರ ಸೂಚಿಸಿತ್ತು.

ಟಿಪ್ಪು ಸುಲ್ತಾನ್‌ ಮತ್ತು ಹೈದರಾಲಿಗೆ ಸಂಬಂಧಿಸಿದ ವಿಷಯಗಳನ್ನು ಪಠ್ಯದಿಂದ ಸಂಪೂರ್ಣವಾಗಿ ಕೈಬಿಡಬೇಕು ಎಂದು ಕೆಲವರು ಸರ್ಕಾರವನ್ನು ಒತ್ತಾಯಿಸಿದ್ದರು. ಟಿಪ್ಪು ಹಾಗೂ ಹೈದರಾಲಿ ಕೆಲವರ ಮೇಲೆ ಎಸಗಿರುವ ದೌರ್ಜನ್ಯವನ್ನು ನಿರಾಕರಿಸುವುದು ಹೇಗೆ ಸಾಧ್ಯವಿಲ್ಲವೋ, ಸ್ವಾತಂತ್ರ್ಯ ಚಳವಳಿ ಆರಂಭವಾಗುವ ಮೊದಲೇ ಬ್ರಿಟಿಷರ ವಿರುದ್ಧ ಅವರು ಸಂಘರ್ಷ ಸಾರಿದ್ದರು ಎನ್ನುವುದನ್ನೂ ಮರೆಯುವಂತಿಲ್ಲ. ಟಿಪ್ಪು ಮತ್ತು ಹೈದರಾಲಿಯ ಉಲ್ಲೇಖವಿಲ್ಲದೆ ಹೋದರೆ ಚರಿತ್ರೆ ಅಪೂರ್ಣವಾಗುತ್ತದೆ. ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಖಾತೆಯನಿಕಟಪೂರ್ವ ಸಚಿವ ಎಸ್‌. ಸುರೇಶ್‌ ಕುಮಾರ್‌ ಅವರು ಟಿಪ್ಪು–ಹೈದರ್‌ ಅವರನ್ನು ಪಠ್ಯದಿಂದ ಕೈಬಿಡುವ ಬೇಡಿಕೆಗಳಿಗೆ ಒಪ್ಪಿಕೊಂಡಿರಲಿಲ್ಲ. ಆದರೆ, ಅವರ ಅವಧಿಯಲ್ಲಿಯೇ ಪಠ್ಯಪುಸ್ತಕ ಪರಿಶೀಲನೆಯ ಹೊಸ ಸಮಿತಿ ರಚನೆಯಾಗಿತ್ತು.

ಆ ಆದೇಶಕ್ಕೆ ಈಗಿನ ಶಿಕ್ಷಣ ಸಚಿವ ಬಿ.ಸಿ. ನಾಗೇಶ್‌ ಚಾಲನೆ ನೀಡಿದ್ದಾರೆ. ವರದಿ ಸಲ್ಲಿಸುವ ಮೊದಲೇ ಶಿಕ್ಷಣ ತಜ್ಞರು ಯಾವುದೇ ನಿರ್ಣಯಕ್ಕೆ ಬರಬಾರದು ಎಂದು ಹೊಸ ಸಮಿತಿಯ ಅಧ್ಯಕ್ಷರು ಹೇಳಿದ್ದಾರೆ. ಇದೇನೇ ಇರಲಿ, ಇತಿಹಾಸವನ್ನು ತಿರುಚುವ ಯಾವುದೇ ಪ್ರಯತ್ನ ನಡೆದಲ್ಲಿ ಅದನ್ನು ಪ್ರಜ್ಞಾವಂತರು ಅದರಲ್ಲೂ ಶಿಕ್ಷಣ ಕ್ಷೇತ್ರದ ತಜ್ಞರು ದೃಢವಾಗಿ ವಿರೋಧಿಸಲೇಬೇಕು. ಅಂತಹ ಪ್ರಯತ್ನಗಳನ್ನು ಪ್ರಜ್ಞಾವಂತರು ವಿರೋಧಿಸದೇ ಹೋದರೆ, ನಾಡಿನ ಮಕ್ಕಳಿಗೆ ದ್ರೋಹ ಬಗೆದಂತಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.