ADVERTISEMENT

ಸಂಪಾದಕೀಯ: ಹೈಕೋರ್ಟ್‌ಗಳ ಖಾಲಿ ಹುದ್ದೆ ಭರ್ತಿಗೆ ಸಿಗಬೇಕಿದೆ ವೇಗ

​ಪ್ರಜಾವಾಣಿ ವಾರ್ತೆ
Published 29 ಆಗಸ್ಟ್ 2021, 19:31 IST
Last Updated 29 ಆಗಸ್ಟ್ 2021, 19:31 IST
   

ಸುಪ್ರೀಂ ಕೋರ್ಟ್‌ಗೆ ನ್ಯಾಯಮೂರ್ತಿಗಳ ನೇಮಕಕ್ಕೆ ಸಂಬಂಧಿಸಿದಂತೆಸುಪ್ರೀಂ ಕೋರ್ಟ್‌ನ ಅತ್ಯಂತ ಹಿರಿಯ ನ್ಯಾಯಮೂರ್ತಿಗಳು ಇರುವ ಕೊಲಿಜಿಯಂ ಮಾಡಿದ್ದ ಶಿಫಾರಸುಗಳಿಗೆ ಕೇಂದ್ರ ಸರ್ಕಾರ ಸಮ್ಮತಿ ನೀಡಿದೆ. ಒಂದೇ ಬಾರಿಗೆ ಒಟ್ಟು ಒಂಬತ್ತು ನ್ಯಾಯಮೂರ್ತಿಗಳ ನೇಮಕಕ್ಕೆ ಒಪ್ಪಿಗೆ ನೀಡಿದೆ. ಸರ್ಕಾರ ಒಪ್ಪಿಗೆ ನೀಡಿದ ನಂತರದಲ್ಲಿ ರಾಷ್ಟ್ರಪತಿಯವರು ಅಷ್ಟೂ ಜನರ ಹೆಸರುಗಳಿಗೆ ಸಮ್ಮತಿ ನೀಡಿದ್ದಾರೆ. ಅವರು ಈಗ ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿಗಳಾಗಿ ಪ್ರಮಾಣ ವಚನ ಸ್ವೀಕರಿಸಬೇಕಿದೆ. ಇವರಲ್ಲಿ ಮೂವರು ಮಹಿಳಾ ನ್ಯಾಯಮೂರ್ತಿಗಳು ಕೂಡ ಇರುವುದು ವಿಶೇಷ.

ಕರ್ನಾಟಕ ಹೈಕೋರ್ಟ್‌ನಲ್ಲಿ ನ್ಯಾಯಮೂರ್ತಿಯಾಗಿ ಕರ್ತವ್ಯ ನಿರ್ವಹಿಸಿರುವ ಬಿ.ವಿ. ನಾಗರತ್ನ ಅವರು 2027ರಲ್ಲಿ ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿ (ಸಿಜೆಐ) ಕರ್ತವ್ಯ ನಿಭಾಯಿಸುವ ಸಾಧ್ಯತೆ ಇದೆ. ಅದು ಕೈಗೂಡಿದರೆ, ಸಿಜೆಐ ಹುದ್ದೆಗೆ ಏರಿದ ಮೊದಲ ಮಹಿಳೆ ಎಂಬ ಹೆಗ್ಗಳಿಕೆ ಅವರಿಗೆ ಸಲ್ಲಲಿದೆ. ದೇಶಕ್ಕೆ ಸ್ವಾತಂತ್ರ್ಯ ದೊರೆತು 2027ರಲ್ಲಿ 80 ವರ್ಷ ಆಗಿರುತ್ತದೆ. ಆಗ, ಮಹಿಳೆಯೊಬ್ಬರು ಸಿಜೆಐ ಸ್ಥಾನದಲ್ಲಿ ಇರಲಿದ್ದಾರೆ ಎಂಬುದು ಬಹುತ್ವ ಹಾಗೂ ಪ್ರಾತಿನಿಧ್ಯದಲ್ಲಿ ನಂಬಿಕೆ ಇರುವವರೆಲ್ಲರಿಗೂ ಖುಷಿ ತರುವ ಸಂಗತಿ.

ಪ್ರಧಾನಿ, ರಾಷ್ಟ್ರಪತಿ ಹಾಗೂ ಸಿಜೆಐ ಈ ದೇಶದ ಅತ್ಯುನ್ನತ ಹುದ್ದೆಗಳು. ಪ್ರಧಾನಿ ಹಾಗೂ ರಾಷ್ಟ್ರಪತಿ ಹುದ್ದೆಗಳನ್ನು ಮಹಿಳೆಯರು ನಿಭಾಯಿಸಿದ್ದಾರೆ. ಆದರೆ, ಸಿಜೆಐ ಹುದ್ದೆಯನ್ನು ಮಹಿಳೆ ನಿಭಾಯಿಸಿಲ್ಲ ಎಂಬುದು ಗಮನಾರ್ಹ. ನ್ಯಾಯಾಂಗದ ಎಲ್ಲ ಹಂತಗಳಲ್ಲಿ ಮಹಿಳೆಯರು ಇನ್ನಷ್ಟು ಹೆಚ್ಚಿನ ಸಂಖ್ಯೆಯಲ್ಲಿ ಇರಬೇಕು ಎಂಬ ಆಗ್ರಹವನ್ನು ನ್ಯಾಯಾಂಗದ ಹಿರಿಯರು, ಪ್ರಜಾತಾಂತ್ರಿಕ ಪ್ರಕ್ರಿಯೆಗಳಲ್ಲಿ ಎಲ್ಲ ವರ್ಗಗಳ ಭಾಗವಹಿಸುವಿಕೆ ಹೆಚ್ಚಾಗಬೇಕು ಎಂದು ಬಯಸುವವರು ಮತ್ತೆ ಮತ್ತೆ ಮುಂದಿಟ್ಟಿದ್ದಾರೆ ಎಂಬುದು ಇಲ್ಲಿ ಉಲ್ಲೇಖಿಸಬಹುದಾದ ವಿಚಾರ.

2019ರ ಸೆಪ್ಟೆಂಬರ್‌ ನಂತರ ಸುಪ್ರೀಂ ಕೋರ್ಟ್‌ಗೆ ನ್ಯಾಯಮೂರ್ತಿಗಳ ನೇಮಕ ಆಗಿರಲಿಲ್ಲ. 21 ತಿಂಗಳ ಸುದೀರ್ಘ ಅವಧಿಯ ಬಳಿಕ ಈ ನೇಮಕ ನಡೆದಿದೆ. ಸುಪ್ರೀಂ ಕೋರ್ಟ್‌ನ ಕೊಲಿಜಿಯಂ (ನ್ಯಾಯಮೂರ್ತಿ ನೇಮಕಕ್ಕೆ ಶಿಫಾರಸು ಮಾಡುವ ಸಮಿತಿ) ಸದಸ್ಯರಾದ ಐವರು ಹಿರಿಯ ನ್ಯಾಯಮೂರ್ತಿಗಳಲ್ಲಿ ಸಹಮತ ಸಾಧ್ಯವಾಗದ ಕಾರಣ ನ್ಯಾಯಮೂರ್ತಿಗಳ ನೇಮಕಕ್ಕೆ ಹೆಸರು ಶಿಫಾರಸು ಮಾಡು
ವುದೇ ಸಾಧ್ಯವಾಗಿರಲಿಲ್ಲ.

ತ್ರಿಪುರಾ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಅಕಿಲ್‌ ಖುರೇಷಿ ಅವರಿಗೆ ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಯಾಗಿ ಬಡ್ತಿ ನೀಡಬೇಕು ಎಂದು ಕೊಲಿಜಿಯಂ ಸದಸ್ಯರಾಗಿದ್ದ ನ್ಯಾಯಮೂರ್ತಿ ಆರ್.ಎಫ್‌. ನರೀಮನ್‌ ಅವರು (ಈಗ ನಿವೃತ್ತರಾಗಿದ್ದಾರೆ) ಒತ್ತಾಯಿಸಿದ್ದರು ಎಂದು ಕೆಲವು ವರದಿಗಳು ಹೇಳಿವೆ. ಸರ್ಕಾರಕ್ಕೆ ಕಳುಹಿಸಲಾದ ಹೆಸರುಗಳ ಪಟ್ಟಿಯಲ್ಲಿ ನ್ಯಾಯಮೂರ್ತಿ ಖುರೇಷಿ ಹೆಸರು ಇದ್ದಿರಲಿಲ್ಲ. ಗುಜರಾತ್‌ ಹೈಕೋರ್ಟ್ ನ್ಯಾಯಮೂರ್ತಿಯಾಗಿದ್ದ ಖುರೇಷಿ ಅವರು ಕೇಂದ್ರದ ಈಗಿನ ಗೃಹ ಸಚಿವ ಅಮಿತ್‌ ಶಾ ಅವರನ್ನು 2010ರಲ್ಲಿ ಸಿಬಿಐ ಕಸ್ಟಡಿಗೆ ನೀಡಿದ್ದರು.

ಸುಪ್ರೀಂ ಕೋರ್ಟ್‌ನಲ್ಲಿ ನ್ಯಾಯಮೂರ್ತಿಗಳ ಕೊರತೆ ತೀವ್ರವಾಗಿ ಇತ್ತು. ಸುಪ್ರೀಂ ಕೋರ್ಟ್‌ಗೆ ಮಂಜೂರಾಗಿರುವ ನ್ಯಾಯಮೂರ್ತಿಗಳ ಒಟ್ಟು ಸಂಖ್ಯೆ 34. ಆದರೆ, 24 ನ್ಯಾಯಮೂರ್ತಿಗಳು ಮಾತ್ರ ಈಗ ಕರ್ತವ್ಯ ನಿಭಾಯಿಸುತ್ತಿದ್ದಾರೆ. ಹೊಸದಾಗಿ ನೇಮಕ ಆಗಿರುವ ನ್ಯಾಯಮೂರ್ತಿಗಳು ಅಧಿಕಾರ ಸ್ವೀಕರಿಸಿದ ನಂತರ ಸುಪ್ರೀಂ ಕೋರ್ಟ್‌ನಲ್ಲಿ ಒಂದು ಹುದ್ದೆ ಮಾತ್ರ ಖಾಲಿ ಉಳಿಯಲಿದೆ.

ADVERTISEMENT

ಹೊಸ ನೇಮಕಾತಿಯು ಸುಪ್ರೀಂ ಕೋರ್ಟ್‌ ಮೇಲೆ ಈಗ ಇರುವ ಪ್ರಕರಣಗಳ ಹೊರೆಯನ್ನು ಒಂದಿಷ್ಟು ತಗ್ಗಿಸಬಹುದು ಎಂಬ ನಿರೀಕ್ಷೆ ಇಟ್ಟುಕೊಳ್ಳಬಹುದು. ಹೈಕೋರ್ಟ್‌ಗಳಲ್ಲಿ ಹಾಗೂ ಕೆಳ ಹಂತದ ನ್ಯಾಯಾಲಯಗಳಲ್ಲಿ ನ್ಯಾಯಮೂರ್ತಿಗಳು ಮತ್ತು ನ್ಯಾಯಾಧೀಶರ ಕೊರತೆಯು ತೀವ್ರವಾಗಿ ಇದೆ. ಒಟ್ಟು 25 ಹೈಕೋರ್ಟ್‌ಗಳಲ್ಲಿ 455 ನ್ಯಾಯಮೂರ್ತಿಗಳ ಹುದ್ದೆಗಳು ಖಾಲಿ ಇವೆ. ಅಂದರೆ ಒಟ್ಟು 1,098 ಹುದ್ದೆಗಳಲ್ಲಿ ಶೇಕಡ 41ರಷ್ಟು ಹುದ್ದೆಗಳು ಖಾಲಿ ಇದ್ದಂತಾಯಿತು. ಕೆಲವು ಹೈಕೋರ್ಟ್‌ಗಳಲ್ಲಿ ಶೇಕಡ 50ಕ್ಕಿಂತ ಹೆಚ್ಚಿನ ಹುದ್ದೆಗಳು ಖಾಲಿ ಇವೆ ಎಂಬ ವರದಿಗಳಿವೆ. ನ್ಯಾಯದಾನ ತ್ವರಿತವಾಗಿ ಆಗಬೇಕು ಎಂದು ಬಯಸುವವರು ಈ ಕೊರತೆಯ ಬಗ್ಗೆಯೂ ಗಮನ ನೀಡಬೇಕು.

ಸಿಬ್ಬಂದಿ ಕೊರತೆ ತೀವ್ರವಾಗಿ ಇರುವಾಗ, ಪ್ರಕರಣಗಳ ವಿಲೇವಾರಿ ತ್ವರಿತವಾಗಿ ಆಗಲು ಹೇಗೆ ಸಾಧ್ಯ? ಹುದ್ದೆಗಳು ಖಾಲಿ ಇದ್ದಾಗ, ಕರ್ತವ್ಯ ನಿರ್ವಹಿಸುವ ಇತರರ ಮೇಲೆ ಕೆಲಸದ ಒತ್ತಡ ಸಹಜವಾಗಿಯೇ ಹೆಚ್ಚಾಗುತ್ತದೆ. ನ್ಯಾಯ ನಿರ್ಣಯದಂತಹ ಅತ್ಯಂತ ಮಹತ್ವದ ಕರ್ತವ್ಯವನ್ನು ನಿಭಾಯಿಸಲು ನ್ಯಾಯಮೂರ್ತಿಗಳ ಕೊರತೆ ಆಗದಂತೆ ನೋಡಿಕೊಳ್ಳಬೇಕಿರುವುದು ಸಂಬಂಧಪಟ್ಟ ಎಲ್ಲರ ಜವಾಬ್ದಾರಿ. ಸುಪ್ರೀಂ ಕೋರ್ಟ್‌ಗೆ ಒಂಬತ್ತು ಮಂದಿ ನ್ಯಾಯಮೂರ್ತಿಗಳನ್ನು ಏಕಕಾಲದಲ್ಲಿ ನೇಮಕ ಮಾಡಿರುವುದು ಸಂತಸದ ಸಂಗತಿ.

ಇತರ ನ್ಯಾಯಾಲಯಗಳಿಗೂ ನ್ಯಾಯಮೂರ್ತಿಗಳನ್ನು, ನ್ಯಾಯಾಧೀಶರನ್ನು ಆದಷ್ಟು ಬೇಗ ನೇಮಕ ಮಾಡಬೇಕು. ನ್ಯಾಯ ನಿರ್ಣಯ ತ್ವರಿತವಾಗಿ ಆಗದೆ ಇದ್ದರೆ ತೊಂದರೆ ಆಗುವುದು ಸಾರ್ವಜನಿಕರಿಗೆ. ನ್ಯಾಯ ನಿರ್ಣಯದಲ್ಲಿನ ವಿಳಂಬವು ಸಾಮಾಜಿಕ, ಆರ್ಥಿಕ ಪರಿಣಾಮಗಳನ್ನು ಹೊಂದಿರುತ್ತದೆ. ಹೀಗಾಗಿ ನ್ಯಾಯಾಂಗದಲ್ಲಿನ ಖಾಲಿ ಹುದ್ದೆಗಳನ್ನು ತ್ವರಿತವಾಗಿ ಭರ್ತಿ ಮಾಡಬೇಕಿರುವುದು ಸಮಾಜದ ತುರ್ತುಗಳಲ್ಲಿ ಒಂದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.