ADVERTISEMENT

ಸಂಪಾದಕೀಯ: ಠೇವಣಿದಾರರಿಗೆ ಹೆಚ್ಚಿನ ಪರಿಹಾರ- ಕೇಂದ್ರದ ಸ್ವಾಗತಾರ್ಹ ಹೆಜ್ಜೆ

​ಪ್ರಜಾವಾಣಿ ವಾರ್ತೆ
Published 3 ಆಗಸ್ಟ್ 2021, 19:30 IST
Last Updated 3 ಆಗಸ್ಟ್ 2021, 19:30 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ಬ್ಯಾಂಕ್‌ಗಳ ಹಣಕಾಸಿನ ಸ್ಥಿತಿ ಹದಗೆಟ್ಟು, ಅವು ಭಾರತೀಯ ರಿಸರ್ವ್‌ ಬ್ಯಾಂಕ್‌ನಿಂದ (ಆರ್‌ಬಿಐ) ನಿರ್ಬಂಧಕ್ಕೆ ಗುರಿಯಾದರೆ, ಆ ಬ್ಯಾಂಕ್‌ಗಳಲ್ಲಿ ಹಣ ಠೇವಣಿ ಇರಿಸಿದವರಿಗೆ ಕಾಲಮಿತಿಯಲ್ಲಿ ಸಹಾಯ ಸಿಗಬೇಕು ಎಂಬ ಉದ್ದೇಶದಿಂದ ಕೇಂದ್ರ ಸರ್ಕಾರವು ಕಾನೂನಿನಲ್ಲಿ ಕೆಲವು ತಿದ್ದುಪಡಿಗಳನ್ನು ತರಲು ತೀರ್ಮಾನಿಸಿದೆ. ಇದು ಅತ್ಯಂತ ಸ್ವಾಗತಾರ್ಹ ಕ್ರಮ. ‘ಠೇವಣಿ ವಿಮೆ ಮತ್ತು ಸಾಲ ಖಾತರಿ ಕಾರ್ಪೊರೇಷನ್ ಕಾಯ್ದೆ’ಗೆ (ಡಿಐಸಿಜಿಸಿ ಕಾಯ್ದೆ) ತಿದ್ದುಪಡಿ ತರಲು ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಈಚೆಗೆ ನಡೆದ ಕೇಂದ್ರ ಸಚಿವ ಸಂಪುಟ ಸಭೆಯು ಒಪ್ಪಿಗೆ ಸೂಚಿಸಿದೆ. ಈಗ ತಿದ್ದುಪಡಿ ಮಸೂದೆಯನ್ನು ರಾಜ್ಯಸಭೆಯಲ್ಲಿ ಮಂಡಿಸಿ ಆಗಿದೆ. ತಿದ್ದುಪಡಿಗಳು ಕಾಯ್ದೆಯ ಭಾಗವಾದ ನಂತರದಲ್ಲಿ, ಯಾವುದೇ ಬ್ಯಾಂಕ್‌ ಮೇಲೆ ಆರ್‌ಬಿಐ ನಿರ್ಬಂಧ ವಿಧಿಸಿದರೆ ಅಲ್ಲಿನ ಠೇವಣಿದಾರರು ಆತಂಕಕ್ಕೆ ಗುರಿಯಾಗಬೇಕಾದ ಪ್ರಮೇಯ ಗಮನಾರ್ಹವಾಗಿ ಕಡಿಮೆ ಆಗುವ ನಿರೀಕ್ಷೆ ಇದೆ. ಠೇವಣಿದಾರರ ₹ 5 ಲಕ್ಷದವರೆಗಿನ ಹಣಕ್ಕೆ ವಿಮಾ ಸೌಲಭ್ಯ ಇರಲಿದ್ದು, ವಿಮಾ ಪರಿಹಾರ ಮೊತ್ತವು 90 ದಿನಗಳೊಳಗೆ ಠೇವಣಿದಾರರಿಗೆ ಸಿಗಬೇಕು ಎಂಬ ನಿಯಮವು ಕಾನೂನಿನ ಭಾಗವಾಗುವ ಸಾಧ್ಯತೆ ಇದೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿದ 2021–22ನೇ ಸಾಲಿನ ಬಜೆಟ್‌ನಲ್ಲಿ ಕೂಡ, ಠೇವಣಿದಾರರ ವಿಮಾ ಸೌಲಭ್ಯವನ್ನು ಹೆಚ್ಚಿಸುವ ಪ್ರಸ್ತಾವ ಇತ್ತು. ಆ ಪ್ರಸ್ತಾವದ ಮುಂದುವರಿದ ಭಾಗವಾಗಿ ಕೇಂದ್ರವು ಈಗ ಈ ಹೆಜ್ಜೆ ಇರಿಸಿದೆ. ಪಿಎಂಸಿ ಬ್ಯಾಂಕ್ ಪ್ರಕರಣವು ಠೇವಣಿದಾರರ ಹಿತವನ್ನು ಕಾಯಲು ಹೆಚ್ಚಿನ ಕ್ರಮಗಳ ಅಗತ್ಯ ಇದೆ ಎಂಬುದನ್ನು ಆಳುವವರಿಗೆ ಮನದಟ್ಟು ಮಾಡಿಸಿತ್ತು. ಯೆಸ್ ಬ್ಯಾಂಕ್ ಮತ್ತು ಲಕ್ಷ್ಮೀವಿಲಾಸ್ ಬ್ಯಾಂಕ್‌ ಕೂಡ ಹಣಕಾಸಿನ ಸಮಸ್ಯೆಗೆ ಸಿಲುಕಿದವು. ಆದರೆ ಈ ಎರಡು ಬ್ಯಾಂಕ್‌ಗಳ ವಿಚಾರದಲ್ಲಿ ತ್ವರಿತವಾಗಿ ಪರಿಹಾರವೊಂದು ಸಿಕ್ಕಿತು– ಯೆಸ್‌ ಬ್ಯಾಂಕ್‌ಗೆ ಭಾರತೀಯ ಸ್ಟೇಟ್‌ ಬ್ಯಾಂಕ್‌ ಕಡೆಯಿಂದ ಬಂಡವಾಳ ಹರಿದುಬಂತು, ಲಕ್ಷ್ಮೀವಿಲಾಸ್ ಬ್ಯಾಂಕ್‌ಗೆ ಸಿಂಗಪುರ ಮೂಲದ ಡಿಬಿಎಸ್‌ ಬ್ಯಾಂಕ್ ಕಡೆಯಿಂದ ಬಂಡವಾಳ ದೊರೆಯಿತು. ಈ ಎರಡು ಬ್ಯಾಂಕ್‌ಗಳ ಠೇವಣಿದಾರರು ಸಮಾಧಾನಪಡುವಂತೆ ಆಯಿತು.

ಈಗಿರುವ ಕಾನೂನುಗಳ ಅನ್ವಯ ಠೇವಣಿಗಳ ಮೇಲಿನ ವಿಮಾ ಪರಿಹಾರ ಮೊತ್ತವು ₹ 1 ಲಕ್ಷ ಮಾತ್ರ. ಹೆಚ್ಚಿನ ಮೊತ್ತವನ್ನು ಠೇವಣಿಯಾಗಿ ಇರಿಸಿದವರು, ಬ್ಯಾಂಕ್‌ ಬಿಕ್ಕಟ್ಟಿಗೆ ಸಿಲುಕಿದಲ್ಲಿ ತಮ್ಮ ಹಣವನ್ನು ಹಿಂಪಡೆಯಲು ಹೆಣಗಾಡಬೇಕಾದ ಸ್ಥಿತಿಯಿದೆ. ಈಗಿರುವ ನಿಯಮಗಳ ಪ್ರಕಾರ, ಬ್ಯಾಂಕ್‌ನ ಪರವಾನಗಿ ರದ್ದಾಗಿ, ಬ್ಯಾಂಕಿಂಗ್‌ ಕಂಪನಿಯನ್ನು ಪರಿಸಮಾಪ್ತಿಗೊಳಿಸಿ, ಅದರ ಆಸ್ತಿಗಳನ್ನು ಹಕ್ಕುದಾರರಿಗೆ ವರ್ಗಾಯಿಸುವ ಪ್ರಕ್ರಿಯೆ ಶುರುವಾದ ನಂತರ ವಿಮಾ ಪರಿಹಾರ ಮೊತ್ತವು ಸಿಗುತ್ತದೆ. ಇಷ್ಟಾಗಲು ವರ್ಷಗಳೇ ಬೇಕಾಗಬಹುದು. ಕಷ್ಟಪಟ್ಟು ದುಡಿದ ಹಣವನ್ನು ಠೇವಣಿ ಇರಿಸಿದವರು, ತಮ್ಮದೇ ಹಣಕ್ಕೆ ಪರಿಹಾರ ಪಡೆಯಲು ಈ ಪರಿಯಲ್ಲಿ ಕಾಯಬೇಕಾದ ಸ್ಥಿತಿ ಬರಬಾರದು. 1993ಕ್ಕಿಂತ ಮೊದಲು ವಿಮಾ ಪರಿಹಾರ ಮೊತ್ತವು ₹ 30 ಸಾವಿರ ಆಗಿತ್ತು. 1993ರಿಂದ ಈ ಮೊತ್ತವನ್ನು ₹ 1 ಲಕ್ಷಕ್ಕೆ ಹೆಚ್ಚಿಸಲಾಯಿತು. ಈಗ 28 ವರ್ಷಗಳ ನಂತರ ಪರಿಹಾರ ಮೊತ್ತವನ್ನು ₹ 5 ಲಕ್ಷಕ್ಕೆ ಹೆಚ್ಚಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ವಾಸ್ತವದಲ್ಲಿ ಪರಿಹಾರ ಮೊತ್ತವು ಕಾಲಕಾಲಕ್ಕೆ ಹೆಚ್ಚುತ್ತ ಹೋಗಬೇಕಿತ್ತು. ಏಕೆಂದರೆ ಸಮಯ ಕಳೆದಂತೆಲ್ಲ ಹಣವು ಮೌಲ್ಯ ಕಳೆದುಕೊಳ್ಳುತ್ತ ಹೋಗುತ್ತದೆ. ಇಂದು ₹ 100 ಬೆಲೆಬಾಳುವ ವಸ್ತುವು, ಒಂದು ವರ್ಷದ ನಂತರದಲ್ಲಿ ₹ 106 ಆಗಿರುತ್ತದೆ. ಅಂದರೆ, ಹಣದುಬ್ಬರದ ಕಾರಣದಿಂದಾಗಿ ಹಣಕ್ಕೆ ಇರುವ ಕೊಳ್ಳುವ ಶಕ್ತಿಯು ಕುಸಿಯುತ್ತದೆ. ಹಾಗಾಗಿ, ಹಣದುಬ್ಬರದ ಪ್ರಮಾಣಕ್ಕೆ ಅನುಗುಣವಾಗಿ ವಿಮಾ ಪರಿಹಾರ ಮೊತ್ತವನ್ನು ಹೆಚ್ಚಿಸುತ್ತ ಹೋಗುವ ಬಗ್ಗೆ ಕೇಂದ್ರ ಸರ್ಕಾರವು ಗಂಭೀರವಾಗಿ ಚಿಂತನೆ ನಡೆಸಬೇಕು. ₹ 5 ಲಕ್ಷವನ್ನು ಮೂಲವಾಗಿ ಇರಿಸಿಕೊಂಡು, ಹಣದುಬ್ಬರದ ಪ್ರಮಾಣಕ್ಕೆ ಅನುಗುಣವಾಗಿ ಈ ಮೊತ್ತ ಕೂಡ ಹೆಚ್ಚಾಗಬೇಕು ಎಂಬ ಅಂಶವನ್ನು ತಿದ್ದುಪಡಿ ಮಸೂದೆಯ ಭಾಗವಾಗಿಸಬಹುದು. ಮುಂದೊಂದು ಸಂದರ್ಭದಲ್ಲಿ, ₹ 5 ಲಕ್ಷದ ವಿಮಾ ಪರಿಹಾರ ಸಾಕಾಗುವುದಿಲ್ಲ, ಅದನ್ನು ಹೆಚ್ಚಿಸಬೇಕು ಎಂದು ಜನರು ಆಗ್ರಹಿಸಬೇಕಾದ ಸ್ಥಿತಿ ಎದುರಾಗಬಾರದು. ವಿಮಾ ಪರಿಹಾರವನ್ನು ಹಣದುಬ್ಬರ ‍ಪ್ರಮಾಣದ ಜೊತೆ ಬೆಸೆಯುವುದರಿಂದ ಅಂತಹ ಸ್ಥಿತಿ ನಿರ್ಮಾಣ ಆಗದಂತೆ ನೋಡಿಕೊಳ್ಳಬಹುದು.

ಭಾರತದಲ್ಲಿ ಬ್ಯಾಂಕ್‌ಗಳು ಕುಸಿದುಬೀಳುವ ಸ್ಥಿತಿ ನಿರ್ಮಾಣ ಆಗುವ ಸಾಧ್ಯತೆಯೇ ಇಲ್ಲ ಎಂದು ಹಿಂದೊಂದು ಕಾಲದಲ್ಲಿ ಪ್ರತಿಪಾದಿಸಲಾಗಿತ್ತು. ಆದರೆ, ಪಿಎಂಸಿ ಬ್ಯಾಂಕ್, ಯೆಸ್ ಬ್ಯಾಂಕ್, ಲಕ್ಷ್ಮೀವಿಲಾಸ್ ಬ್ಯಾಂಕ್‌ನಲ್ಲಿ ಆಗಿರುವ ವಿದ್ಯಮಾನಗಳು ಅಂತಹ ಪ್ರತಿಪಾದನೆಗಳು ಹುಸಿ ಎಂಬುದನ್ನು ತೋರಿಸಿಕೊಟ್ಟಿವೆ. ಬ್ಯಾಂಕಿಂಗ್ ವ್ಯವಸ್ಥೆಯ ಬಗ್ಗೆ ಜನರಲ್ಲಿ ಅಪನಂಬಿಕೆ ಮೂಡಲೇಬಾರದು. ಬ್ಯಾಂಕಿಂಗ್ ವ್ಯವಸ್ಥೆ ಇಲ್ಲದೆ ದೈನಂದಿನ ಚಟುವಟಿಕೆಗಳು ಮುಂದಕ್ಕೆ ಸಾಗುವುದಿಲ್ಲ. ಬ್ಯಾಂಕ್‌ಗಳು ತಮ್ಮ ಠೇವಣಿದಾರರಿಗೆ ಹಣ ವಾಪಸ್ ಕೊಡಲು ಆಗದಂತಹ ಸ್ಥಿತಿ ತಲುಪಬಾರದು ಎಂದಾದರೆ, ಆರ್‌ಬಿಐ ಕಡೆಯಿಂದ ಕಟ್ಟುನಿಟ್ಟಿನ ನಿಗಾ ಇರಬೇಕು. ಬ್ಯಾಂಕಿಂಗ್ ವ್ಯವಸ್ಥೆಗೆ ಪರ್ಯಾಯವಿಲ್ಲ; ಹಾಗೆಯೇ ಈ ವ್ಯವಸ್ಥೆಯಲ್ಲಿ ಹುಳುಕುಗಳು ಮೂಡಬಾರದು ಎಂದಾದರೆ ಆರ್‌ಬಿಐನ ನಿಗಾ ಮಾತ್ರವೇ ಪರಿಹಾರ. ಈಗ ಕೇಂದ್ರ ಸರ್ಕಾರ ಮಂಡಿಸಿರುವ ತಿದ್ದುಪಡಿ ಮಸೂದೆಯು ಜನರ ವಿಶ್ವಾಸ ಹೆಚ್ಚಿಸುವ ಒಂದು ಕ್ರಮ ಮಾತ್ರ. ಅದಕ್ಕಿಂತ ಹೆಚ್ಚಾಗಿ ಆಗಬೇಕಿರುವುದು, ಬ್ಯಾಂಕ್‌ನ ವ್ಯವಹಾರಗಳಲ್ಲಿ ಯಾವ ಲೋಪವೂ ಇಲ್ಲದಂತೆ ನೋಡಿಕೊಳ್ಳುವ ಕೆಲಸ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.