ADVERTISEMENT

ಸಂಪಾದಕೀಯ: ದಾಖಲೆ ಮಟ್ಟಕ್ಕೆ ಏರಿದ ಹಣದುಬ್ಬರ ನಿಯಂತ್ರಣಕ್ಕೆ ಬೇಕು ತುರ್ತು ಕ್ರಮ

​ಪ್ರಜಾವಾಣಿ ವಾರ್ತೆ
Published 15 ಜೂನ್ 2021, 19:30 IST
Last Updated 15 ಜೂನ್ 2021, 19:30 IST
Sampadakiya 16-06-2021.jpg
Sampadakiya 16-06-2021.jpg   

ದೇಶದಲ್ಲಿ ಮೇ ತಿಂಗಳಲ್ಲಿ ಚಿಲ್ಲರೆ ಹಣದುಬ್ಬರದ ಪ್ರಮಾಣವು ಆರು ತಿಂಗಳಲ್ಲೇ ಅತ್ಯಧಿಕ ಎನ್ನಲಾದ ಶೇಕಡ 6.3ಕ್ಕೆ ಏರಿಕೆಯಾಗಿದೆ. ಈ ಹೆಚ್ಚಳವು ಜನಸಾಮಾನ್ಯರ ಬದುಕಿನ ಸಂಕಷ್ಟಕ್ಕೆ ಹಿಡಿದ ಕನ್ನಡಿ. ಏಪ್ರಿಲ್‍ನಲ್ಲಿ ಶೇ 1.96ರಷ್ಟು ಇದ್ದ ಆಹಾರವಸ್ತುಗಳ ಹಣದುಬ್ಬರವು ಮೇ ತಿಂಗಳಲ್ಲಿ ಶೇ 5.01ಕ್ಕೆ ಜಿಗಿದಿದೆ. ಅಡುಗೆ ಅನಿಲ, ಮೀನು, ಮಾಂಸ, ಮೊಟ್ಟೆ, ತರಕಾರಿ ಎಲ್ಲದರ ಬೆಲೆ ಗಗನಕ್ಕೆ ಏರಿದೆ.

ಚಿಲ್ಲರೆ ಹಣದುಬ್ಬರ ಪ್ರಮಾಣವನ್ನು ಶೇ 4ಕ್ಕೆ ಮಿತಿಗೊಳಿಸಬೇಕು ಎಂದು ಭಾರತೀಯ ರಿಸರ್ವ್ ಬ್ಯಾಂಕ್‍ಗೆ ಕೇಂದ್ರ ಸರ್ಕಾರ ಗುರಿ ನಿಗದಿ ಮಾಡಿದೆ. ಶೇ 4ಕ್ಕಿಂತ 2 ಅಂಶ ಹೆಚ್ಚು ಅಥವಾ 2 ಅಂಶ ಕಡಿಮೆ ಆಗಲು ಅವಕಾಶ ಇದೆ. ಆದರೆ, ಹಣದುಬ್ಬರವು ಅದನ್ನೂ ಮೀರಿರುವುದು ಆತಂಕ ಹೆಚ್ಚಿಸುವ ಸಂಗತಿ. ಪೆಟ್ರೋಲಿಯಂ ಉತ್ಪನ್ನಗಳು ಮತ್ತು ಖಾದ್ಯತೈಲ ಬೆಲೆಯ ತೀವ್ರ ಏರಿಕೆಯಿಂದಾಗಿ ಸಗಟು ಬೆಲೆ ಆಧಾರಿತ ಹಣದುಬ್ಬರವೂ ಸಾರ್ವಕಾಲಿಕ ದಾಖಲೆಯಾದ ಶೇ 12.94ಕ್ಕೆ ತಲುಪಿದೆ. ರಿಸರ್ವ್ ಬ್ಯಾಂಕ್‍ನ ಹಣಕಾಸು ನೀತಿ ಸಮಿತಿಯು ಚಿಲ್ಲರೆ ಹಣದುಬ್ಬರ ಪ್ರಮಾಣದ ಕುರಿತು ಪ್ರತಿಕ್ರಿಯೆ ನೀಡಿದ್ದು, ‘ಇದು ಪೂರೈಕೆ ಕ್ಷೇತ್ರದ ಸಮಸ್ಯೆ, ತಕ್ಷಣಕ್ಕೆ ವಿಶೇಷ ಕ್ರಮಗಳನ್ನು ಕೈಗೊಳ್ಳಬೇಕಾದ ಅಗತ್ಯವಿಲ್ಲ’ ಎಂದಿದೆ. ಆದರೆ, ಸಮಸ್ಯೆ ಅಷ್ಟು ಸರಳವಾಗಿ ಇದ್ದಂತೆ ಕಾಣುವುದಿಲ್ಲ. ಕೊರೊನಾ ಎರಡನೇ ಅಲೆಯು ಆರ್ಥಿಕತೆಯ ಮೇಲೆ ಉಂಟು ಮಾಡಿರುವ ದುಷ್ಪರಿಣಾಮಗಳ ಹಿನ್ನೆಲೆಯಲ್ಲಿ, ದೇಶದಾದ್ಯಂತ ನಿರುದ್ಯೋಗದ ಪ್ರಮಾಣ ಹೆಚ್ಚಿದೆ. ಇದರ ಜೊತೆಗೆ ಅತ್ಯಧಿಕ ತೆರಿಗೆ ದರವೂ ಸೇರಿಕೊಂಡಿದ್ದರಪರಿಣಾಮವಾಗಿ ದೇಶಿ ಮಾರುಕಟ್ಟೆಯಲ್ಲಿ ಗ್ರಾಹಕರ ಕೊಳ್ಳುವ ಸಾಮರ್ಥ್ಯ ಕುಸಿದಿದೆ.

‘ಕೊರೊನಾ ಸೋಂಕು ಇಳಿಮುಖದ ಹಾದಿಯಲ್ಲಿದ್ದು, ಒಮ್ಮೆ ಆರ್ಥಿಕ ಚಟುವಟಿಕೆಗಳು ಗರಿಗೆದರಿದರೆ ಗ್ರಾಹಕರ ಕೊಳ್ಳುವ ಶಕ್ತಿ ಹೆಚ್ಚಲಿದೆ. ಹಣದುಬ್ಬರವೂ ನಿಯಂತ್ರಣಕ್ಕೆ ಬರಲಿದೆ’ ಎನ್ನುವುದು ರಿಸರ್ವ್ ಬ್ಯಾಂಕ್‍ನ ಲೆಕ್ಕಾಚಾರ ಎನ್ನಲಾಗುತ್ತಿದೆ. ಅರ್ಥಶಾಸ್ತ್ರಜ್ಞರ ಲೆಕ್ಕಾಚಾರ ಏನೇ ಇದ್ದರೂ ಬೆಲೆ ಏರಿಕೆಯ ಹಿನ್ನೆಲೆಯಲ್ಲಿ ಬದುಕು ದುಸ್ತರಗೊಂಡಿ ರುವ ಜನಸಾಮಾನ್ಯರು ಸರ್ಕಾರಕ್ಕೆ ಹಿಡಿಶಾಪ ಹಾಕುತ್ತಿದ್ದಾರೆ ಎನ್ನುವುದು ಸ್ವಯಂವೇದ್ಯ.

ADVERTISEMENT

ಏಷ್ಯಾದ ಮೂರನೆಯ ಅತಿದೊಡ್ಡ ಆರ್ಥಿಕತೆ ಯನ್ನು ನಿರ್ವಹಿಸುತ್ತಿರುವ ಕೇಂದ್ರ ಸರ್ಕಾರವು ಕೊರೊನಾ ಸೋಂಕಿನ ಎರಡನೇ ಅಲೆಯನ್ನು ವ್ಯವಸ್ಥಿತವಾಗಿ ಎದುರಿಸುವಲ್ಲಿ ಎಡವಿರುವುದು ಸ್ಪಷ್ಟ. ಸಗಟು ಮತ್ತು ಚಿಲ್ಲರೆ ಹಣದುಬ್ಬರ ಪ್ರಮಾಣದ ಅಸಾಮಾನ್ಯ ಏರಿಕೆಗೆ ಸರ್ಕಾರದ ಈ ವೈಫಲ್ಯವೂ ಕೊಡುಗೆ ನೀಡಿದೆ. ಕೊರೊನಾ ಹಾವಳಿ ಆರಂಭವಾಗುವುದಕ್ಕಿಂತ ಮುನ್ನವೇ ದೇಶದ ಆರ್ಥಿಕತೆಯ ಮೇಲೆ ನೋಟು ರದ್ದತಿಯು ಹೊಡೆತ ನೀಡಿತ್ತು. ಕಪ್ಪುಹಣದ ನಿಯಂತ್ರಣವನ್ನು ದೊಡ್ಡ ಮಟ್ಟದಲ್ಲಿ ಮಾಡಲು ನೋಟು ರದ್ದತಿಯು ನೆರವಾಗಲಿದೆ ಎಂದು ಸರ್ಕಾರ ಹೇಳಿಕೊಂಡರೂ ಅಂತಿಮವಾಗಿ ದೇಶಿ ಮಾರುಕಟ್ಟೆ ಯಲ್ಲಿ ನಗದು ವಹಿವಾಟನ್ನು ಅಸ್ತವ್ಯಸ್ತಗೊಳಿಸಿದ್ದಷ್ಟೇ ಅದರ ಸಾಧನೆಯಾಯಿತು. ಅದರ ಬೆನ್ನಲ್ಲೇ ಜಿಎಸ್‍ಟಿಯನ್ನು ಸೂಕ್ತ ಸಿದ್ಧತೆ ಇಲ್ಲದೆ ಜಾರಿಗೊಳಿಸಿ, ಬಳಿಕ ಅದಕ್ಕೆ ನೂರಾರು ತಿದ್ದುಪಡಿಗಳನ್ನು ಮಾಡಿದ್ದು ವ್ಯಾಪಾರ ಕ್ಷೇತ್ರದ ಸಂಕಷ್ಟಗಳನ್ನು ಹೆಚ್ಚಿಸಿತು. ಈಗ ಕೊರೊನಾ ಹೊಡೆತವು ನಿರುದ್ಯೋಗ ಹೆಚ್ಚಳ ಮತ್ತು ಬೆಲೆ ಏರಿಕೆಯ ಮೂಲಕ ಜನರನ್ನು ಸಂಕಷ್ಟದ ಮಡುವಿಗೆ ದೂಡಿದೆ. ಆರ್ಥಿಕತೆ ಎನ್ನುವುದು ಅರ್ಥಶಾಸ್ತ್ರಜ್ಞರ ಅಂಕಿಅಂಶದ ಆಟ ಮಾತ್ರವಲ್ಲ ಎನ್ನುವುದನ್ನು ಆಳುವವರು ಗಮನಿಸಬೇಕು. ಸರ್ಕಾರದ ಆರ್ಥಿಕ ನಿರ್ವಹಣೆಯ ತಪ್ಪು ನೀತಿಗಳ ನೇರ ಪರಿಣಾಮ ಬಡವರು, ಕಾರ್ಮಿಕರು ಮತ್ತು ಮಧ್ಯಮವರ್ಗದ ಜನರ ಬದುಕನ್ನು ಮೂರಾಬಟ್ಟೆಯಾಗಿಸಿದೆ. ಅದರಲ್ಲೂ ಮುಖ್ಯವಾಗಿ ಪೆಟ್ರೋಲ್‌, ಡೀಸೆಲ್‌ ದರ ಏರಿಕೆಯು ಅಸಹನೀಯ ಎನ್ನಿಸುವಂತಿದೆ. ಜನಸಾಮಾನ್ಯರ ಕೈಯಲ್ಲಿ ಖರ್ಚು ಮಾಡಲು ದುಡ್ಡೇ ಇಲ್ಲದಿರುವಾಗ ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚಳವಾಗುವುದಾದರೂ ಹೇಗೆ? ತೈಲ ದರದ ಮೇಲೆ ಹೇರಿರುವ ಎಕ್ಸೈಸ್‌ ತೆರಿಗೆ ಮತ್ತು ಸರ್ಚಾರ್ಜ್‌ಗಳನ್ನು ಕಡಿಮೆ ಮಾಡಿ, ಜನರ ಮೇಲಿನ ಹೊರೆಯನ್ನು ಕಡಿಮೆ ಮಾಡುವ ಅವಕಾಶ ಕೇಂದ್ರ ಸರ್ಕಾರಕ್ಕೆ ಇದ್ದೇ ಇದೆ. ಪೆಟ್ರೋಲ್, ಡೀಸೆಲ್ ಬೆಲೆ ಇಳಿದರೆ ಸಾಗಾಣಿಕೆ ವೆಚ್ಚ ಕಡಿಮೆಯಾಗಿ ಆಹಾರ ವಸ್ತುಗಳ ಬೆಲೆಯೂ ನಿಯಂತ್ರಣಕ್ಕೆ ಬರುತ್ತದೆ. ಆದರೆ ಕೇಂದ್ರ ಸರ್ಕಾರವು ಈ ಕ್ರಮ ಕೈಗೊಳ್ಳುವುದನ್ನು ಬಿಟ್ಟು, ರಾಜ್ಯ ಸರ್ಕಾರಗಳು ಪೆಟ್ರೋಲಿಯಂ ಉತ್ಪನ್ನಗಳ ಮೇಲೆ ಹೇರಿರುವ ತೆರಿಗೆಯ ಕಡೆಗೆ ಕೈತೋರಿಸುತ್ತಿದೆ. ‌‌ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಈ ಕಿತ್ತಾಟವು ಜನಸಾಮಾನ್ಯರ ಬದುಕನ್ನು ನಲುಗಿಸಿದೆ. ಜೀವನೋಪಾಯವನ್ನು ಕಸಿದುಕೊಂಡಿರುವ ಕೋವಿಡ್‍ ಪಿಡುಗು, ಅನೇಕ ಕುಟುಂಬಗಳ ಮೇಲೆ ವೈದ್ಯಕೀಯ ವೆಚ್ಚದ ಹೊರೆ ಹೇರಿದೆ. ಇದರೊಂದಿಗೆ ಆಹಾರ ವಸ್ತುಗಳ ಬೆಲೆ ಏರಿಕೆಯೂ ಸೇರಿಕೊಂಡು ಬಡವರು ಮತ್ತು ಮಧ್ಯಮ ವರ್ಗದವರ ನೆಮ್ಮದಿ ಕಸಿದಿದೆ. ಕಡು ಕಷ್ಟದಲ್ಲಿರುವ ಜನರನೆರವಿಗೆ ಸರ್ಕಾರಗಳು ಧಾವಿಸಬೇಕಾದ ಅಗತ್ಯವಿದೆ. ಬಡವರಿಗೆ ಉಚಿತ ಕೊಡುಗೆಗಳನ್ನು ನೀಡುವುದು ಇದಕ್ಕೆ ತಾತ್ಕಾಲಿಕ ಪರಿಹಾರ ಆಗಬಹುದಷ್ಟೆ. ಅಗತ್ಯವಸ್ತುಗಳ ಬೆಲೆ ಇಳಿಯುವಂತೆ ಮಾಡಿ, ಹಣದುಬ್ಬರದ ಮೇಲೆ ನಿಯಂತ್ರಣ ಸಾಧಿಸುವ ಕೆಲಸವನ್ನು ಸರ್ಕಾರ ತುರ್ತಾಗಿ ಮಾಡಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.