ADVERTISEMENT

ಸಂಪಾದಕೀಯ: ದಾಖಲೆಯ ಎಸ್‌ಎಸ್‌ಎಲ್‌ಸಿ ಫಲಿತಾಂಶ ಸಂಕಷ್ಟದ ದಿನಗಳಲ್ಲಿ ಸಾಧನೆಯ ಹರ್ಷ

​ಪ್ರಜಾವಾಣಿ ವಾರ್ತೆ
Published 19 ಮೇ 2022, 19:30 IST
Last Updated 19 ಮೇ 2022, 19:30 IST
ಸಂಪಾದಕೀಯ
ಸಂಪಾದಕೀಯ   

ಈ ಬಾರಿ ದಾಖಲೆ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಅವರು ಕಾಲೇಜು ಪ್ರವೇಶ ಪಡೆಯುವಲ್ಲಿ ಅಡಚಣೆಗಳು ಉಂಟಾಗದಂತೆ ಸರ್ಕಾರ ಎಚ್ಚರ ವಹಿಸಬೇಕು

ಕೊರೊನಾ ಕಾರಣದಿಂದಾಗಿ ಹಳಿತಪ್ಪಿದ್ದ ಶೈಕ್ಷಣಿಕ ವ್ಯವಸ್ಥೆ ಮರಳಿ ಹಳಿ ಕಂಡುಕೊಳ್ಳುತ್ತಿರುವ ಸೂಚನೆಯನ್ನು 2021–22ರ ಎಸ್‌ಎಸ್‌ಎಲ್‌ಸಿ ಫಲಿತಾಂಶ ನೀಡುವಂತಿದೆ. ಕಳೆದ ಹತ್ತು ವರ್ಷಗಳಲ್ಲಿನ ಅತ್ಯುತ್ತಮ ಫಲಿತಾಂಶ ಇದಾಗಿದ್ದು, ಶೇಕಡ 85.63ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಪರೀಕ್ಷೆ ಬರೆದಿದ್ದ 8.53 ಲಕ್ಷ ವಿದ್ಯಾರ್ಥಿಗಳಲ್ಲಿ, 7.30 ಲಕ್ಷ ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ಕೊರೊನಾ ನಿಯಂತ್ರಣಕ್ಕಾಗಿ ಜಾರಿಗೊಳಿಸಲಾಗಿದ್ದ ಲಾಕ್‌ಡೌನ್‌ನಿಂದಾಗಿ ತರಗತಿಗಳು ಸಮರ್ಪಕವಾಗಿ ನಡೆಯದ ಕಾರಣದಿಂದ, 2020–21ರಲ್ಲಿ ಪರೀಕ್ಷೆಗೆ ಹಾಜರಾದ ಎಲ್ಲರನ್ನೂ ಉತ್ತೀರ್ಣಗೊಳಿಸಲಾಗಿತ್ತು. ಕೊರೊನಾ ಆತಂಕದ ನಡುವೆಯೇ ನಡೆದ 2019–20ರ ಸಾಲಿನಲ್ಲಿ ಶೇ 72.42ರಷ್ಟು ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದರು. ಕಳೆದ ಶೈಕ್ಷಣಿಕ ವರ್ಷ ಕೂಡ ಕೊರೊನಾ ದವಡೆಗೆ ಸಿಲುಕಿದ್ದರೂ, ಪರೀಕ್ಷೆಗಳು ನಡೆದು ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿರುವುದು ಗಮನಾರ್ಹ ಸಂಗತಿ. ಎಸ್‌ಎಸ್‌ಎಲ್‌ಸಿ ಪರೀಕ್ಷೆ ಹಾಗೂ ಫಲಿತಾಂಶಕ್ಕೆ ವಿದ್ಯಾರ್ಥಿ ಜೀವನದಲ್ಲಿ ವಿಶೇಷ ಮಹತ್ವವಿದೆ. ಮುಂದಿನ ವಿದ್ಯಾರ್ಥಿ ಜೀವನಕ್ಕೆ ನಿರ್ದಿಷ್ಟ ದಿಕ್ಕು ತೋರಿಸುವ ಹಾಗೂ ಸ್ಪರ್ಧಾತ್ಮಕ ಶಿಕ್ಷಣಕ್ಕೆ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸುವ ದಿಸೆಯಲ್ಲಿ ಹತ್ತನೇ ತರಗತಿಯ ಪರೀಕ್ಷೆ–ಫಲಿತಾಂಶವನ್ನು ತೋರುಬೆರಳಿನ ರೂಪದಲ್ಲಿ ಪರಿಗಣಿಸಬಹುದು. ಇಂಥ ಅಮೂಲ್ಯ ಕಾಲಘಟ್ಟದ ರೂಪುರೇಷೆಯನ್ನೇ ಕೊರೊನಾ ಸೋಂಕಿನ ಆತಂಕ ಏರುಪೇರು ಮಾಡಿತ್ತು. ಆ ಕಹಿ ಅನುಭವಗಳನ್ನು ದಾಟಿ ಬಂದು, ದೃಢವಾಗಿ ಮುನ್ನಡೆಯುವ ಆತ್ಮವಿಶ್ವಾಸವನ್ನು ಪ್ರಸಕ್ತ ಫಲಿತಾಂಶ ನೀಡುವಂತಿದೆ. ಪ್ರಶ್ನೆಪತ್ರಿಕೆಗಳಲ್ಲಿ ಕಠಿಣ ಪ್ರಶ್ನೆಗಳ ಪ್ರಮಾಣವನ್ನು ಕಡಿಮೆ ಮಾಡಿರುವುದರ ಜೊತೆಗೆ, ತೇರ್ಗಡೆಗೆ ಕೆಲವೇ ಅಂಕಗಳ ಕೊರತೆಯಿದ್ದ ವಿದ್ಯಾರ್ಥಿಗಳಿಗೆ ಕೃಪಾಂಕಗಳನ್ನು ನೀಡಿರುವ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯ ನಿರ್ಧಾರ ಕೂಡ ಉತ್ತಮ ಫಲಿತಾಂಶದ ಹಿಂದಿದೆ. ಈ ಅಂಶವನ್ನೇ ಮುಂದು ಮಾಡಿಕೊಂಡು ವಿದ್ಯಾರ್ಥಿಗಳ ಸಾಧನೆ ಯನ್ನು ನಿರ್ಲಕ್ಷಿಸುವಂತಿಲ್ಲ. ಪ್ರತಿಕೂಲ ಪರಿಸ್ಥಿತಿ ಯಲ್ಲೂ ಉತ್ತಮ ಫಲಿತಾಂಶ ಪಡೆದುದರ ಹಿಂದೆ ವಿದ್ಯಾರ್ಥಿಗಳು, ಪೋಷಕರು ಹಾಗೂ ಶಿಕ್ಷಕರ ಅಪಾರ ಶ್ರಮವಿದೆ.

ಕಳೆದ ವರ್ಷಗಳಂತೆ ಈ ಬಾರಿಯ ಫಲಿತಾಂಶದಲ್ಲೂ ಕೆಲವು ಸಾಮ್ಯತೆಗಳಿವೆ ಬಾಲಕಿಯರ ಯಶಸ್ಸು ಹಾಗೂ ಗ್ರಾಮೀಣ ಪ್ರದೇಶಗಳ ಸಾಧನೆ ಗಮನಸೆಳೆಯುವಂತಿದೆ. ಶೇ 90.29ರಷ್ಟು ಬಾಲಕಿಯರು ಉತ್ತೀರ್ಣರಾಗಿದ್ದರೆ, ಬಾಲಕರ ಯಶಸ್ಸಿನ ಪ್ರಮಾಣ ಶೇ 81.30 ಮಾತ್ರ. ನಗರ ಪ್ರದೇಶಗಳ ಶೇ 86.64ರಷ್ಟು ಮಕ್ಕಳು ಯಶಸ್ಸು ಗಳಿಸಿದ್ದರೆ, ಗ್ರಾಮೀಣ ಪ್ರದೇಶಗಳ ಶೇ 91.32ರಷ್ಟು ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ. ಸೌಲಭ್ಯಗಳ ಕೊರತೆಯ ನಡುವೆಯೂ ಗ್ರಾಮೀಣ ಪ್ರದೇಶಗಳ ಮಕ್ಕಳ ಸಾಧನೆ ಅಭಿನಂದನಾರ್ಹ. ಆದರೆ, ಸರ್ಕಾರಿ ಶಾಲೆಗಳು ಹಾಗೂ ಕನ್ನಡ ಮಾಧ್ಯಮ ವಿದ್ಯಾರ್ಥಿಗಳ ಸಾಧನೆ ಕಳವಳ ಉಂಟುಮಾಡುವಂತಿದೆ. ಸರ್ಕಾರಿ ಶಾಲೆಗಳ ಸಾಧನೆ ಶೇ 88ರಷ್ಟಿದ್ದರೆ, ಅನುದಾನಿತ ಶಾಲೆಗಳ ಸಾಧನೆ ಶೇ 87.84 ಹಾಗೂ ಅನುದಾನರಹಿತ ಶಾಲೆಗಳಲ್ಲಿನ ಫಲಿತಾಂಶ ಪ್ರಮಾಣ ಶೇ 92.29ರಷ್ಟಿದೆ. ಕನ್ನಡ ಮಾಧ್ಯಮದ ಶೇ 87.65ರಷ್ಟು ಮಕ್ಕಳು ಯಶಸ್ಸು ಕಂಡಿದ್ದರೆ, ಇಂಗ್ಲಿಷ್‌ ಮಾಧ್ಯಮದ ಶೇ 92.88ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ನೂರಕ್ಕೆ ನೂರರಷ್ಟು ಅಂಕಗಳನ್ನು ಪಡೆದಿರುವ 145 ವಿದ್ಯಾರ್ಥಿಗಳಲ್ಲಿ ಸರ್ಕಾರಿ ಶಾಲೆಗಳ ಮಕ್ಕಳ ಸಂಖ್ಯೆ ಕೇವಲ 21. ಈ ವ್ಯತ್ಯಾಸವೇ ಸರ್ಕಾರಿ ಶಾಲೆಗಳ ಶಿಕ್ಷಣ ವ್ಯವಸ್ಥೆಯಲ್ಲಿ ಆಗಬೇಕಿರುವ ತ್ವರಿತ ಸುಧಾರಣೆಗಳ ಬಗ್ಗೆ ಗಮನಹರಿಸಲು ಸರ್ಕಾರವನ್ನು ಒತ್ತಾಯಿಸುವಂತಿದೆ. ಸರ್ಕಾರಿ ಶಾಲೆಗಳನ್ನು ಬಲಪಡಿಸಲು ಸರ್ಕಾರ ಹೆಚ್ಚಿನ ಮುತುವರ್ಜಿ ವಹಿಸಲು ಎಸ್‌ಎಸ್‌ಎಲ್‌ಸಿ ಫಲಿತಾಂಶದ ಅಂಕಿ– ಅಂಶಗಳು ಪ್ರೇರಣೆಯಾಗಬೇಕು. ಫಲಿತಾಂಶಕ್ಕೆ ಸಂಬಂಧಿಸಿದಂತೆ ಜಿಲ್ಲೆಗಳ ರ‍್ಯಾಂಕ್‌ ಪಟ್ಟಿಯನ್ನು ಪ್ರತಿವರ್ಷ ಬಿಡುಗಡೆ ಮಾಡಲಾಗುತ್ತಿತ್ತು. ಜಿಲ್ಲೆಗಳ ನಡುವೆ ಸ್ಪರ್ಧೆ ಬೇಡವೆನ್ನುವ ಕಾರಣಕ್ಕಾಗಿ, ಈ ಬಾರಿ ‘ಗುಣಾತ್ಮಕ ಫಲಿತಾಂಶ ವಿಶ್ಲೇಷಣಾ ಆಧಾರಿತ ಜಿಲ್ಲಾ ಶ್ರೇಣಿ’ಯನ್ನು ಪ್ರಕಟಿಸಲಾಗಿದೆ. ಈ ಪಟ್ಟಿಯಲ್ಲಿ ‘ಬಿ’ ಶ್ರೇಣಿಯಲ್ಲಿರುವ ಬೆಂಗಳೂರು ದಕ್ಷಿಣ ಹಾಗೂ ಯಾದಗಿರಿ ಜಿಲ್ಲೆಗಳನ್ನು ಹೊರತುಪಡಿಸಿದರೆ, ಉಳಿದೆಲ್ಲ ಜಿಲ್ಲೆಗಳನ್ನು ‘ಎ’ ಶ್ರೇಣಿಯಲ್ಲಿ ಸೇರ್ಪಡೆಗೊಳಿಸಲಾಗಿದೆ. ಯಾರನ್ನೂ ಹೆಚ್ಚು ಬೇಸರಗೊಳಿಸದ ಹೊಸ ವ್ಯವಸ್ಥೆಯಿಂದಾಗಿ ಜಿಲ್ಲೆಗಳ ನಡುವಿನ ಶೈಕ್ಷಣಿಕ ಸಾಧನೆಯ ವ್ಯತ್ಯಾಸ ಎದ್ದುಕಾಣಿಸುವುದಿಲ್ಲ. ಈ ವ್ಯತ್ಯಾಸ ಸ್ಪಷ್ಟವಾಗದೇ ಹೋದರೆ, ನಿರ್ದಿಷ್ಟ ಭಾಗದಲ್ಲಿನ ಶೈಕ್ಷಣಿಕ ವ್ಯವಸ್ಥೆಯಲ್ಲಿ ಇರಬಹುದಾದ ಲೋಪದೋಷಗಳನ್ನು ಗುರುತಿಸಿ ಸರಿಪಡಿಸಿಕೊಳ್ಳುವ ಅವಕಾಶಗಳನ್ನು ದುರ್ಬಲಗೊಳಿಸಿದಂತಾಗುತ್ತದೆ ಎನ್ನುವುದನ್ನು ಸರ್ಕಾರ ಗಮನಿಸಬೇಕು. ದಾಖಲೆ ಸಂಖ್ಯೆಯಲ್ಲಿ ಉತ್ತೀರ್ಣರಾಗಿರುವ ವಿದ್ಯಾರ್ಥಿಗಳು ಕಾಲೇಜು ಪ್ರವೇಶ ಪಡೆಯುವ ದಿಸೆಯಲ್ಲಿ ಅಡಚಣೆಗಳು ಉಂಟಾಗದಂತೆಯೂ ಸರ್ಕಾರ ಎಚ್ಚರ ವಹಿಸ ಬೇಕಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.