ADVERTISEMENT

ಸಂಪಾದಕೀಯ: ನಂದಿ ಬೆಟ್ಟದಲ್ಲಿ ಭೂಕುಸಿತ ಅಪಾಯದ ಎಚ್ಚರಿಕೆ ಗಂಟೆ

​ಪ್ರಜಾವಾಣಿ ವಾರ್ತೆ
Published 31 ಆಗಸ್ಟ್ 2021, 19:31 IST
Last Updated 31 ಆಗಸ್ಟ್ 2021, 19:31 IST
   

ಬೆಂಗಳೂರು ಸಮೀಪದ ಪ್ರಮುಖ ಪ್ರವಾಸಿ ತಾಣವಾದ ನಂದಿ ಬೆಟ್ಟದಲ್ಲಿ ಇತ್ತೀಚೆಗೆ ಸಂಭವಿಸಿದ ಭೂಕುಸಿತವು ಅಪಾಯದ ಎಚ್ಚರಿಕೆ ಗಂಟೆ. ಏಕೆಂದರೆ, ಪರಿಸರವಾದಿಗಳ ತೀವ್ರ ವಿರೋಧದ ನಡುವೆಯೂ ನಂದಿ ಬೆಟ್ಟದ ಸರಹದ್ದಿನಲ್ಲಿ ಕಲ್ಲು ಗಣಿಗಾರಿಕೆಗೆ ಸರ್ಕಾರವೇ ಅನುಮತಿ ನೀಡಿತ್ತು. ಆರು ಗಂಟೆಗಳವರೆಗೆ ಬಿಟ್ಟೂಬಿಡದೆ ಸುರಿದ ಮಳೆಯೇ ಭೂಕುಸಿತಕ್ಕೆ ಕಾರಣ ಎನ್ನುವುದು ಅಧಿಕಾರಿಗಳು ಕೊಡುವ ವಿವರಣೆ. ಆದರೆ, ಈ ಸಬೂಬನ್ನು ಒಪ್ಪದ ಪರಿಸರಪ್ರಿಯರು, ಮಿತಿಮೀರಿದ ಕಲ್ಲು ಗಣಿಗಾರಿಕೆ, ನಿರಂತರವಾಗಿ ನಡೆದ ಮರಗಳ ಹನನ ಹಾಗೂ ಅಭಿವೃದ್ಧಿಯ ಕುರುಡು ಓಟದಿಂದಾಗಿಸಡಿಲಗೊಂಡ ಮಣ್ಣಿನಿಂದ ಭೂಕುಸಿತ ಉಂಟಾಗಿದೆ ಎಂದು ಪ್ರಬಲವಾಗಿ ಪ್ರತಿಪಾದಿಸಿದ್ದಾರೆ.

ಪರಿಸರ ಸೂಕ್ಷ್ಮ ಪ್ರದೇಶ ಗಳಲ್ಲಿ ಕಲ್ಲು ಗಣಿಗಾರಿಕೆ, ವಿವೇಚನಾರಹಿತ ಅಭಿವೃದ್ಧಿ ಚಟುವಟಿಕೆಗಳಂತಹ ಮಾನವ ಹಸ್ತಕ್ಷೇಪ ನಿಲ್ಲದಿದ್ದರೆ ಇಂತಹ ಘಟನೆಗಳು ಮತ್ತೆ ಮತ್ತೆ ಸಂಭವಿಸುತ್ತಲೇ ಇರುತ್ತವೆ ಎಂಬುದಕ್ಕೆ ರಾಜ್ಯದಲ್ಲಿ ಇತ್ತೀಚಿನ ವರ್ಷಗಳಲ್ಲಿ ಘಟಿಸಿದ ದುರಂತಗಳೇ ಸಾಕ್ಷಿ. ಮೂರು–ನಾಲ್ಕು ವರ್ಷಗಳಿಂದ ಕೊಡಗು ಮತ್ತು ಚಿಕ್ಕಮಗಳೂರಿನ ಕೆಲ ಭಾಗಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಭೂಕುಸಿತಗಳು ಸಂಭವಿಸುತ್ತಲೇ ಇವೆ. ಈ ವರ್ಷ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ಭಾಗದಲ್ಲೂ ಇಂತಹ ಕುಸಿತಗಳು ಆಗಿವೆ.

ಕೊಡಗಿನಲ್ಲಿ ಸಂಭವಿಸಿದ ಭೂಕುಸಿತದಲ್ಲಿ ಗುಡ್ಡದ ಮೇಲಿನ ವಾಸದ ಮನೆಗಳು, ರಸ್ತೆಗಳು ಸಹ ಮಾಯವಾಗಿದ್ದವು. ನೂರಾರು ಎಕರೆ ಪ್ರದೇಶದಲ್ಲಿ ಹರಡಿದ್ದ ಕಾಫಿ ತೋಟಗಳು ಗುಡ್ಡದಿಂದ ಜಾರಿದ ಮಣ್ಣಿನ ಅಡಿಯಲ್ಲಿ ಸಮಾಧಿಯಾಗಿದ್ದವು. ಇಂತಹ ಕಹಿ ನೆನಪುಗಳು ಉಡಿಯಲ್ಲಿನ ಉರಿಯಂತೆ ಸುಡುತ್ತಿದ್ದರೂ ಭೂಕುಸಿತ ತಡೆಗೆ ತಕ್ಕ ಮಾರ್ಗೋಪಾಯ ಕಂಡುಕೊಳ್ಳುವಲ್ಲಿ ಸರ್ಕಾರ ನಿರಾಸಕ್ತಿ ತಾಳಿದೆ ಎನ್ನದೆ ವಿಧಿಯಿಲ್ಲ.

ADVERTISEMENT

ಭೂಕುಸಿತದಂತಹ ಅವಘಡಗಳಿಗೆ ನಿಖರ ಕಾರಣಗಳನ್ನು ಪತ್ತೆಹಚ್ಚುವ ಜತೆಗೆ ವಿಕೋಪಗಳನ್ನು ಪ್ರತಿಬಂಧಿಸುವ ಕ್ರಮಗಳನ್ನೂ ಸೂಚಿಸಲು ಸರ್ಕಾರ ಈ ಹಿಂದೆ ತಜ್ಞರ ಸಮಿತಿಯೊಂದನ್ನು ನೇಮಕ ಮಾಡಿತ್ತು. ಪ್ರಕೃತಿಯ ಮಡಿಲಲ್ಲಿ ಮನುಷ್ಯನ ಹಸ್ತಕ್ಷೇಪಗಳಿಂದಾದ ತಪ್ಪುಗಳೇ (ಮುಖ್ಯವಾಗಿ ಎಂಜಿನಿಯರಿಂಗ್‌ ದೋಷಗಳೇ) ಬಹುತೇಕ ಎಲ್ಲ ಭೂಕುಸಿತಗಳಿಗೆ ಕಾರಣ ಎಂದು ತಜ್ಞರ ಸಮಿತಿಯು ತನ್ನ ವರದಿಯಲ್ಲಿ ತಿಳಿಸಿತ್ತು. ಭೂಕುಸಿತವನ್ನೂ ನೈಸರ್ಗಿಕ ವಿಕೋಪಗಳ ವ್ಯಾಖ್ಯೆಯಡಿ ತರಬೇಕೆಂದು ಶಿಫಾರಸು ಮಾಡಿತ್ತು. ಪರಿಸರ ಸೂಕ್ಷ್ಮ ಪ್ರದೇಶಗಳ ವ್ಯಾಪ್ತಿಯಲ್ಲಿ ಮುಂದೆ ಯಾವುದೇ ಕಾಮಗಾರಿಗಳನ್ನು ಕೈಗೊಳ್ಳುವ ಮುನ್ನ ರಾಜ್ಯ ವಿಕೋಪ ನಿಯಂತ್ರಣ ಪ್ರಾಧಿಕಾರದ ಅನುಮತಿ ಪಡೆಯಬೇಕೆಂಬ ಸೂಚನೆಯನ್ನು ಸಹ ನೀಡಿತ್ತು. ತಜ್ಞರ ಈ ವರದಿ ಶೈತ್ಯಾಗಾರ ಸೇರಿದಂತಿದೆ. ಇಲ್ಲದಿದ್ದರೆ ಪರಿಸರ
ಸೂಕ್ಷ್ಮ ಪ್ರದೇಶಗಳಲ್ಲಿ ಈ ರೀತಿ ಬೇಕಾಬಿಟ್ಟಿ ಗಣಿಗಾರಿಕೆಗೆ, ಅಭಿವೃದ್ಧಿ ಚಟುವಟಿಕೆಗಳಿಗೆ ಸರ್ಕಾರ ಅವಕಾಶವನ್ನೇ ನೀಡುತ್ತಿರಲಿಲ್ಲ.

ನಂದಿಬೆಟ್ಟವು ಅರ್ಕಾವತಿ ಸೇರಿದಂತೆ ಆರು ನದಿಗಳ ಉಗಮಸ್ಥಾನ ಎಂಬ ಖ್ಯಾತಿಯನ್ನೂ ಹೊಂದಿದೆ. ಪ್ರಾಕೃತಿಕವಾಗಿ ಮಾತ್ರವಲ್ಲದೆ ಐತಿಹಾಸಿಕವಾಗಿಯೂ ನಂದಿಬೆಟ್ಟ ಮಹತ್ವದ ತಾಣ. ಗಂಗರ ಕಾಲದಲ್ಲಿ ಕಟ್ಟಲಾದ, ಟಿಪ್ಪು ಸುಲ್ತಾನ್‌ ಆಡಳಿತಾವಧಿಯಲ್ಲಿ ಮತ್ತಷ್ಟು ಗಟ್ಟಿಗೊಂಡಿದ್ದ ಕೋಟೆಯೂ ಇಲ್ಲಿದೆ. 1986ರಲ್ಲಿ ನಡೆದ ಸಾರ್ಕ್‌ ಸಮ್ಮೇಳನಕ್ಕೆ ಆತಿಥ್ಯ ವಹಿಸಿದ ಸ್ಥಳವೂ ಇದಾಗಿದೆ. ಬೆಂಗಳೂರಿನಂತಹ ಮಹಾನಗರದ ಆಸುಪಾಸಿನಲ್ಲೇ ಇರುವುದು ಈ ಬೆಟ್ಟದ ಪಾಲಿಗೆ ಒಂದು ರೀತಿಯಲ್ಲಿ ಶಾಪವಾಗಿ ಪರಿಣಮಿಸಿದಂತಿದೆ. ಈ ಬೆಟ್ಟದ ಪರಿಸರವು ಜನಬಾಹುಳ್ಯದ ಒತ್ತಡಕ್ಕೆ ಸಿಲುಕಿ ನಲುಗಿದೆ. ವಾರಾಂತ್ಯದ ದಿನಗಳಲ್ಲಿ ಸಾವಿರ ಸಾವಿರ ಸಂಖ್ಯೆಯಲ್ಲಿ ಪ್ರವಾಸಿಗರು ನಂದಿಬೆಟ್ಟಕ್ಕೆ ಬರುತ್ತಾರೆ. ಅವರು ತಿಂದು–ಕುಡಿದು ಎಸೆದುಹೋದ ಪ್ಲಾಸ್ಟಿಕ್‌ ತ್ಯಾಜ್ಯವೇ ವಾರ್ಷಿಕ 30 ಟನ್‌ಗಳಷ್ಟು ಬೃಹತ್‌ ಪ್ರಮಾಣದಲ್ಲಿ ಇರುತ್ತದೆ ಎಂದು ಲೆಕ್ಕ ಹಾಕಲಾಗಿದೆ.

ಬೆಟ್ಟದಲ್ಲಿ ಪ್ರವಾಸೋದ್ಯಮ ಚಟುವಟಿಕೆಗಳು ಮಿತಿಮೀರಿವೆ ಎಂಬ ದೂರಿದೆ. ಅದರ ಸರಹದ್ದಿನಲ್ಲಿ ಅನುಷ್ಠಾನಕ್ಕೆ ತರಲಾಗುತ್ತಿರುವ ಅಭಿವೃದ್ಧಿ ಯೋಜನೆಗಳ ಕುರಿತೂ ಆಕ್ಷೇಪಗಳಿವೆ. ಇಂತಹ ಚಟುವಟಿಕೆಗಳಿಗೆ ಲಗಾಮು ಹಾಕದಿದ್ದರೆ ಪರಿಸ್ಥಿತಿ ಮತ್ತಷ್ಟು ವಿಕೋಪಕ್ಕೆ ಹೋಗಲಿದೆ ಎಂಬ ತಜ್ಞರ ಹಿತವಚನವನ್ನು ಅಧಿಕಾರಿಗಳು ಕೇಳಿಸಿಕೊಳ್ಳಬೇಕು. ನಂದಿ ಬೆಟ್ಟವೂ ಸೇರಿದಂತೆ ರಾಜ್ಯದ ಎಲ್ಲ ಘಟ್ಟ ಪ್ರದೇಶಗಳನ್ನು ಸಂರಕ್ಷಿಸಲು ಸರ್ಕಾರ ಮುಂದಾಗಬೇಕು. ಅವುಗಳ ಪರಿಸರದಲ್ಲಿ ಭೂಕೊರೆತ, ಕಲ್ಲು ಗಣಿಗಾರಿಕೆ, ಅರಣ್ಯನಾಶದಂತಹ ಚಟುವಟಿಕೆಗಳು ನಡೆಯದಂತೆ ನೋಡಿಕೊಳ್ಳಬೇಕು. ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.