ADVERTISEMENT

ಮೇಕೆದಾಟು ಯೋಜನೆ ವಿವಾದ: ಮಾತುಕತೆ ಮೂಲಕ ಬಗೆಹರಿಸಿಕೊಳ್ಳೋಣ

​ಪ್ರಜಾವಾಣಿ ವಾರ್ತೆ
Published 13 ಜುಲೈ 2021, 19:30 IST
Last Updated 13 ಜುಲೈ 2021, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ರಾಮನಗರ ಜಿಲ್ಲೆಯ ಮೇಕೆದಾಟುವಿನಲ್ಲಿ ಕರ್ನಾಟಕ ನಿರ್ಮಿಸಲು ಉದ್ದೇಶಿಸಿರುವ ಅಣೆಕಟ್ಟು ಯೋಜನೆಗೆ ಅನುಮತಿ ನೀಡಬಾರದು ಎಂದು ಕೇಂದ್ರ ಸರ್ಕಾರವನ್ನು ತಮಿಳುನಾಡಿನ ಸರ್ವಪಕ್ಷಗಳ ಸಭೆ ಒತ್ತಾಯಿಸಿದೆ. ಈ ಯೋಜನೆ ಜಾರಿಗೊಳಿಸುವುದನ್ನು ತಡೆಯಲು ಸುಪ್ರೀಂ ಕೋರ್ಟ್ ಮೆಟ್ಟಿಲೇರುವುದೂ ಸೇರಿದಂತೆ ಎಲ್ಲ ರೀತಿಯ ಕಾನೂನು ಕ್ರಮಗಳನ್ನು ಕೈಗೊಳ್ಳಲು ಅಲ್ಲಿನ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ನೇತೃತ್ವದ ಸಭೆಯು ತೀರ್ಮಾನಿಸಿದೆ. ಮೇಕೆದಾಟುವಿನಲ್ಲಿ ಕರ್ನಾಟಕ ಅಣೆಕಟ್ಟು ನಿರ್ಮಿಸಿದರೆ ತಮ್ಮ ರೈತರ ಹಿತಾಸಕ್ತಿಗೆ ಧಕ್ಕೆ ಬರುತ್ತದೆ ಎನ್ನುವುದು ತಮಿಳುನಾಡಿನ ವಾದ. ಕಾವೇರಿ ನೀರಿನ ಕುರಿತು ಕರ್ನಾಟಕ ಮತ್ತು ತಮಿಳುನಾಡು ನಡುವಣ ತಿಕ್ಕಾಟಕ್ಕೆ ಸುದೀರ್ಘ ಇತಿಹಾಸವಿದೆ. ಕಾವೇರಿ ನೀರು ಹಂಚಿಕೆಯ ವಿವಾದಕ್ಕೆ ಈಗ ಮತ್ತೆ ಕಾವು ತುಂಬುವ ಕೆಲಸವನ್ನು ತಮಿಳುನಾಡು ಸರ್ಕಾರ ಮಾಡಲು ಹೊರಟಿದೆ. ‘ಕಾವೇರಿ ನದಿ ನೀರು ಹಂಚಿಕೆ ಬಗ್ಗೆ ಸುಪ್ರೀಂ ಕೋರ್ಟ್ ಸ್ಪಷ್ಟವಾದ ತೀರ್ಪು ನೀಡಿದೆ. ಅದರ ಪ್ರಕಾರ ತಮಿಳುನಾಡಿಗೆ ಎಷ್ಟು ನೀರು ಬಿಡಬೇಕು ಮತ್ತು ಯಾವಾಗ ಬಿಡಬೇಕು ಎನ್ನುವುದೂ ನಿರ್ಧಾರವಾಗಿದೆ. ತೀರ್ಪನ್ನು ನಾವು ಪಾಲಿಸುತ್ತೇವೆ. ಬೆಂಗಳೂರಿಗೆ ಕುಡಿಯುವ ನೀರು ಪೂರೈಕೆ ಮತ್ತು ವಿದ್ಯುತ್ ಉತ್ಪಾದನೆಗಾಗಿ ಮಾತ್ರ ಮೇಕೆದಾಟು ಯೋಜನೆಯನ್ನು ಕೈಗೆತ್ತಿಕೊಳ್ಳಲಾಗಿದೆ. ಈ ನೀರಿನ ಬಳಕೆಯೂ ಸುಪ್ರೀಂ ಕೋರ್ಟಿನ ಆದೇಶದಂತೆಯೇ ನಡೆಯಲಿದೆ’ ಎಂದು ರಾಜ್ಯದ ಗೃಹ ಮತ್ತು ಕಾನೂನು ಸಚಿವ ಬಸವರಾಜ ಬೊಮ್ಮಾಯಿ ಸ್ಪಷ್ಟ ಪ್ರತಿಕ್ರಿಯೆ ನೀಡಿದ್ದಾರೆ. ಇನ್ನೊಂದೆಡೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ‘ಮೇಕೆದಾಟು ಯೋಜನೆಯನ್ನು ರಾಜ್ಯ ಸರ್ಕಾರ ತಕ್ಷಣ ಆರಂಭಿಸಲಿ. ರಾಜಕೀಯ ಭಿನ್ನಾಭಿಪ್ರಾಯ ಮರೆತು ನಾವೆಲ್ಲರೂ ಸರ್ಕಾರದ ಜೊತೆಗೆ ನಿಲ್ಲುತ್ತೇವೆ’ ಎಂದು ಹೇಳಿರುವುದೂ ಸ್ವಾಗತಾರ್ಹ.ತಮಿಳುನಾಡಿನಲ್ಲಿ ಯಾವುದೇ ಪಕ್ಷ ಅಧಿಕಾರದ ಚುಕ್ಕಾಣಿ ಹಿಡಿದರೂ ಕಾವೇರಿ ನೀರಿನ ಹಂಚಿಕೆ ವಿಷಯವನ್ನು ಭಾವನಾತ್ಮಕಗೊಳಿಸಿ, ರಾಜಕೀಯ ಲಾಭ ಪಡೆಯಲು ಯತ್ನಿಸಿರುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ನೀರಿನ ವ್ಯಾಜ್ಯವನ್ನು ಭಾಷಿಕ ವಿಷಯವಾಗಿ ಮುನ್ನೆಲೆಗೆ ತಂದು ನಡೆಸಿದ ರಾಜಕೀಯ ಮೇಲಾಟಗಳು ಎರಡೂ ರಾಜ್ಯಗಳ ಜನರ ಮನಸ್ಸಿನಲ್ಲಿ ಈ ಹಿಂದೆ ದ್ವೇಷಭಾವ ಮೂಡಲು ಕಾರಣವಾಗಿದ್ದವು. ಅದಕ್ಕೆ ಪುನಃ ಅವಕಾಶ ನೀಡಬಾರದು.

ಕಾವೇರಿ ಜಲವಿವಾದ ನ್ಯಾಯಮಂಡಳಿಯ ಅಂತಿಮ ತೀರ್ಪನ್ನು 2018ರಲ್ಲಿ ಸುಪ್ರೀಂ ಕೋರ್ಟ್ ಪರಿಷ್ಕರಿಸಿ ತೀರ್ಪು ನೀಡಿದೆ. ಕರ್ನಾಟಕಕ್ಕೆ 284.75 ಟಿಎಂಸಿ ಅಡಿ ನೀರಿನ ಬಳಕೆಗೆ ಅನುಮತಿ ನೀಡಿದೆ. ತಮಿಳುನಾಡು 404.25 ಟಿಎಂಸಿ ಅಡಿ, ಕೇರಳ 30 ಟಿಎಂಸಿ ಅಡಿ ಮತ್ತು ಪುದುಚೇರಿ 7 ಟಿಎಂಸಿ ಅಡಿ ನೀರಿನ ಪಾಲು ಪಡೆಯಬೇಕೆಂದು ಸುಪ್ರೀಂ ಕೋರ್ಟ್ ಸ್ಪಷ್ಟವಾಗಿ ಹೇಳಿದೆ. ಕರ್ನಾಟಕವು ತನ್ನ ಪಾಲಿನ ಈ ನೀರಿನ ಸದ್ಬಳಕೆಗೆಂದೇ ಈಗ ಮೇಕೆದಾಟುವಿನಲ್ಲಿ ಅಣೆಕಟ್ಟು ಕಟ್ಟಲು ಉದ್ದೇಶಿಸಿದೆ. ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಬೆಂಗಳೂರು ಮಹಾನಗರಕ್ಕೆ ಕುಡಿಯುವ ನೀರು ಪೂರೈಸಲು ಇದು ಅನಿವಾರ್ಯವೂ ಹೌದು. ‘ಇದರಿಂದ ತಮಿಳುನಾಡಿಗೆ ಬಿಡಬೇಕಾದ ನೀರಿನಲ್ಲಿ ಯಾವುದೇ ಕಡಿತ ಆಗುವುದಿಲ್ಲ’ ಎಂದು ಕರ್ನಾಟಕ ಈಗಾಗಲೇ ಸ್ಪಷ್ಟಪಡಿಸಿದೆ. ಸುಪ್ರೀಂ ಕೋರ್ಟಿನ ಆದೇಶದಂತೆ ತಮಿಳುನಾಡಿಗೆ ಕಾಲಕಾಲಕ್ಕೆ ಕರ್ನಾಟಕ ಬಿಡಬೇಕಾದ ನೀರಿನ ಮೇಲ್ವಿಚಾರಣೆಗೆ ಕೇಂದ್ರ ಸರ್ಕಾರವೇ ಸ್ಥಾಪಿಸಿದ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರವೂ ಕೆಲಸ ಮಾಡುತ್ತಿದೆ. ಹಾಗಿದ್ದೂ ತಮಿಳುನಾಡು ಸರ್ಕಾರವು ತಂಜಾವೂರು, ನಾಗಪಟ್ಟಣಂ, ಪುದುಕೋಟೈ ಮೊದಲಾದ ಜಿಲ್ಲೆಗಳ ರೈತರ ಕೃಷಿಗೆ ನೀರಿನ ಕೊರತೆ ಉಂಟಾಗುವ ಆತಂಕ ವ್ಯಕ್ತಪಡಿಸುತ್ತಿರುವುದು ಸಮಂಜಸವಲ್ಲ. ಕರ್ನಾಟಕದಿಂದ ತಮಿಳುನಾಡಿನತ್ತ ಹರಿಯುವ ಕಾವೇರಿ ನೀರಿಗೆ ಕರ್ನಾಟಕದಲ್ಲಿ ಕೊನೆಯ ಅಣೆಕಟ್ಟು ಇರುವುದು ಕಬಿನಿಯಲ್ಲಿ. ಮಳೆಗಾಲದಲ್ಲಿ ಅಲ್ಲಿ ಬಹಳ ಬೇಗ ಅಣೆಕಟ್ಟು ತುಂಬಿ, ತಮಿಳುನಾಡಿಗೆ ಹೆಚ್ಚುವರಿ ನೀರು ಬಹಳ ವರ್ಷ ಹರಿದುಹೋಗಿದೆ. ತಮಿಳುನಾಡು ತನ್ನ ನೆಲದಲ್ಲಿ ಈ ಹೆಚ್ಚುವರಿ ನೀರನ್ನು ಹಿಡಿದಿಡಲು ಬೇಕಾದ ಅಣೆಕಟ್ಟು, ಬ್ಯಾರೇಜ್ ಮತ್ತು ಕಾಲುವೆಗಳ ವ್ಯವಸ್ಥೆಯನ್ನು ಮಾಡಿಕೊಂಡಿಲ್ಲ. ಹಾಗಾಗಿ ಈ ನೀರು ನೇರವಾಗಿ ಬಂಗಾಳ ಕೊಲ್ಲಿ ಸೇರುವುದು ಪ್ರತೀ ಮಳೆಗಾಲದ ವಿದ್ಯಮಾನ. ಮೇಕೆದಾಟುವಿನಲ್ಲಿ ಅಣೆಕಟ್ಟು ನಿರ್ಮಾಣವಾದರೆ ಹೀಗೆ ಪೋಲಾಗುವ ನೀರನ್ನು ಸಮರ್ಥವಾಗಿ ಸದ್ಬಳಕೆ ಮಾಡಬಹುದು. ಮಳೆ ಕೈಕೊಟ್ಟು ಸಂಕಷ್ಟ ಉಂಟಾಗುವ ಸಮಯದಲ್ಲಿ ಈ ನೀರು ಬಳಕೆಯಾದರೆ ತಮಿಳುನಾಡಿನ ರೈತರಿಗೇ ಹೆಚ್ಚು ಅನುಕೂಲ ಎನ್ನುವುದನ್ನು ಅಲ್ಲಿನ ಸರ್ಕಾರ ಅರ್ಥ ಮಾಡಿಕೊಳ್ಳಬೇಕು. ಪ್ರತಿಯೊಂದಕ್ಕೂ ಕೋರ್ಟ್ ಮೆಟ್ಟಿಲು ಹತ್ತುವುದು ಮುತ್ಸದ್ದಿತನದ ಲಕ್ಷಣವಲ್ಲ. ಈ ವಿಷಯವನ್ನು ಮಾತುಕತೆಯ ಮೂಲಕ ಬಗೆಹರಿಸಿಕೊಳ್ಳೋಣ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಈಗಾಗಲೇ ತಮಿಳುನಾಡಿನ ಮುಖ್ಯಮಂತ್ರಿಗೆ ಆಹ್ವಾನ ನೀಡಿದ್ದರೂ ಅವರು ಅದನ್ನು ತಿರಸ್ಕರಿಸಿರುವುದು ಎಳ್ಳಷ್ಟೂ ಸರಿಯಲ್ಲ. ನೀರಿನ ವಿವಾದ ಈ ಹಿಂದಿನಂತೆ, ಉಭಯ ರಾಜ್ಯಗಳ ಜನರ ಮಧ್ಯೆ ಇರುವ ಸದ್ಭಾವನೆಯನ್ನು ಕದಡುವುದಕ್ಕೆ ಉಭಯತ್ರರು ಅವಕಾಶ ಕೊಡಕೂಡದು. ತಮಿಳುನಾಡು ಸರ್ಕಾರವು ತನ್ನ ಹಳೆ ಚಾಳಿಯಾದ ರಾಜಕೀಯ ಲಾಭ ಗಳಿಕೆಯ ಮನೋಭಾವವನ್ನು ಬಿಟ್ಟು ಮಾತುಕತೆಯ ಮೂಲಕ ಈ ವಿವಾದವನ್ನು ಬಗೆಹರಿಸಿಕೊಳ್ಳುವುದು ಒಳ್ಳೆಯದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT