ADVERTISEMENT

ಸಂಪಾದಕೀಯ: ನೂತನ ಮುಖ್ಯಮಂತ್ರಿ ಎದುರು ರಾಶಿ ಸವಾಲು, ನಿರೀಕ್ಷೆಯ ಸಾಲು

​ಪ್ರಜಾವಾಣಿ ವಾರ್ತೆ
Published 29 ಜುಲೈ 2021, 1:41 IST
Last Updated 29 ಜುಲೈ 2021, 1:41 IST
   

ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಶಿಗ್ಗಾವಿ ಕ್ಷೇತ್ರದ ಶಾಸಕ ಬಸವರಾಜ ಬೊಮ್ಮಾಯಿ ಅಧಿಕಾರ ಸ್ವೀಕರಿಸಿದ್ದಾರೆ. ಒಂದು ವಿಶಿಷ್ಟ ಸನ್ನಿವೇಶದಲ್ಲಿ ಬಸವರಾಜ ಬೊಮ್ಮಾಯಿ ಅವರಿಗೆ ಮುಖ್ಯಮಂತ್ರಿಯಾಗುವ ಯೋಗ ಒಲಿದುಬಂದಿದೆ. ಚುನಾವಣೆಯಲ್ಲಿ ಸ್ಪಷ್ಟ ಬಹುಮತ ಸಿಗದಿದ್ದರೂ ಇತರ ಪಕ್ಷಗಳ ಶಾಸಕರಿಂದ ರಾಜೀನಾಮೆ ಕೊಡಿಸಿ ಬಿ.ಎಸ್.ಯಡಿಯೂರಪ್ಪ ಅವರು ಬಿಜೆಪಿ ನೇತೃತ್ವದ ಸರ್ಕಾರವನ್ನು ರಚಿಸಿದರು.

ಆದರೆ ಎರಡು ವರ್ಷ ಮುಗಿಯುವುದರೊಳಗೆ ಯಡಿಯೂರಪ್ಪ ನೇತೃತ್ವದ ಸರ್ಕಾರದ ವಿರುದ್ಧ ಅವರ ಪಕ್ಷದ ಕೆಲವು ಶಾಸಕರೇ ಭ್ರಷ್ಟಾಚಾರ ಮತ್ತು ಸ್ವಜನಪಕ್ಷಪಾತದ ಆರೋಪಗಳನ್ನು ಮಾಡಿ, ಅವರು ನಿರ್ಗಮಿಸುವುದಕ್ಕೆ ಕಾರಣರಾಗಿದ್ದಾರೆ. ರಾಜಕೀಯದಲ್ಲಿ ನಾಲ್ಕು ದಶಕಗಳಿಗೂ ಹೆಚ್ಚು ಅನುಭವ ಹೊಂದಿ, ರಾಜ್ಯದಲ್ಲಿ ಬಿಜೆಪಿಗೆ ಅಧಿಕಾರ ದೊರಕಿಸಿಕೊಡುವುದರಲ್ಲಿ ಮಹತ್ವದ ಪಾತ್ರವನ್ನು ವಹಿಸಿದವರು ಯಡಿಯೂರಪ್ಪ ಎನ್ನುವುದನ್ನು ಅವರ ರಾಜಕೀಯ ವಿರೋಧಿಗಳೂ ಒಪ್ಪುತ್ತಾರೆ. ರಾಜ್ಯದ ಪ್ರಬಲ ಲಿಂಗಾಯತ ಸಮುದಾಯ ಅವರ ಬೆನ್ನಿಗೆ ಗಟ್ಟಿಯಾಗಿ ನಿಂತದ್ದರಿಂದ ಯಡಿಯೂರಪ್ಪ ಅವರ ಉತ್ತರಾಧಿಕಾರಿಯ ಆಯ್ಕೆ ಬಿಜೆಪಿ ವರಿಷ್ಠರಿಗೆ ಅಷ್ಟು ಸುಲಭದ ವಿಷಯವಾಗಿರಲಿಲ್ಲ.

ರಾಜ್ಯದ ಪ್ರಬಲ ಸಮುದಾಯವೊಂದನ್ನು ಎದುರು ಹಾಕಿಕೊಂಡು ಹೊಸ ಮುಖ್ಯಮಂತ್ರಿಯನ್ನು ಆಯ್ಕೆ ಮಾಡುವುದು ಪಕ್ಷದ ಹಿತಕ್ಕೆ ಬಾಧಕವಾಗಬಹುದು ಎಂಬ ಸೂಕ್ಷ್ಮವನ್ನು ವರಿಷ್ಠರು ಗ್ರಹಿಸಿದರು. ರಾಜೀನಾಮೆ ಕೊಡಲು ಹಿಂದೆಮುಂದೆ ನೋಡಿದ ಯಡಿಯೂರಪ್ಪ ಅವರನ್ನು ಸಮಾಧಾನಪಡಿಸಿ ಜೊತೆಗೆ ಕರೆದೊಯ್ಯುವ ಅನಿವಾರ್ಯವೂ ವರಿಷ್ಠರಿಗೆ ಇತ್ತು. ಈ ಕಾರಣದಿಂದ ಬಸವರಾಜ ಬೊಮ್ಮಾಯಿಯವರ ಆಯ್ಕೆ ರಾಜಕೀಯವಾಗಿ ಚಾಣಾಕ್ಷ ನಡೆ ಎನ್ನಲು ಅಡ್ಡಿಯಿಲ್ಲ. ಜಲಸಂಪನ್ಮೂಲ, ಗೃಹ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಖಾತೆಯ ಸಚಿವರಾಗಿ ಆಡಳಿತದ ಅನುಭವ ಹೊಂದಿರುವುದು ಬೊಮ್ಮಾಯಿಯವರ ಆಯ್ಕೆಗೆ ಪೂರಕ ಸಂಗತಿಯಾಗಿತ್ತು. ಜನತಾ ಪರಿವಾರದಲ್ಲಿ ತಮ್ಮ ರಾಜಕೀಯ ಬದುಕನ್ನು ಆರಂಭಿಸಿ, ಜೆ.ಎಚ್.ಪಟೇಲರು ಮುಖ್ಯಮಂತ್ರಿಯಾಗಿದ್ದಾಗ ಅವರಿಗೆ ರಾಜಕೀಯ ಕಾರ್ಯದರ್ಶಿ ಆಗಿದ್ದ ಬೊಮ್ಮಾಯಿಯವರು 13 ವರ್ಷಗಳ ಹಿಂದೆ ಬಿಜೆಪಿಗೆ ಬಂದವರು.

ADVERTISEMENT

ಶಿಗ್ಗಾವಿ ಕ್ಷೇತ್ರದಿಂದ ಸತತ ಮೂರು ಸಲ ವಿಧಾನಸಭೆಗೆ ಆಯ್ಕೆಯಾಗುವ ಮೂಲಕ ತಮ್ಮದೇ ಆದ ರಾಜಕೀಯ ವರ್ಚಸ್ಸನ್ನೂ ಬೆಳೆಸಿಕೊಂಡಿದ್ದಾರೆ. ಬಿಜೆಪಿಯ ರಾಜಕೀಯ ನಿರ್ಧಾರಗಳಲ್ಲಿ ಪ್ರಮುಖ ಪಾತ್ರ ವಹಿಸುತ್ತಿರುವ ಸಂಘ ಪರಿವಾರಕ್ಕೆ ಬೊಮ್ಮಾಯಿ ಸೇರಿದವರಲ್ಲ ಎನ್ನುವುದು ಗಮನಿಸಬೇಕಾದ ಸಂಗತಿ. ರಾಜಕೀಯ ಭಿನ್ನಾಭಿಪ್ರಾಯಗಳ ಹೊರತಾಗಿಯೂ ಜೆಡಿಎಸ್‌ ವರಿಷ್ಠಎಚ್.ಡಿ.ದೇವೇಗೌಡ ಮತ್ತು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಜೊತೆಗೆ ಸೌಹಾರ್ದ ಸಂಬಂಧವನ್ನು ಹೊಂದಿದ್ದಾರೆ. ಹೊಸ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿರುವ ಈ ಸಂದರ್ಭದಲ್ಲಿ ಇವೆಲ್ಲವೂ ಸಾರ್ವಜನಿಕ ಚರ್ಚೆಯಲ್ಲಿ ಮಹತ್ವದ ಸಂಗತಿಗಳಾಗಿ ಗೋಚರಿಸುತ್ತಿವೆ.

ಹೊಸ ಮುಖ್ಯಮಂತ್ರಿಯ ಮುಂದೆ ಬೆಟ್ಟದಷ್ಟು ಸಮಸ್ಯೆಗಳು ಇವೆ. ಉತ್ತರ ಕರ್ನಾಟಕದಲ್ಲಿ ಪ್ರವಾಹದಿಂದಾಗಿ ಉಂಟಾಗಿರುವ ಅನಾಹುತಗಳನ್ನು ಸರಿಪಡಿಸುವ, ಸಂತ್ರಸ್ತರಿಗೆ ತ್ವರಿತವಾಗಿ ಸೂಕ್ತ ಪರಿಹಾರ ಒದಗಿಸುವ ಗುರುತರ ಹೊಣೆ ಅವರ ಮೇಲಿದೆ. ಇದು ತಕ್ಷಣಕ್ಕೆ ಆಗಬೇಕಾದ ಕೆಲಸ. 2019ರಲ್ಲಿ ಉಂಟಾದ ನೆರೆಯಿಂದ ತೊಂದರೆಗೆ ಒಳಗಾದವರಿಗೆ ಇನ್ನೂ ಪರಿಹಾರ ಲಭಿಸಿಲ್ಲ ಎನ್ನುವ ದೂರುಗಳಿವೆ. ಕೋವಿಡ್‍ನ ಎರಡು ಅಲೆಗಳು ರಾಜ್ಯದ ಆರೋಗ್ಯ ಕ್ಷೇತ್ರ ಮತ್ತು ಆಡಳಿತದ ಹುಳುಕುಗಳನ್ನೆಲ್ಲ ಈಗಾಗಲೇ ಎತ್ತಿ ತೋರಿಸಿವೆ. ಮೂರನೆಯ ಅಲೆ ಎದುರಾಗಲಿದೆ ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ.

ಹೀಗಾಗಿ ರಾಜ್ಯದ ಜನರಿಗೆ ಸಮರೋಪಾದಿಯಲ್ಲಿ ಲಸಿಕೆ ಒದಗಿಸಬೇಕಾದ ತುರ್ತು ಇದೆ. ಕೋವಿಡ್‍ನಿಂದಾಗಿ ದಿಕ್ಕೆಟ್ಟು ಗೊಂದಲದಲ್ಲಿರುವ ರಾಜ್ಯದ ಶಿಕ್ಷಣ ವ್ಯವಸ್ಥೆಯನ್ನು ಹಳಿಗೆ ತರಬೇಕಿದೆ. ಈ ಮಧ್ಯೆ ಭ್ರಷ್ಟಾಚಾರ ಮತ್ತು ಬೆಲೆ ಏರಿಕೆ ರಾಜ್ಯದ ಜನರ ದಿಕ್ಕೆಡಿಸಿದ್ದು ಆಡಳಿತದಲ್ಲಿ ದಕ್ಷತೆ ಮತ್ತು ಪಾರದರ್ಶಕತೆಯ ಮೂಲಕ ಇದನ್ನು ನಿವಾರಿಸಬೇಕಿದೆ. ಮುಖ್ಯಮಂತ್ರಿಯೊಬ್ಬರೇ ಈ ಕೆಲಸವನ್ನು ಮಾಡಲು ಸಾಧ್ಯವಿಲ್ಲ. ದಕ್ಷತೆ ಮತ್ತು ಅನುಭವ ಸಮ್ಮಿಲನಗೊಂಡಿರುವ ಸಚಿವ ಸಂಪುಟವೊಂದನ್ನು ಹೊಂದುವುದು ಅವರ ಕೆಲಸವನ್ನು ಸುಲಭಗೊಳಿಸಬಲ್ಲದು.

ರಾಜ್ಯ ಬಿಜೆಪಿಯೊಳಗಿನ ಈಗಿನ ಗುಂಪು ತಿಕ್ಕಾಟಗಳ ನಡುವೆ ಇಂತಹ ಸಂಪುಟದ ರಚನೆ ಎಷ್ಟು ಕಾರ್ಯಸಾಧ್ಯವಾಗಲಿದೆ ಎನ್ನುವುದನ್ನು ಕಾದು ನೋಡಬೇಕಿದೆ. ಎಲ್ಲಕ್ಕಿಂತ ಮುಖ್ಯವಾಗಿ ರಾಜ್ಯದ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸಲು ಹೆಚ್ಚಿನ ಸಂಪನ್ಮೂಲ ಕ್ರೋಡೀಕರಿಸುವ ದೊಡ್ಡ ಹೊಣೆ ಮುಖ್ಯಮಂತ್ರಿಯ ಮುಂದಿದೆ. ಕೋವಿಡ್ ಹೊಡೆತದಿಂದ ನೆಲಕಚ್ಚಿರುವ ಉತ್ಪಾದನೆ ಮತ್ತು ಸೇವಾ ವಲಯಕ್ಕೆ ಚೇತರಿಕೆ ತುಂಬುವ ಮೂಲಕ ದೊಡ್ಡ ಮಟ್ಟದಲ್ಲಿ ಉದ್ಯೋಗಸೃಷ್ಟಿ ಆಗಬೇಕಿದೆ. ಇದನ್ನು ಕೇಂದ್ರ ಸರ್ಕಾರದ ಉದಾರ ನೆರವಿಲ್ಲದೆ ಸಾಧಿಸುವುದು ಕಷ್ಟ. ಕೇಂದ್ರದಿಂದ ಹೆಚ್ಚಿನ ಅನುದಾನವನ್ನು ಸಕಾಲಕ್ಕೆ ಪಡೆಯುವ ಕೆಲಸವನ್ನು ಜಾಣ್ಮೆಯಿಂದ ಸಾಧಿಸಬೇಕಿದೆ. ವಿಧಾನಸಭಾ ಚುನಾವಣೆಗೆ ಇನ್ನು ಎರಡು ವರ್ಷವೂ ಉಳಿದಿಲ್ಲವಾದ ಕಾರಣ, ಬೊಮ್ಮಾಯಿ ಅವರು ತಮ್ಮ ಮೇಲಿರುವ ನಿರೀಕ್ಷೆಗಳನ್ನು ಈಡೇರಿಸಲು ಭಗೀರಥನಂತೆ ಕೆಲಸ ಮಾಡಬೇಕಿದೆ. ಸಮಾಜದ ಎಲ್ಲ ವರ್ಗಗಳನ್ನೂ ವಿಶ್ವಾಸಕ್ಕೆ ತೆಗೆದುಕೊಂಡು, ಸಮಾಜದಲ್ಲಿ ಶಾಂತಿ-ಸುವ್ಯವಸ್ಥೆಯನ್ನು ಕಾಪಾಡಿಕೊಂಡರಷ್ಟೇ ಇದು ಸಾಧ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.