ADVERTISEMENT

ಸಂಪಾದಕೀಯ | ಶಾಲೆಗಳಲ್ಲಿ ಹೊಸ ಬೆಳಕು ಸ್ವಾಗತಾರ್ಹ, ಗಣೇಶೋತ್ಸವ ಕಾದು ನೋಡುವ ತಂತ್ರ

​ಪ್ರಜಾವಾಣಿ ವಾರ್ತೆ
Published 30 ಆಗಸ್ಟ್ 2021, 19:31 IST
Last Updated 30 ಆಗಸ್ಟ್ 2021, 19:31 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಕೋವಿಡ್‌ ನಿಯಂತ್ರಣ ಮಾರ್ಗಸೂಚಿ ಅನುಸರಿಸಿ 6ರಿಂದ 8ನೇ ತರಗತಿ ವಿದ್ಯಾರ್ಥಿಗಳಿಗೆ ಸೆಪ್ಟೆಂಬರ್‌ 6ರಿಂದ ಭೌತಿಕ ತರಗತಿಗಳನ್ನು ಆರಂಭಿಸುವ ರಾಜ್ಯ ಸರ್ಕಾರದ ನಿರ್ಧಾರವು ಮಕ್ಕಳ ಹಿತದೃಷ್ಟಿಯಿಂದ ಅಗತ್ಯವಾಗಿದ್ದ ಕ್ರಮ. 9, 10 ಮತ್ತು ಪಿಯು ತರಗತಿಗಳ ಆರಂಭಕ್ಕೆ ಸರ್ಕಾರ ಕಳೆದ ವಾರ ಅವಕಾಶ ಮಾಡಿಕೊಟ್ಟಿತ್ತು. ಈಗ ಎರಡನೇ ಹಂತದಲ್ಲಿ ಕೋವಿಡ್‌ ದೃಢ ಪ್ರಮಾಣ ದರ ಶೇಕಡ 2ಕ್ಕಿಂತ ಕಡಿಮೆ ಇರುವ ತಾಲ್ಲೂಕುಗಳಲ್ಲಿ 6ನೇ ತರಗತಿಯಿಂದ ಶಾಲೆಗಳನ್ನು ಆರಂಭಿಸಲು ಮುಂದಾಗಿದೆ. ವಾರದಲ್ಲಿ ಐದು ದಿನ ತರಗತಿ ನಡೆಸಲು ತೀರ್ಮಾನಿಸುವ ಮೂಲಕ ಶೈಕ್ಷಣಿಕ ವಲಯದಲ್ಲಿ ಉತ್ಸಾಹ ಮೂಡಲು ಅವಕಾಶ ಕಲ್ಪಿಸಿದೆ. ಒಂದೂವರೆ ವರ್ಷದಿಂದ ಮನೆಯಲ್ಲಿಯೇ ಉಳಿಯುವಂತಾದುದರಿಂದ, ಬಹುತೇಕ ಮಕ್ಕಳು ಕಲಿಕೆಯ ಉತ್ಸಾಹ ಕಳೆದುಕೊಳ್ಳುವ ಹಂತಕ್ಕೆ ತಲುಪಿದ್ದರು. ಪರ್ಯಾಯ ಕಲಿಕೆಯ ರೂಪದಲ್ಲಿ ಸರ್ಕಾರ ರೂಪಿಸಿದ್ದ ಆನ್‌ಲೈನ್‌ ಶಿಕ್ಷಣ ಕಾರ್ಯಕ್ರಮ ಎಲ್ಲ ಮಕ್ಕಳನ್ನೂ ತಲುಪುವುದು ಸಾಧ್ಯವಾಗಿರಲಿಲ್ಲ. ಹಾಗಾಗಿ, ಮಕ್ಕಳಲ್ಲಿ ಕಲಿಕೆಯ ಉತ್ಸಾಹ ಉಳಿಸುವುದಕ್ಕಾಗಿ ಶಾಲೆಗಳನ್ನು ಆರಂಭಿಸುವುದು ಸರ್ಕಾರಕ್ಕೆ ಅನಿವಾರ್ಯವಾಗಿತ್ತು.

ಶಾಲೆಗಳನ್ನು ತೆರೆಯುವ ದಿಸೆಯಲ್ಲಿ ಹಂತ ಹಂತವಾಗಿ ಮುಂದುವರಿಯುತ್ತಿರುವ ಸರ್ಕಾರ, ಸಾರ್ವಜನಿಕ ಗಣೇಶೋತ್ಸವ ಆಚರಣೆಗೆ ಸಂಬಂಧಿಸಿದಂತೆ ಕಾದು ನೋಡುವ ಎಚ್ಚರಿಕೆಯ ನಿರ್ಧಾರ ಕೈಗೊಂಡಿರುವುದು ಸರಿಯಾಗಿದೆ. ಗಣೇಶೋತ್ಸವ ಆಚರಣೆಗೆ ಸಂಬಂಧಿಸಿದಂತೆ
ಸೆ. 5ರಂದು ಮತ್ತೊಮ್ಮೆ ಉನ್ನತ ಮಟ್ಟದ ಸಭೆ ನಡೆಸಿ ಅಂತಿಮನಿರ್ಧಾರ ಕೈಗೊಳ್ಳುವುದಾಗಿ ಸರ್ಕಾರ ತಿಳಿಸಿದೆ. ಗಣೇಶೋತ್ಸವ ಆಚರಿಸುವ ಸಂಘ– ಸಂಸ್ಥೆಗಳ ಪ್ರತಿನಿಧಿಗಳ ಜತೆ ಸಮಾಲೋಚನೆ ನಡೆಸಿ ವರದಿ ನೀಡುವಂತೆ ಜಿಲ್ಲಾಧಿಕಾರಿಗಳಿಗೆ ಮತ್ತು ಜಿಲ್ಲೆಯ ಪೊಲೀಸ್‌ ವರಿಷ್ಠರಿಗೆ ಸೂಚಿಸಲಾಗಿದೆ. ವರದಿ ಪಡೆದ ಬಳಿಕ, ಕೋವಿಡ್‌ ಪರಿಸ್ಥಿತಿಯನ್ನು ಆಧರಿಸಿ ಪುನಃ ಚರ್ಚೆ ನಡೆಸಲು ನಿರ್ಧರಿಸಲಾ
ಗಿದೆ.ಸಾರ್ವಜನಿಕ ಗಣೇಶೋತ್ಸವ ಆಚರಣೆಗೆ ಅವಕಾಶ ಮಾಡಿಕೊಡುವಂತೆ ಆಡಳಿತಾರೂಢ ಬಿಜೆಪಿಯ ಕೆಲವು ನಾಯಕರು ಬಹಿರಂಗವಾಗಿ ಮಾಡಿದ್ದ ಒತ್ತಾಯಕ್ಕೆ ಸರ್ಕಾರ ಕಾದು ನೋಡುವ ತಂತ್ರ ಅನುಸರಿಸಿರುವುದು ವಿವೇಕದ ನಡವಳಿಕೆ. ಗಣೇಶೋತ್ಸವ ಆಚರಣೆಗೆ ಸರ್ಕಾರ ನಿರ್ಬಂಧ ವಿಧಿಸಿದರೆ ತಾವು ಸುಮ್ಮನಿರುವುದಿಲ್ಲ ಎಂದು ಆಡಳಿತ ಪಕ್ಷದ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದ್ದರು. ಗಣೇಶೋತ್ಸವ ಆಚರಣೆಗೆ ಅವಕಾಶ ಕಲ್ಪಿಸುವಂತೆ ಸಂಸದ ಪ್ರತಾಪ್‌ ಸಿಂಹ, ಸರ್ಕಾರದ ಮೇಲೆ ಒತ್ತಡ ಹೇರಿದ್ದರು. ಮಸೀದಿಗಳಲ್ಲಿ ಮತ್ತು ಚರ್ಚ್‌ಗಳಲ್ಲಿ ಪ್ರಾರ್ಥನೆ ಸಲ್ಲಿಸುವ ಉದ್ದೇಶದಿಂದ ಜನ ಗುಂಪು ಸೇರುತ್ತಿದ್ದಾರೆ. ಅವರಿಗಿಲ್ಲದ ನಿರ್ಬಂಧವು ಹಿಂದೂಗಳ ಗಣೇಶೋತ್ಸವಕ್ಕೆ ಏಕೆ ಅನ್ವಯವಾಗಬೇಕು ಎಂದು ಅಭಿಪ್ರಾಯಪಟ್ಟಿದ್ದ ಅವರು, ಕೋವಿಡ್‌ ಮಾರ್ಗಸೂಚಿ ಅನುಸರಿಸಿ ಗಣೇಶೋತ್ಸವಕ್ಕೆ ಅವಕಾಶ ಕಲ್ಪಿಸಬೇಕು ಎಂದು ಒತ್ತಾಯಿಸಿದ್ದರು. ಶ್ರೀರಾಮ ಸೇನೆ ಸಂಘಟನೆ ಕೂಡ ಗಣೇಶೋತ್ಸವ ಆಚರಣೆಗೆ ಅವಕಾಶ ಕಲ್ಪಿಸಬೇಕೆಂದು ಆಗ್ರಹಿಸಿತ್ತು. ಆದರೆ, ಕೊರೊನಾ ಸೋಂಕಿನ ಸಂದರ್ಭದಲ್ಲಿ ಹಬ್ಬ, ಉತ್ಸವ, ಜಾತ್ರೆಗಳನ್ನು ನಡೆಸಬೇಕೇ ಬೇಡವೇ ಎನ್ನುವ ತೀರ್ಮಾನವನ್ನು ಕೈಗೊಳ್ಳಬೇಕಾದುದು ತಜ್ಞರ ಅಭಿಪ್ರಾಯಗಳನ್ನು ಅವಲಂಬಿಸಿಯೇ ಹೊರತು, ರಾಜಕಾರಣಿಗಳು ಅಥವಾ ಸಾರ್ವಜನಿಕರ ಅಭಿಪ್ರಾಯ ಆಧರಿಸಿ ಅಲ್ಲ ಎನ್ನುವುದನ್ನು ಸರ್ಕಾರ ಮರೆಯಬಾರದು. ಕೊರೊನಾ ಸೋಂಕು ನಿಯಂತ್ರಣದ ಉದ್ದೇಶದಿಂದ ಕಳೆದ ವರ್ಷ ಸಾರ್ವಜನಿಕ ಗಣೇಶೋತ್ಸವ ಆಚರಣೆಗೆ ಸರ್ಕಾರ ಹಲವು ನಿರ್ಬಂಧಗಳನ್ನು ವಿಧಿಸಿತ್ತು. ಈ ವರ್ಷ ಆತಂಕವೇನೂ ದೂರವಾಗಿಲ್ಲ. ಕೊರೊನಾ ಪ್ರಕರಣಗಳು ಯಾವಾಗ ಬೇಕಾದರೂ ಹೆಚ್ಚಾಗಬಹುದು. ಸಂಭಾವ್ಯ ಮೂರನೇ ಅಲೆಯಲ್ಲಿ ಆಸ್ಪತ್ರೆಗಳಲ್ಲಿ ಐಸಿಯು ಹಾಸಿಗೆಗಳ ಕೊರತೆ ಎದುರಾಗಬಹುದು; ಮಕ್ಕಳು ಹೆಚ್ಚಿನ ಆತಂಕ ಎದುರಿಸಬೇಕಾಗಬಹುದು ಎಂದು ಖಾಸಗಿ ಆಸ್ಪತ್ರೆಗಳ ಒಕ್ಕೂಟ ಹೇಳಿದೆ. ನುರಿತ ವೈದ್ಯಕೀಯ ಸಿಬ್ಬಂದಿ ಹಾಗೂ ಲಸಿಕೆಯ ಕೊರತೆಗೆ ಉತ್ತರ ಕಂಡುಕೊಳ್ಳುವುದು ಇನ್ನೂ ಸಾಧ್ಯವಾಗಿಲ್ಲ. ಎರಡನೇ ಅಲೆಯಲ್ಲಿ ಎದುರಾದ ವೈದ್ಯಕೀಯ ಸವಲತ್ತುಗಳ ಕೊರತೆ ಮತ್ತೆ ಎದುರಾದರೆ ಆರೋಗ್ಯ ಕ್ಷೇತ್ರದಲ್ಲಿ ಉಂಟಾಗಬಹುದಾದ ಬಿಕ್ಕಟ್ಟನ್ನು ಊಹಿಸಿಕೊಳ್ಳುವುದೂ ಕಷ್ಟ. ಇಂತಹ ಸಂದಿಗ್ಧ ಸಂದರ್ಭದಲ್ಲಿ ರಾಜಕೀಯ ಸಮಾವೇಶಗಳನ್ನು ನಡೆಸುವುದು ಮತ್ತು ಯಾವುದೇ ಬಗೆಯ ಸಾರ್ವಜನಿಕ ಉತ್ಸವಗಳಿಗೆ ಅವಕಾಶ ಕಲ್ಪಿಸಬೇಕು ಎಂದು ಒತ್ತಾಯಿಸುವುದು ಪ್ರಬುದ್ಧ ಹಾಗೂ ಜನಪರ ರಾಜಕಾರಣದ ಲಕ್ಷಣವಲ್ಲ.

ಶಾಲಾ ಕಾಲೇಜುಗಳ ಪುನರಾರಂಭವನ್ನು ಧಾರ್ಮಿಕ ಆಚರಣೆಗಳ ಜೊತೆಗೆ ಹೋಲಿಸಲಾಗದು. ಮಕ್ಕಳ ಭವಿಷ್ಯದ ದೃಷ್ಟಿಯಿಂದ ಶಾಲಾ ಕಾಲೇಜುಗಳನ್ನು ತೆರೆಯುವುದು ಸರ್ಕಾರಕ್ಕೆ ಅನಿವಾರ್ಯ
ವಾಗಿತ್ತು. ಕೋವಿಡ್‌ ಮಾರ್ಗಸೂಚಿಯನ್ನು ಶಾಲೆಗಳಲ್ಲಿ ಕಟ್ಟುನಿಟ್ಟಾಗಿ ಜಾರಿಗೊಳಿಸುವಂತೆ ಸಾರ್ವಜನಿಕ ಸ್ಥಳಗಳಲ್ಲಿ ಅನುಷ್ಠಾನಕ್ಕೆ ತರುವುದು ಕಷ್ಟ. ರಾಜಕೀಯ ಸಮಾವೇಶಗಳನ್ನು ಗಮನಿಸಿದರೆ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಕೋವಿಡ್‌ ಮಾರ್ಗಸೂಚಿ ಎಷ್ಟರಮಟ್ಟಿಗೆ ಪಾಲನೆಯಾಗುತ್ತಿದೆ ಎನ್ನುವುದನ್ನು ತಿಳಿಯಬಹುದು. ಜೀವನಕ್ಕೆ ಅವಶ್ಯಕವಾದ ಚಟುವಟಿಕೆಗಳಿಗೆ ಅವಕಾಶ ಕಲ್ಪಿಸಿದಂತೆ, ಹಬ್ಬಹರಿದಿನಗಳ ಆಚರಣೆಗೆ ಅವಕಾಶ ಕೊಡಬೇಕು ಎಂದು ಅಪೇಕ್ಷಿಸುವುದು ಯುಕ್ತವಲ್ಲ. ಹಬ್ಬಗಳನ್ನು ಸಾರ್ವಜನಿಕ
ವಾಗಿ ಆಚರಿಸುವ ಬದಲು ಮನೆಯಲ್ಲಿ ಕುಟುಂಬದೊಟ್ಟಿಗೆ ಆಚರಿಸಲು ಸಾಧ್ಯವಿದೆ. ಆರೋಗ್ಯದ ಬಿಕ್ಕಟ್ಟಿಗೆ ದಾರಿ ಮಾಡಿಕೊಡಬಲ್ಲ ಯಾವುದೇ ರೀತಿಯ ದುಡುಕುತನವನ್ನು ಸಾರ್ವಜನಿಕ ಕ್ಷೇತ್ರದಲ್ಲಿ
ಇರುವವರು ‍ಪ್ರದರ್ಶಿಸಬಾರದು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.