ADVERTISEMENT

ಸಂಪಾದಕೀಯ: ಜಿಎಸ್‌ಟಿ ವ್ಯಾಪ್ತಿಗಿಲ್ಲ ತೈಲ; ಬೆಲೆ ಏರಿಕೆಗೆ ಬೇಕಿದೆ ಮದ್ದು

​ಪ್ರಜಾವಾಣಿ ವಾರ್ತೆ
Published 19 ಸೆಪ್ಟೆಂಬರ್ 2021, 19:30 IST
Last Updated 19 ಸೆಪ್ಟೆಂಬರ್ 2021, 19:30 IST
.
.   

ಉತ್ತರ ಪ್ರದೇಶದ ಲಖನೌನಲ್ಲಿ ಕಳೆದ ವಾರ ನಡೆದ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಮಂಡಳಿ ಸಭೆಯು, ಪೆಟ್ರೋಲ್, ಡೀಸೆಲ್ ಹಾಗೂ ಇತರ ಕೆಲವು ಪೆಟ್ರೋಲಿಯಂ ಉತ್ಪನ್ನಗಳನ್ನು ಜಿಎಸ್‌ಟಿ ವ್ಯಾಪ್ತಿಗೆ ತರಲು ಕಾಲ ಇನ್ನೂ ಪಕ್ವವಾಗಿಲ್ಲ ಎಂಬ ಅಭಿಪ್ರಾಯ ವ್ಯಕ್ತಪಡಿಸಿದೆ. ಈ ಉತ್ಪನ್ನಗಳ ಮೇಲಿನ ತೆರಿಗೆ ವ್ಯವಸ್ಥೆಯನ್ನು ಈಗಿರುವಂತೆಯೇ ಮುಂದುವರಿಸಿಕೊಂಡು ಹೋಗಲು ತೀರ್ಮಾನ ಮಾಡಿದೆ. ಪೆಟ್ರೋಲ್ ಹಾಗೂ ಡೀಸೆಲ್‌ ಮೇಲಿನ ಬೆಲೆಯು ದೇಶಿ ಮಾರುಕಟ್ಟೆಯಲ್ಲಿ ಗರಿಷ್ಠ ಮಟ್ಟದಲ್ಲಿ ಇದೆ. ಆದರೆ, ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆಯು ಸಾರ್ವಕಾಲಿಕ ಗರಿಷ್ಠ ಮಟ್ಟದಲ್ಲಿ ಯೇನೂ ಇಲ್ಲ.

ಕೋವಿಡ್‌ ಮತ್ತು ಲಾಕ್‌ಡೌನ್‌ ಕಾರಣದಿಂದಾಗಿ ವರಮಾನದಲ್ಲಿ ಆದ ಕೊರತೆಯನ್ನು ತುಂಬಿಕೊಳ್ಳುವ, ವರಮಾನವನ್ನು ಇನ್ನಷ್ಟು ಹೆಚ್ಚಿಸಿಕೊಳ್ಳುವ ಉದ್ದೇಶದಿಂದ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರಗಳು ಹೆಚ್ಚುವರಿಯಾಗಿ ವಿಧಿಸಿದ ತೆರಿಗೆ ಮತ್ತು ಸುಂಕದ ಕಾರಣದಿಂದಾಗಿಯೇ ಪೆಟ್ರೋಲ್, ಡೀಸೆಲ್ ಬೆಲೆಯು ಈ ಮಟ್ಟ ತಲುಪಿದೆ. ಇವುಗಳನ್ನು ಜಿಎಸ್‌ಟಿ ವ್ಯಾಪ್ತಿಗೆ ತಂದಲ್ಲಿ, ಗರಿಷ್ಠ ಶೇಕಡ 28ರಷ್ಟಕ್ಕಿಂತ ಹೆಚ್ಚಿನ ತೆರಿಗೆ ವಿಧಿಸಲು ಅವಕಾಶ ಇರುವುದಿಲ್ಲ, ತೆರಿಗೆಯು ದೇಶದಾದ್ಯಂತ ಒಂದೇ ಪ್ರಮಾಣದಲ್ಲಿ ಇರುತ್ತದೆ. ಆಗ ಇವುಗಳ ಬೆಲೆಯು ದೇಶಿ ಮಾರುಕಟ್ಟೆಯಲ್ಲಿ ತಗ್ಗಬಹುದು ಎಂಬ ನಿರೀಕ್ಷೆಯಿಂದ ಸಾರ್ವಜನಿಕರೂ ಹಲವು ಸಂಘ–ಸಂಸ್ಥೆಗಳೂ ಕೆಲವು ರಾಜಕೀಯ ಪಕ್ಷಗಳೂ ಇವುಗಳನ್ನು ಜಿಎಸ್‌ಟಿ ವ್ಯಾಪ್ತಿಗೆ ತರಬೇಕು ಎಂದು ಆಗ್ರಹಿಸಿದ್ದವು. ಆದರೆ, ಪೆಟ್ರೋಲ್ ಮತ್ತು ಡೀಸೆಲ್ ಸದ್ಯಕ್ಕಂತೂ ಜಿಎಸ್‌ಟಿ ವ್ಯಾಪ್ತಿಗೆ ಬರುವುದಿಲ್ಲ ಎಂಬುದು ಈಗ ಸ್ಪಷ್ಟವಾಗಿದೆ.

ಪೆಟ್ರೋಲ್, ಡೀಸೆಲ್, ಮದ್ಯ ರಾಜ್ಯಗಳಿಗೆ ವರಮಾನದ ಪ್ರಮುಖ ಮೂಲಗಳು. ಜಿಎಸ್‌ಟಿ ವ್ಯವಸ್ಥೆ ಜಾರಿಗೆ ಬಂದ ನಂತರವೂ ಈ ಉತ್ಪನ್ನಗಳನ್ನು ಅದರ ವ್ಯಾಪ್ತಿಯಿಂದ ಹೊರಗೆ ಇರಿಸಲಾಗಿದೆ. ತಮ್ಮ ವರಮಾನದ ಪ್ರಮುಖ ಮೂಲವಾಗಿರುವ ಈ ಉತ್ಪನ್ನಗಳನ್ನು ಜಿಎಸ್‌ಟಿಗೆ ಸೇರಿಸಿದರೆ, ರಾಜ್ಯಗಳಿಗೆ ಹೆಚ್ಚುವರಿ ವರಮಾನ ಸಂಗ್ರಹಕ್ಕೆ ದೊಡ್ಡ ಮೂಲಗಳೇ ಇರುವುದಿಲ್ಲ. ಹಾಗಾಗಿ, ಈ ಉತ್ಪನ್ನಗಳನ್ನು ಜಿಎಸ್‌ಟಿ ವ್ಯಾಪ್ತಿಗೆ ತರಲು ಯಾವ ರಾಜ್ಯವೂ ಮನಃಪೂರ್ವಕವಾಗಿ ಒಪ್ಪುವುದಿಲ್ಲ ಎಂಬುದು ಮಂಡಳಿಯ ಸಭೆಗೂ ಮೊದಲೇ ಖಚಿತವಾಗಿತ್ತು. ಮಂಡಳಿಯಲ್ಲಿ ಆಗಿರುವ ತೀರ್ಮಾನವು ನಿರೀಕ್ಷಿತವೇ.

ADVERTISEMENT

ಆದರೆ, ಈ ತೀರ್ಮಾನವು ಒಂದು ವಿಚಾರದಲ್ಲಿ ಸ್ಪಷ್ಟತೆ ಯನ್ನು ನೀಡಿದೆ – ತೈಲ ಬೆಲೆ ಇಳಿಕೆಯಾಗಬೇಕು ಎಂದಾದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಮುಂದಡಿ ಇರಿಸಬೇಕು ಎಂಬುದು ಸ್ಪಷ್ಟ. ಕಚ್ಚಾ ತೈಲ ಬೆಲೆಯು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಇಳಿಕೆಯಾದಾಗಲೆಲ್ಲ ದೇಶದಲ್ಲಿ ಪೆಟ್ರೋಲ್, ಡೀಸೆಲ್ ಮೇಲಿನ ಸುಂಕವನ್ನು ಹೆಚ್ಚಿಸಿ ಬೆಲೆ ಇಳಿಕೆಯ ಪ್ರಯೋಜನವು ಸಾರ್ವಜನಿಕರಿಗೆ ಸಿಗದಂತೆ ಮಾಡಲಾಗಿದೆ. ತೈಲ ಬೆಲೆಯನ್ನು ಸರ್ಕಾರದ ನಿಯಂತ್ರಣದಿಂದ ಮುಕ್ತಗೊಳಿಸಿದ ಸುಧಾರಣಾ ಕ್ರಮದ ಅಣಕದಂತೆ ಇದೆ ಇದು. ತೈಲ ಬೆಲೆ ಭಾರಿ ಪ್ರಮಾಣದಲ್ಲಿ ಏರಿಕೆ ಆಗಿರುವುದು ಜನರ ದೈನಂದಿನ ಬದುಕಿನ ಬಹುತೇಕ ವೆಚ್ಚಗಳು ಹೆಚ್ಚಾಗಲು ಮುಖ್ಯ ಕಾರಣ. ಬೆಲೆ ಏರಿಕೆಯು ಯಾವುದೇ ಚಲನಶೀಲ ಅರ್ಥ ವ್ಯವಸ್ಥೆಯ ಸೂಚಕ ಹೌದಾದರೂ, ಕೋವಿಡ್‌ ಮತ್ತು ಲಾಕ್‌ಡೌನ್‌ ಸಂದರ್ಭದಲ್ಲಿ ಈ ರೀತಿ ಆಗಬಾರದಿತ್ತು. ಅಂತಹ ಸಂವೇದನೆಯನ್ನು ಸರ್ಕಾರಗಳು ಹೊಂದಿರಬೇಕಿತ್ತು. ಉದ್ಯೋಗ ಸೃಷ್ಟಿ ಹಾಗೂ ಆದಾಯವು ಹಿಮ್ಮುಖ ಚಲನೆಯನ್ನು ಕಾಣುತ್ತಿದ್ದ ಸಂದರ್ಭದಲ್ಲಿ ದಿನನಿತ್ಯದ ವೆಚ್ಚಗಳು ಏರುಗತಿಯಲ್ಲಿ ಇದ್ದರೆ ಜನರ ಬದುಕು ದುರ್ಭರವಾಗುತ್ತದೆ ಎಂಬುದು ಆಳುವವರಿಗೆ ಗೊತ್ತಿರಬೇಕಿತ್ತು.

‘ತೈಲದ ಸುಂಕವನ್ನು ನಾವು ತಗ್ಗಿಸಿದರೆ ರಾಜ್ಯಗಳು ಸುಂಕ ಹೆಚ್ಚಿಸಿ ಬೆಲೆಯು ಮಾರುಕಟ್ಟೆಯಲ್ಲಿ ಕಡಿಮೆ ಆಗದಂತೆ ಮಾಡುತ್ತವೆ ಹಾಗೂ ತಮ್ಮ ಬೊಕ್ಕಸವನ್ನು ತುಂಬಿಸಿಕೊಳ್ಳುತ್ತವೆ’ ಎಂದು ಕೇಂದ್ರ ಹಣಕಾಸು ಸಚಿವರು ಈ ವರ್ಷದ ಆರಂಭದಲ್ಲಿ ಹೇಳಿಕೆ ನೀಡಿದ್ದರು. ಬೆಲೆ ಇಳಿಸುವ ಕೆಲಸವು ರಾಜ್ಯಗಳ ಕಡೆಯಿಂದ ಮೊದಲು ಆಗಬೇಕೋ ಕೇಂದ್ರದ ಕಡೆಯಿಂದಲೋ ಎಂಬ ಪ್ರಶ್ನೆಗೆ ಉತ್ತರ ಸಿಗದೆ, ಜನರ ಕಿಸೆ ಇನ್ನಷ್ಟು ಬರಿದಾಗುತ್ತ ಬಂದಿತ್ತು. ಜಿಎಸ್‌ಟಿ ಅಡಿ ಈ ಎರಡು ಉತ್ಪನ್ನಗಳನ್ನು ತಂದರೆ ಇವೆರಡು ಉತ್ಪನ್ನಗಳ ಬೆಲೆ ಇಳಿದೀತು ಎಂಬ ನಿರೀಕ್ಷೆ ಸದ್ಯಕ್ಕೆ ಬೇಡ ಎಂಬುದು ಜನರಿಗೂ ಈಗ ಮನವರಿಕೆ ಆಗಿದೆ.

ತೀರಾ ದುಬಾರಿ ಆಗಿರುವ ಪೆಟ್ರೋಲ್, ಡೀಸೆಲ್ ದರವನ್ನು ಇಳಿಸಲು ಕ್ರಮ ಕೈಗೊಳ್ಳುವುದು ಕೇಂದ್ರ ಹಾಗೂ ರಾಜ್ಯಗಳ ಸಮಾನ ಹೊಣೆ. ಇಬ್ಬರೂ ಒಬ್ಬರನ್ನು ಇನ್ನೊಬ್ಬರು ದೂಷಿಸುತ್ತ ಕುಳಿತುಕೊಳ್ಳುವುದರಿಂದ ಜನರಿಗೆ ಯಾವ ಉಪಕಾರವೂ ಆಗುವುದಿಲ್ಲ. ಎರಡೂ ಸರ್ಕಾರಗಳು ಪರಸ್ಪರ ಮಾತುಕತೆ ನಡೆಸಿ, ತೆರಿಗೆ ತಗ್ಗಿಸಿ ಬೆಲೆ ಇಳಿಕೆ ಆಗುವಂತೆ ಮಾಡಿದರೆ ಜನರ ಬದುಕು ತುಸುವಾದರೂ ಸಲೀಸಾದೀತು. ತೈಲ ಬೆಲೆ ತಗ್ಗಿಸಿ, ಇತರ ವಸ್ತುಗಳ ಬೆಲೆಯಲ್ಲಿಯೂ ಕೊಂಚ ಇಳಿಕೆ ಆದರೆ ಜನರ ಕೈಯಲ್ಲಿ ಒಂದಿಷ್ಟು ಹೆಚ್ಚು ಹಣ ಉಳಿಯಬಹುದು. ಅದನ್ನು ಅವರು ತಮ್ಮ ಸಾಲ ತೀರಿಸಲು ಅಥವಾ ಹೊಸ ಖರೀದಿಗಳಿಗೆ ಬಳಸಿಕೊಳ್ಳ ಬಹುದು. ಅದರ ಪ್ರಯೋಜನ ಸಿಗುವುದು ದೇಶದ ಅರ್ಥ ವ್ಯವಸ್ಥೆಗೆ. ಜನರ ಮೇಲೆ ತೆರಿಗೆ ಹೊರೆ ಹೆಚ್ಚಿಸುವುದಕ್ಕಿಂತ ಜನರ ಕೈಯಲ್ಲಿ ಹೆಚ್ಚು ಹಣ ಇರುವಂತೆ ಮಾಡಿ ವ್ಯವಸ್ಥೆಯನ್ನು ಕಟ್ಟುವುದು ಒಳಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.