ADVERTISEMENT

ಸಂಪಾದಕೀಯ | ವಿದ್ಯುತ್‌ ದರ ಏರಿಕೆ ನಿರ್ಧಾರ; ಗ್ರಾಹಕರಿಗೆ ಮತ್ತೊಂದು ಗುದ್ದು

​ಪ್ರಜಾವಾಣಿ ವಾರ್ತೆ
Published 10 ಜೂನ್ 2021, 19:30 IST
Last Updated 10 ಜೂನ್ 2021, 19:30 IST
ಸಂಪಾದಕೀಯ
ಸಂಪಾದಕೀಯ   

ದುಡಿಮೆಯೇ ಇಲ್ಲದೆ ಆದಾಯ ಕುಸಿತದಿಂದ ಜನರು ಕಂಗೆಟ್ಟಿರುವಾಗ ವಿದ್ಯುತ್‌ ದರ ಏರಿಕೆಯ ಮೂಲಕ ಮತ್ತಷ್ಟು ಹೊರೆ ಹೊರಿಸಲು ಕೆಇಆರ್‌ಸಿ ಹೊರಟಿರುವುದು ಸರ್ವಥಾ ಸರಿಯಲ್ಲ

ಕೊರೊನಾ ವೈರಾಣು ರಾಜ್ಯಕ್ಕೆ ಬಂದು ಒಂದೂಕಾಲು ವರ್ಷ ಕಳೆದಿದೆ. ಕೋವಿಡ್‌ ಎರಡನೇ ಅಲೆ ಈಗ ರಾಜ್ಯವನ್ನು ವ್ಯಾಪಿಸಿಕೊಂಡಿದೆ. ಸೋಂಕು ನಿಯಂತ್ರಣಕ್ಕಾಗಿ ರಾಜ್ಯದಲ್ಲಿ ಎರಡನೇ ಬಾರಿ ಲಾಕ್‌ಡೌನ್‌ ಜಾರಿಯಲ್ಲಿದೆ. 2020ರಲ್ಲಿ ಜಾರಿಗೊಳಿಸಿದ್ದ ಮೊದಲ ಲಾಕ್‌ಡೌನ್‌ನಲ್ಲಿ ಆರು ತಿಂಗಳಿಗೂ ಹೆಚ್ಚು ಕಾಲ ಎಲ್ಲ ವರ್ಗಗಳ ಜನ ಸಂಕಷ್ಟ ಅನುಭವಿಸಿದ್ದರು. ಸೇವಾ ವಲಯ, ಉತ್ಪಾದನಾ ವಲಯ ಸೇರಿದಂತೆ ಎಲ್ಲ ಕ್ಷೇತ್ರಗಳೂ ಕುಸಿತ ಅನುಭವಿಸಿದ್ದವು. ಚೇತರಿಕೆಯ ಹಾದಿಯಲ್ಲಿ ಇರುವಾಗಲೇ ಎರಡನೇ ಲಾಕ್‌ಡೌನ್‌ ಜಾರಿಯಲ್ಲಿದೆ. ದುಡಿಯುವ ವರ್ಗದ ಜನರು ಆದಾಯದ ಮೂಲವನ್ನೇ ಕಳೆದುಕೊಂಡು ಕಂಗಾಲಾಗಿದ್ದಾರೆ. ಉದ್ದಿಮೆಗಳಲ್ಲೂ ಚಟುವಟಿಕೆ ಕುಸಿದಿದೆ. ಈ ಸರಪಳಿಯು ಕೃಷಿ, ಕಟ್ಟಡ ನಿರ್ಮಾಣ ಸೇರಿದಂತೆ ಎಲ್ಲ ಕ್ಷೇತ್ರಗಳನ್ನೂ ವ್ಯಾಪಿಸಿದೆ. ಬಡವರು ಮತ್ತು ಮಧ್ಯಮ ವರ್ಗದ ಜನರಿಗೆ ಜೀವನ ನಿರ್ವಹಣೆಯೇ ಕಷ್ಟಕರ ಎಂಬ ಪರಿಸ್ಥಿತಿ ಇದೆ. ಇಂತಹ ಸನ್ನಿವೇಶದಲ್ಲಿ ಜನರ ಜೀವನ ವೆಚ್ಚವನ್ನು ಕಡಿಮೆ ಮಾಡುವುದಕ್ಕೆ ಪೂರಕವಾದ ಕ್ರಮ ಕೈಗೊಳ್ಳಬೇಕಾದುದು ಸರ್ಕಾರಗಳ ಜವಾಬ್ದಾರಿ. ಆದರೆ, ಕೋವಿಡ್‌ ಬಿಕ್ಕಟ್ಟಿನ ನಡುವೆಯೇ ಎರಡನೇ ಬಾರಿಗೆ ವಿದ್ಯುತ್‌ ದರ ಹೆಚ್ಚಳಕ್ಕೆ ರಾಜ್ಯ ಸರ್ಕಾರ ಅವಕಾಶ ಮಾಡಿಕೊಟ್ಟಿದೆ. ಪ್ರತೀ ಯೂನಿಟ್‌ ವಿದ್ಯುತ್‌ ದರದಲ್ಲಿ 40 ಪೈಸೆ ಹೆಚ್ಚಳ ಮಾಡುವ ತೀರ್ಮಾನವನ್ನು 2020ರ ನವೆಂಬರ್‌ನಲ್ಲಿ ಕೈಗೊಳ್ಳಲಾಗಿತ್ತು. ಏಳು ತಿಂಗಳಲ್ಲೇ ಮತ್ತೆ ಪ್ರತೀ ಯೂನಿಟ್‌ಗೆ ಸರಾಸರಿ 30 ಪೈಸೆ ದರ ಹೆಚ್ಚಿಸುವ ನಿರ್ಧಾರವನ್ನು ಕರ್ನಾಟಕ ವಿದ್ಯುತ್‌ ನಿಯಂತ್ರಣ ಆಯೋಗ (ಕೆಇಆರ್‌ಸಿ) ಕೈಗೊಂಡಿದೆ. ಏಪ್ರಿಲ್‌ 1ರಿಂದ ಪೂರ್ವಾನ್ವಯವಾಗುವಂತೆ ಈ ದರ ಹೆಚ್ಚಳ ಜಾರಿಯಾಗಲಿದೆ. ಎರಡು ತಿಂಗಳ ಅವಧಿಯ ಹಿಂಬಾಕಿ ವಸೂಲಿಗೂ ನಿರ್ಧಾರ ಕೈಗೊಳ್ಳಲಾಗಿದೆ. ಪೆಟ್ರೋಲಿಯಂ ಉತ್ಪನ್ನಗಳ ದರ ನಿರಂತರವಾಗಿ ಏರುತ್ತಿದೆ. ಅಡುಗೆ ಎಣ್ಣೆ, ಬೇಳೆ, ಕಾಳು ಸೇರಿದಂತೆ ಅಗತ್ಯ ವಸ್ತುಗಳ ಬೆಲೆಯಲ್ಲೂ ಭಾರಿ ಏರಿಕೆಯಾಗಿದೆ. ಲಾಕ್‌ಡೌನ್‌ ಸಮಯದಲ್ಲಿ ಬೇಡಿಕೆ ಮತ್ತು ಪೂರೈಕೆಯ ನಡುವಿನ ಅಂತರ ಹೆಚ್ಚಾಗಿ ದರ ಮತ್ತಷ್ಟು ಗಗನಮುಖಿಯಾಗಿದೆ. ದುಡಿಮೆಯೇ ಇಲ್ಲದೆ ಆದಾಯ ಕುಸಿತದಿಂದ ಜನರು ಕಂಗೆಟ್ಟಿರುವಾಗಲೇ ವಿದ್ಯುತ್‌ ದರ ಏರಿಕೆಯ ಮೂಲಕ ಮತ್ತಷ್ಟು ಹೊರೆ ಹೊರಿಸಲು ಕೆಇಆರ್‌ಸಿ ಹೊರಟಿರುವುದು ಸರ್ವಥಾ ಸರಿಯಲ್ಲ.

ರಾಜ್ಯ ಸರ್ಕಾರಿ ಸ್ವಾಮ್ಯದ ಐದು ವಿದ್ಯುತ್‌ ಸರಬರಾಜು ಕಂಪನಿಗಳು (ಎಸ್ಕಾಂ) ಮತ್ತು ಹುಕ್ಕೇರಿ ಗ್ರಾಮೀಣ ವಿದ್ಯುತ್‌ ಸಹಕಾರ ಸಂಘದ ಪ್ರಸಕ್ತ ವರ್ಷದ ಆದಾಯದಲ್ಲಿ ₹ 7,765.79 ಕೋಟಿಯಷ್ಟು ಕೊರತೆ ಆಗಲಿದೆ ಎಂಬ ಅಂದಾಜು ಇದೆ. ಅದರ ಆಧಾರದಲ್ಲಿ ಪ್ರತೀ ಯೂನಿಟ್‌ಗೆ ಸರಾಸರಿ ₹ 1.35 ದರ ಹೆಚ್ಚಿಸಬೇಕೆಂಬ ಬೇಡಿಕೆಯನ್ನು ಎಸ್ಕಾಂಗಳು ಸಲ್ಲಿಸಿದ್ದವು. ಕೋವಿಡ್‌ ನಿಯಂತ್ರಣ ಕ್ರಮಗಳ ನಡುವೆಯೇ ಈ ಅರ್ಜಿಗಳ ವಿಚಾರಣೆ ನಡೆಸಿದ ಕೆಇಆರ್‌ಸಿ, ಪ್ರತೀ ಯೂನಿಟ್‌ಗೆ ಸರಾಸರಿ 30 ಪೈಸೆ ಹೆಚ್ಚಳಕ್ಕೆ ಅನುಮತಿ ನೀಡಿದೆ. ಕೋವಿಡ್‌ ಕಾರಣದಿಂದ ವರಮಾನ ನಷ್ಟವಾಗಿರುವುದು, ಎಸ್ಕಾಂಗಳ ಕಾರ್ಯನಿರ್ವಹಣಾ ವೆಚ್ಚದಲ್ಲಿನ ಏರಿಕೆ, ಸಾಲದ ಹೊರೆ ಮತ್ತಿತರ ಕಾರಣಗಳಿಂದ ವಿದ್ಯುತ್‌ ದರ ಏರಿಕೆ ಅನಿವಾರ್ಯ ಎಂದು ಆಯೋಗ ಹೇಳಿದೆ. ಸಾರ್ವಜನಿಕ ವಲಯದ ಉದ್ದಿಮೆಗಳು ವಿವಿಧ ಕಾರಣಗಳಿಂದ ಅನುಭವಿಸುವ ನಷ್ಟ ಅಥವಾ ವರಮಾನದ ಕೊರತೆಯನ್ನು ಬಿಗಿ ಕ್ರಮಗಳ ಮೂಲಕ ತಪ್ಪಿಸುವುದು ಸರ್ಕಾರದ ಹೊಣೆಗಾರಿಕೆ. ಬದಲಿಗೆ, ಆ ಹೊರೆಯನ್ನು ಗ್ರಾಹಕರಿಗೆ ವರ್ಗಾಯಿಸುವ ಕ್ರಮ ಒಪ್ಪಲಾಗದು. ಕೋವಿಡ್‌ ಸಂಕಷ್ಟದಿಂದ ಜನರು ನಿತ್ಯದ ಜೀವನ ನಿರ್ವಹಿಸುವುದಕ್ಕೂ ಪರದಾಡುವ ಸ್ಥಿತಿಯಲ್ಲಿ ಇರುವಾಗ ಎಸ್ಕಾಂಗಳ ಹಿತವೊಂದನ್ನೇ ಗಮನಿಸುವುದಕ್ಕಿಂತ ಜನರ ಮೇಲಿನ ಆರ್ಥಿಕ ಹೊರೆ ತಗ್ಗಿಸುವುದೇ ಸರ್ಕಾರದ ಆದ್ಯತೆಯಾಗಬೇಕಿತ್ತು. ಕೇರಳ, ಆಂಧ್ರಪ್ರದೇಶ ಸೇರಿದಂತೆ ಕೆಲವು ರಾಜ್ಯಗಳು ಕೋವಿಡ್‌ ಸಂಕಷ್ಟದ ಅವಧಿಯಲ್ಲಿ ಕೆಲವು ತಿಂಗಳುಗಳ ವಿದ್ಯುತ್‌ ಬಿಲ್‌ ಮನ್ನಾ ಮಾಡಿವೆ. ಹಲವು ರಾಜ್ಯಗಳು ಲಾಕ್‌ಡೌನ್‌ ಅವಧಿಯಲ್ಲಿ ವಿದ್ಯುತ್‌ ಬಿಲ್ ಪಾವತಿ ಅವಧಿಯನ್ನು ವಿಸ್ತರಿಸಿವೆ. ಇಂತಹ ಸಂದರ್ಭದಲ್ಲಿ ಕರ್ನಾಟಕದಲ್ಲಿ ವಿದ್ಯುತ್‌ ದರ ಹೆಚ್ಚಿಸುವ ನಿರ್ಧಾರವು ಜನರ ಬದುಕಿನ ಹೊರೆಯನ್ನು ಇನ್ನಷ್ಟು ಹೆಚ್ಚಿಸುತ್ತದೆ. ರಾಜ್ಯ ಸರ್ಕಾರ ಮಧ್ಯಪ್ರವೇಶಿಸಿ, ವಿದ್ಯುತ್‌ ದರ ಏರಿಕೆ ನಿರ್ಧಾರದ ಕುರಿತು ಮರುಪರಿಶೀಲಿಸುವುದು ಜನಸ್ನೇಹಿ ನಡೆ ಆಗುತ್ತದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.