ADVERTISEMENT

ಸಂಪಾದಕೀಯ: ಟ್ವಿಟರ್‌ ಮೇಲೆ ಒತ್ತಡ ಹೇರಿಕೆ; ಸರ್ವಾಧಿಕಾರಿ ಧೋರಣೆ ಸಲ್ಲದು

​ಪ್ರಜಾವಾಣಿ ವಾರ್ತೆ
Published 27 ಮೇ 2021, 19:30 IST
Last Updated 27 ಮೇ 2021, 19:30 IST
ಸಂಪಾದಕೀಯ
ಸಂಪಾದಕೀಯ   

ಸರ್ಕಾರ ಮತ್ತು ಅಧಿಕಾರಸ್ಥ ಪಕ್ಷದ ನಾಯಕರು ತಮ್ಮ ಇಚ್ಛೆಯಂತೆಯೇ ಎಲ್ಲವೂ ನಡೆಯಬೇಕು ಎಂದು ಹಟ ಹಿಡಿಯಲು ತೊಡಗಿದರೆ ವ್ಯವಸ್ಥೆಯು ನಿರಂಕುಶ ಆಧಿಪತ್ಯವಾಗುತ್ತದೆ. ನೋಟು ರದ್ದತಿ, ಪೌರತ್ವ ತಿದ್ದುಪಡಿ ಕಾಯ್ದೆ, ಕೃಷಿ ಕಾಯ್ದೆಗಳು, ರೈತರ ಪ್ರತಿಭಟನೆ, ಇದಕ್ಕೆ ಸಂಬಂಧಿಸಿ ಪ್ರಕಟವಾದ ಟೂಲ್‌ಕಿಟ್‌ ಸೇರಿ ಹಲವು ವಿಚಾರಗಳಲ್ಲಿ ಕೇಂದ್ರ ಸರ್ಕಾರವು ಹಟಮಾರಿ ಧೋರಣೆ ಪ್ರದರ್ಶಿಸಿದೆ. ‘ಕಾಂಗ್ರೆಸ್‌ ಟೂಲ್‌ಕಿಟ್‌’ ವಿಷಯದಲ್ಲಿಯೂ ಕೇಂದ್ರ ಸರ್ಕಾರ ಮತ್ತು ಬಿಜೆಪಿಯು ಎಲ್ಲವೂ ತಮ್ಮ ಮೂಗಿನ ನೇರಕ್ಕೇ ಇರಲಿ ಎಂಬಂತೆ ನಡೆದುಕೊಂಡಿವೆಯೇ ಎಂಬ ಅನುಮಾನ ಮೂಡುತ್ತದೆ.

ಬಿಜೆಪಿ ವಕ್ತಾರ ಸಂಬಿತ್‌ ಪಾತ್ರಾ, ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಅವರು ‘ಕಾಂಗ್ರೆಸ್ ಟೂಲ್‌ಕಿಟ್‌’ ಅನ್ನು ಲಗತ್ತಿಸಿ ಮಾಡಿರುವ ಟ್ವೀಟ್‌ಗೆ ‘ತಿರುಚಿದ ದಾಖಲೆ’ ಎಂಬ ಹಣೆಪಟ್ಟಿಯನ್ನು ಟ್ವಿಟರ್‌ ಅಂಟಿಸಿದೆ. ಸಾಮಾಜಿಕ ಜಾಲತಾಣ ಸಂಸ್ಥೆ ಟ್ವಿಟರ್‌ ಇಂತಹ ಕ್ರಮ ಕೈಗೊಂಡಿದ್ದು ಇದೇ ಮೊದಲೇನೂ ಅಲ್ಲ. ಸುಳ್ಳು ಮತ್ತು ಆಕ್ಷೇಪಾರ್ಹವಾದ ಟ್ವೀಟ್‌ಗಳನ್ನು ಅಳಿಸಿ ಹಾಕಿದ, ಹಣೆಪಟ್ಟಿ ಅಂಟಿಸಿದ ಹಲವು ಪ್ರಕರಣಗಳು ಇವೆ. ಖಾತೆಯನ್ನು ಶಾಶ್ವತವಾಗಿ ಸ್ಥಗಿತಗೊಳಿಸಿದ ಉದಾಹರಣೆಯೂ ಇದೆ. ಪ್ರಧಾನಿ ನರೇಂದ್ರ ಮೋದಿ ಅವರ ವರ್ಚಸ್ಸು ಕುಗ್ಗಿಸಲು ಮತ್ತು ಸರ್ಕಾರದ ಕೋವಿಡ್‌ ನಿರ್ವಹಣೆಯನ್ನು ಟೀಕಿಸುವುದಕ್ಕಾಗಿ ಕಾಂಗ್ರೆಸ್‌ ಪಕ್ಷವು ರೂಪಿಸಿದೆ ಎನ್ನಲಾದ ಟೂಲ್‌ಕಿಟ್‌ ಅನ್ನು ಪಾತ್ರಾ ಅವರು ಇದೇ 18ರಂದು ಟ್ವೀಟ್‌ಗೆ ಲಗತ್ತಿಸಿದ್ದರು.

ತಂತ್ರಜ್ಞಾನ ಬಳಸಿ ನಡೆಸಿದ ಆಂತರಿಕ ತನಿಖೆ ಮತ್ತು ಹೊರಗಿನ ಪರಿಣತರ ಅಭಿಪ‍್ರಾಯ ಪಡೆದುಕೊಂಡು ಈ ಟೂಲ್‌ಕಿಟ್‌ ನಕಲಿ ಎಂದು ಟ್ವಿಟರ್‌ ಕಂಡುಕೊಂಡಿದೆ. ಕಾಂಗ್ರೆಸ್‌ ಪಕ್ಷವು ನೀಡಿದ ದೂರಿನಂತೆ ಪಾತ್ರಾ ಮತ್ತು ರವಿ ಅವರ ಟ್ವೀಟ್‌ಗಳನ್ನು ‘ತಿರುಚಿದ ಮಾಹಿತಿ’ ವರ್ಗಕ್ಕೆ ಸೇರಿಸಿದೆ. ಜಾಲತಾಣಗಳಲ್ಲಿ ಪ್ರಕಟವಾಗುವ ವಿಚಾರಗಳ ಸತ್ಯಾಸತ್ಯತೆ ಪರಿಶೀಲಿಸುವ ಹಲವು ವೇದಿಕೆಗಳು ಕೂಡ ‘ಟೂಲ್‌ಕಿಟ್‌ ನಕಲಿ’ ಎಂಬ ತೀರ್ಮಾನಕ್ಕೆ ಬಂದಿವೆ.

ADVERTISEMENT

ಆದರೆ, ಸರ್ಕಾರ ಇದು ಯಾವುದನ್ನೂ ಗಣನೆಗೆ ತೆಗೆದುಕೊಂಡಿಲ್ಲ. ತಿರುಚಿದ ಮಾಹಿತಿ ಎಂಬ ಹಣೆಪಟ್ಟಿಯನ್ನು ತೆಗೆಯಿರಿ ಎಂದು ಟ್ವಿಟರ್‌ ಮೇಲೆ ಒತ್ತಡ ಹೇರಿದ ಸರ್ಕಾರದ ಕ್ರಮ ಸರಿಯಾದುದಲ್ಲ. ಬಳಿಕ, ಟೂಲ್‌ಕಿಟ್‌ ‘ತಿರುಚಿದ ಮಾಹಿತಿ’ ಎಂಬ ನಿರ್ಧಾರಕ್ಕೆ ಬರಲು ಕಾರಣವೇನು ತಿಳಿಸಿ ಎಂದು ದೆಹಲಿ ಪೊಲೀಸರು ಟ್ವಿಟರ್‌ಗೆ ನೋಟಿಸ್‌ ನೀಡಿದ್ದಾರೆ. ದೆಹಲಿ ಮತ್ತು ಗುರುಗ್ರಾಮದಲ್ಲಿರುವ ಟ್ವಿಟರ್‌ ಕಚೇರಿಗೆ ಪೊಲೀಸರ ತಂಡವು ಭೇಟಿ ಕೊಟ್ಟು ನೋಟಿಸ್‌ ನೀಡಿದೆ. ಕಚೇರಿಯಲ್ಲಿ ಶೋಧ ನಡೆಸಲಾಗಿದೆ ಎಂದೂ ಹೇಳಲಾಗುತ್ತಿದೆ. ‘ಪೊಲೀಸರ ಹೆದರಿಸುವ ತಂತ್ರ’ದ ಬಗ್ಗೆ ಟ್ವಿಟರ್‌ ಕಳವಳ ವ್ಯಕ್ತಪಡಿಸಿದೆ.

ತನ್ನ ಗ್ರಾಹಕರ ಅಭಿವ್ಯಕ್ತಿ ಸ್ವಾತಂತ್ರ್ಯದ ರಕ್ಷಣೆಯ ಬಗ್ಗೆ ಆತಂಕ ಇದೆ ಎಂದಿದೆ. ಜಾಗತಿಕ ಮಟ್ಟದಲ್ಲಿ ಅನುಸರಿಸಲಾಗುತ್ತಿರುವ ನಿಯಮಗಳ ಜಾರಿಗೆ ಅಡ್ಡಿಪಡಿಸಿರುವುದು ಕಳವಳ ಮೂಡಿಸಿದೆ ಎಂದು ಹೇಳಿದೆ. ಸರ್ಕಾರದ ನಡವಳಿಕೆಯ ಹಿನ್ನೆಲೆಯಲ್ಲಿ ನೋಡಿದರೆ ಟ್ವಿಟರ್‌ನ ಈ ಹೇಳಿಕೆಯಲ್ಲಿ ಉತ್ಪ್ರೇಕ್ಷೆ ಇದೆ ಎಂದು ಅನ್ನಿಸುವುದಿಲ್ಲ. ಸರ್ಕಾರದ ನಡವಳಿಕೆಯು ಜಾಗತಿಕ ಮಟ್ಟದಲ್ಲಿ ಭಾರತದ ವರ್ಚಸ್ಸಿಗೆ ಧಕ್ಕೆ ಉಂಟು ಮಾಡಬಹುದು. ಸಹಿಷ್ಣುತೆಯ ವಿಚಾರದಲ್ಲಿ ಸರ್ಕಾರ ಮತ್ತು ಆಡಳಿತ ಪಕ್ಷವು ಇತರರಿಗೆ ಮಾದರಿಯಾಗಬೇಕು. ಆದರೆ, ತನ್ನತ್ತ ಬೆರಳು ತೋರಿದವರನ್ನು ನುಂಗಿ ಬಿಡುವ ಮನೋಭಾವ ಪ್ರದರ್ಶನವು ದೇಶದಲ್ಲಿ ಭೀತಿಯ ವಾತಾವರಣ ಸೃಷ್ಟಿಸುತ್ತದೆ ಎಂಬ ಎಚ್ಚರ ಸರ್ಕಾರ ನಡೆಸುವವರಿಗೆ ಬೇಕು. ಅಷ್ಟಕ್ಕೂ ಇದು ಪ್ರಜಾಪ್ರಭುತ್ವವೇ ಹೊರತು ಏಕಚಕ್ರಾಧಿಪತ್ಯ ಅಲ್ಲ.

ಇನ್ನೂ ಒಂದು ವಿಚಾರ. ಇದು ಟೂಲ್‌ಕಿಟ್‌ ಮತ್ತು ಟ್ವಿಟರ್‌ ಎಂದು ಹೇಳಿಕೊಂಡು ಆಟವಾಡಿಕೊಂಡಿರಬಹುದಾದ ಸಂದರ್ಭವೇ ಅಲ್ಲ. ಕೋವಿಡ್‌–19 ಪಿಡುಗಿನಿಂದ ದೇಶದ ಜನರು ತಲ್ಲಣಿಸಿದ್ದಾರೆ. ಜನರ ಜೀವ, ಜೀವನೋಪಾಯ ರಕ್ಷಣೆಯ ಬಗ್ಗೆಯೇ ಸರ್ಕಾರ ಹಗಲಿರುಳು ಯೋಚಿಸಬೇಕು. ಇಂತಹ ಹೊತ್ತಿನಲ್ಲಿಯೂ ವಿರೋಧ ಪಕ್ಷವನ್ನು ಹಣಿಯಬೇಕು, ಸಾಮಾಜಿಕ ಜಾಲತಾಣ ಸಂಸ್ಥೆಗಳು ತಾನು ಹೇಳಿದಂತೆ ಕುಣಿಯಬೇಕು ಎಂಬುದರತ್ತಲೇ ಸರ್ಕಾರವು ಗಮನ ಕೇಂದ್ರೀಕರಿಸುವುದು ಪ್ರಮಾದ. ಸುಭಿಕ್ಷದ ಕಾಲದಲ್ಲಿಯೂ ತೋರಬಾರದ ನಡವಳಿಕೆಯನ್ನು ಈಗಿನ ವಿಷಮ ಕಾಲಘಟ್ಟದಲ್ಲಿ ಸರ್ಕಾರ ತೋರಬಾರದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.