ADVERTISEMENT

ಸಂಪಾದಕೀಯ | ಶುಲ್ಕ ವಸೂಲಿ: ವಿದ್ಯಾರ್ಥಿಗಳ ಭವಿಷ್ಯದ ಜತೆ ಚೆಲ್ಲಾಟ ಬೇಡ

​ಪ್ರಜಾವಾಣಿ ವಾರ್ತೆ
Published 15 ಜುಲೈ 2021, 2:05 IST
Last Updated 15 ಜುಲೈ 2021, 2:05 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಖಾಸಗಿ ಶಾಲೆಗಳ ಬೋಧನಾ ಶುಲ್ಕಕ್ಕೆ ಸಂಬಂಧಿಸಿದ ವಿಷಯವು ಕಳೆದ ವರ್ಷದಿಂದ ಈಚೆಗೆ ಪದೇ ಪದೇ ಚರ್ಚೆ ಆಗುತ್ತಲೇ ಇದೆ. ಈ ಹಿಂದೆ, ಶುಲ್ಕ ವಸೂಲಿಗಾಗಿ ಕೆಲವು ಖಾಸಗಿ ಶಾಲಾ ಆಡಳಿತ ಮಂಡಳಿಗಳು ಆನ್‌ಲೈನ್‌ ತರಗತಿ ಸ್ಥಗಿತ, ವರ್ಗಾವಣೆ ಪ್ರಮಾಣಪತ್ರ ನೀಡಲು ನಿರಾಕರಣೆಯಂತಹ ಒತ್ತಡ ತಂತ್ರಗಳನ್ನು ಪ್ರಯೋಗಿಸಿದ್ದವು. ಇದೀಗ ಶುಲ್ಕ ಭರಿಸದ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿ ಗಳಿಗೆ ಪರೀಕ್ಷಾ ಪ್ರವೇಶಪತ್ರ (ಹಾಲ್‌ ಟಿಕೆಟ್‌) ಕೊಡುವುದಿಲ್ಲ ಎಂದು ಪಟ್ಟು ಹಿಡಿದಿವೆ. ಮಕ್ಕಳ ಭವಿಷ್ಯದೊಂದಿಗೆ ಚೆಲ್ಲಾಟವಾಡುವ ಇಂತಹ ಅಮಾನವೀಯ ಕ್ರಮ ಯಾರೂ ಒಪ್ಪುವಂಥದ್ದಲ್ಲ. ಪರೀಕ್ಷೆ ನಡೆಸುವುದೇ ಕಷ್ಟ ಎನಿಸಿರುವ ಸಮಯ ಇದು. ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ರಾಜ್ಯ ಶಿಕ್ಷಣ ಇಲಾಖೆಯು ಹೇಗೋ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದು, ವಿದ್ಯಾರ್ಥಿಗಳು ಕೂಡ ತಯಾರಿ ನಡೆಸಿದ್ದಾರೆ. ಮಕ್ಕಳ ಶೈಕ್ಷಣಿಕ ಭವಿಷ್ಯದ ಕುರಿತು ಪೋಷಕರು ಆತಂಕಿತರಾಗಿರುವ ಈ ಸನ್ನಿವೇಶದಲ್ಲಿ ಖಾಸಗಿ ಶಾಲಾ ಆಡಳಿತ ಮಂಡಳಿಗಳು ಶುಲ್ಕ ವಸೂಲಿಯ ಆತುರಕ್ಕೆ ಬೀಳದೆ ಸಮಯದ ಔಚಿತ್ಯವನ್ನು ಅರಿತು ವರ್ತಿಸಬೇಕಿತ್ತು. ಶಾಲೆ ಮತ್ತು ವಿದ್ಯಾರ್ಥಿಗಳ ಸಂಬಂಧ ಶುಲ್ಕ ಪಾವತಿಗಷ್ಟೇ ಸೀಮಿತವಾದ ‘ವ್ಯಾವಹಾರಿಕ’ ಸ್ವರೂಪದ್ದಲ್ಲ ಎನ್ನುವುದನ್ನೂ ಅರಿಯಬೇಕಿತ್ತು. ಆದರೆ, ಅವುಗಳು ಮಾನವೀಯತೆಯನ್ನು ಮರೆತಿರುವುದು ದುರದೃಷ್ಟಕರ. ಬಿಕ್ಕಟ್ಟಿನ ಸಂದರ್ಭದಲ್ಲಿ ಸಂಯಮದ ನಡೆ ಮೂಲಕ ಹೃದಯವಂತಿಕೆ ಮೆರೆಯಬೇಕಿದ್ದ ಶಾಲಾ ಆಡಳಿತ ಮಂಡಳಿಗಳು, ಈಗ ಹಿಡಿದಿರುವ ಹಾದಿ ಯಾವ ರೀತಿಯಲ್ಲೂ ಸಮರ್ಥನೀಯವಲ್ಲ.

ಕೋವಿಡ್‌ ಕಾರಣದಿಂದ ಶಾಲೆಗಳು ಮುಚ್ಚಿದ್ದರಿಂದ 2020–21ನೇ ಸಾಲಿನಲ್ಲಿ ಶೇಕಡ 70ರಷ್ಟು ಬೋಧನಾ ಶುಲ್ಕವನ್ನು ಮಾತ್ರ ಪಡೆಯಬೇಕು ಎಂದು ಶಿಕ್ಷಣ ಇಲಾಖೆಯು ಜನವರಿಯಲ್ಲಿ ಸುತ್ತೋಲೆ ಹೊರಡಿಸಿದೆ. ಶುಲ್ಕ ಕಡಿತಗೊಳಿಸಿರುವ ಇಲಾಖೆಯ ಈ ಕ್ರಮವನ್ನು ಖಾಸಗಿ ಶಾಲಾ ಆಡಳಿತ ಮಂಡಳಿಗಳ ಒಕ್ಕೂಟ ಹೈಕೋರ್ಟ್‌ನಲ್ಲಿ ಪ್ರಶ್ನಿಸಿದೆ. ಕೋರ್ಟ್‌ನಿಂದ ಇದುವರೆಗೆ ಅಂತಿಮ ಆದೇಶ ಹೊರಬಿದ್ದಿಲ್ಲ. ಅಂದರೆ ಸದ್ಯದ ಸನ್ನಿವೇಶದಲ್ಲಿ ಶಿಕ್ಷಣ ಇಲಾಖೆಯ ಸುತ್ತೋಲೆ ಪ್ರಕಾರ, ಗರಿಷ್ಠ ಶೇ 70ರಷ್ಟು ಬೋಧನಾ ಶುಲ್ಕವನ್ನು ಪಡೆಯಲು ಅವಕಾಶವಿದೆ. ಆದರೆ, ಈಗ ಶುಲ್ಕವನ್ನು ಪೂರ್ಣ ಪ್ರಮಾಣದಲ್ಲಿ ಪಾವತಿಸಬೇಕು, ಸರ್ಕಾರದ ಕ್ರಮವನ್ನು ಹೈಕೋರ್ಟ್‌ ಎತ್ತಿ ಹಿಡಿದಲ್ಲಿ ಹೆಚ್ಚುವರಿ ಮೊತ್ತವನ್ನು ಹಿಂದಿರುಗಿಸಲಾಗುವುದು ಎಂದು ಹಲವು ಶಾಲೆಗಳು ಒತ್ತಡ ಹಾಕುತ್ತಿವೆ ಎಂದು ವರದಿಯಾಗಿದೆ. ಇದು ಯಾವ ಸೀಮೆಯ ನ್ಯಾಯ? ಶೇ 100ರಷ್ಟು ಬೋಧನಾ ಶುಲ್ಕ ಸಂಗ್ರಹಿಸಲು ಮುಂದೆ ಒಂದುವೇಳೆ ಹೈಕೋರ್ಟ್‌ ಅನುಮತಿ ಕೊಟ್ಟಿದ್ದೇ ಆದಲ್ಲಿ ಬಾಕಿ ಶುಲ್ಕ ಕಟ್ಟಿಸಿಕೊಳ್ಳಲು ಖಾಸಗಿ ಶಾಲೆಗಳಿಗೆ ಅವಕಾಶ ಇದ್ದೇ ಇದೆ. ಅಂಕಪಟ್ಟಿ ಹಾಗೂ ವರ್ಗಾವಣೆ ಪ್ರಮಾಣಪತ್ರ ಪಡೆಯಲು ವಿದ್ಯಾರ್ಥಿಗಳು ಮತ್ತೆ ಶಾಲೆಗೆ ಬರಲೇಬೇಕು. ‘ಸಿಬ್ಬಂದಿಗೆ ಸಂಬಳ ನೀಡಲು ಹಣವಿಲ್ಲ; ಇತರ ಆಡಳಿತಾತ್ಮಕ ವೆಚ್ಚಗಳನ್ನು ಭರಿಸಲು ಆಗುತ್ತಿಲ್ಲ’ ಎನ್ನುವುದು ಒಕ್ಕೂಟದ ಪ್ರತಿನಿಧಿಗಳ ಅಳಲು. ಹೌದು, ಆಡಳಿತ ಮಂಡಳಿಗಳ ಮೇಲೆ ಆರ್ಥಿಕ ಹೊರೆಯಿದೆ. ಪ್ರತೀ ತಿಂಗಳು ನಿಗದಿತ ಪ್ರಮಾಣದ ಖರ್ಚನ್ನು ಅವುಗಳು ಭರಿಸಲೇಬೇಕು. ಅದನ್ನು ಯಾರೂ ಅಲ್ಲಗಳೆಯಲಾರರು. ಹಾಗೆಯೇ ‘ಕೋವಿಡ್‌ನ ಈ ಕಾಲಘಟ್ಟದಲ್ಲಿ ಮೊದಲೇ ಸಂಕಷ್ಟದಲ್ಲಿರುವ ಪೋಷಕರಿಗೆ ಪೂರ್ಣವಾಗಿ ಶುಲ್ಕ ಪಾವತಿಸಲು ಒತ್ತಡ ಹೇರುತ್ತಿರುವುದು ಅನ್ಯಾಯ’ ಎಂದು ಆರ್‌ಟಿಇ ವಿದ್ಯಾರ್ಥಿಗಳು ಹಾಗೂ ಪೋಷಕರ ಸಂಘ ಆಕ್ರೋಶ ವ್ಯಕ್ತಪಡಿಸಿದೆ. ಎರಡೂ ಬಣಗಳ ವಾದದಲ್ಲಿ ತಥ್ಯ ಇಲ್ಲದಿಲ್ಲ.

ಎಲ್ಲರೂ ಸಂಕಷ್ಟ ಎದುರಿಸುತ್ತಿರುವ ಈ ಸನ್ನಿವೇಶದಲ್ಲಿ ಯಾರಿಗೂ ಹೆಚ್ಚಿನ ಹೊರೆ ಆಗದಂತಹ ಸಂಕಷ್ಟ ನಿವಾರಣೆ ಸೂತ್ರ ಇಂದಿನ ಜರೂರು. ಶಾಲಾ ಆಡಳಿತ ಮಂಡಳಿಗಳು ಪರೀಕ್ಷೆಯ ಪ್ರವೇಶಪತ್ರ ಕೊಡುವಂತಹ ಸಂದರ್ಭವನ್ನು ಶುಲ್ಕ ವಸೂಲಿಗಾಗಿ ಬಳಸಿಕೊಳ್ಳದೆ ಪೋಷಕರಿಗೆ ಸಮಯಾವಕಾಶ ನೀಡಬೇಕು. ಶಾಲೆಗಳನ್ನು ನಡೆಸುವ ಕಷ್ಟವನ್ನು ಅರ್ಥ ಮಾಡಿಕೊಂಡು ಸಾಮರ್ಥ್ಯವಿರುವ ಪೋಷಕ ರಾದರೂ ಶುಲ್ಕವನ್ನು ಭರಿಸಬೇಕು. ‘ಶುಲ್ಕ ಪಾವತಿಸದ ಮಕ್ಕಳಿಗೆ ಪ್ರವೇಶಪತ್ರ ಇಲ್ಲ’ ಎಂಬ ನಿಲುವಿನಿಂದ ಆಡಳಿತ ಮಂಡಳಿಗಳು ತಕ್ಷಣ ಹಿಂದೆ ಸರಿಯಬೇಕು. ‘ಶುಲ್ಕ ಪಾವತಿಸದ ಕಾರಣಕ್ಕಾಗಿ ಕೆಲವು ಶಾಲೆಗಳಲ್ಲಿ ಹಾಲ್‌ ಟಿಕೆಟ್‌ ನೀಡಲು ನಿರಾಕರಿಸಿರುವುದು ಗಮನಕ್ಕೆ ಬಂದಿದೆ’ ಎಂದು ಶಿಕ್ಷಣ ಸಚಿವರು ಹೇಳಿದ್ದಾರೆ. ವಿಷಯ ಗೊತ್ತಿದ್ದರೂ ಅಂತಹ ಶಾಲೆಗಳ ವಿರುದ್ಧ ಕ್ರಮ ಕೈಗೊಳ್ಳಬೇಕಾದರೆ ಪೋಷಕರು ಡಿಡಿಪಿಐ ಇಲ್ಲವೆ ಬಿಇಒಗೆ ದೂರು ನೀಡಬೇಕು ಎನ್ನುವ ಸಲಹೆಯನ್ನೂ ಅವರು ನೀಡಿದ್ದಾರೆ! ದೂರಿಗಾಗಿ ಕಾಯದೆ, ಪ್ರವೇಶಪತ್ರ ನೀಡದ ಶಾಲೆಗಳನ್ನು ಸರ್ಕಾರವೇ ಪತ್ತೆ ಹಚ್ಚಿ ದಂಡ ಪ್ರಯೋಗಿಸಬೇಕು. ಯಾವ ವಿದ್ಯಾರ್ಥಿಗೂ ಪ್ರವೇಶಪತ್ರ ನಿರಾಕರಿಸಬಾರದು. ಅದನ್ನು ಖಚಿತಪಡಿಸಿಕೊಳ್ಳುವುದು ಶಿಕ್ಷಣ ಇಲಾಖೆಯ ಜವಾಬ್ದಾರಿ. ಆಡಳಿತ ಮಂಡಳಿಗಳಿಂದ ಪೋಷಕರು ಕಿರುಕುಳ ಅನುಭವಿಸದಂತೆ ನೋಡಿಕೊಳ್ಳುವುದು ಸಹ ಅದರ ಕರ್ತವ್ಯ. ಶುಲ್ಕ ನಿಗದಿ ವಿಚಾರ ಕೋರ್ಟ್‌ ಮುಂದಿದೆ ಎಂದು ಶಿಕ್ಷಣ ಇಲಾಖೆಯು ಕೈಚೆಲ್ಲಿ ಕೂರಬಾರದು. ಜನವರಿಯಲ್ಲಿ ತಾನೇ ಹೊರಡಿಸಿರುವ ಸುತ್ತೋಲೆ ಅನುಷ್ಠಾನಕ್ಕೆ ಬರುವಂತೆ ನೋಡಿಕೊಳ್ಳಬೇಕು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.