ADVERTISEMENT

ಬಡ್ಡಿದರ ಕಡಿತ ಆದೇಶ ವಾಪಸ್ ಕಣ್ತಪ್ಪಿನ ಕಾರಣ ನಂಬಬಹುದೇ?

​ಪ್ರಜಾವಾಣಿ ವಾರ್ತೆ
Published 1 ಏಪ್ರಿಲ್ 2021, 19:30 IST
Last Updated 1 ಏಪ್ರಿಲ್ 2021, 19:30 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ಭಾರತದಲ್ಲಿ ಚಿಲ್ಲರೆ ಹಣದುಬ್ಬರ ದರವು ತೀರಾ ಅಹಿತಕರ ಮಟ್ಟದಲ್ಲಿ ಇದೆ ಎಂದು ಮೂಡಿಸ್ ಅನಾಲಿಟಿಕ್ಸ್ ಮಂಗಳವಾರ ಹೇಳಿದೆ. ಚಿಲ್ಲರೆ ಹಣದುಬ್ಬರ ಪ್ರಮಾಣಕ್ಕೂ ಸಣ್ಣ ಉಳಿತಾಯ ಯೋಜನೆಗಳ ಬಡ್ಡಿ ದರಕ್ಕೂ ನೇರ ಸಂಬಂಧ ಇದೆ. ಬಡ್ಡಿಯ ಪ್ರಮಾಣವು ಚಿಲ್ಲರೆ ಹಣದುಬ್ಬರ ಪ್ರಮಾಣಕ್ಕಿಂತ ಕಡಿಮೆ ಆದಲ್ಲಿ, ಹಣವನ್ನು ಉಳಿಸುವುದೇ ನಿರರ್ಥಕವೆಂದು ಅನ್ನಿಸುವ ಅಪಾಯ ಇರುತ್ತದೆ. ದೇಶದಲ್ಲಿ ಚಿಲ್ಲರೆ ಹಣದುಬ್ಬರ ದರವು ಫೆಬ್ರುವರಿಯಲ್ಲಿ ಶೇಕಡ 5ರ ಗಡಿ ದಾಟಿದೆ. ಇಂಧನ ದರ ತೀರಾ ದುಬಾರಿ ಆಗಿರುವ ಕಾರಣ, ಮುಂದಿನ ದಿನಗಳಲ್ಲಿ ಹಣದುಬ್ಬರ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದ್ದೇ ಇದೆ. ಇಂತಹ ಪರಿಸ್ಥಿತಿಯಲ್ಲಿ, ಸಣ್ಣ ಉಳಿತಾಯ ಯೋಜನೆಗಳ ಮೇಲಿನ ಬಡ್ಡಿಯನ್ನು ಭಾರಿ ಪ್ರಮಾಣದಲ್ಲಿ ಕಡಿತ ಮಾಡಿದ ಸುದ್ದಿಯು ಸಿಡಿಲಿನಂತೆ ಎರಗಿತು. ಬಡ್ಡಿ ಕಡಿತದ ತೀರ್ಮಾನವನ್ನು ಕೇಂದ್ರ ಹಣಕಾಸು ಸಚಿವಾಲಯವು ಬಹಿರಂಗಪಡಿಸಿದ್ದು ಬುಧವಾರ ಸಂಜೆ. ಆದರೆ, ಗುರುವಾರ ಬೆಳಿಗ್ಗೆ ಎಂಟು ಗಂಟೆಯ ಸುಮಾರಿಗೆ ಟ್ವೀಟ್ ಮಾಡಿದ ಸಚಿವೆ ನಿರ್ಮಲಾ ಸೀತಾರಾಮನ್, ಬಡ್ಡಿ ದರ ಕಡಿತದ ತೀರ್ಮಾನವನ್ನು ಹಿಂಪಡೆದಿರುವುದಾಗಿ ಹೇಳಿದರು. ಬಡ್ಡಿ ದರ ಕಡಿತದ ಆದೇಶವು ‘ಕಣ್ತಪ್ಪಿನಿಂದಾಗಿ’ ಆಗಿತ್ತು ಎಂದರು! ಕೋಟ್ಯಂತರ ಜನರ ಬದುಕಿನ ಮೇಲೆ ಈಗಿನ ಸಂದರ್ಭದಲ್ಲಿ ಕೆಟ್ಟ ಪರಿಣಾಮ ಬೀರುವ ಆದೇಶವೊಂದನ್ನು ಹಿಂದಕ್ಕೆ ಪಡೆಯಲಾಯಿತು ಎಂದು ಸಂಭ್ರಮಿಸಬೇಕೇ ಅಥವಾ ಕೇಂದ್ರದ ಅತ್ಯಂತ ಮಹತ್ವದ ಸಚಿವಾಲಯಗಳಲ್ಲಿ ಒಂದಾಗಿರುವ ಹಣಕಾಸು ಸಚಿವಾಲಯವು ಕಣ್ತಪ್ಪಿನಿಂದ ಹೀಗೆಲ್ಲಾ ಆದೇಶ ಹೊರಡಿಸುವ ಸ್ಥಿತಿ ತಲುಪಿದೆ ಎಂದು ವಿಷಾದಿಸಬೇಕೇ? ಕಣ್ತಪ್ಪಿನಿಂದಾಗಿ ಇಂತಹ ಆದೇಶ ಹೊರಡಿಸಲಾಗಿತ್ತು ಎಂಬುದು ನಿಜವೇ ಆದರೆ, ಆ ತಪ್ಪು ಆಗಿದ್ದು ಯಾರಿಂದ ಎಂಬುದನ್ನು ಗುರುತಿಸಿ, ಅವರ ವಿರುದ್ಧ ಕ್ರಮ ಜರುಗಿಸಲಾಗುತ್ತದೆಯೇ? ಕೇರಳ, ತಮಿಳುನಾಡು, ಪಶ್ಚಿಮ ಬಂಗಾಳ ಸೇರಿದಂತೆ ಕೆಲವು ರಾಜ್ಯಗಳಲ್ಲಿ ಚುನಾವಣೆ ನಡೆಯುತ್ತಿದೆ. ಸಣ್ಣ ಉಳಿತಾಯ ಯೋಜನೆಗಳ ಬಡ್ಡಿ ದರವನ್ನು ಈ ಸಂದರ್ಭದಲ್ಲಿ ಭಾರಿ ಪ್ರಮಾಣದಲ್ಲಿ ತಗ್ಗಿಸಿದರೆ, ಅದು ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳಿಗೆ ತೊಡರುಗಾಲಾಗಿ ಪರಿಣಮಿಸಬಹುದು ಎಂಬ ರಾಜಕೀಯ ಲೆಕ್ಕಾಚಾರವು ಸಂಜೆ ನೀಡಿದ ಆದೇಶವನ್ನು ಕೆಲವೇ ತಾಸುಗಳಲ್ಲಿ ದಿಢೀರ್‌ ಎಂದು ಹಿಂದಕ್ಕೆ ಪಡೆದಿರುವುದರ ಹಿಂದೆ ಕೆಲಸ ಮಾಡಿರಬಹುದು ಎಂಬ ವಿಶ್ಲೇಷಣೆಗಳನ್ನು ಸಾರಾಸಗಟಾಗಿ ತಳ್ಳಿಹಾಕಲಾಗದಂತಹ ಸ್ಥಿತಿಯನ್ನು ಅಧಿಕಾರಸ್ಥರೇ ಸೃಷ್ಟಿಸಿಕೊಂಡಿದ್ದಾರೆ.

ಈ ಚುನಾವಣೆ ಪ್ರಕ್ರಿಯೆ ಪೂರ್ಣಗೊಂಡ ನಂತರ, ಜುಲೈನಿಂದ ಆರಂಭವಾಗುವ ಮುಂದಿನ ತ್ರೈಮಾಸಿಕದಲ್ಲಿ ಇದೇ ಪ್ರಮಾಣದಲ್ಲಿ ಕೇಂದ್ರವು ಬಡ್ಡಿ ದರ ಕಡಿಮೆ ಮಾಡುವುದಿಲ್ಲ ಎಂದು ನಂಬಬಹುದೇ? ಸಣ್ಣ ಉಳಿತಾಯ ಯೋಜನೆಗಳಲ್ಲಿ ಮಾಡುವ ಹೂಡಿಕೆ ಅತ್ಯಂತ ಸುಭದ್ರ. ಹಾಗಾಗಿಯೇ ಕೋಟ್ಯಂತರ ಜನರಿಗೆ ಇಂತಹ ಯೋಜನೆಗಳು ಹೂಡಿಕೆಯ ಮೊದಲ ಆಯ್ಕೆ. ಇಲ್ಲಿ ಸಿಗುವುದಕ್ಕಿಂತ ಹೆಚ್ಚಿನ ಲಾಭ ತಂದುಕೊಡಬಹುದಾದ ಈಕ್ವಿಟಿ ಆಧಾರಿತ ವ್ಯವಸ್ಥಿತ ಹೂಡಿಕೆ ಯೋಜನೆಗಳು (ಎಸ್‌ಐಪಿ) ದೇಶದಲ್ಲಿ ಇವೆ ಎಂಬುದು ನಿಜ. ಈಕ್ವಿಟಿ ಮಾರುಕಟ್ಟೆ ಮೇಲೆ ನೇರವಾಗಿ ಹೂಡಿಕೆ ಮಾಡಿದರೆ ಜನಸಾಮಾನ್ಯರು ದೊಡ್ಡ ಪ್ರಮಾಣದಲ್ಲಿ ಲಾಭ ಗಳಿಸಬಹುದಾದ ಅವಕಾಶ ಕೂಡ ಇದೆ. ಸಾಂಪ್ರದಾಯಿಕ ಉಳಿತಾಯ ಯೋಜನೆಗಳಿಗಿಂತ ಹೆಚ್ಚಿನ ಲಾಭ ತಂದುಕೊಡಬಹುದಾದ ಈಕ್ವಿಟಿ, ಸಾಲಪತ್ರ ಹಾಗೂ ಇವೆರಡನ್ನೂ ಒಳಗೊಂಡಿರುವ ಯೋಜನೆಗಳಲ್ಲಿ ಹೂಡಿಕೆ ಮಾಡುವ ಭಾರತೀಯರ ಸಂಖ್ಯೆ ನಗಣ್ಯ. 130 ಕೋಟಿಗೂ ಹೆಚ್ಚಿನ ಜನಸಂಖ್ಯೆಯ ದೇಶದಲ್ಲಿ ಇರುವ ಮ್ಯೂಚುವಲ್‌ ಫಂಡ್‌ ಖಾತೆಗಳ ಸಂಖ್ಯೆ 9.62 ಕೋಟಿ ಮಾತ್ರ (ಒಟ್ಟು ಜನಸಂಖ್ಯೆಗೆ ಹೋಲಿಸಿದರೆ ಶೇ 7.4ರಷ್ಟು. ಒಬ್ಬರು ಒಂದಕ್ಕಿಂತ ಹೆಚ್ಚು ಖಾತೆ ಹೊಂದಬಹುದು. ಹಾಗಾಗಿ, 9.62 ಕೋಟಿ ಜನ ಹಣಕಾಸಿನ ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿದ್ದಾರೆ ಎನ್ನಲಾಗದು). ಈಕ್ವಿಟಿ ಹೂಡಿಕೆಗೆ ಅಗತ್ಯವಿರುವ ಹಣಕಾಸಿನ ಸಾಕ್ಷರತೆ ನಮ್ಮಲ್ಲಿ ಕಡಿಮೆ, ಈ ಬಗೆಯ ಹೂಡಿಕೆಗಳ ಬಗ್ಗೆ ಸಕಾರಣಗಳ ಆತಂಕ ಜನರಲ್ಲಿ ಇದೆ. ಹೀಗಾಗಿಯೇ ಜನ ಸಣ್ಣ ಉಳಿತಾಯ ಯೋಜನೆಗಳ ಜೊತೆ ಭಾವನಾತ್ಮಕ ನಂಟೊಂದನ್ನು ಕೂಡ ಬೆಳೆಸಿಕೊಂಡಿದ್ದಾರೆ. ಆ ಯೋಜನೆಗಳನ್ನು ನೆಚ್ಚಿಕೊಂಡು ತಮ್ಮ ಬದುಕನ್ನು ಕಟ್ಟಿಕೊಂಡಿರುತ್ತಾರೆ. ಇಂಥವುಗಳ ವಿಚಾರದಲ್ಲಿ ‘ಕಣ್ತಪ್ಪಿನ ಆಟ’ವಾಡುವುದು ಎಳ್ಳಷ್ಟೂ ಸರಿಯಲ್ಲ. ಕೇಂದ್ರ ಸರ್ಕಾರಕ್ಕೆ ಬಡ್ಡಿ ದರಗಳನ್ನು ತಗ್ಗಿಸಬೇಕು ಎಂಬ ಹಂಬಲ ಇದೆ ಎಂಬುದು ಸ್ಪಷ್ಟ. ಆದರೆ, ಸರ್ಕಾರವು ಹಣದುಬ್ಬರ ದರವನ್ನು ತಾನೇ ನಿಗದಿ ಮಾಡಿಕೊಂಡಿರುವ ಶೇಕಡ 4ಕ್ಕಿಂತ ಕಡಿಮೆ ಮಟ್ಟಕ್ಕೆ ತಾರದೆಯೇ, ಉಳಿತಾಯ ಯೋಜನೆಗಳ ಬಡ್ಡಿ ದರವನ್ನು ಶೇಕಡ 4.4 ಅಥವಾ ಶೇಕಡ 5ರ ಮಟ್ಟಕ್ಕೆ ಇಳಿಸುವುದು ಉಳಿತಾಯ ಪ್ರವೃತ್ತಿಯೇ ತಪ್ಪು ಎಂಬ ಸಂದೇಶ ರವಾನಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT