ADVERTISEMENT

ರಾಜಕೀಯ ದ್ವೇಷ ಸಾಧನೆಗೆ ಸಿಬಿಐ ಬಳಕೆ: ಕೇಂದ್ರಕ್ಕೆ ಭೂಷಣವಲ್ಲ

​ಪ್ರಜಾವಾಣಿ ವಾರ್ತೆ
Published 18 ಮೇ 2021, 19:30 IST
Last Updated 18 ಮೇ 2021, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನಾರದಾ ಮಾರುವೇಷದ ಕಾರ್ಯಾಚರಣೆಯ ಲಂಚ ಪ್ರಕರಣವನ್ನು ಮುಂದಿಟ್ಟುಕೊಂಡು ಪಶ್ಚಿಮ ಬಂಗಾಳದಲ್ಲಿ ಆಡಳಿತಾರೂಢ ತೃಣಮೂಲ ಕಾಂಗ್ರೆಸ್‌ (ಟಿಎಂಸಿ) ಪಕ್ಷಕ್ಕೆ ಮುಜುಗರ ಉಂಟುಮಾಡಲು ಬಿಜೆಪಿ ನೇತೃತ್ವದ ಕೇಂದ್ರದ ಎನ್‌ಡಿಎ ಸರ್ಕಾರ ಯತ್ನಿಸುತ್ತಿದೆ ಎಂಬ ಆರೋಪಗಳಿಗೆ ಪುಷ್ಟಿ ನೀಡುವಂತಿದೆ ಸಿಬಿಐ ನಡೆ. ವಿಧಾನಸಭೆಗೆ ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಟಿಎಂಸಿಗೆ ಭಾರಿ ಗೆಲುವು ಸಿಕ್ಕಿದೆ. ಮಮತಾ ಬ್ಯಾನರ್ಜಿ ಅವರು ಮೂರನೆಯ ಅವಧಿಗೆ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಬೆನ್ನಿಗೇ ಸಿಬಿಐ ಅಧಿಕಾರಿಗಳು ಟಿಎಂಸಿ ಮುಖಂಡರನ್ನು ಬಂಧಿಸಿದ್ದಾರೆ. ಸ್ವತಂತ್ರ ತನಿಖಾ ಸಂಸ್ಥೆಯಾದ ಸಿಬಿಐಯನ್ನು ರಾಜಕೀಯ ದ್ವೇಷ ಸಾಧನೆಗೆ ಬಳಸಿಕೊಳ್ಳಲಾಗಿದೆ ಎಂಬುದಕ್ಕೆ ಇಂಬು ಕೊಡುವ ಹಲವು ಅಂಶಗಳು ಈ ಪ್ರಕರಣದಲ್ಲಿ ಕಾಣಿಸುತ್ತಿವೆ. ಕೇಂದ್ರ ಭದ್ರತಾ ಪಡೆಗಳ ಜೊತೆಗೆ ಬಂದ ಸಿಬಿಐ ಅಧಿಕಾರಿಗಳು ಸಚಿವರಾದ ಫಿರ್ಹಾದ್ ಹಕೀಮ್ ಮತ್ತು ಸುಬ್ರತಾ ಮುಖರ್ಜಿ, ಶಾಸಕ ಮದನ್ ಮಿತ್ರಾ ಹಾಗೂ ಟಿಎಂಸಿಯ ಮಾಜಿ ಮುಖಂಡ ಸೋವನ್ ಚಟರ್ಜಿ ಅವರನ್ನು ನಾರದಾ ಪ್ರಕರಣದಲ್ಲಿ ಬಂಧಿಸಿದ್ದಾರೆ. ಇದು 2014ರ ಪ್ರಕರಣ. ನಾರದಾ ಸುದ್ದಿ ಪೋರ್ಟಲ್‍ನ ಪತ್ರಕರ್ತರೊಬ್ಬರು ಉದ್ಯಮಿಯ ಮಾರುವೇಷದಲ್ಲಿ ಕಾರ್ಯಾಚರಣೆ ನಡೆಸಿದ್ದರು. ದೆಹಲಿಯಿಂದ ಕೋಲ್ಕತ್ತಕ್ಕೆ ಬಂದ ‘ಉದ್ಯಮಿ’, ತಮಗೆ ಪಶ್ಚಿಮ ಬಂಗಾಳದಲ್ಲಿ ಬಂಡವಾಳ ಹೂಡಿಕೆಗೆ ಅವಕಾಶ ನೀಡಬೇಕೆಂದು ಕೋರಿ ಆಗಿನ ಸರ್ಕಾರದ ನಾಲ್ವರು ಸಚಿವರು, ಒಬ್ಬ ಶಾಸಕ ಮತ್ತು ಒಬ್ಬ ಪೊಲೀಸ್ ಅಧಿಕಾರಿಗೆ ₹4 ಲಕ್ಷದಿಂದ 5 ಲಕ್ಷ ಲಂಚ ನೀಡಿದ್ದರು ಎನ್ನಲಾದ ಪ್ರಕರಣವಿದು. ಲಂಚ ನೀಡುವಿಕೆಯು ಕ್ಯಾಮೆರಾದಲ್ಲಿ ಸೆರೆಯಾಗಿತ್ತು. 2016ರ ರಾಜ್ಯ ವಿಧಾನಸಭಾ ಚುನಾವಣೆಗೆ ಕೆಲವೇ ದಿನಗಳ ಮೊದಲು ಈ ವಿಡಿಯೊ ಬಹಿರಂಗವಾಗಿತ್ತು. ಹೀಗಾಗಿ ಕಾರ್ಯಾಚರಣೆಯ ಹಿಂದೆ ರಾಜಕೀಯ ದುರುದ್ದೇಶವಿದೆ ಎಂದು ಆಗ ಆರೋಪಿಸಲಾಗಿತ್ತು. ಈ ಪ್ರಕರಣದ ತನಿಖೆ ನಡೆಸುವಂತೆ ಸಿಬಿಐಗೆ ಕೋಲ್ಕತ್ತ ಹೈಕೋರ್ಟ್‌ 2017ರಲ್ಲಿ ಆದೇಶ ನೀಡಿತ್ತು. ಬಂಧಿಸಲಾಗಿರುವ ನಾಲ್ವರಿಗೂ ನ್ಯಾಯಾಲಯವು ಜಾಮೀನು ನೀಡಿತ್ತು. ಆದರೆ, ಇದಕ್ಕೆ ಹೈಕೋರ್ಟ್‌ನಿಂದ ಸಿಬಿಐ ತಡೆಯಾಜ್ಞೆ ತಂದಿದೆ.

ಈ ಬಂಧನವನ್ನು ಖಂಡಿಸಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರೇ ಸಿಬಿಐಯ ಕೋಲ್ಕತ್ತ ಕಚೇರಿಯ ಮುಂದೆ ಧರಣಿ ನಡೆಸಿದುದು ಪ್ರಕರಣದ ರಾಜಕೀಯ ಆಯಾಮಗಳನ್ನು ಎತ್ತಿ ತೋರಿದೆ. ಈಗ ಬಿಜೆಪಿಯಲ್ಲಿ ಇರುವ ಮುಕುಲ್‌ ರಾಯ್‌ ಮತ್ತು ಪಶ್ಚಿಮ ಬಂಗಾಳ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸುವೇಂದು ಅಧಿಕಾರಿ ಅವರ ಹೆಸರೂ ಎಫ್‌ಐಆರ್‌
ನಲ್ಲಿ ಇದೆ. ಎಫ್‌ಐಆರ್ ಪ್ರಕಾರ, ಮುಕುಲ್‌ ರಾಯ್‌ ಅವರು ಮೊದಲ ಆರೋಪಿ. ಸಿಬಿಐ ಈ ಇಬ್ಬರನ್ನು ಬಂಧಿಸಿಲ್ಲ ಅಥವಾ ತನಿಖೆಗೂ ಒಳಪಡಿಸಿಲ್ಲ. ನಾಲ್ವರು ಮುಖಂಡರ ಬಂಧನದ ಹಿಂದೆ ರಾಜಕೀಯ ದುರುದ್ದೇಶ ಇದೆ ಎಂಬುದಕ್ಕೆ ಇದು ಪುಷ್ಟಿ ಕೊಡುತ್ತದೆ. ಬಂಧಿತರಲ್ಲಿ ಒಬ್ಬರಾದ ಸೋವನ್‌ ಚಟರ್ಜಿ ಅವರು ಟಿಎಂಸಿ ಬಿಟ್ಟು 2019ರಲ್ಲಿ ಬಿಜೆಪಿ ಸೇರಿದ್ದರು. ಆದರೆ ಈ ಮಾರ್ಚ್‌ನಲ್ಲಿ ಅವರು ಬಿಜೆಪಿಗೆ ರಾಜೀನಾಮೆ ನೀಡಿದ್ದಾರೆ. ಅವರು ಬಿಜೆಪಿ ತೊರೆದದ್ದೇ ಬಂಧನಕ್ಕೆ ಕಾರಣ ಎಂದು ಹೇಳಲಾಗುತ್ತಿದೆ. ಸಂಸದರಾಗಿದ್ದ ಸುವೇಂದು ಅಧಿಕಾರಿ ಹಾಗೂ ಇನ್ನಿತರ ಮೂವರನ್ನು ವಿಚಾರಣೆಗೆ ಒಳಪಡಿಸಲು ಅನುಮತಿ ಕೋರಿ 2019ರ ಏಪ್ರಿಲ್‌ನಲ್ಲಿ ಲೋಕಸಭೆಯ ಸ್ಪೀಕರ್‌ ಅವರಿಗೆ ಪತ್ರ ಬರೆಯಲಾಗಿದೆ. ಈವರೆಗೂ ಅನುಮತಿ ದೊರೆತಿಲ್ಲ ಎಂದು ಸಿಬಿಐ ಅಧಿಕಾರಿಗಳು ಈಗ ನೆಪ ಹೇಳತೊಡಗಿದ್ದಾರೆ. ನಾರದಾ ಲಂಚ ಪ್ರಕರಣದಲ್ಲಿ ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕು ಎನ್ನುವುದರಲ್ಲಿ ಎರಡು ಮಾತಿಲ್ಲ. ರಾಜಕೀಯ ದ್ವೇಷ ಸಾಧನೆಗೆ ಈ ಪ್ರಕರಣವನ್ನು ಬಳಸಿಕೊಳ್ಳುವುದು, ಬಿಜೆಪಿ ಮುಖಂಡರನ್ನು ಪ್ರಕರಣದಿಂದ ಕೈಬಿಡುವುದು, ಸಿಬಿಐ ದುರುಪಯೋಗವು ಸರಿಯಾದ ನಡವಳಿಕೆ ಅಲ್ಲ. ಕೇಂದ್ರದ ಆಡಳಿತಾರೂಢ ಪಕ್ಷದ ಕೈಗೊಂಬೆಯಂತೆ ಸಿಬಿಐ ವರ್ತಿಸುತ್ತಿದೆ ಎಂಬ ಆರೋಪ ಹಲವು ವರ್ಷಗಳಿಂದ ಇದೆ. ಅದು ನಿಜ ಎನ್ನುವಂತೆ ಸಿಬಿಐ ಹಲವು ಬಾರಿ ವರ್ತಿಸಿದೆ. ತನ್ನ ಹೆಸರಿಗೆ ಪದೇ ಪದೇ ಕಳಂಕ ಮೆತ್ತಿಕೊಳ್ಳುವ ಮೂಲಕ ಈ ಸಂಸ್ಥೆಯು ತನ್ನ ವಿಶ್ವಾಸಾರ್ಹತೆಯನ್ನೇ ಪಾತಾಳಕ್ಕೆ ಇಳಿಸಿದೆ. ಅಧಿಕಾರಸ್ಥರ ಕಣ್ಸನ್ನೆಗೆ ಅನುಗುಣವಾಗಿ ವರ್ತಿಸುವುದನ್ನು ಸಿಬಿಐ ನಿಲ್ಲಿಸಬೇಕು. ಬೆನ್ನುಹುರಿ ಗಟ್ಟಿಯಾಗಿರುವ ಸಂಸ್ಥೆಯಾಗಿ ಕೆಲಸ ನಿರ್ವಹಿಸಬೇಕು. ಸಿಬಿಐ ಅಂದರೆ ‘ಕಾಂಗ್ರೆಸ್ ಬ್ಯೂರೊ ಆಫ್ ಇನ್ವೆಸ್ಟಿಗೇಷನ್’ ಎಂದು ಬಿಜೆಪಿ ಆರೋಪಿಸುತ್ತಿತ್ತು. ಈಗ ಅದೇ ಬಿಜೆಪಿ ಕಣ್ಣಿಗೆ ರಾಚುವಂತೆ ಸಿಬಿಐನ ದುರ್ಬಳಕೆಯಲ್ಲಿ ತೊಡಗಿರುವುದಕ್ಕೆ ಹಲವು ನಿದರ್ಶನಗಳನ್ನು ನೀಡಬಹುದು. ಪಕ್ಷಗಳು ಹೇಳಿದಂತೆ ಕೇಳಿದರೆ ಹಾಳಾಗುವುದು ತನ್ನ ವರ್ಚಸ್ಸು ಎಂಬುದು ಸಿಬಿಐಗೂ ಅರ್ಥ ಆಗಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT