ADVERTISEMENT

ಸಂಪಾದಕೀಯ | ಅಸಹನೀಯ ಬೆಲೆ ಏರಿಕೆ; ತೈಲೋತ್ಪನ್ನಗಳ ದರ ತಗ್ಗಿಸಿ

​ಪ್ರಜಾವಾಣಿ ವಾರ್ತೆ
Published 9 ಜೂನ್ 2021, 19:30 IST
Last Updated 9 ಜೂನ್ 2021, 19:30 IST
ತೈಲ ಬೆಲೆ ಏರಿಕೆ–ಪ್ರಾತಿನಿಧಿಕ ಚಿತ್ರ
ತೈಲ ಬೆಲೆ ಏರಿಕೆ–ಪ್ರಾತಿನಿಧಿಕ ಚಿತ್ರ   

ಹಣದುಬ್ಬರ ಕಡಿಮೆ ಆಗದ ಹೊರತು ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚುವುದಿಲ್ಲ. ಅದಕ್ಕೆ ಮೊದಲ ಹೆಜ್ಜೆಯಾಗಿ ತೈಲೋತ್ಪನ್ನಗಳ ಬೆಲೆ ಇಳಿಕೆ ಆಗಬೇಕು

ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯು ಸಾರ್ವಕಾಲಿಕ ಗರಿಷ್ಠ ಮಟ್ಟದಲ್ಲಿ ಇದೆ. ಪೆಟ್ರೋಲ್ ಬೆಲೆಯು ದೇಶದ ಹಲವೆಡೆ ಲೀಟರ್‌ಗೆ ₹ 100ರ ಗಡಿಯನ್ನು ದಾಟಿದೆ. ಡೀಸೆಲ್ ಬೆಲೆ ಕೂಡ ಲೀಟರ್‌ಗೆ ₹ 100 ಆಗುವತ್ತ ಹೆಜ್ಜೆ ಇರಿಸಿದೆ. ಬೆಂಗಳೂರಿನಲ್ಲಿ ಪೆಟ್ರೋಲ್ ಬೆಲೆಯು ಕಳೆದ ಒಂದು ವರ್ಷದ ಅವಧಿಯಲ್ಲಿ ಶೇಕಡ 30ಕ್ಕಿಂತ ಹೆಚ್ಚು ಏರಿಕೆ ಕಂಡಿದೆ. ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯು ಅಗತ್ಯ ವಸ್ತುಗಳ ಪಟ್ಟಿಯಲ್ಲಿ ಬರುವ ಅಷ್ಟೂ ವಸ್ತುಗಳ ಬೆಲೆಯಲ್ಲಿ ಏರಿಕೆ ಆಗುವಂತೆ ಮಾಡುತ್ತದೆ. ದೇಶದ ತೈಲ ಬೆಲೆ ಎಷ್ಟಿರಬೇಕು ಎಂಬುದನ್ನು ನಿರ್ಧರಿಸುವುದು ಮಾರುಕಟ್ಟೆ ಶಕ್ತಿಗಳು ಎಂಬುದು ಬಾಯಿಮಾತಿಗಷ್ಟೇ ಸತ್ಯ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆ ತಗ್ಗಿದಾಗ ಕೇಂದ್ರ ಸರ್ಕಾರವು ದೇಶಿ ಮಾರುಕಟ್ಟೆಯಲ್ಲಿ ತೈಲದ ಮೇಲಿನ ಎಕ್ಸೈಸ್ ಸುಂಕವನ್ನು ಜಾಸ್ತಿ ಮಾಡಿ, ಕಚ್ಚಾ ತೈಲದ ಬೆಲೆ ಇಳಿಕೆಯ ಪ್ರಯೋಜನವು ಗ್ರಾಹಕರಿಗೆ ಸಿಗದಂತೆ ಮಾಡಿದ್ದು ಇದೆ. ಕೆಲವೆಡೆ ರಾಜ್ಯ ಸರ್ಕಾರಗಳು ಮೌಲ್ಯವರ್ಧಿತ ತೆರಿಗೆ (ವ್ಯಾಟ್‌) ಪ್ರಮಾಣವನ್ನು ಹೆಚ್ಚಿಸಿ, ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿನ ಬೆಲೆ ಇಳಿಕೆಯ ಪ್ರಯೋಜನವು ದೇಶಿ ಮಾರುಕಟ್ಟೆಯಲ್ಲಿ ಲಭ್ಯವಾಗದಂತೆ ಮಾಡುವುದೂ ಇದೆ. ಪೆಟ್ರೋಲ್ ಹಾಗೂ ಡೀಸೆಲ್ ಮೇಲಿನ ಬೆಲೆ ಇಳಿಕೆಯ ಕೆಲಸವನ್ನು ಮೊದಲು ಮಾಡಬೇಕಿರುವುದು ರಾಜ್ಯ ಸರ್ಕಾರಗಳೋ ಕೇಂದ್ರ ಸರ್ಕಾರವೋ ಎಂಬ ಚರ್ಚೆಯೂ ಆಳುವ ವರ್ಗದಲ್ಲಿ ನಡೆದಿದ್ದಿದೆ. ಆದರೆ, ಉತ್ತರ ಸಿಕ್ಕಿಲ್ಲ. ‘ನಾವು ಕಡಿಮೆ ಮಾಡಿದರೆ, ರಾಜ್ಯ ಸರ್ಕಾರಗಳು ತೆರಿಗೆ ಜಾಸ್ತಿ ಮಾಡುತ್ತವೆ’ ಎಂದು ಕೇಂದ್ರ ಸರ್ಕಾರದ ಹಿರಿಯ ಸಚಿವರೊಬ್ಬರು ಹೇಳಿದ್ದಿದೆ. ಇಷ್ಟರ ನಡುವೆ ಬಡವಾಗುತ್ತಿರುವುದು ಜನಸಾಮಾನ್ಯರ ಬದುಕು. ತೈಲೋತ್ಪನ್ನಗಳ ಬೆಲೆ ಏರಿಕೆ ಆದ ಪ್ರಮಾಣದಲ್ಲಿ ಜನಸಾಮಾನ್ಯರ ಆದಾಯವು ಒಂದು ವರ್ಷದಲ್ಲಿ ಏರಿಕೆ ಕಂಡಿಲ್ಲ ಎನ್ನುವುದು ಸಾಮಾನ್ಯ ಜ್ಞಾನ.

ಎಣ್ಣೆಕಾಳುಗಳು, ಖಾದ್ಯತೈಲ, ವಿವಿಧ ಧಾನ್ಯಗಳು, ಕೆಲವು ತರಕಾರಿ, ಹಣ್ಣು, ಮೀನು–ಮಾಂಸ ಮತ್ತು ಮೊಟ್ಟೆಯಂತಹ ತೀರಾ ಅಗತ್ಯ ವಸ್ತುಗಳ ಬೆಲೆಯಲ್ಲಿ ಹೆಚ್ಚಳ ಆಗಿದೆ. ಇವೆಲ್ಲವುಗಳಿಗೆ ಕಾರಣ ಮಾರುಕಟ್ಟೆ ಶಕ್ತಿಗಳು ಎಂದು ಸರ್ಕಾರಗಳು ಸಬೂಬು ಹೇಳುವಂತಿಲ್ಲ. ಮಾರುಕಟ್ಟೆಯಲ್ಲಿ ತಮ್ಮ ಕೌಶಲಕ್ಕೆ ಅನುಗುಣವಾಗಿ ಹಣ ಸಂಪಾದಿಸಿಕೊಳ್ಳುವ ಅವಕಾಶವನ್ನು ಕೋವಿಡ್‌ ಸಾಂಕ್ರಾಮಿಕ ಹಾಗೂ ಲಾಕ್‌ಡೌನ್‌ ಕ್ರಮಗಳು ಜನರಿಂದ ಕಿತ್ತುಕೊಂಡಿವೆ. ಮಾರುಕಟ್ಟೆಯು ಸಹಜವಾಗಿ ಇದ್ದಿದ್ದರೆ, ಜನ ತಮ್ಮ ಜೀವನಕ್ಕೆ ಅಗತ್ಯವಿರುವಷ್ಟು ಹಣವನ್ನು ತಾವೇ ಸಂಪಾದಿಸಿಕೊಳ್ಳುವ ಅವಕಾಶವಾದರೂ ಇರುತ್ತಿತ್ತು. ಆದರೆ, ಈಗಿನ ಸ್ಥಿತಿಯು ದುಡಿಮೆಯ ವಿಚಾರದಲ್ಲಿ ತೀವ್ರ ಅಸಮಾನತೆಯನ್ನು ಸೃಷ್ಟಿಸಿದೆ – ಕೆಲವರು ಮನೆಯಲ್ಲೇ ಕುಳಿತು ಕೆಲಸ ಮಾಡುತ್ತಿದ್ದಾರೆ, ಹಲವರಿಗೆ ಕನಿಷ್ಠ ಮೊತ್ತವನ್ನೂ ದುಡಿದುಕೊಳ್ಳಲಾಗದ ಸ್ಥಿತಿ ಎದುರಾಗಿದೆ. ಇಂತಹ ಸಂದರ್ಭದಲ್ಲಿ ಸರ್ಕಾರಗಳು ಮುಂದೆ ನಿಂತು ಅಗತ್ಯ ವಸ್ತುಗಳ ಬೆಲೆಯನ್ನು ನಿಯಂತ್ರಿಸಬೇಕು. ಬೆಲೆ ಏರಿಕೆಗೆ ಕಾರಣ ಏನೇ ಇದ್ದರೂ ಅದನ್ನು ಗುರುತಿಸಿ, ಸಮಸ್ಯೆಯನ್ನು ಪರಿಹರಿಸಬೇಕು. ಎಲ್ಲಕ್ಕಿಂತ ಮುಖ್ಯವಾಗಿ, ತೈಲೋತ್ಪನ್ನಗಳ ಬೆಲೆಯನ್ನು ಗಣನೀಯವಾಗಿ ತಗ್ಗಿಸಲೇಬೇಕು. ಅದು ಕಡಿಮೆ ಆಗದಿದ್ದರೆ ಹಣದುಬ್ಬರ ನಿಯಂತ್ರಣಕ್ಕೆ ಬರುವುದಿಲ್ಲ ಎನ್ನುವ ಅಭಿಪ್ರಾಯವನ್ನು ಭಾರತೀಯ ರಿಸರ್ವ್ ಬ್ಯಾಂಕ್‌ನ ಹಣಕಾಸು ನೀತಿ ಸಮಿತಿಯು ಕೂಡ ವ್ಯಕ್ತಪಡಿಸಿದೆ. ಆದಾಯದ ಮೂಲಗಳೇ ಬತ್ತಿಹೋಗಿರುವ ಈಗಿನ ವಿಷಮ ಸಂದರ್ಭದಲ್ಲಿ ಅಸಹನೀಯ ಎಂದು ಅನಿಸುತ್ತಿರುವ ಹಣದುಬ್ಬರ ಪ್ರಮಾಣ ತಗ್ಗಿಸುವುದು ಸರ್ಕಾರಗಳ ಆದ್ಯತೆಯ ಕೆಲಸ ಆಗಬೇಕು. ಹಣದುಬ್ಬರ ಕಡಿಮೆ ಆಗದ ಹೊರತು ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚುವುದಿಲ್ಲ. ಅದಕ್ಕೆ ಮೊದಲ ಹೆಜ್ಜೆಯಾಗಿ ತೈಲೋತ್ಪನ್ನಗಳ ಬೆಲೆ ಇಳಿಕೆ ಆಗಬೇಕು. ದೇಶದಲ್ಲಿ ತೈಲೋತ್ಪನ್ನಗಳ ಬೆಲೆಯನ್ನು ನಿಯಂತ್ರಣ ಮುಕ್ತಗೊಳಿಸಿದಾಗ, ‘ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬೆಲೆ ಇಳಿಕೆ ಆದರೆ, ದೇಶದಲ್ಲಿಯೂ ಬೆಲೆ ತಗ್ಗುತ್ತದೆ’ ಎಂಬ ಆಶ್ವಾಸನೆ ನೀಡಲಾಗಿತ್ತು. ಆದರೆ ವಾಸ್ತವದಲ್ಲಿ ಹಾಗೆ ಆಗಲಿಲ್ಲ. ಈಗಲಾದರೂ ತೆರಿಗೆಯ ಪ್ರಮಾಣ ತಗ್ಗಿಸಿ, ಬೆಲೆ ಇಳಿಕೆಗೆ ಗಮನ ನೀಡಬೇಕು. ಈ ಕೆಲಸವನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಏಕಕಾಲದಲ್ಲಿ ಮಾಡುವತ್ತ ಗಮನ ಹರಿಸಬಹುದು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.