ADVERTISEMENT

ಸಂಪಾದಕೀಯ: ವಿನೋದ್ ದುವಾ ಪ್ರಕರಣ ಕಾರ್ಮುಗಿಲ ಅಂಚಿನ ಬೆಳ್ಳಿರೇಖೆ?

​ಪ್ರಜಾವಾಣಿ ವಾರ್ತೆ
Published 4 ಜೂನ್ 2021, 20:15 IST
Last Updated 4 ಜೂನ್ 2021, 20:15 IST
   

ಯಾವುದೇ ಟೀಕೆಯನ್ನು ಎರಡು ರೀತಿಗಳಲ್ಲಿ ವರ್ಗೀಕರಿಸಬಹುದು. ಸದಾಶಯದ ಟೀಕೆ ಹಾಗೂ ದುರುದ್ದೇಶದಿಂದ ಕೂಡಿದ ಟೀಕೆ. ಸದಾಶಯದಿಂದ ಮಾಡಿದ ಟೀಕೆಗಳ ಹಿಂದೆ ವ್ಯವಸ್ಥೆಯ ಬಗ್ಗೆ, ಜನರ ಬಗ್ಗೆ ಅಪಾರ ಕಾಳಜಿ ಇರುತ್ತದೆ. ಚಲನಶೀಲ ಪ್ರಜಾತಂತ್ರ ವ್ಯವಸ್ಥೆಯಲ್ಲಿ ಇಂತಹ ಟೀಕೆಗಳು ಅಪೇಕ್ಷಣೀಯ. ಭಾರತದ ಸಂದರ್ಭದಲ್ಲಿ, ಬಹುಮತದಿಂದ ಅಧಿಕಾರಕ್ಕೆ ಬಂದ ಸರ್ಕಾರಗಳು ಟೀಕೆಗಳಿಗೆ ಅತ್ಯಂತ ಅಸಹಿಷ್ಣುಗಳಾಗಿ ಪರಿವರ್ತನೆ ಕಂಡಿದ್ದನ್ನು ಗುರುತಿಸಬಹುದು. ಇದಕ್ಕೆ ಪಕ್ಷಗಳ ಭೇದ ಇಲ್ಲ. ಸರ್ಕಾರಗಳನ್ನು ಟೀಕೆ ಮಾಡುವುದು ಇಂತಹ ಪ್ರಭುತ್ವಗಳಿಗೆ ದೇಶದ್ರೋಹದ ರೀತಿಯಲ್ಲಿ ಕಾಣಿಸಲು ಆರಂಭಿಸುತ್ತದೆ. ದೇಶ ಸಂಕಷ್ಟಕ್ಕೆ ಸಿಲುಕಿದಾಗ, ದೇಶದ ಮೇಲಿನ ಪ್ರೀತಿಯಿಂದ ಸರ್ಕಾರವನ್ನು ಪ್ರಜೆ ಟೀಕಿಸುತ್ತಾನೆ, ಸರ್ಕಾರ ಇನ್ನಷ್ಟು ಸಂವೇದನಾಶೀಲವಾಗಿ ವರ್ತಿಸಲಿ ಎಂದು ಬಯಸುತ್ತಾನೆ ಎಂಬುದು ಇಂತಹ ಸರ್ಕಾರಗಳಿಗೆ ಅರ್ಥವಾಗುವುದಿಲ್ಲ. ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸುವುದು, ದೇಶಕ್ಕೆ ದ್ರೋಹ ಎಸಗುವುದಕ್ಕೆ ಸಮ ಎಂದು ಸರ್ಕಾರಗಳು ಗ್ರಹಿಸುತ್ತವೆ. ‘ದೇಶ’ವೆಂದರೆ ‘ಪಕ್ಷ, ಅದರ ಸಿದ್ಧಾಂತ, ಅದರ ನಾಯಕ’ ಎಂದು ಭಾವಿಸುವವರಿಗೆ ಟೀಕೆಗಳನ್ನು ಅರ್ಥ ಮಾಡಿಕೊಳ್ಳಬೇಕಾದ ಬಗೆ ಯಾವುದು ಎಂಬುದು ಗೊತ್ತಾಗುವುದಿಲ್ಲ. ಈ ರೀತಿ ಆದಾಗ, ದೇಶದ್ರೋಹವು ಶಿಕ್ಷಾರ್ಹವೆಂದು ಹೇಳುವ, ಭಾರತೀಯ ದಂಡಸಂಹಿತೆಯ (ಐಪಿಸಿ) ಸೆಕ್ಷನ್ 124(ಎ) ಮತ್ತೆ ಮತ್ತೆ ಬಳಕೆಯಾಗುತ್ತದೆ. ಪತ್ರಕರ್ತ ವಿನೋದ್ ದುವಾ ವಿರುದ್ಧ ದಾಖಲಾಗಿದ್ದ ದೇಶದ್ರೋಹದ ಪ್ರಕರಣ ಇದಕ್ಕೆ ಒಂದು ಉದಾಹರಣೆ. ಕೋವಿಡ್‌–19 ಸಾಂಕ್ರಾಮಿಕದಿಂದಾಗಿ ಎದುರಾದ ಪರಿಸ್ಥಿತಿಯನ್ನು ನಿಭಾಯಿಸಲು ಸರ್ಕಾರ ವಿಫಲವಾಗಿದೆ ಎಂದು ಅವರು ಟೀಕಿಸಿದ ಪರಿಣಾಮವಾಗಿ, ದೇಶದ್ರೋಹದ ಆರೋಪ ಎದುರಿಸಬೇಕಾಯಿತು! ಹಾಗಾದರೆ, ಕನಿಷ್ಠ ಚಿಕಿತ್ಸೆಯೂ ಸಿಗದೆ ಕೋವಿಡ್‌ಪೀಡಿತರು ಅಸುನೀಗಿದಾಗ, ಅದಕ್ಕೆ ನೇರ ಹೊಣೆಯಾಗಿರುವ ಸರ್ಕಾರವನ್ನು ಟೀಕಿಸಬಾರದೇ? ಇಂತಹ ಸಂದರ್ಭಗಳಲ್ಲಿ ಟೀಕೆಯ ಹಿಂದೆ ಇರುವುದು ಜನರ ನೋವಿಗೆ ಸ್ಪಂದಿಸುವ ಮನಸ್ಸೇ ಹೊರತು, ದೇಶಕ್ಕೆ ದ್ರೋಹ ಎಸಗುವ ಇಚ್ಛೆ ಅಲ್ಲ ಎಂಬುದೂ ಗೊತ್ತಾಗದಷ್ಟು ನಮ್ಮ ಆಡಳಿತಾರೂಢರು ಸಂವೇದನೆ ಕಳೆದುಕೊಂಡಿದ್ದಾರೆಯೇ?

1962ರಲ್ಲಿ ಸುಪ್ರೀಂ ಕೋರ್ಟ್‌ ನೀಡಿದ ಮಹತ್ವದ ತೀರ್ಪುಗಳಲ್ಲಿ ಕೇದಾರನಾಥ ಸಿಂಗ್ ಪ್ರಕರಣದ ತೀರ್ಪು ಕೂಡ ಒಂದು. ‘ಯಾವುದೇ ಕ್ರಿಯೆ, ದೇಶದ್ರೋಹಕ್ಕೆ ಸಮ ಎಂಬುದಾಗಿ ಪರಿ ಗಣಿತ ಆಗಬೇಕಾದರೆ, ಅದು ಹಿಂಸಾ ಮಾರ್ಗ ಅನುಸರಿಸಿ ಸರ್ಕಾರವನ್ನು ಬುಡಮೇಲು ಮಾಡುವ ಪರಿಣಾಮ ಹೊಂದಿರಬೇಕು. ಹಿಂಸೆ ಸೃಷ್ಟಿಸಿ, ಸಾರ್ವಜನಿಕ ಶಾಂತಿಗೆ ಧಕ್ಕೆ ತರುವಂಥದ್ದಾಗಿರಬೇಕು. ಈ ಆಯಾಮಗಳನ್ನು ಹೊಂದಿಲ್ಲದ ಅನಿಸಿಕೆ, ಅಭಿಪ್ರಾಯಗಳು ದೇಶದ್ರೋಹದ ವ್ಯಾಪ್ತಿಗೆ ಬರುವುದಿಲ್ಲ’ ಎಂಬುದನ್ನು ಆ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ಸ್ಪಷ್ಟಪಡಿಸಿತು. ಈ ತೀರ್ಪು ಐಪಿಸಿಯ ಸೆಕ್ಷನ್‌ 124(ಎ) ಬಳಕೆಯ ಮೇಲೆ ಮಿತಿಗಳನ್ನು ಹೇರಿತು. ಈಗ ವಿನೋದ್ ದುವಾ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌, ಇನ್ನೊಂದು ವಿಚಾರವನ್ನು ಸ್ಪಷ್ಟಪಡಿಸಿದೆ. ದೇಶದ್ರೋಹದ ಪ್ರಕರಣಗಳಿಗೆ ಸಂಬಂಧಿಸಿದಂತೆ ‘ಪ್ರತೀ ಪತ್ರಕರ್ತನಿಗೂ ಕೇದಾರನಾಥ ಸಿಂಗ್ ಪ್ರಕರಣದ ತೀರ್ಪಿನಲ್ಲಿ ಹೇಳಿರುವ ರೀತಿಯಲ್ಲಿ ರಕ್ಷಣೆ ಇರುತ್ತದೆ. ಸೆಕ್ಷನ್ 124(ಎ) ಅಡಿ ಕ್ರಮ ಜರುಗಿಸಬೇಕಿದ್ದರೆ ಅದು ಕೇದಾರನಾಥ ಸಿಂಗ್ ಪ್ರಕರಣದ ತೀರ್ಪಿನಲ್ಲಿ ವಿವರಿಸಿರುವ ರೀತಿಯಲ್ಲಿಯೇ ಆಗಬೇಕು’ ಎಂದು ತಾಕೀತು ಮಾಡಿದೆ. ತಮಗೆ ರುಚಿಸದ ರೀತಿಯಲ್ಲಿ ಬರಹ ಪ್ರಕಟಿಸಿದರೆ, ಕಾರ್ಯಕ್ರಮ ಪ್ರಸಾರ ಮಾಡಿದರೆ ಅಂತಹ ಪತ್ರಕರ್ತರ ವಿರುದ್ಧ ದೇಶದ್ರೋಹದ ಅಸ್ತ್ರ ಝಳಪಿಸುವ ಪ್ರಭುತ್ವಗಳಿಗೆ ಈ ತೀರ್ಪಿನ ಸಾರ ಅರ್ಥವಾದರೆ ಚೆನ್ನ. ನ್ಯಾಯಮೂರ್ತಿಗಳಾದ ಯು.ಯು. ಲಲಿತ್ ಮತ್ತು ವಿನೀತ್ ಸರಣ್ ಅವರಿದ್ದ ವಿಭಾಗೀಯ ಪೀಠ ನೀಡಿರುವ ಈ ತೀರ್ಪು ಪತ್ರಕರ್ತ ಸಮುದಾಯಕ್ಕೆ ಬಹುದೊಡ್ಡ ನೈತಿಕ ಜಯವೂ ಹೌದು. ಆದರೆ, ಈ ತೀರ್ಪಿನ ಪ್ರಯೋಜನವು ಪತ್ರಕರ್ತರಿಗೆ ಮಾತ್ರವೇ ಅಲ್ಲದೆ, ದೇಶದ ಪ್ರತೀ ಪ್ರಜೆಗೂ ಸಿಗುವಂತೆ ಆಗಬೇಕು. ದಿಶಾ ರವಿ ಪ್ರಕರಣದಲ್ಲಿ ಕೂಡ ಐಪಿಸಿಯ ಸೆಕ್ಷನ್ 124(ಎ) ಅನ್ನು ತೀರಾ ಒರಟಾಗಿ ಬಳಸಿಕೊಳ್ಳಲಾಯಿತು. ಪರಿಸರ ಕಾರ್ಯಕರ್ತೆ ದಿಶಾ ಅವರ ಮೇಲೆ ವಿನಾಕಾರಣ ದೇಶದ್ರೋಹದ ಆರೋಪ ಹೊರಿಸಿ, ಬಂಧಿಸಲಾಯಿತು. ನಂತರ ಅವರಿಗೆ ನ್ಯಾಯಾ ಲಯ ಜಾಮೀನು ನೀಡಿತು. ರಾಮಚಂದ್ರ ಗುಹಾ ಸೇರಿದಂತೆ ಕೆಲವು ವಿದ್ವಾಂಸರು ಪ್ರಧಾನಿಗೆ ಬರೆದ ಪತ್ರವೊಂದನ್ನು ನೆಪವಾಗಿ ಇರಿಸಿಕೊಂಡು ಅವರ ವಿರುದ್ಧ ದೇಶದ್ರೋಹದ ಪ್ರಕರಣ ದಾಖಲಿಸಲಾಗಿತ್ತು. ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದಲ್ಲಿ ಸರ್ಕಾರ ರಚನೆಯಾದ ನಂತರ ದೇಶದ್ರೋಹದ ಪ್ರಕರಣಗಳು ದಾಖಲಾಗುವುದು ಹೆಚ್ಚಾಗಿದೆ. ಸೆಕ್ಷನ್‌ 124(ಎ)ಯನ್ನು ತೆಗೆದುಹಾಕುವ ಬಗ್ಗೆ ಆಲೋಚಿಸಲು ಇದು ಸಕಾಲ. ದುವಾ ಪ್ರಕರಣದ ತೀರ್ಪು, ಸಾಂವಿಧಾನಿಕ ಉದಾರವಾದದಲ್ಲಿ, ರಾಜಕೀಯ ಬಹುತ್ವದಲ್ಲಿ ನಂಬಿಕೆಯಿರುವ ಎಲ್ಲರಿಗೂ, ಕಾರ್ಮುಗಿಲ ಅಂಚಿನಲ್ಲಿನ ಬೆಳ್ಳಿರೇಖೆಯಂತೆ ಕಾಣಿಸುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT