ADVERTISEMENT

ಸಾಧನೆ ಸಾಧ್ಯವಾಗಿಸಿದ ‌ಮಾರ್ಗದರ್ಶನ

ಘಟಾಫಟ್

​ಪ್ರಜಾವಾಣಿ ವಾರ್ತೆ
Published 2 ಆಗಸ್ಟ್ 2019, 19:45 IST
Last Updated 2 ಆಗಸ್ಟ್ 2019, 19:45 IST
ಕೆ.ಎ. ಅಮಾನ್
ಕೆ.ಎ. ಅಮಾನ್   

ಕೆ.ಎ. ಅಮಾನ್, ಗೂಗಲ್‌ನ ‘ನ್ಯಾಷನಲ್ ಜಿಯೊಗ್ರಾಫಿಕಲ್‌ ಎಕ್ಸ್‌ಪ್ಲೋರರ್ ಅವಾರ್ಡ್‌’ ಪಡೆದುಕೊಂಡ ತಂಡದ ಸದಸ್ಯ

ನಿಮ್ಮ ಸಂಶೋಧನೆ ಬಗ್ಗೆ ವಿವರಿಸಿ?

ರಬ್ಬರ್ ಹಾಲನ್ನು ಹೆಪ್ಪುಗಟ್ಟಿಸಲು ಸಾಮಾನ್ಯವಾಗಿ ಕೃತಕ ರಾಸಾಯನಿಕ ಬಳಸಲಾಗುತ್ತದೆ. ಇದು ತುಂಬಾ ದುಬಾರಿ, ಜೊತೆಗೆ ಪರಿಸರ ಸ್ನೇಹಿ ಅಲ್ಲ. ನಮ್ಮ ಪರಿಸರದಲ್ಲಿ ಸಿಗುವ ಪದಾರ್ಥಗಳಿಂದಲೇ ಹಾಲು ಗಟ್ಟಿ ಮಾಡಲು ಸಾಧ್ಯವೇ ಎಂದು ಯೋಚಿಸುತ್ತಿದ್ದಾಗ, ಬೀಂಪುಳಿ (ಬಿಂಬುಳಿ) ಹಣ್ಣಿನ ರಸದ ಪ್ರಯೋಗ ಮಾಡಿದೆವು. ಅದು ಯಶಸ್ಸು ಕಂಡಿತು. ಬೀಂಪುಳಿಯಿಂದ ರಬ್ಬರ್‌ ಹಾಲನ್ನು ಅತಿ ಶೀಘ್ರವಾಗಿ ಹೆಪ್ಪುಗಟ್ಟಿಸಲು ಸಾಧ್ಯವಾಗುತ್ತದೆ. ಅಷ್ಟೇ ಅಲ್ಲ ಗುಣಮಟ್ಟದ ರಬ್ಬರ್‌ ಶೀಟುಗಳನ್ನು ತಯಾರಿಸಬಹುದು ಎಂಬುದನ್ನೂ ಕಂಡುಕೊಂಡೆವು. ಇದನ್ನೇ ಸಂಶೋಧನಾ ವರದಿಯಾಗಿ ಮಂಡಿಸಿದೆವು.

ADVERTISEMENT

ವಿಜ್ಞಾನ ಮೇಳದ ಜಾಗತಿಕ ಸ್ಪರ್ಧೆಯಲ್ಲಿ ನಿಮ್ಮ ತಂಡ ಆಯ್ಕೆಯಾಗಿದ್ದು ಹೇಗೆ?

ಪ್ರೌಢಶಾಲೆಯಲ್ಲಿದ್ದಾಗಲೇ ನಾನು ಮತ್ತು ನನ್ನ ಸಹಪಾಠಿ ಎ.ಯು.ನಚಿಕೇತ್‌ ಕುಮಾರ್ ಸಂಶೋಧನಾ ವರದಿ ತಯಾರಿಸಿದ್ದೆವು. ಅದಕ್ಕೆ ಈಗಾಗಲೇ ಜಿಲ್ಲಾ, ರಾಜ್ಯ, ರಾಷ್ಟ್ರ ಮಟ್ಟದ ಬಹುಮಾನಗಳು ಸಿಕ್ಕಿವೆ. ಗೂಗಲ್‌ ಸೈನ್ಸ್‌ಫೇರ್‌ಗೆ ಮೊದಲ ಹಂತದಲ್ಲಿ ಸಾವಿರ ಸಂಶೋಧನೆಗಳನ್ನು ಆಯ್ಕೆ ಮಾಡಲಾಗಿತ್ತು. ಎರಡನೇ ಹಂತದಲ್ಲಿ ರೀಜನಲ್ ಫೈನಲಿಸ್ಟ್ ಆಗಿ 100 ತಂಡಗಳನ್ನು ಆಯ್ಕೆ ಮಾಡಿ, ಆ ಪೈಕಿ 20 ತಂಡಗಳನ್ನು ಗ್ಲೋಬಲ್ ಫೈನಲಿಸ್ಟ್ ಆಗಿ ಆಯ್ಕೆ ಮಾಡಲಾಯಿತು. ಇವುಗಳಲ್ಲಿ ಭಾರತದ ನಾಲ್ಕು ತಂಡಗಳಿದ್ದವು. ಅದರಲ್ಲಿ ಕರ್ನಾಟಕದಿಂದ ನಾನು ಮತ್ತು ನಚಿಕೇತ್‌ ಇದ್ದ ತಂಡ ನಮ್ಮದು. ಈಚೆಗೆ ಕ್ಯಾಲಿಫೋರ್ನಿಯಾದಲ್ಲಿ ನಡೆದ ಸಮಾರಂಭದಲ್ಲಿ 15 ಸಾವಿರ ಡಾಲರ್‌ (₹ 10.44 ಲಕ್ಷ) ನಗದು ಬಹುಮಾನ ಒಳಗೊಂಡ ‘ನ್ಯಾಷನಲ್‌ ಜಿಯೊಗ್ರಾಫಿಕ್‌ ಎಕ್ಸ್‌ಪ್ಲೋರರ್‌’ ಪ್ರಶಸ್ತಿಯನ್ನು ನಮಗೆ ಪ್ರದಾನ ಮಾಡಲಾಯಿತು.

ಸಂಶೋಧನೆಗೆ ಮಾರ್ಗದರ್ಶಕರು ಯಾರು?

ದಕ್ಷಿಣ ಕನ್ನಡದ ಉಪ್ಪಿನಂಗಡಿಯ ಇಂದ್ರಪ್ರಸ್ಥ ಪದವಿಪೂರ್ವ ಕಾಲೇಜಿನಲ್ಲಿ ನಾವು ದ್ವಿತೀಯ ಪಿಯು ಓದುತ್ತಿದ್ದೇವೆ. ಇಲ್ಲಿನ ವಿಜ್ಞಾನ ಶಿಕ್ಷಕಿ ಕೆ.ಕೆ.ನಿಶಿತಾ ಅವರೇ ಮಾರ್ಗದರ್ಶಕರು. ಅವರಿಗೂ ಇದೇ ಸ್ಪರ್ಧೆಯಲ್ಲಿ 5 ಸಾವಿರ ಅಮೆರಿಕನ್‌ ಡಾಲರ್‌ (₹ 3.48 ಲಕ್ಷ) ಮೊತ್ತದ ‘ಇನ್‌ಸ್ಪೈರಿಂಗ್ ಎಜುಕೇಟರ್ ಅವಾರ್ಡ್‌’ ಸಿಕ್ಕಿದೆ. ಅವರಿಂದಲೇ ನಮ್ಮ ಸಾಧನೆ ಸಾಧ್ಯವಾಗಿದ್ದು.

ಸಂದರ್ಶನ: ಪ್ರಕಾಶ ಕುಗ್ವೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.