ADVERTISEMENT

ಫಲವತ್ತತೆ ಉಳಿಸಲು ಸಹಜ ಕೃಷಿ ಅನುಸರಿಸಿ: ಹೊಯ್ಸಳ ಎಸ್‌. ಅಪ್ಪಾಜಿ

‘ಅತ್ಯುತ್ತಮ ರೈತ’ ಪ್ರಶಸ್ತಿ ಪುರಸ್ಕೃತ

ಪ್ರವೀಣ ಕುಮಾರ್ ಪಿ.ವಿ.
Published 25 ಅಕ್ಟೋಬರ್ 2019, 19:45 IST
Last Updated 25 ಅಕ್ಟೋಬರ್ 2019, 19:45 IST
ಹೊಯ್ಸಳ ಎಸ್‌. ಅಪ್ಪಾಜಿ
ಹೊಯ್ಸಳ ಎಸ್‌. ಅಪ್ಪಾಜಿ   

ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ‘ಕೃಷಿಮೇಳ– 2019’ರಲ್ಲಿ ರಾಜ್ಯ ಮಟ್ಟದ ‘ಅತ್ಯುತ್ತಮ ರೈತ’ ಪ್ರಶಸ್ತಿ ಪುರಸ್ಕೃತರಾಗಿದ್ದೀರಿ. ಉದ್ಯಮಿಯಾಗಿದ್ದ ನೀವು ಕೃಷಿಗೆ ಮರಳಿದ್ದು ಏಕೆ?

ಮುದ್ರಣ ತಂತ್ರಜ್ಞಾನದಲ್ಲಿಡಿಪ್ಲೊಮಾ ಪದವೀಧರನಾಗಿದ್ದ ನಾನು, ಬೆಂಗಳೂರಿನಲ್ಲಿ ಮುದ್ರಣಾಲಯ ನಡೆಸುತ್ತಿದ್ದೆ. ಅದು ಲಾಭದಾಯಕವಾಗಿಯೇ ನಡೆಯುತ್ತಿತ್ತಾದರೂ ನಗರದ ಬದುಕು ನೆಮ್ಮದಿಯಿಂದ ಕೂಡಿರಲಿಲ್ಲ. ಹಾಗಾಗಿ, ಹೊಳೆನರಸೀಪುರ ತಾಲ್ಲೂಕಿನ ನನ್ನೂರು ಉಣ್ಣೇನಹಳ್ಳಿಗೆ ಮರಳಿ ಕೃಷಿಯತ್ತ ಮುಖಮಾಡಿದೆ.

ಸಹಜ ಕೃಷಿಯತ್ತ ಒಲವು ಬೆಳೆದದ್ದು ಹೇಗೆ?

ADVERTISEMENT

ನಾನು ‘ಪರಿಸರ ಪ್ರಿಯರ ಸಂಘಟನೆ’ಯ ಸದಸ್ಯನಾಗಿದ್ದೆ. ಅದರ ಚಟುವಟಿಕೆಯ ಭಾಗವಾಗಿ ಸಹಜ ಕೃಷಿ ಮಾಡುವವರ ತೋಟಗಳಿಗೆ ಭೇಟಿ ನೀಡುತ್ತಿದ್ದೆವು. ನಾನೂ ಕೃಷಿ ಮಾಡಬೇಕು ಎಂದೆನಿಸಿತು. ಈ ಕೃಷಿ, ನಿಸರ್ಗಕ್ಕೆ ಹೆಚ್ಚು ಹತ್ತಿರವಾದುದು. ಈ ಪದ್ಧತಿಯಲ್ಲಿ ರಸಗೊಬ್ಬರ ಬಳಸುವುದಿಲ್ಲ. ಸ್ಥಳದಲ್ಲೇ ಗೊಬ್ಬರ ಉತ್ಪತ್ತಿಯಾಗುತ್ತದೆ.

ಸಹಜ ಕೃಷಿಯಿಂದಾಗುವ ಅನುಕೂಲಗಳೇನು?

ಸಹಜ ಕೃಷಿಯಿಂದ ಕೆಲಸ ಕಡಿಮೆ. ಕೃಷಿ ಕ್ಷೇತ್ರದಲ್ಲಿ ಕಾಡಿನಂತಹ ವಾತಾವರಣ ನಿರ್ಮಾಣವಾಗುತ್ತದೆ. ಪಕ್ಷಿಗಳು, ಪ್ರಾಣಿಗಳು, ದನಕರುಗಳಿಗೆಲ್ಲ ಇಲ್ಲಿ ಆಹಾರ ಸಿಗುತ್ತದೆ. ಬಗೆಬಗೆಯ ಪ್ರಾಣಿ ಪಕ್ಷಿಗಳು ನಮ್ಮ ತೋಟದ ನಿತ್ಯದ ಅತಿಥಿಗಳು. ನಮ್ಮ ತೋಟದಲ್ಲಿ ಹೇರಳವಾಗಿರುವ ಎರೆಹುಳು, ಗೊಬ್ಬರ ಹುಳು ಮತ್ತಿತರ ಹುಳುಹುಪ್ಪಡಿಗಳನ್ನು ಹುಡುಕಿಕೊಂಡು ಬರುವ ಅವು, ತೋಟದ ಮಣ್ಣನ್ನು ಕೆದಕುತ್ತವೆ. ಅದರಿಂದ ತೋಟಕ್ಕೂ ಪ್ರಯೋಜನವಾಗುತ್ತದೆ.

ಸಹಜ ಕೃಷಿಯಲ್ಲಿ ಇಳುವರಿ ಕಡಿಮೆ ಎನ್ನುತ್ತಾರಲ್ಲ?

ಬೇರೆ ಕೃಷಿಯಲ್ಲಿ ಎಷ್ಟು ಇಳುವರಿ ಸಿಗುತ್ತದೋ ಅಷ್ಟೇ ಇಳುವರಿ ಇದರಲ್ಲೂ ಸಿಗುತ್ತದೆ. ಇದರಲ್ಲಿ ಶ್ರಮ ಕಡಿಮೆ. ಅನ್ಯಗೊಬ್ಬರ ಹಾಕಬೇಕಾಗಿಲ್ಲ, ಉಳುಮೆ ಮಾಡಬೇಕಿಲ್ಲ, ಖರ್ಚು ಕಡಿಮೆ.

ರೈತರು ಏಕೆ ಸಹಜ ಕೃಷಿಗೆ ಮರಳಬೇಕು?

ರಸಗೊಬ್ಬರಗಳ ಅತಿಬಳಕೆಯಿಂದ ಭೂಮಿಯ ಫಲವತ್ತತೆ ಹಾಳಾಗುತ್ತಿದ್ದು, ಅದನ್ನು ತಡೆಯಬೇಕಿದೆ. ಸಹಜ ಕೃಷಿಯಿಂದ ಹ್ಯೂಮಸ್‌ ಹಾಗೂ ಸಾವಯವ ಕಾರ್ಬನ್‌ ಚೆನ್ನಾಗಿ ರೂಪುಗೊಳ್ಳುತ್ತದೆ. ಇಳುವರಿಯೂ ಹೆಚ್ಚುತ್ತದೆ.

ಎಲ್ಲ ಕೃಷಿಕರೂ ಈ ಪದ್ಧತಿ ಅನುಸರಿಸಲು ಸಾಧ್ಯವೇ?

ಕೃಷಿ ಪರಿಸ್ಥಿತಿ ನೋಡಿಕೊಂಡು ಸಹಜ ಕೃಷಿ ಅನುಸರಿಸಬೇಕು. ಸಾಧ್ಯವಿರುವಲ್ಲೆಲ್ಲ ಈ ವಿಧಾನ ಬಳಸಿದಷ್ಟೂ ಒಳ್ಳೆಯದು. ಒಣಭೂಮಿಯಲ್ಲಿ ಸಹಜ ಕೃಷಿಗೆ ಬೇರೆಯೇ ವಿಧಾನ ಬಳಸಬೇಕಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.