ADVERTISEMENT

ಬಿ.ವೈ.ವಿಜಯೇಂದ್ರ ಸಂದರ್ಶನ | ಮೀಸಲಾತಿ: ನಿರ್ಲಕ್ಷಿತ, ಅಸಂಘಟಿತ ಜಾತಿಗಳಿಗೂ ನ್ಯಾಯ

ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ

ಎಸ್.ರವಿಪ್ರಕಾಶ್
Published 22 ಫೆಬ್ರುವರಿ 2021, 20:13 IST
Last Updated 22 ಫೆಬ್ರುವರಿ 2021, 20:13 IST
ಬಿ.ವೈ ವಿಜಯೇಂದ್ರ
ಬಿ.ವೈ ವಿಜಯೇಂದ್ರ   

‘ನಮ್ಮ ಸರ್ಕಾರ ಯಾರನ್ನೂ ನಿರ್ಲಕ್ಷಿಸಿಲ್ಲ, ಸಂಯಮದ ಹೆಜ್ಜೆಯನ್ನಿಟ್ಟು ಎಲ್ಲರಿಗೂ ನ್ಯಾಯ ಒದಗಿಸುತ್ತದೆ’ ಎಂದು ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ ಬಿ.ವೈ ವಿಜಯೇಂದ್ರ ಪ್ರತಿಪಾದಿಸಿದ್ದಾರೆ. ‘ಪ್ರಜಾವಾಣಿ’ ನಡೆಸಿದ ಮಾತುಕತೆಯ ಆಯ್ದ ಭಾಗ ಇಲ್ಲಿದೆ...

***

* ಮೀಸಲಾತಿಯ ಜೇನುಗೂಡಿಗೆ ಕಲ್ಲು ಹೊಡೆದವರೇ ನಿಮ್ಮ ಸರ್ಕಾರದಲ್ಲಿರುವ ಕೆಲ ಮಂತ್ರಿಗಳು. ‘ರಾಜಕೀಯ ಅಥವಾ ಬೇರೆ ಉದ್ದೇಶಕ್ಕಾಗಿ ಮಠಾಧೀಶರನ್ನು ಮುಂದೆ ಬಿಟ್ಟು ಹೋರಾಟ ಆರಂಭಿಸಿದರು’ ಎಂಬ ಮಾತು ಕೇಳಿಬಂದಿದೆ. ಈಗ ಹೋರಾಟಗಳು ತೀವ್ರ ಸ್ವರೂಪ ಪಡೆದಿವೆ. ಸರ್ಕಾರ ಇಕ್ಕಟ್ಟಿಗೆ ಸಿಲುಕಿದೆಯೇ?

ADVERTISEMENT

ಇಂತಹ ಸಮಸ್ಯೆ ಮತ್ತು ಸಂಕಷ್ಟದ ಪರಿಸ್ಥಿತಿ ಎದುರಿಸಿದ ಅನುಭವ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗಿದೆ. ರಾಜ್ಯದ ಜನತೆಗೂ ಮುಖ್ಯಮಂತ್ರಿಯವರ ಮೇಲೆ ಭರವಸೆ ಇದೆ. ನೈಜ ಕಾಳಜಿಯುಳ್ಳ ಹೋರಾಟಕ್ಕೆ ಸ್ಪಂದಿಸುವ ತಂತ್ರಗಾರಿಕೆಯೂ ಗೊತ್ತಿದೆ. ಕುತಂತ್ರ ರಾಜಕೀಯಗಳಿಗೆ ಮಣಿಯುವುದಿಲ್ಲ. ಅಂತಹ ರಾಜಕಾರಣ ಮಾಡುವುದೂ ಇಲ್ಲ. ನೇರ, ಪಾರದರ್ಶಕ ನಡೆ ಸರ್ಕಾರದ್ದು.

* ಬಿಜೆಪಿಯಲ್ಲಿ ಈವರೆಗೆ ಬಹಿರಂಗವಾಗಿ ಜಾತಿಯನ್ನು ಮುಂದಿಟ್ಟುಕೊಂಡು ರಾಜಕಾರಣ ಮಾಡಿದ್ದಿಲ್ಲ. ಆದರೆ, ಈ ಅವಧಿಯಲ್ಲಿ ಕೆಲವರು ಜಾತಿಯನ್ನು ದಾಳವಾಗಿ ಬಳಸುತ್ತಿದ್ದಾರೆ, ಮೀಸಲಾತಿಯನ್ನು ಅದಕ್ಕೆ ಅಸ್ತ್ರವಾಗಿ ಬಳಸಿಕೊಳ್ಳಲಾಗುತ್ತಿದೆ ಎಂಬ ಭಾವನೆ ಮೂಡಿದೆಯಲ್ಲ?

ರಾಜ್ಯದ ಜನರು ಪ್ರಜ್ಞಾವಂತರು. ಸಾಮಾಜಿಕ ನ್ಯಾಯದ ಪರವಾಗಿ ಮತ್ತು ತಮ್ಮ ಹಕ್ಕನ್ನು ಪಡೆಯುವ ಸಲುವಾಗಿ ಹೋರಾಟ ನಡೆದರೆ ಸ್ವಾಗತಾರ್ಹ. ಆದರೆ, ಅದನ್ನು ರಾಜಕೀಯ ದಾಳವಾಗಿ ಉಪಯೋಗಿಸುವ ಪರಿಸ್ಥಿತಿ ನೀವು ಹೇಳುವ ರೀತಿಯಲ್ಲಿ ಇದ್ದರೆ ಜನರು ಕ್ಷಮಿಸುವುದಿಲ್ಲ. ಬಿಜೆಪಿ ರಾಷ್ಟ್ರೀಯತೆಯಲ್ಲಿ ನಂಬಿಕೆ ಇರುವ ಪಕ್ಷ. ನಮ್ಮ ಪಕ್ಷದಲ್ಲಿ ಜಾತಿಯ ಹೆಸರಿನಲ್ಲಿ ರಾಜಕಾರಣ ಮಾಡಲು ಅವಕಾಶವೇ ಇಲ್ಲ. ಜಾತಿ, ಧರ್ಮಗಳನ್ನು ಎತ್ತಿಕಟ್ಟಿ, ಸಮಾಜ ಒಡೆಯುವ ಸಂಸ್ಕೃತಿಯನ್ನು ಜನರು ಒಪ್ಪುವುದಿಲ್ಲ.

* ದೊಡ್ಡ ಸಮುದಾಯಗಳು ಮೀಸಲಾತಿಗಾಗಿ ಬೀದಿಗಿಳಿದ ಬೆನ್ನಲ್ಲೇ, ಸಣ್ಣ– ಪುಟ್ಟ ಸಮುದಾಯಗಳೂ ಅದೇ ಹಾದಿಯನ್ನು ಹಿಡಿದಿವೆ. ಎಲ್ಲ ಸಮುದಾಯಗಳಿಗೂ ನ್ಯಾಯ ಒದಗಿಸುವುದಾಗಿ ಮುಖ್ಯಮಂತ್ರಿಯವರು ಹೇಳಿದ್ದಾರೆ. ಅದು ಹೇಗೆ ಸಾಧ್ಯ?

‘ಸರ್ವರಿಗೂ ಸಮಪಾಲು ಸರ್ವರಿಗೂ ಸಮಬಾಳು’ ಎಂಬ ತತ್ವದಲ್ಲಿ ಮುಖ್ಯಮಂತ್ರಿಯವರು ನಂಬಿಕೆ ಇಟ್ಟಿದ್ದಾರೆ. ಎಲ್ಲ ಸಣ್ಣ–ಪುಟ್ಟ ಹಿಂದುಳಿದ ಸಮುದಾಯಗಳನ್ನು ಹೇಗೆ ಒಟ್ಟಿಗೆ ಕೊಂಡೊಯ್ಯಬಹುದು ಎಂಬುದಕ್ಕೆ ಬಸವಣ್ಣನವರೇ ಸ್ಫೂರ್ತಿ. ಸಣ್ಣ–ಪುಟ್ಟ ಸಮುದಾಯಗಳಿಗೂ ಎಳ್ಳಷ್ಟೂ ಅನ್ಯಾಯ ಆಗದ ರೀತಿಯಲ್ಲಿ ಮತ್ತು ಆರ್ಥಿಕ ದುರ್ಬಲರಿಗೂ ನ್ಯಾಯ ಒದಗಿಸುವ ಸೂತ್ರವನ್ನು ರೂಪಿಸುವ ಸಾಮರ್ಥ್ಯ ಸರ್ಕಾರಕ್ಕಿದೆ.

* ತಮ್ಮದೇ ಆದ ಮಠಾಧೀಶರಾಗಲಿ, ನಾಯಕರನ್ನಾಗಲಿ ಹೊಂದಿಲ್ಲದ, ತೀರಾ ಹಿಂದುಳಿದ ಎಷ್ಟೋ ಸಣ್ಣ–ಪುಟ್ಟ ಜಾತಿಗಳಿವೆ. ಆರ್ಥಿಕವಾಗಿ ಮತ್ತು ರಾಜಕೀಯವಾಗಿ ಪ್ರಬಲವಾಗಿರುವ ಜಾತಿಗಳ ಮಠಾಧೀಶರು, ರಾಜಕೀಯ ನಾಯಕರ ಬ್ಲ್ಯಾಕ್‌ಮೇಲ್‌ ತಂತ್ರಗಳಿಗೆ ಸರ್ಕಾರ ಸೊಪ್ಪು ಹಾಕಿದರೆ, ಸಣ್ಣ ಪುಟ್ಟ ಸಮುದಾಯಗಳ ಪಾಡೇನು?

ಸಮಾಜದ ಕಟ್ಟ ಕಡೆಯ ಪ್ರಜೆಗೂ ಅನ್ಯಾಯ ಆಗದ ರೀತಿಯಲ್ಲಿ ಸಾಮಾಜಿಕ ನ್ಯಾಯ ಒದಗಿಸುವ ಬದ್ಧತೆ ಸರ್ಕಾರದ್ದು. ಪಕ್ಷದ ಸಿದ್ಧಾಂತವೂ ಅದನ್ನೇ ಹೇಳುತ್ತದೆ. ಧ್ವನಿ ಇಲ್ಲದವರ ಪರವಾಗಿ ಹೋರಾಟ ಮಾಡಿಕೊಂಡು ಬಂದ ಕಾರಣದಿಂದಲೇ ಯಡಿಯೂರಪ್ಪ ಅವರನ್ನು ‘ಬೆವರಿನಿಂದ ಬಂದ ಬಂಗಾರದ ಮನುಷ್ಯ’ ಎಂದು ಜನತೆ ಪರಿಗಣಿಸಿದ್ದಾರೆ. ನಾವು ನಿರ್ಗತಿಕರು ಮತ್ತು ಧ್ವನಿ ಇಲ್ಲದವರ ಪರ. ಆದ್ದರಿಂದ, ಯಾವುದೇ ಅಸಂಘಟಿತ ಸಮಾಜಕ್ಕೂ ಅನಾಥ ಪ್ರಜ್ಞೆ ಎದುರಾಗಲು ಅವಕಾಶ ಕೊಡುವುದಿಲ್ಲ.

* ಪಂಚಮಸಾಲಿಗಳು ‘2ಎ’ಗೆ ಬೇಡಿಕೆ ಇಟ್ಟಿದ್ದಾರೆ. ವಾಲ್ಮೀಕಿಗಳು ಮೀಸಲಾತಿ ಪ್ರಮಾಣವನ್ನು ಶೇ 7ಕ್ಕೆ ಹೆಚ್ಚಿಸಬೇಕು ಎಂದು ಹೋರಾಟ ಮಾಡುತ್ತಿದ್ದಾರೆ. ಕುರುಬ ಸಮುದಾಯ ಪರಿಶಿಷ್ಟ ಪಂಗಡದ ಪಟ್ಟಿಗೆ ಸೇರಿಸಲು ಬೀದಿಗಿಳಿದಿದ್ದಾರೆ. ಕುರುಬರನ್ನು ಎಸ್‌ಟಿಗೆ ಸೇರಿಸಲು ಕೆಲವು ಜಾತಿಗಳು ವಿರೋಧಿಸುತ್ತಿವೆ. ಇದು ಜಾತಿ ಕಲಹಕ್ಕೆ ಕಾರಣವಾಗದೇ?

ಸಂವಿಧಾನದ ಚೌಕಟ್ಟಿನಲ್ಲಿ ಮೀಸಲಾತಿ ವಿಚಾರ ಪರಿಶೀಲಿಸಬೇಕಾಗುತ್ತದೆ. ಸರ್ಕಾರ ಬೇಕಾಬಿಟ್ಟಿ ಮೀಸಲಾತಿ ಹಂಚಲು ಸಾಧ್ಯವಿಲ್ಲ ಎಂಬುದು ಹೋರಾಟ ನಡೆಸುತ್ತಿರುವವರಿಗೂ ತಿಳಿಯದ ಸಂಗತಿಯೇನಲ್ಲ. ಸಂವಿಧಾನದ ಚೌಕಟ್ಟಿನಲ್ಲಿಯೇ, ಎಲ್ಲಾ ಸಮುದಾಯಗಳ ಬೇಡಿಕೆಗಳ ಈಡೇರಿಕೆಗೆ ಲಭ್ಯವಿರುವ ಎಲ್ಲಾ ಅವಕಾಶಗಳನ್ನು ಬಳಸಿಕೊಳ್ಳಲಾಗುವುದು.

* ಕೇಂದ್ರ ಸರ್ಕಾರದ ಒಬಿಸಿ ಪಟ್ಟಿಗೆ ವೀರಶೈವ–ಲಿಂಗಾಯತ ಸಮುದಾಯದ ಎಲ್ಲಾ ಉಪಜಾತಿಗಳನ್ನು ಸೇರಿಸಬೇಕು ಎಂಬ ಮಠಾಧೀಶರ ಹೊಸ ಬೇಡಿಕೆಯು ಲಿಂಗಾಯತ ಪಂಚಮಸಾಲಿಗಳ ಹೋರಾಟವನ್ನು ದುರ್ಬಲಗೊಳಿಸಲು ಹುಟ್ಟು ಹಾಕಿದ್ದು, ಇದರ ಹಿಂದೆ ನೀವೇ ಇದ್ದೀರಿ ಎಂಬ ಮಾತೂ ಕೇಳಿ ಬರುತ್ತಿದೆ?

ವೀರಶೈವ ಲಿಂಗಾಯತ ಸಮುದಾಯದ ವ್ಯಾಪ್ತಿಯಲ್ಲೇ ಪಂಚಮಸಾಲಿ ಸಮುದಾಯ ಬರುತ್ತದೆ. ಪಂಚಮಸಾಲಿ ಸಮುದಾಯದ ಹೋರಾಟವು ಕರ್ನಾಟಕ ಸರ್ಕಾರದ ಮೀಸಲಾತಿ ನೀತಿಗೆ ಸಂಬಂಧಿಸಿದ ಬೇಡಿಕೆ. ವೀರಶೈವ ಲಿಂಗಾಯತ ಸಮುದಾಯದ ಬೇಡಿಕೆ ಕೇಂದ್ರದ ಒಬಿಸಿ ಪಟ್ಟಿಗೆ ಸೇರಬೇಕು ಎಂಬುದಾಗಿದೆ. ಈ ಬೇಡಿಕೆಗೂ ಪಂಚಮಸಾಲಿ ಸಮುದಾಯ ಕೇಳುತ್ತಿರುವ ಬೇಡಿಕೆಗೂ ವ್ಯತ್ಯಾಸವಿಲ್ಲ. ಆದರೆ, ಈ ಬೇಡಿಕೆಗಳಿಗೆ ಸಂವಿಧಾನ ಮತ್ತು ನ್ಯಾಯಾಲಯಗಳ ಈ ಹಿಂದಿನ ತೀರ್ಪುಗಳ ಹಿನ್ನೆಲೆಯಲ್ಲಿ ಪರಿಹಾರ ಕಂಡುಕೊಳ್ಳಬೇಕಿದೆ. ಸಂಯಮದಿಂದ, ಎಚ್ಚರಿಕೆಯ ಹೆಜ್ಜೆ ಇಡುವುದು ಸರ್ಕಾರದ ಬದ್ಧತೆಯಾಗಿದೆ. ಹೋರಾಟವನ್ನು ಹತ್ತಿಕ್ಕುವ ಉದ್ದೇಶ ಸರ್ಕಾರಕ್ಕಾಗಲಿ, ಯಡಿಯೂರಪ್ಪ ಅವರಿಗಾಗಲಿ ಇಲ್ಲ.

* ಮೀಸಲಾತಿ ಕುರಿತ ರಾಜ್ಯದ ಜವಾಬ್ದಾರಿಯನ್ನು ಕೇಂದ್ರದ ಹೆಗಲಿಗೆ ಜಾರಿಸುವ ಉದ್ದೇಶವೂ ಇದರ ಹಿಂದೆ ಇದೆಯೇ?

ಹಾಗೇನೂ ಇಲ್ಲ, ಸಮಸ್ಯೆಗಳಿಗೆ ಬೆನ್ನು ತಿರುಗಿಸುವುದು, ಜವಾಬ್ದಾರಿಗಳಿಂದ ನುಣುಚಿಕೊಂಡು ಪಲಾಯನ ಮಾಡುವ ಸಂಸ್ಕೃತಿ ನಮ್ಮದಲ್ಲ. ಕೇಂದ್ರ ಮತ್ತು ರಾಜ್ಯ ಸರ್ಕಾರ ನಮ್ಮದೇ ಆಗಿರುವಾಗ, ನಮ್ಮ ಹೊಣೆಗಾರಿಕೆ ಕೇಂದ್ರದ ಹೆಗಲಿಗೆ ದಾಟಿಸುವ ಮಾತು ಹಾಸ್ಯಾಸ್ಪದ ಎನಿಸುತ್ತದೆ. ಈ ನಿಟ್ಟಿನಲ್ಲಿ ಕೇಂದ್ರದಿಂದ ಸಿಗಬಹುದಾಗ ಸಹಕಾರ ಪಡೆದು ಸಮನ್ವಯತೆಯಿಂದ ಪರಿಹಾರ ಕಂಡುಕೊಳ್ಳುತ್ತೇವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.