ADVERTISEMENT

ಸಂದರ್ಶನ | ಪೂರ್ತಿ ಅಧಿಕಾರ ಮೋದಿ ಕೊಡ್ತಾರೆ ಎಂದ ಸಿಎಂ ಬಿ.ಎಸ್.ಯಡಿಯೂರಪ್ಪ

ಗಾಳಿ ಸುದ್ದಿಗೆ ಗಮನ ಕೊಡುವ ಅಗತ್ಯ ಇಲ್ಲ: ಬಿಎಸ್‌ವೈ

ವೈ.ಗ.ಜಗದೀಶ್‌
Published 25 ಜುಲೈ 2020, 20:18 IST
Last Updated 25 ಜುಲೈ 2020, 20:18 IST
ಬಿ.ಎಸ್.ಯಡಿಯೂರಪ್ಪ (ಸಂಗ್ರಹ ಚಿತ್ರ)
ಬಿ.ಎಸ್.ಯಡಿಯೂರಪ್ಪ (ಸಂಗ್ರಹ ಚಿತ್ರ)   

‘ಮುಂದಿನ ಮೂರು ವರ್ಷಗಳ ಸಂಪೂರ್ಣ ಅವಧಿಯಲ್ಲಿ ನಿರಾತಂಕವಾಗಿ ಕೆಲಸ ಮಾಡುವ ಅವಕಾಶವನ್ನು ಪ್ರಧಾನಿ ಮೋದಿ ಕೊಡುತ್ತಾರೆ ಎಂಬ ವಿಶ್ವಾಸ ಇದೆ. ಗಾಳಿ ಸುದ್ದಿಗಳಿಗೆ ಯಾರೂ ಗಮನ ಕೊಡುವ ಅಗತ್ಯವಿಲ್ಲ. . .’

ತಮ್ಮ ಸರ್ಕಾರಕ್ಕೆ ವರ್ಷ ತುಂಬುವ ಹೊತ್ತಿನಲ್ಲಿ ‘ಪ್ರಜಾವಾಣಿ’ಗೆ ನೀಡಿದ ಸಂದರ್ಶನದಲ್ಲಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರು ಆಡಿದ ಭರವಸೆಯ ನುಡಿಗಳಿವು.

‘ಎಲ್ಲಿಯವರೆಗೆ ನರೇಂದ್ರ ಮೋದಿ ಹಾಗೂ ಕೇಂದ್ರ ನಾಯಕರ ಆಶೀರ್ವಾದ ಇರುತ್ತದೆಯೋ ಅಲ್ಲಿಯವರೆಗೆ ಯಡಿಯೂರಪ್ಪನವರ ಆಡಳಿತದ ಬಗ್ಗೆ ಯಾರೂ ಯೋಚನೆ ಮಾಡಬೇಕಾಗಿಲ್ಲ.ಶಾಸಕರು, ಸಂಸದರು ನಮ್ಮ ಜತೆಗೆ ಇದ್ದಾರೆ. ಸುಭದ್ರ ಸರ್ಕಾರ– ಸಾಧನೆಯ ಪರ್ವ ಮುಂದಿನ ನನ್ನ ಸಂಕಲ್ಪ’ ಎಂದು ಅವರು ಪ್ರತಿಪಾದಿಸಿದರು. ಸಂದರ್ಶನದ ಪೂರ್ಣ ಪಾಠ ಇಲ್ಲಿದೆ.

ADVERTISEMENT

* ಒಂದು ವರ್ಷದ ಕೆಲಸ ತೃಪ್ತಿ ತಂದಿದೆಯೇ?

ಬಿಎಸ್‌ವೈ: ಯಾವುದೇ ರಾಜಕೀಯ ಮುತ್ಸದ್ದಿಗೆ ತೃಪ್ತಿ ಎಂಬುದು ಇರಬಾರದು. ರಾಜಕೀಯ ನೇತಾರರು ಎಷ್ಟು ಕೆಲಸ ಮಾಡಿದರೂ ಕಡಿಮೆಯೇ. ನಾನು ಮುಖ್ಯಮಂತ್ರಿಯಾಗುತ್ತಿದ್ದಂತೆ ಸವಾಲು ಎದುರಾಯಿತು. ಮಹಾ ಪ್ರವಾಹದಿಂದ ಹಾನಿಯಾಯಿತು. ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಜನರ ಸಂಕಷ್ಟ ಪರಿಹರಿಸಲು ಓಡಾಡಿದೆ. ಕೇಂದ್ರ ಸರ್ಕಾರ ನನ್ನ ಜತೆಗೆ ನಿಂತು ಸಹಕಾರ ನೀಡಿತು. ಮತ್ತೆ ಉಪಚುನಾವಣೆಯ ಸವಾಲು ಎದುರಿಸಿದೆ. 15 ಕ್ಷೇತ್ರಗಳ ಪೈಕಿ 12ರಲ್ಲಿ ನಮ್ಮ ಅಭ್ಯರ್ಥಿಗಳೇ ಗೆದ್ದು ಭರ್ಜರಿ ವಿಜಯ ಪಡೆದವು. ದೆಹಲಿಯಲ್ಲಿ ನಡೆದ ಸಭೆಯಲ್ಲಿ ಪ್ರಧಾನಿ ಮೋದಿ ಅವರೇ ನಮ್ಮ ಎಲ್ಲ ಸಂಸದರನ್ನು ಎದ್ದು ನಿಲ್ಲಿಸಿ ನಮ್ಮ ಸಾಧನೆಗೆ ಚಪ್ಪಾಳೆ
ಹೊಡೆಸಿ ಮೆಚ್ಚುಗೆ ಸೂಚಿಸಿದರು. ಅಧ್ಯಕ್ಷರಾದ ನಳಿನ್‌ಕುಮಾರ್ ಕಟೀಲ್, ನಮ್ಮ ಪಕ್ಷದ ಎಲ್ಲ ನಾಯಕರ‌ ನೆರವಿನಿಂದ ಇದೆಲ್ಲವೂ ಸಾಧ್ಯವಾಯಿತು. ಸಿದ್ದರಾಮಯ್ಯನವರೇ ನನ್ನ ಕೆಲಸ ಮೆಚ್ಚಿಕೊಂಡರು.

* ಈ ವಯಸ್ಸಿನಲ್ಲೂ ನಿಮ್ಮ ಉತ್ಸಾಹದ ಹಿಂದಿನ ಗುಟ್ಟೇನು?

ಬಿಎಸ್‌ವೈ: ವಿಶ್ರಾಂತಿ ತೆಗೆದುಕೊಂಡರೆ ನನ್ನ ಆರೋಗ್ಯ ಹಾಳಾಗುತ್ತದೆ. 40–45 ವರ್ಷಗಳಿಂದ ಜನರ ಮಧ್ಯೆ ಇದ್ದು ಕೆಲಸ
ಮಾಡುತ್ತಲೇ ಇದ್ದೇನೆ. ಜನರ ಮಧ್ಯೆ ಇದ್ದಾಗ ಸಮಾಧಾನ, ತೃಪ್ತಿಯೂ ಇರುತ್ತದೆ. ಕೊರೊನಾ ಬಂದ ಮೇಲೂ ಒಂದೇ ಒಂದು ದಿನ ಕುಳಿತು ಕಳೆದಿಲ್ಲ.

*ತುಂಬಾ ಕಷ್ಟ, ಯಾಕಪ್ಪಾ ಈ ಹುದ್ದೆ ಬೇಕಾಗಿತ್ತು ಎಂದು ಎಂದಾದರೂ ಅನಿಸಿತ್ತಾ?

ಬಿಎಸ್‌ವೈ: ಯಾವುದೇ ಕ್ಷಣದಲ್ಲೂ ಅಂತಹ ಭಾವನೆ ಬಂದಿಲ್ಲ. ಬರಕೂಡದು. ಆರೂವರೆ ಕೋಟಿ ಜನರ ಸೇವೆ ಮಾಡುವ ಜವಾಬ್ದಾರಿಯನ್ನು ನಾಡಿನ ಜನ ಕೊಟ್ಟಿದ್ದಾರೆ. ಅವರು ಇಟ್ಟ ಭರವಸೆಯನ್ನು ನಾನು ಈಡೇರಿಸಬೇಕಾಗಿದೆ. ಜನರ ಕಣ್ಣೀರು ಒರೆಸಿ, ನೆಮ್ಮದಿಯ ಬದುಕು ಕಟ್ಟಿ ಕೊಟ್ಟು, ಅವರಕಷ್ಟಕ್ಕೆ ಸಾಂತ್ವನ ಹೇಳುವುದೇ ಪ್ರಜಾಪ್ರಭುತ್ವದಲ್ಲಿ ನಾಯಕನಾದವನ ಕೆಲಸ. ಅದರಲ್ಲಿ ತೃಪ್ತಿ
ಇದ್ದರೆ ಯಶಸ್ಸು ಸಾಧ್ಯ. ಕೊನೆ ಕ್ಷಣದವರೆಗೂ ಜನರ ಜತೆ ಇರುತ್ತೇನೆ, ರಾಜ್ಯದ ಅಭಿವೃದ್ಧಿಗಾಗಿ ದುಡಿಯತ್ತೇನೆ.

* ಸಚಿವರ ಸಹಕಾರ ಇದ್ದಂತೆ ಕಾಣಿಸುತ್ತಿಲ್ಲ?

ಬಿಎಸ್‌ವೈ:ನಿರೀಕ್ಷೆ ಮೀರಿ ಚೆನ್ನಾಗಿದೆ. ಯಾವುದೇ ರೀತಿಯ ಕೊರತೆ ಇಲ್ಲ. ಸಚಿವರು, ಶಾಸಕರ‌‌‌‌ ಮಧ್ಯೆಯೂ ಗೊಂದಲ ಇಲ್ಲ. ಆಡಳಿತ– ಪ್ರತಿಪಕ್ಷ ಎಂಬ ಭೇದವನ್ನೂ ನಾನು ಮಾಡಿಲ್ಲ. ಎಲ್ಲರ ಸಹಕಾರ ಇಲ್ಲದೇ ಇದ್ದರೆ ಹೀಗೆ ಕೆಲಸ ಮಾಡಲು ಸಾಧ್ಯವೇ.

* ತುಂಬಾ ತೃಪ್ತಿ ತಂದ ಕ್ಷಣ ಯಾವುದು?

ಬಿಎಸ್‌ವೈ: ಅತಿವೃಷ್ಟಿಯಾದ ಸಂದರ್ಭದಲ್ಲಿ ಕೇಂದ್ರ ಸರ್ಕಾರಉತ್ತಮ ಸಹಕಾರ ನೀಡಿತು. ಅವರ ನೆರವಿನಲ್ಲಿ ಸಾವು ನೋವು ತಡೆದು, ಜನರಿಗೆ ನೆಮ್ಮದಿಯ ಬದುಕು ಕಟ್ಟಿಕೊಡಲು ಸಾಧ್ಯವಾಗಿದ್ದು, ಮನೆ ಕಟ್ಟಿಕೊಡುವ ಕೆಲಸದಲ್ಲಿ ಯಶಸ್ವಿಯಾದೆ. ಸಚಿವ ಸಂಪುಟದ ಸದಸ್ಯರಿಲ್ಲದೇ, ನಾನು ಒಬ್ಬನೇ ಇದ್ದೆ. ಏಕಾಂಗಿಯಾದ ಮಾಡಿದ ಕೆಲಸ ಅದು. ಅತ್ಯಂತ ತೃಪ್ತಿ ತಂದಿದೆ.

*ಉಪಕರಣಗಳ ಖರೀದಿಯಲ್ಲಿ ಅಕ್ರಮ ನಡೆದಿದೆ ಎಂಬ ಆರೋಪಗಳ ಬಗ್ಗೆ?

ಬಿಎಸ್‌ವೈ: ವಿರೋಧ ಪಕ್ಷದ ನಾಯಕರು ದಾಖಲೆ ಬಿಡುಗಡೆ ಮಾಡುವಾಗ, ಆರೋಪ ಮಾಡುವಾಗ ಅದರ ಸತ್ಯಾಸತ್ಯತೆ ಪರಾಮರ್ಶೆ ಮಾಡದೇ ಇದ್ದರೆ ಇಂತಹ ಸಂಕಷ್ಟ ಕಾಲದಲ್ಲಿ ಅಧಿಕಾರಿಗಳ ಸ್ಥೈರ್ಯ ಕುಂದುತ್ತದೆ. ಸೂಕ್ತ ದಾಖಲೆ ಇಲ್ಲದೇ, ₹2 ಸಾವಿರ ಕೋಟಿ ಲೂಟಿ ಮಾಡಿದ್ದಾರೆ ಎಂದು ದೂರುವುದೇ ಅಕ್ಷಮ್ಯ ಅಪರಾಧ.

* ಕೊರೊನಾ ನಿಯಂತ್ರಣದಲ್ಲಿ ಸರ್ಕಾರ ವಿಫಲವಾಗಿದ್ದು ಏಕೆ?

ಬಿಎಸ್‌ವೈ: ನಮ್ಮ ಕೆಲಸವನ್ನು ಪ್ರಧಾನಿಯವರು ಸೇರಿದಂತೆ ಎಲ್ಲರೂ ಮೆಚ್ಚಿಕೊಂಡರು. ಬೆಂಗಳೂರಿನಲ್ಲಿ
ಈಗ ಜಾಸ್ತಿಯಾಗಿದೆ. ನಿಯಂತ್ರಣಕ್ಕೆ ಎಲ್ಲ ರೀತಿಯ ಪ್ರಯತ್ನಗಳನ್ನು ಮಾಡುತ್ತಿದ್ದೇವೆ.

* ನೀವು ಅಧಿಕಾರದಲ್ಲಿದ್ದಾಗಲೆಲ್ಲ ಸಂಕಷ್ಟಗಳು ನಿಮ್ಮ ಬೆನ್ನಿಗೆ ಬೀಳುವುದೇಕೆ?

ಬಿಎಸ್‌ವೈ: ಅಗ್ನಿಪರೀಕ್ಷೆ‌. ಅದನ್ನು ಎದುರಿಸಿ ಹೊರಬಂದರೆ ವ್ಯಕ್ತಿಯ ವ್ಯಕ್ತಿತ್ವ ಏನೆಂದು ಗೊತ್ತಾಗುತ್ತದೆ. ಸವಾಲುಗಳನ್ನು ಎದುರಿಸಿ, ಕರ್ನಾಟಕ ರಾಜ್ಯದ ಜನರು ನೆಮ್ಮದಿಯಿಂದ ಬದುಕುವಂತೆ ಮಾಡುವುದೇ ನಿಜವಾದ ನಾಯಕನ ಗುಣ.

* ಆರ್ಥಿಕ ಪರಿಸ್ಥಿತಿ ಹೇಗಿದೆ? ಜನರಿಗೆ ಏನು ಹೇಳ ಬಯಸುತ್ತೀರಿ?

ಬಿಎಸ್‌ವೈ: ಅನೇಕ ರಾಜ್ಯಗಳು ನೌಕರರಿಗೆ ಸಂಬಳ ಕೊಟ್ಟಿಲ್ಲ. ನಾವು ಒಂದು ಪೈಸೆಯನ್ನೂ ನಿಲ್ಲಿಸಲಿಲ್ಲ. ಅಭಿವೃದ್ಧಿ ಕಾರ್ಯವನ್ನೂ
ಮುಂದುವರಿಸಿದ್ದೇವೆ. ಸಾಲ ಪಡೆದಾದರೂ ನೀರಾವರಿ, ಲೋಕೋಪಯೋಗಿ ಇಲಾಖೆ ಮತ್ತು ಸಮಾಜ ಕಲ್ಯಾಣ ಇಲಾಖೆಯ ಯೋಜನೆಗಳನ್ನು ಅನುಷ್ಠಾನ ಮಾಡುತ್ತೇವೆ.

* ಸಂಪುಟ ವಿಸ್ತರಣೆ ಯಾವಾಗ?

ಬಿಎಸ್‌ವೈ: ವಿಧಾನಪರಿಷತ್ತಿಗೆ ಆಗಬೇಕಾದ ನೇಮಕ ಎಲ್ಲ ಮುಗಿದಿದೆ. ಆಗಸ್ಟ್‌ನಲ್ಲಿ ಈ ಬಗ್ಗೆ ಯೋಚಿಸುತ್ತೇವೆ. ದೆಹಲಿಯವರ ಜತೆಗೆ ಮಾತನಾಡಿ, ತೀರ್ಮಾನ ಮಾಡುತ್ತೇವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.